ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗ್ಗಳಿಕೆಗಳ ಸಾಧಕಿಗೆ ಮತ್ತೊಂದು 'ಪ್ರಥಮ'ದ ಕಿರೀಟ

Last Updated 27 ಮೇ 2014, 14:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಲವು 'ಹೆಗ್ಗಳಿಕೆ'ಗಳ ಸಾಧಕಿ, 62ರ ಹರೆಯದ ಸುಷ್ಮಾ ಸ್ವರಾಜ್ ಕೇಂದ್ರ ಸಚಿವ ಸಂಪುಟದಲ್ಲಿ ಇನ್ನೊಂದು 'ಹೆಗ್ಗಳಿಕೆ'ಗೆ ಪಾತ್ರರಾಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಪಡೆದಿರುವ 'ಪ್ರಪ್ರಥಮ ಮಹಿಳೆ' ಎಂಬ ಹೆಗ್ಗಳಿಕೆ ಈಗ ಸುಷ್ಮಾ ಸ್ವರಾಜ್ ಹೆಗಲೇರಿದೆ.

ಹರ್ಯಾಣ ಸರ್ಕಾರದಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಸಂಪುಟ ದರ್ಜೆಯ ಸಚಿವರಾಗುವ ಮೂಲಕ 'ಅತ್ಯಂತ ಕಿರಿಯ ಸಂಪುಟ ಸಚಿವೆ' ಎಂಬ ಹೆಗ್ಗಳಿಕೆಗೆ ಸುಷ್ಮಾ ಪಾತ್ರರಾಗಿದ್ದರು.

ದೆಹಲಿಯ ಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸುಷ್ಮಾ ಸ್ವರಾಜ್ ರಾಷ್ಟ್ರದಲ್ಲಿ ರಾಜಕೀಯ ಪಕ್ಷವೊಂದರ ಮೊದಲ ಮಹಿಳಾ ವಕ್ತಾರರಾಗಿಯೂ ಮಿಂಚಿದ್ದರು.

ಪ್ರಸ್ತುತ ನರೇಂದ್ರ ಮೋದಿ ಸಂಪುಟದಲ್ಲಿ ಸುಷ್ಮಾ ಅವರಿಗೆ ಸಾಗರೋತ್ತರ ಭಾರತೀಯ ವ್ಯವಹಾರಗಳ ಖಾತೆಯನ್ನೂ ನೀಡಲಾಗಿದೆ.

ಕೇಂದ್ರ ಸಂಪುಟದಲ್ಲಿ ಅತ್ಯಂತ ಹಿರಿಯ ಖಾತೆಗಳಲ್ಲಿ ಒಂದಾದ ವಿದೇಶಾಂಗ ಸಚಿವಾಲಯದ ಹೊಣೆಯನ್ನು ಸುಷ್ಮಾ ಹೊತ್ತುಕೊಳ್ಳುತ್ತಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟವಾದ ಭಾರತದ ಸ್ವರ ಜಾಗತಿಕ ವ್ಯವಹಾರಗಳಲ್ಲಿ ಮಹತ್ವವಾಗಿ ಕೇಳಿ ಬರಬೇಕಾಗಿರುವ ನಿರ್ಣಾಯಕ ಹೊತ್ತಿನಲ್ಲಿ ಈ ಹೊಣೆ ಅವರ ಹೆಗಲೇರಿದೆ.

ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಬಾಂಧವ್ಯ ವೃದ್ದಿ ಅವರ ಪಾಲಿಗೆ ಸವಾಲಿನ ವಿಷಯವಾಗಲಿದೆ.

1977ರಲ್ಲಿ ತಮ್ಮ 25ರ ಹರೆಯದಲ್ಲಿ ಸುಷ್ಮಾ ಅವರು ಹರ್ಯಾಣದಲ್ಲಿ ಅತ್ಯಂತ ಕಿರಿಯ ಸಂಪುಟ ದರ್ಜೆ ಸಚಿವರಾಗಿದ್ದರು. ಶಿಕ್ಷಣ ಖಾತೆಯ ಹೊಣೆ ಅವರದಾಗಿತ್ತು.

1979ರಲ್ಲಿ ಅವರು ಹರ್ಯಾಣದ ಬಿಜೆಪಿ ರಾಜ್ಯ ಅಧ್ಯಕ್ಷರಾಗಿದ್ದರು. ಭಾರತದಲ್ಲಿ ರಾಜಕೀಯ ಪಕ್ಷವೊಂದರ ಪ್ರಥಮ ಮಹಿಳಾ ವಕ್ತಾರರಾದ ಸುಷ್ಮಾ 'ಅಪ್ರತಿಮ ಸಂಸತ್ ಸದಸ್ಯೆ' ಪ್ರಶಸ್ತಿಗೂ ಪಾತ್ರರಾದವರು.

ಕಾನೂನು ಪದವೀಧರರಾಗಿ ಸುಪ್ರಿಂಕೋರ್ಟಿನಲ್ಲಿ ವಕಾಲತ್ತು ನಡೆಸಿದ್ದ ಸುಷ್ಮಾ ಏಳು ಬಾರಿ ಸಂಸತ್ ಸದಸ್ಯರಾಗಿ ಹಾಗೂ ಮೂರು ಬಾರಿ ಶಾಸನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

1970ರಲ್ಲಿ ಎಬಿವಿಪಿ ಮೂಲಕ ಸಾರ್ವಜನಿಕ ಬದುಕಿಗೆ ಪದಾರ್ಪಣ ಮಾಡಿದ ಅವರು 1977ರಿಂದ 1982ರ ವರೆಗೆ ಅಂಬಾಲ ದಂಡು ಪ್ರದೇಶದಿಂದ ಗೆದ್ದು ಹರ್ಯಾಣ ವಿಧಾನಸಭೆಯನ್ನು ಪ್ರತಿನಿಧಿಸಿದ್ದರು. ದೇವಿಲಾಲ್ ಸರ್ಕಾರದಲ್ಲಿ ಅವರು ಸಂಪುಟ ಸಚಿವರಾಗಿದ್ದರು.

1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ 13 ದಿನಗಳ ಸರ್ಕಾರದಲ್ಲಿ ವಾರ್ತೆ ಮತ್ತು ಪ್ರಸಾರ ಖಾತೆಯ ಸಂಪುಟ ದರ್ಜೆ ಸಚಿವರಾಗಿದ್ದ ಸುಷ್ಮಾ, ಆ ಬಳಿಕ ರಚನೆಯಾಗಿದ್ದ ವಾಜಪೇಯಿ ಸಂಪುಟಕ್ಕೆ 1998ರಲ್ಲಿ ರಾಜೀನಾಮೆ ನೀಡಿ ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಮೂಲಕ 'ದೆಹಲಿಯ ಪ್ರಥಮ ಮಹಿಳಾ ಮುಖ್ಯಮಂತ್ರಿ' ಎಂಬ ಕೀರ್ತಿ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT