ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣೊಂದು ಗಂಡಾರು..!

ವಿನೋದ
Last Updated 9 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ರೀ... ಏನ್ಮಾಡ್ತಿದೀರಿ? ತಿಂಡಿ ರೆಡಿ ಇದೆ ಕೊಡ್ಲಾ?’ ಅಡಿಗೆ ಮನೆಯಿಂದ ಹೋಂ ಮಿನಿಸ್ಟ್ರ ಧ್ವನಿ ಅಲೆ ಅಲೆಯಾಗಿ ಹಾಲ್‌ವರೆಗೆ ಹರಿದು ಬಂದು ನ್ಯೂಸ್ ಪೇಪರ್ ಓದುತ್ತಿದ್ದ ನನ್ನ ಕಿವಿ ಸೇರಿದಾಗ ‘ಸ್ವಲ್ಪ ಇರೆ, ಪೇಪರ್ ಓದ್ತಾ ಇದೀನಿ’ ಎಂದೆ.

‘ನೀತೂ ಏನ್ಮಾಡ್ತಿದಾಳೆ?’ ‘ನಾನು ಟಿ.ವಿ. ನ್ಯೂಸ್ ನೋಡ್ತಿದೀನಮ್ಮಾ, ತಿಂಡಿ ಆಮೇಲೆ ತಿಂತೀನಿ...’ ಅಮ್ಮನ ಪ್ರಶ್ನೆಗೆ ಮಗಳೇ ಉತ್ತರಿಸಿದಳು.

‘ಬೆಳಿಗ್ಗೆ ಎದ್ರೆ ಇಬ್ರೂ ಅದೇನ್ ನ್ಯೂಸು ನ್ಯೂಸು ಅಂತ ಸಾಯ್ತಿರೋ... ಅದ್ರಲ್ಲಾದ್ರು ಏನಿರುತ್ತೆ ಮಣ್ಣು. ಬರೀ ಅಲ್ಲಿ ಅತ್ಯಾಚಾರ, ಇಲ್ಲಿ ಅತ್ಯಾಚಾರ. ನಿಮ್ಮಪ್ಪಂಗೆ ಅಂಥ ನ್ಯೂಸ್ ಅಂದ್ರೆ ಸಾಕು, ಕಣ್ಣು ಕಿಸ್ಕೊಂಡು ಬಾಯಿ ಬಿಟ್ಕಂಡ್ ಓದ್ತಾರೆ. ನಿಂಗಾದ್ರು ಬುದ್ಧಿ ಬೇಡ್ವಾ? ಮೊದ್ಲು ಆ ಟಿ.ವಿ. ಆಫ್ ಮಾಡು...’

ಅಮ್ಮನ ಮಾತಿಗೆ ಸಿಡಿಮಿಡಿಗೊಂಡ ಮಗಳು ‘ಏನಮ್ಮ ನೀನು, ಏನೇನೋ ಮಾತಾಡ್ತೀಯ. ಕೊಳವೆ ಬಾವಿಗೆ ಬಿದ್ದಿದ್ನಲ್ಲ ಹುಡುಗ, ಪಾಪ ಸತ್ತೋದ್ನಂತೆ. ಅದನ್ನ ನೋಡ್ತಿದ್ದೆ...’ ಎಂದು ಆಕ್ಷೇಪಿಸಿದಳು.

ತಕ್ಷಣ ನಾನು ‘ಕೊಳವೆ ಬಾವಿಗೆ ಬಿದ್ದೋರ್‍ನ, ಸಂಸಾರದ ಗುಂಡಿಗೆ ಬಿದ್ದ ನನ್ನಂಥೋರ್‍ನ ಯಾರಾದ್ರು ಕಾಪಾಡೋಕೆ ಸಾಧ್ಯಾನ ಮಗಳೆ, ನೀನು ಕಾಲೇಜಿಗೆ ರೆಡಿ ಆಗು ಹೋಗು’ ಎಂದೆ. ‘ಕರೆಕ್ಟ್ ಹೇಳಿದೆ ಪಪ್ಪ’ ಎಂದು ನಕ್ಕಳು ಮಗಳು, ಅಡಿಗೆ ಮನೆ ಕಡೆ ನೋಡುತ್ತ.
ಎರಡೇ ಕ್ಷಣ, ಬಿಲ್ಲಿನಿಂದ ಸಿಡಿದ ಬಾಣದಂತೆ ಅಡಿಗೆ ಮನೆಯಿಂದ ಆಚೆ ಬಂದ ಮಡದಿ ‘ಹೌದಾ? ಗುಂಡಿಗೆ ನೀವೇ ಬಿದ್ರಾ ಅಥವ ಯಾರಾದ್ರು ತಳ್ಳಿದ್ರಾ? ನಿಮ್ಮನ್ನು ಕಟ್ಕಂಡು ನಾನು ಸಂಸಾರ ಅಲ್ಲ, ಸರ್ಕಸ್ ನಡೆಸ್ತಿದೀನಿ ಸರ್ಕಸ್... ತಿಳ್ಕಳ್ರಿ’ ಎಂದು ರೇಗಿದಳು.
‘ಹೌದಪ್ಪ, ನೀವು ಹೆಂಗಸರೆಲ್ಲ ಒಂದೇ ಜಾತಿ. ಎಲ್ಲ ನಿಮ್ಮಿಂದ್ಲೇ ನಡೆಯೋದು ಅನ್ನೋ ತರ ಪೋಸ್ ಕೊಡ್ತೀರ. ದುಡಿಯೋರು ನಾವು, ಅಧಿಕಾರ ನಡೆಸೋರು ನೀವು ಅಲ್ವಾ?’

‘ಅಧಿಕಾರನ? ಯಾವ ಅಧಿಕಾರ ಕೊಟ್ಟಿದೀರಿ? ಪಾತ್ರೆ ತೊಳಿಯೋದು, ಅಡುಗೆ ಮಾಡೋದು, ಮಕ್ಕಳನ್ನ ಹೆರೋದು ಇದಾ? ಇದನ್ನ ನೀವೇ ಇಟ್ಕಳಿ. ನಮಗೆ ಲೋಕಸಭೆ, ವಿಧಾನಸಭೇಲಿ ಅಧಿಕಾರ ಬೇಕು, ಕೊಟ್ಟಿದೀರಾ?’

‘ಅರೆ, ಕೊಟ್ಟಿದೀವಲ್ಲ? ಪ್ರಧಾನಿ ಆಗಿದೀರಿ, ಮುಖ್ಯಮಂತ್ರಿ ಆಗಿದೀರಿ, ಸ್ಪೀಕರ್ ಆಗಿದೀರಿ, ಪೊಲೀಸ್ ಆಗಿದೀರಿ, ಪೈಲಟ್ ಆಗಿದೀರಿ... ಇನ್ನೇನ್ ಬೇಕು?’

‘ಎಲ್ಲೋ ಒಬ್ಬಿಬ್ರು ಆಗಿಬಿಟ್ರೆ ಮುಗೀತಾ? ನಮಗೆ ನ್ಯಾಯವಾಗಿ ೫೦ ಪರ್ಸೆಂಟ್ ಮಹಿಳಾ ಮೀಸಲಾತಿ ಕೊಡಬೇಕು, ಕೊಟ್ಟಿದೀರಾ? ೩೩ ಪರ್ಸೆಂಟ್ ಕೊಡೋಕೇ ಇನ್ನೂ ಹಗ್ಗ ಜಗ್ಗಾಡ್ತಿದೀರ. ಮತ್ತೆ ಮಾತೆತ್ತಿದ್ರೆ ಸ್ತ್ರೀ ಸಮಾನತೆ, ಮಣ್ಣು ಮಸಿ ಅಂತ ಭಾಷಣ ಮಾಡ್ತೀರ...’
‘ಬರೀ ೩೩ ಪರ್ಸೆಂಟಾ? ನಾನು ನಿನಗೆ ೯೦ ಪರ್ಸೆಂಟ್ ಕೊಟ್ಟಿದೀನಲ್ಲೆ? ಬರೋ ಸಂಬಳನೆಲ್ಲ ನಿನ್ನ ಕೈಗಿಟ್ಟು ಖರ್ಚಿಗೆ ಅಂತ ಬರೀ ೧೦ ಪರ್ಸೆಂಟ್ ಇಸ್ಕೋತಿದೀನಿ?’

‘ನಮ್ಮ ವಿಷಯ ಬಿಡ್ರಿ, ದೇಶದ ವಿಷಯ ಮಾತಾಡಿ...’ ‘ಓ, ದೇಶದ ವಿಷಯ... ಓಕೆ. ಹಾ, ಮರೆತಿದ್ದೆ. ನಮ್ಮ ಗೃಹಮಂತ್ರಿಗಳು ಪೊಲೀಸ್ ನೇಮಕಾತೀಲಿ ಮಹಿಳೆಯರಿಗೆ ೩೩ ಪರ್ಸೆಂಟ್ ರಿಸರ್‌ವೇಶನ್ ಕೊಡ್ತೀವಿ ಅಂತ ಹೇಳಿದಾರೆ, ಪೇಪರ್‌ನಲ್ಲಿ ಬಂದಿತ್ತು. ನೀನು, ನಿನ್ನ ಮಗಳು ಪೊಲೀಸ್ ಇಲಾಖೆ ಸೇರಿ ಅತ್ಯಾಚಾರಿಗಳನ್ನು ಮಟ್ಟ ಹಾಕಬಹುದಪ್ಪ... ಏನಂತಿ?’

‘ಹೌದೌದು, ಮಟ್ಟ ಹಾಕ್ತಾರೆ. ಮನೆಗೊಬ್ಬ ಪೊಲೀಸ್ ಕೊಟ್ರೂ ಅತ್ಯಾಚಾರ ನಿಲ್ಸೋಕಾಗಲ್ಲ ಅಂತ ಅದ್ಯಾರೋ ಮಂತ್ರಿ ಹೇಳಿದಾರೆ?’
‘ಹೌದು ಮತ್ತೆ, ನೀವು ಹೆಂಗಸರು ಅರ್ಧಂಬರ್ಧ ಬಟ್ಟೆ ಹಾಕ್ಕಂಡ್ ಓಡಾಡಿದ್ರೆ ಇನ್ನೇನಾಗುತ್ತೆ? ಎಂಥೋರಿಗಾದ್ರು ತಲೆ ಕೆಡುತ್ತೆ. ಮೈತುಂಬ ಸೆರಗು ಹೊದ್ಕೊಂಡು ಹೋದ್ರೆ ಎಂಥೋರಿಗಾದ್ರು ಗೌರವ ಬರುತ್ತಪ್ಪ... ರಾಜ್‌ಕುಮಾರ್ ಸಿನಿಮಾದ ಒಂದು ಹಾಡು ಕೇಳಿದೀಯಾ? ‘ಹೆಣ್ಣು ಎಂದರೆ ಹೇಗಿರಬೇಕು, ಹಣೆಯಲ್ಲಿ ಕುಂಕುಮ ನಗುತಿರಬೇಕು, ಅರಿಶಿನ ಕೆನ್ನೆಯ ತುಂಬಿರಬೇಕು, ಮೈತುಂಬ ಸೆರಗನ್ನು ಹೊದ್ದಿರಬೇಕು...’

‘ಆಹಾ ಸಾಕು ನಿಲ್ಲಿಸ್ರಿ ಕಂಡಿದೀನಿ. ಸೀತೆ ಏನು ಜೀನ್ಸ್ ಪ್ಯಾಂಟು, ಟೀಶರ್ಟ್ ಹಾಕಿದ್ಲಾ ರಾವಣನ ತಲೆ ಕೆಡೋಕೆ? ದ್ರೌಪದಿಯ ವಸ್ತ್ರಾಪಹರಣ ಮಾಡಿದ್ನಲ್ಲ ದುಶ್ಯಾಸನ, ಅವಳೇನು ಮಿಡಿ, ಸ್ಕರ್ಟು ಹಾಕ್ತಿದ್ಲಾ... ಬರೀ ಹೆಣ್ಣು ಹೇಗಿರಬೇಕು ಅಂತೀರಲ್ಲ, ನೀವು ಗಂಡಸರು ಹೇಗಿರಬೇಕು? ನಿಮ್ಮದು ಕೋತಿ ಬುದ್ಧಿ, ಅದನ್ನ ಒಪ್ಕಳಿ ಮೊದ್ಲು...’

ಆಯ್ತಪ್ಪ, ನಮ್ಮದು ಕೋತಿ ಬುದ್ಧಿನೇ. ಅದಕ್ಕೇನೀಗ? ಸರಿಪಡಿಸೋಕೆ ಆಗುತ್ತಾ?’ ‘ಯಾಕಾಗಲ್ಲ? ಸರಿಯಾದ ಶಿಕ್ಷೆ ಕೊಟ್ರೆ ಎಲ್ಲ ದಾರಿಗೆ ಬಂದೇ ಬರ್‍ತಾರೆ. ಕೈ ತೆಗೆದೋರ ಕೈ ಕತ್ತರಿಸಬೇಕು. ಕೊಲೆ ಮಾಡಿದೋರ ತಲೆ ಕತ್ತರಿಸಬೇಕು. ಬೈದ್ರೆ ನಾಲಿಗೆ ಕತ್ತರಿಸಬೇಕು. ಕೆಟ್ಟದ್ದು ನೋಡಿದ್ರೆ ಕಣ್ಣು ಕೀಳಿಸಬೇಕು.... ಅತ್ಯಾಚಾರ ಮಾಡಿದೋರ.....’

‘ಸ್ಟಾಪ್ ಸ್ಟಾಪ್... ಗೊತ್ತಾಯ್ತು ಬಿಡು, ಆದ್ರೆ ಈ ಶಿಕ್ಷೆಗೆ ನಮ್ಮ ಮೋದಿ ಸಾಹೇಬ್ರು ಒಪ್ಪಲ್ಲ ಅನ್ಸುತ್ತೆ...’ ‘ಯಾಕೆ?’ ‘ಇದು ಪಾಕಿಸ್ತಾನದ ಶಿಕ್ಷೆ ಅಲ್ವ, ಅದಕ್ಕೆ!’ ‘ಓ, ಅದು ಬೇರೆನಾ ? ಹೋಗ್ಲಿ, ನಮ್ಮ ಮೀಸಲಾತಿನಾದ್ರು ಜಾರಿಗೆ ಕೊಡ್ತಾರೋ ಇಲ್ವೋ?’

‘ನೋಡು, ಹೆಣ್ಣಿಗೆ ನಮ್ಮ ದೇಶದಲ್ಲಿ ಕೊಟ್ಟಿರೋಷ್ಟು ಮಹತ್ವಾನ ಬೇರೆ ಯಾವ ದೇಶದಲ್ಲೂ ಕೊಟ್ಟಿಲ್ಲ. ಭೂಮಿತಾಯಿ ಹೆಣ್ಣು, ದುಡ್ಡಿನ ದೇವತೆ ಹೆಣ್ಣು, ವಿದ್ಯಾದೇವತೆ ಹೆಣ್ಣು, ಆದಿಶಕ್ತಿ ಹೆಣ್ಣು... ಇನ್ನೇನ್ ಬೇಕು? ಆ ಪರಶಿವ ತನ್ನ ಅರ್ಧ ದೇಹಾನೇ ಹೆಂಡತಿಗೆ ಕೊಟ್ಟ. ತಲೆ ಮೇಲೆ ಗಂಗೇನೇ ಕೂರಿಸ್ಕೊಂಡ, ನನ್ ತರ. ಇನ್ನೇನ್ ಬೇಕು?’

‘ಈ ಪುರಾಣ ಹೇಳೋಕೆ ಚೆನ್ನಾಗಿದೀರ. ನಿಜ ಜೀವನದಲ್ಲಿ ಹೆಣ್ಣು ಇನ್ನೂ ಗಂಡಿನ ಗುಲಾಮಳಾಗೇ ಇದಾಳೆ. ಇನ್ನೊಂದು ಹತ್ತು ವರ್ಷ ತಡ್ಕಳ್ರಿ. ನೀವೇನ್ ಮೀಸಲಾತಿ ಕೊಡೋದು ಬೇಡ. ನಾವೇ ೩೩ ಪರ್ಸೆಂಟ್‌ಗೆ ಬರ್‍ತೀವಿ. ಆಗ ನೀವೇ ಹೊಡೆದಾಡಿಕೊಂಡು ಸಾಯ್ತೀರಿ...’

‘ನೀವೇ ೩೩ ಪರ್ಸೆಂಟಿಗೆ ಬರ್‍ತೀರಾ? ಹೆಂಗೆ?’ ‘ಹೆಂಗೆ ಅಂದ್ರೆ ಈಗ ದೇಶದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಆಗ್ತಿದೆಯಂತೆ. ನೂರಕ್ಕೆ ೫೫ರಷ್ಟು ಪುರುಷರು ಇದ್ರೆ ಮಹಿಳೆಯರ ಸಂಖ್ಯೆ ೪೫ಕ್ಕೆ ಇಳಿದಿದೆಯಂತೆ. ಅತ್ಯಾಚಾರ, ಭ್ರೂಣಹತ್ಯೆ ಹೀಗೇ ಮುಂದುವರಿದ್ರೆ ಇನ್ನೊಂದು ಹತ್ತು ವರ್ಷದಲ್ಲಿ ಮಹಿಳೆಯರ ಸಂಖ್ಯೆ ನೂರಕ್ಕೆ ೩೩ಕ್ಕೆ ಇಳಿಯುತ್ತೆ ಅಂತ ಪೇಪರ್‌ನಲ್ಲಿ ಬಂದಿತ್ತು.’

‘ಹೌದಾ?’ ‘ಹೂ ಮತ್ತೆ, ಆಗ ನೂರಕ್ಕೆ ೩೦ ಜನ ಗಂಡಸರಿಗೆ ಮದುವೆ ಆಗೋಕೆ ಹೆಣ್ಣೇ ಸಿಗಲ್ವಂತೆ. ಹಿಂದೆ ‘ಗಂಡೊಂದು ಹೆಣ್ಣಾರು’ ಅಂತ ಒಂದು ಸಿನಿಮಾ ಬಂದಿತ್ತು ಗೊತ್ತಾ? ಅದೇ ತರ ಮುಂದೆ ‘ಹೆಣ್ಣೊಂದು ಗಂಡಾರು’ ಅನ್ನೋ ಸಿನಿಮಾ ಬಂದ್ರೂ ಬರಬಹುದು. ಶಿವ ತಲೆ ಮೇಲೂ ಒಬ್ಬಳನ್ನು ಕೂರಿಸ್ಕೊಂಡಿದ್ದ ಅಂತೀರಿ. ಇನ್ನು ಮುಂದೆ ಪಕ್ಕಕ್ಕೆ ಕೂರಿಸಿಕೊಳ್ಳೋಕೂ ನಿಮಗೆ ಹೆಣ್ಣು ಸಿಗೋದಿಲ್ಲ ನೋಡ್ತಿರಿ...’
‘ಹೌದಾ?’ ‘ಬಾಯಿ ಮುಚ್ಕಳಿ, ನೊಣ ಹೋದಾತು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT