ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಪರಿಸರ ನಾಶ: ಅಸಮಾಧಾನ

Last Updated 5 ಅಕ್ಟೋಬರ್ 2015, 10:07 IST
ಅಕ್ಷರ ಗಾತ್ರ

ರಾಮನಗರ:  ‘ಹಣ ಮಾಡುವ ದುರುದ್ದೇಶದಿಂದ ಕೆಲವರು ಪ್ರಕೃತಿ ನಾಶ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ  ಭೂಮಿ ಬಂಜರಾಗಿ, ಎಲ್ಲ ಜೀವಿಗಳು ಅವಸಾನ ಹೊಂದುತ್ತವೆ’ ಎಂದು ಸಾಲುಮರದ ತಿಮ್ಮಕ್ಕ ಎಚ್ಚರಿಸಿದರು.

ತಾಲ್ಲೂಕಿನ ಬಿಡದಿ ಹೋಬಳಿಯ ಜಡೇನಹಳ್ಳಿ ಬಳಿಯ ಬಾ ಬಾಪು ಇಂಟರ್‌ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮಗೂ ಮುಂಚೆ ಈ ಭೂಮಿ ಮೇಲೆ ಅನೇಕ ಜನರು ಜೀವಿಸಿ ಹೋಗಿದ್ದಾರೆ. ಅವರೂ ಕೂಡ ನಮ್ಮಂತೆಯೇ ಪರಿಸರ ನಾಶದಲ್ಲಿ ತೊಡಗಿದ್ದರೆ, ನಾವು ಇಂದು ಜೀವಿಸಲು ಸಾಧ್ಯವಿರುತ್ತಿರಲಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದರು.

ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ 2 ಸಸಿಗಳನ್ನಾದರೂ ನೆಟ್ಟು ಪೋಷಿಸಬೇಕು. ಪರಿಸರ ನಾಶದ ಪರಿಣಾಮವಾಗಿ ದಿನಕ್ಕೊಂದು ಹೊಸ ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಇಂತಹ ಕಾಯಿಲೆಗಳು ಗ್ರಾಮೀಣ ಬಡ ಜನರನ್ನು ಹೆಚ್ಚು ಕಾಡುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಕರ್ಯಗಳು ದೊರಕುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಚಿಕಿತ್ಸೆ ನೆಪದಲ್ಲಿ ಬಡಜನರನ್ನು ಸುಲಿಗೆ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮೀಣ ಪ್ರದೇಶದ ಬಡ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿರುವ ಬಾ ಬಾಪು ಸಂಸ್ಥೆಯ ಕಾರ್ಯ ಶ್ಲಾಘನೀಯ. ಉಳ್ಳವರು ತಮ್ಮ ಗಳಿಕೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಡುವ ಮೂಲಕ ಬಡಜನರ ಸೇವೆಗೆ ಮುಂದಾಗಬೇಕು’ ಎಂದು ಅವರು ಹೇಳಿದರು.

ನನ್ನ ಹುಟ್ಟೂರು ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕೆಂಬುದು ನನ್ನ ಕನಸು. ಆದರೆ, ಅದಿನ್ನೂ ಈಡೇರಿಲ್ಲ.

ಈ ಸಂಬಂಧ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ದೊರಕಿಲ್ಲ. ಸರ್ಕಾರ ಸಹಾಯ ಮಾಡದಿದ್ದರೂ ಸರಿ, ದೇಣಿಗೆ ಸಂಗ್ರಹಿಸಿ ಸಾಯುವ ಮುನ್ನ ಹೆರಿಗೆ ಆಸ್ಪತ್ರೆ ಕಟ್ಟಿಸಿಯೇ ತೀರುತ್ತೇನೆ ಎಂದು ತಿಳಿಸಿದರು.

ಬಾ ಬಾಪು ಸಂಸ್ಥೆಯ ಅಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ಸಾಲು ಮರದ ತಿಮ್ಮಕ್ಕ ಅವರು ತಮ್ಮ ಇಳಿ ವಯಸ್ಸಿನಲ್ಲೂ ಪರಿಸರ ಕಾಳಜಿಯನ್ನು ಮೈಗೂಢಿಸಿಕೊಂಡಿದ್ದಾರೆ. ಅವರ ಸಾಧನೆ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಬೇಕು.

ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು. ಇದೇ ವೇಳೆ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ₹10ಸಾವಿರ ದೇಣಿಗೆ ನೀಡಿದರು.

ತಿಮ್ಮಕ್ಕ ಅವರು ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಶಿಬಿರದಲ್ಲಿ ಗ್ರಾಮೀಣ ಭಾಗದ ನೂರಾರು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜಿಲ್ಲಾಸ್ಪತ್ರೆ ವೈದ್ಯರು ತಪಾಸಣೆ ನಡೆಸಿ, ಅಗತ್ಯವಿದ್ದವರಿಗೆ ಉಚಿತವಾಗಿ ಔಷಧಿ ವಿತರಿಸಿದರು. ಸಂಸ್ಥೆಯ ರಘುರಾಮ್, ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT