ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಗೆದ್ದ ಮೋದಿ

Last Updated 22 ಮೇ 2014, 11:23 IST
ಅಕ್ಷರ ಗಾತ್ರ

ಕೇಂದ್ರ ಸಭಾಂಗಣದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾಡಿದ ಭಾಷಣ  ಚರಿತ್ರಾರ್ಹ.  ಅಲ್ಲಿ ಅವರು ಪಕ್ಷ ರಾಜಕಾರಣ ಮೀರಿ ಬೆಳೆದ ಮುತ್ಸದ್ದಿ­ಯಾಗಿ ಹೊರಹೊಮ್ಮಿದರು. ದೇಶವಾಸಿಗಳ ಹೃದಯ ಗೆದ್ದರು. ಚುನಾ­ವಣಾ ಸಮಯದ ಭಾಷಣಕ್ಕಿಂತ ಇಲ್ಲಿ ಅವರಾಡಿದ ಒಂದೊಂದು ಮಾತೂ ಭಿನ್ನವಾಗಿತ್ತು.

ಅದರಲ್ಲಿ ಸಂಯಮ, ದೂರದೃಷ್ಟಿ, ಪ್ರಬುದ್ಧತೆ, ಮುನ್ನೋಟ ಇತ್ತು, ಎಲ್ಲರನ್ನೂ ಜತೆಯಲ್ಲಿ ಕರೆದೊಯ್ಯುವ ತವಕ ಇತ್ತು. ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಸಲ ಕಾಂಗ್ರೆಸ್ಸೇತರ ಪಕ್ಷವೊಂದನ್ನು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ಶ್ರೇಯಸ್ಸಿನಲ್ಲಿ ಅವರದೇ ಪ್ರಮುಖ ಪಾತ್ರ. ಆದರೂ ಗೆಲುವಿನ ಕೀರ್ತಿಯನ್ನು ಪಕ್ಷದ ಸಾಮಾನ್ಯ ಕಾರ್ಯ­ಕರ್ತ­ರಿಂದ ಹಿಡಿದು ನಾಯಕರವರೆಗೆ ಎಲ್ಲರಿಗೂ ಹಂಚಿದರು.

ದೇಶದ ಅಭ್ಯುದ­ಯದಲ್ಲಿ ಇದುವರೆಗಿನ ಎಲ್ಲ ಸರ್ಕಾರಗಳ ಮತ್ತು ಪ್ರಧಾನಿಗಳ ಶ್ರಮ ಇದೆ ಎಂದು ಸ್ಮರಿಸಿ ತಮ್ಮಲ್ಲಿ ಸಂಕುಚಿತ ಮನೋಭಾವ ಇಲ್ಲ ಎಂದು ತೋರಿಸಿ­ಕೊಟ್ಟರು. ಮತದಾರರು ಬಿಜೆಪಿಯಲ್ಲಿ ‘ಆಶಾಕಿರಣ ಮತ್ತು ವಿಶ್ವಾಸ’ ಇಟ್ಟುಕೊಂಡು ಮತ ಹಾಕಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು ಎಂಬ ಕಾಳಜಿ ಪ್ರದರ್ಶಿಸಿದರು.

ಅಧಿಕಾರಕ್ಕಿಂತ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸು­ವುದು ಮುಖ್ಯ ಎಂಬ ಅವರ ಮಾತು ಆದ್ಯತೆಗಳನ್ನು ಸಮರ್ಪಕವಾಗಿ ಗುರು­ತಿಸಿರುವುದರ ಪ್ರತೀಕ.  ತಮ್ಮದು ‘ಬಡವರಿಗಾಗಿ ಚಿಂತಿಸುವ, ಆಲಿಸುವ, ಬದುಕುವ’ ಸರ್ಕಾರವಾಗಿ ಯುವಜನರು, ತಾಯಂದಿರು, ಹಳ್ಳಿವಾಸಿಗಳು, ಶೋಷಿತರ ಏಳಿಗೆಗಾಗಿ ದುಡಿಯುತ್ತದೆ ಎಂಬಂತಹ ಭರವಸೆ ತುಂಬಿದರು.

ಸಮತೋಲನದ ಅಭಿವೃದ್ಧಿ ತಮ್ಮ ಗುರಿ ಎಂದು ಪ್ರತಿಪಾದಿಸುವ ಮೂಲಕ, ತಾವು ಕಾರ್ಪೊರೇಟ್ ಜಗತ್ತಿನ ಪರ ಎಂಬ ಗ್ರಹಿಕೆ ನಿವಾರಿಸುವ ಪ್ರಯತ್ನ ಮಾಡಿದರು. ‘ನಾನು ನನಗಾಗಿ ಬದುಕುವುದಿಲ್ಲ, ದೇಶಕ್ಕಾಗಿ ಬದುಕುತ್ತೇನೆ’ ಎಂಬ ಅವರ ಮಾತು ಸ್ವಾರ್ಥ ಮೀರಿದ ಕಳಕಳಿ ಪ್ರದರ್ಶಿಸಿದೆ.

ಸ್ವಾತಂತ್ರ್ಯಾನಂತರದ ಪೀಳಿಗೆಯಲ್ಲಿ ಜನಿಸಿ ಪ್ರಧಾನಿ ಸ್ಥಾನಕ್ಕೆ ಏರಲಿರುವ ಮೊದಲಿಗರು ಮೋದಿ. ಜನತಂತ್ರದ ದೇಗುಲವಾದ ಸಂಸತ್ತಿನ ಕೇಂದ್ರ ಸಭಾಂಗಣಕ್ಕೆ ಅವರು ಕಾಲಿಟ್ಟಿದ್ದು ಇದೇ ಮೊದಲು. ಸಂಸತ್ತಿನ ಪ್ರವೇಶ ದ್ವಾರದಲ್ಲಿ ಶಿರಬಾಗಿ ನಮಿಸಿ ವಿನೀತ ಭಾವ ಮೆರೆದರು ಅವರು.

ಅಲ್ಲದೆ ‘ಮೋದಿಯವರ ಕೃಪೆಯಿಂದ ನಾವೆಲ್ಲ ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದೇವೆ’ ಎಂಬ ಅಡ್ವಾಣಿ ಅವರ ಮಾತಿಗೆ ಪ್ರತಿಕ್ರಿಯಿಸಿ, ‘ಮಗ ತಾಯಿಯ ಸೇವೆ ಮಾಡುವುದು ಕೃಪೆ ಅಲ್ಲ. ದೇಶ, ಪಕ್ಷ ಎರಡೂ ತಾಯಿ ಸಮಾನ’ ಎಂದದ್ದು ಅವರನ್ನು ಎತ್ತರಕ್ಕೆ ಏರಿಸಿತು.  ಆದರೆ ನಿಜವಾದ ಹೊಣೆ­-ಗಾರಿಕೆ ಇನ್ನು ಮುಂದಿದೆ.

ತಮ್ಮ ಮಾತುಗಳನ್ನು ಅವರು ಹೇಗೆ ಕಾರ್ಯ­ರೂಪಕ್ಕೆ ತರಲಿದ್ದಾರೆ ಎಂಬುದನ್ನು ದೇಶ ಗಮನವಿಟ್ಟು ನೋಡು­ತ್ತದೆ. ಅವರ ಬಗ್ಗೆ  ಕೆಲವರಿಗೆ ಈಗಲೂ ಭಯವಿದೆ.  ಆದರೆ ಪೂರ್ವಗ್ರಹದಿಂದ ಅಪ­ನಂಬಿಕೆ ಇಟ್ಟುಕೊಳ್ಳುವುದನ್ನು ಬಿಟ್ಟು  ಅವರಿಗೊಂದು ಅವಕಾಶ ಕೊಡ­ಬೇಕು. ‘ಒಳ್ಳೆಯ ದಿನಗಳು ಬರಲಿವೆ, ಎಲ್ಲರ ಜತೆಗೂಡಿ ಎಲ್ಲರ ವಿಕಾಸ’ ಎಂಬ ಮೋದಿ ಮಾತುಗಳು ಅವರ ಆಡಳಿತದಲ್ಲಿ ಸಾಕಾರಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT