ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಮಿಡಿಯದಿರಬಹುದು ಹುಷಾರ್‌!

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಸಂಸ್ಕರಿತ ಆಹಾರಗಳಲ್ಲಿ ಜಲಜನಕೀಕೃತ ಕೊಬ್ಬುಗಳಿದ್ದು, ಅವು ನಮ್ಮ ದೇಹಕ್ಕೆ ತುಂಬಾ ಹಾನಿಕಾರವಾದ ಟ್ರ್ಯಾನ್ಸ್‌ಕೊಬ್ಬುಗಳನ್ನು ಸೇರಿಸುತ್ತಾ ಹೋಗುತ್ತವೆ.

ಕೊಬ್ಬೆಂದರೆ ಸಾಕು, ತಬ್ಬಿಬ್ಬಾಗುವುದರಲ್ಲಿ ಅರ್ಥವಿಲ್ಲ. ಕೊಬ್ಬುಗಳು ನಮಗೆ ಶಕ್ತಿ ನೀಡುತ್ತವೆ. ನಮ್ಮ ಅಂಗ, ಅಂಗಾಂಗಗಳನ್ನು ಸುಸ್ಥಿತಿಯಲ್ಲಿಡುತ್ತವೆ. ನಮ್ಮ ದೇಹಕ್ಕೊಂದು ಅಂದವಾದ ಆಕಾರ ನೀಡುತ್ತವೆ. ಕೊಬ್ಬು ನಮಗೆ ತೀರಾ ಅಗತ್ಯ. ಹಾಗಾಗಿ ಕೊಬ್ಬನ್ನು ನಮ್ಮ ಆಹಾರದಿಂದ ತಳ್ಳಿಬಿಡುವ ಮುನ್ನ, ಅದರ ವಿವಿಧ ರೂಪಗಳ ಕುರಿತು ಸ್ವಲ್ಪ ಅರಿವು ಪಡೆಯೋಣ.

ಕೊಬ್ಬುಗಳಲ್ಲಿ ಸಂತೃಪ್ತ ಹಾಗೂ ಅಸಂತೃಪ್ತ ಕೊಬ್ಬುಗಳಿವೆ ತಾನೆ? ಸಾಮಾನ್ಯವಾಗಿ ನಮ್ಮ ಕಿವಿಗಳಿಗೆ ಬಿದ್ದ ಹಾಗೂ ಬೀಳುತ್ತಿರುವ ಮಾಹಿತಿಯೆಂದರೆ ಅಸಂತೃಪ್ತಿ ಕೊಬ್ಬುಗಳ ಬಳಕೆ ಆರೋಗ್ಯಕರ ಮತ್ತು ಸಂತೃಪ್ತ ಕೊಬ್ಬುಗಳು ನಮ್ಮ ರಕ್ತನಾಳಗಳಿಗೆ ಹೃದಯಕ್ಕೆ ಹಾನಿಕರ ಎಂದು.

ಇದು ಹೌದಾದರೂ, ಸತ್ಯವಲ್ಲ! ಆರೋಗ್ಯಕರವಾದ ಅಸಂತೃಪ್ತ ಕೊಬ್ಬುಗಳೂ ತಮ್ಮ ನೈಸರ್ಗಿಕ ಸ್ವರೂಪವನ್ನು ಕಳೆದುಕೊಂಡಾಗ, ಮನುಷ್ಯನಿಗೆ ವೈರಿಗಳಾಗುತ್ತವೆ. ಆ ಲಾಗಾಯ್ತಿನಿಂದಲೂ ತುಪ್ಪ, ಬೆಣ್ಣೆಗಳನ್ನು ಬಳಸುತ್ತಿದ್ದವರಿಗಿಂತಲೂ ಈಚಿನ ದಿನಗಳಲ್ಲಿ ಕಾರೊನರಿ ಹೃದ್ರೋಗಗಳು ಹೆಚ್ಚಿಕೊಂಡು ಯುವಜನರನ್ನು ಸಹ ಬಿಡದೆ ಆಹುತಿ ತೆಗೆದುಕೊಳ್ಳುವುದನ್ನು ಕಂಡಾಗ ಕೊಬ್ಬುಗಳ ಬಳಕೆಯಲ್ಲಿ ಏನೋ ಹದ ತಪ್ಪಿದೆ ಎಂಬ  ಅನುಮಾನ ಹುಟ್ಟುತ್ತದೆ. ಜತೆಗೆ ಕೊಬ್ಬು, ಡಯಾಬಿಟಿಸ್‌ ಕೊಲೆಸ್ಟರಾಲ್‌ ಏರಿಕೆ, ರಕ್ತದ ಏರೊತ್ತಡ ಈ ಸಮಸ್ಯೆಗಳಿಲ್ಲದ ಮನೆಯೇ ಇಲ್ಲ. ಎನ್ನುವ ವಾಸ್ತವತೆ ನಮಗೆ ಕಳವಳವನ್ನುಂಟು ಮಾಡುತ್ತಿದೆ.

ದಿನದಿನವೂ ನಾವು ಅಡುಗೆಯಲ್ಲಿ ಎಳ್ಳೆಣ್ಣೆ, ಕಡಲೆಕಾಯಿ ಎಣ್ಣೆ, ಕುಸುಬಿಯೆಣ್ಣೆ, ಸಾಸಿವೆ ಎಣ್ಣೆಗಳನ್ನು ಉಪಯೋಗಿಸಿ, ತೃಪ್ತಿ ಹೊಂದುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಎಲ್ಲೆಡೆ ಹೆಜ್ಜೆಯೂರುತ್ತಿರುವ ಜಾಗತಿಕ ವ್ಯವಹಾರ ವಾಣಿಜ್ಯಗಳು ನಮ್ಮನ್ನು ಸುಮ್ಮನೆ ಬಿಡುತ್ತವೇನು? ಕಳೆದ ಶತಮಾನದ ಆದಿಯಲ್ಲಿ ಇದೇ ಎಣ್ಣೆಗಳ ಮೂಲಕ ಜಲಜನಕವನ್ನು ಹಾಯಿಸಿ, ಅವುಗಳಿಗೊಂದು ಘನರೂಪ ಕೊಟ್ಟು, ಬೆಣ್ಣೆ, ತುಪ್ಪಗಳನ್ನು ಹೋಲುತ್ತಿದ್ದ ಅವನ್ನು ಸಂಸ್ಕರಿಸಿ ತಿನಿಸುಗಳ ತಯಾರಿಕೆಯಲ್ಲಿ ಬಳಸ ತೊಡಗಿದರು. ಆಗ ಆ ತಿನಿಸುಗಳ ರುಚಿ ಹೆಚ್ಚಿ, ಅವು ಇನ್ನೂ ಸರಿಯಾಗಿ, ಬಾಯಲ್ಲಿಟ್ಟೊಡನೆಯೇ ಕರಗುವ ಗುಣವನ್ನು ಮೈಗೂಡಿಸಿಕೊಂಡವು.

ಆಕರ್ಷಕ ಹೊದಿಕೆಗಳನ್ನು ಪಡೆದ ಆ ಸಂಸ್ಕರಿತ ತಿನಿಸುಗಳು ಬೇಗ ಕೆಡುವುದೂ ಇಲ್ಲ. ಎನ್ನುವುದೂ ಸಹ ಒಂದು ಪ್ಲಸ್‌ ಪಾಯಿಂಟಾಯಿತು ತುಪ್ಪ, ಬೆಣ್ಣೆಗಳಿಗಿಂತ ಈ ಜಲಜನಕೀಕೃತ ಡಾಲ್ಡಾ, ಮಾರ್ಗರಿನ್‌ ಇಂಥವುಗಳ ಬೆಲೆಯೂ ಕಡಿಮೆಯಾಗಿದ್ದ ಕಾರಣ, ಗ್ರಾಹಕರು ಇವುಗಳಿಗೇ ಮುಗಿಬಿದ್ದರು. ಕ್ರಮೇಣ ನಮ್ಮ ಹೆಣ್ಣು ಮಕ್ಕಳು ಹೊರಗಣ ಕೆಲಸಗಳಿಗೆ ಸೇರಿಕೊಂಡಾಗ ಅವರಿಗೆ ಸಂಕೀರ್ಣ ಅಡುಗೆ ತಯಾರಿಸಲು ಸಮಯ ಸಾಲದಾಯಿತು. ಸುಲಭವಾಗಿ ಕೈಗೆಟಕುವ ಬಿಸ್ಕತ್ತು, ಕೇಕುಗಳು ವಿವಿಧ ಪಫ್‌ಗಳು, ಡೊನಟ್‌ಗಳು ಪಿಜ್ಜಾ, ಫಿಂಗರ್‌ ಚಿಪ್ಸ್ ಹಾಗೂ ಚಿಪ್ಸ್‌ಗಳು ಮನೆಮನೆಗಳನ್ನು  ಆಕ್ರಮಿಸಿಕೊಂಡವು.

ಮಕ್ಕಳ ಟಿಫನ್‌ ಬಾಕ್ಸ್‌ಗಳನ್ನು  ತುಂಬಿದವು. ಕಣ್ಣುಗಳಿಗೆ ಕಾಣುವ, ಮನ ಸೆಳೆಯುವ ಜಾಹೀರಾತುಗಳ ಪರಿಣಾಮವಾಗಿಯೂ ನಮ್ಮ ಮಕ್ಕಳು ಅವೇ ಬೇಕೆಂದು ಕಾಡತೊಡಗಿದವು. ತೃಪ್ತಿಕರವಾದ ರಾಗಿ, ಜೋಳ, ಗೋಧಿಗಳ ಮನೆ ತಿನಿಸುಗಳು ಅವರಿಗೆ ಬೇಸರತಂದವು. ತಂದೆ ತಾಯಿಗಳ ಕೈಯಲ್ಲೂ ಹಣ ರಿಂಗಣಿಸುವುದು ಸಹ ಒಂದು ಕಾರಣವೇ. ‘ನಿಜ ಆದರೆ, ಅದರಲ್ಲಿ ತಪ್ಪೇನಿದೆ!’ ಎಂದು ಕೇಳುವವರು ಇದ್ದಾರೆ. ಹೌದು ದೊಡ್ಡ ತಪ್ಪಿದೆ. ಸಾಮಾನ್ಯವಾಗಿ ಈ ಎಲ್ಲಾ ಸಂಸ್ಕರಿತ ಆಹಾರಗಳಲ್ಲಿ ಜಲಜನಕೀಕೃತ ಕೊಬ್ಬುಗಳಿದ್ದು, ಅವು ನಮ್ಮ ದೇಹಕ್ಕೆ ತುಂಬಾ ಹಾನಿಕಾರವಾದ ಟ್ರ್ಯಾನ್ಸ್‌ಕೊಬ್ಬುಗಳನ್ನು ಸೇರಿಸುತ್ತಾ ಹೋಗುತ್ತದೆ.

‘ಟ್ರಾನ್ಸ್‌ಕೊಬ್ಬುಗಳಿದ್ದರೇನಂತೆ?’ ಎಂದು ಕೇಳುತ್ತೀರಾ? ಅವು ನಮ್ಮ ರಕ್ತದಲ್ಲಿ ಅನಾರೋಗ್ಯಕರ ಎಲ್‌ಡಿಎಲ್‌ ಅಂಶವನ್ನು ಹೆಚ್ಚಿಸಿ ನಮ್ಮ ಆರೋಗ್ಯಕ್ಕೆ ಪೂರಕವಾದ ಎಚ್‌ಡಿಎಲ್‌ ಅಂಶವನ್ನು ತಗ್ಗಿಸುತ್ತದೆಂದು ಸಾಬೀತಾಗಿದೆ. ಹೃದ್ರೋಗಗಳಿಗೆ ಮಣೆಹಾಕುವ ಟ್ರೈಗ್ಲಿಸರೈಡ್‌ಗಳ ಮಟ್ಟವೂ ಗಮನಾರ್ಹವಾಗಿ ಮೇಲೆರುತ್ತದೆ. ಈ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕಾರೊನರಿ ರಕ್ತನಾಳಗಳ ಒಳಪದರಕ್ಕೆ ಇವೆಲ್ಲಾ ಮೆತ್ತಿಕೊಂಡು, ಹೃದಯಕ್ಕೆ ರಕ್ತ ಸಲೀಸಾಗಿ ಹರಿಯಲು ಅಡ್ಡಬರುತ್ತವೆ. ಆಯುಸ್ಸನ್ನು ಮೊಟಕು ಗೊಳಿಸುವ ಬೊಜ್ಜು, ಡಯಾಬಿಟಿಸ್‌ ಕೊಲೆಸ್ಟರಾಲ್‌ ಏರಿಕೆ, ರಕ್ತದ ಏರೊತ್ತಡ ಇವು ಕಾಣಿಸಿಕೊಳ್ಳಲೂ ತಡವಾಗುವುದಿಲ್ಲ.

ಟ್ರಾನ್‌್ಸಫ್ಯಾಟ್‌ಗಳು ಅಸಂತೃಪ್ತ ಕೊಬ್ಬುಗಳಾಗಿದ್ದರೂ, ಸಂತೃಪ್ತ ಕೊಬ್ಬುಗಳಿಗಿಂತ ಹೆಚ್ಚಾಗಿ ನಾವು ಬೇಗ ಯಮಸದನದ ಬಾಗಿಲು ತಟ್ಟುವಂತೆ ಮಾಡುತ್ತವೆ! ಇವು ನಮ್ಮ ಆರೋಗ್ಯಕ್ಕೆ ಪ್ರಥಮ ವೈರಿಯಾಗಿ, ಆಕರ್ಷಕ ರೂಪಗಳನ್ನು ಹೊಂದಿಕೊಂಡು ನಮ್ಮನ್ನು ತಮ್ಮೆಡೆಗೆ ಕೈಬೀಸಿ ಕರೆದು, ನಮ್ಮನ್ನು ಯುವ ವಯಸ್ಸಿನಲ್ಲೇ ಅಕಾಲ ಮರಣಕ್ಕೆ ತುತ್ತಾಗಿಸುತ್ತಿವೆ.

ಈಗ ಮಾಡಬೇಕೇನು? ನವೀನ್ನು ಉಳಿಸುವ ಏಕೈಕ ರಕ್ಷಣೆಯೆಂದರೆ ಮನೆಯೂಟ, ಏನ್ನುವುದನ್ನು ನಾವು ಗ್ರಹಿಸಬೇಕಾಗಿದೆ. ನಮ್ಮ ರಾಗಿ, ಜೋಳ, ಗೋಧಿ, ಸೋಯಾ ಆಹಾರಗಳಲ್ಲಿ ರುಚಿ ವೈವಿದ್ಯತೆಯನ್ನು ತಂದು, ಮನೆಯವರೆಲ್ಲರಲ್ಲಿ ಹೊರಗಣ ಸಂಸ್ಕರಿತ ಆಹಾರದ ರುಚಿ ಬಯಕೆಗಳನ್ನು ತಗ್ಗಿಸುವುದೊಂದೇ ಪರಿಹಾರ. ಮುಖ್ಯವಾಗಿ, ನಮ್ಮ ಪುಟಾಣಿಗಳು ವಾಣಿಜ್ಯ ಜಾಹೀರಾತುಗಳನ್ನು ಕಣ್ಣು ಮಿಟುಕಿಸದೆ ನೋಡುತ್ತಾ ಕೂತಾಗ, ಅವರ ಗಮನವನ್ನು ಬೇರೆಡೆಗೆ ತಿರುಗಿಸುವುದು ಬಹಳ ಅಗತ್ಯ. ಈಚೀಚೆಗೆ ಸಾಮಾನ್ಯವಾಗಿ ಎಲ್ಲಾ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬೇರೆ ಬೇರೆ ಆಹಾರಗಳನ್ನು ಮನೆಯಲ್ಲೇ ತಯಾರಿಸಬಹುದಾದ ರೆಸಿಪಿಗಳು ಕಾಣಿಸಿಕೊಂಡು, ತುಂಬಾ ಜನಪ್ರಿಯವಾಗಿರುವುದನ್ನು ಗಮನಿಸುತ್ತೇವೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ, ಅಲ್ಲದೆ ವಿವಿಧ ಹಿಟ್ಟುಗಳೂ ಸಿದ್ಧವಾಗಿಯೇ ಅಂಗಡಿಗಳಲ್ಲಿ ಸಿಗುತ್ತವೆ. ಇದು ಸಹ ಆರೋಗ್ಯಕರ ಹೆಜ್ಜೆಯೇ.

ಮನೆಗೆಲಸಗಳಲ್ಲಿ ಮನೆಯಲ್ಲಿನ ಇತರರೂ ಗೃಹಿಣಿಯೊಡನೆ ಕೈಜೋಡಿಸಿದರೆ ಆಕೆ ಅಡುಗೆಯನ್ನು ಇನ್ನೂ ವೈವಿಧ್ಯಮಯವಾಗಿಸಲು ಸಹಾಯಕವಾಗುತ್ತದೆ.  ನಮ್ಮ ಕೊನೆಯುಸಿರಿನವರೆಗೂ ಎಡೆಬಿಡದೆ ಮಿಡಿಯುತ್ತಿರುವ ಹೃದಯ ನಮ್ಮನ್ನು ನಿರಂತರವಾಗಿ ಕಾಪಾಡುವ ಒಂದು ಮುಖ್ಯ ಅಂಗ. ಅದಕ್ಕೆ ಅಗತ್ಯವಾದಷ್ಟೂ ರಕ್ತ ಸರಬರಾಜು ಆಗುವಂತೆ ನೋಡಿಕೊಳ್ಳುವುದು ನಮ್ಮ ಧರ್ಮವಲ್ಲವೆ? ಹೌದು, ಮನೆಯಡಿಗೆಯಲ್ಲಿ ಹೊಸ ತನವನ್ನು ತಂದಿರಿಸೋಣ. ಅದನ್ನು ಆಕರ್ಷಕವಾಗಿ ಮನೆಯವರೆಲ್ಲರ ಮುಂದಿಡೋಣ, ಅವರು ಮನೆಯೂಟ, ಮನೆಯಲ್ಲೇ ತಯಾರಿಸಿದ ತಿಂಡಿಗಳಲ್ಲೇ ಸಂಭ್ರಮಿಸುವಂತೆ ಮಾಡೋಣ. ಟ್ರಾನ್‌್ಸ ಕೊಬ್ಬುಗಳ ಸಹವಾಸವೇ ಬೇಡ ನಮಗೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT