ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವಳು ಮಾತ್ರ ತಾಯಿಯಲ್ಲ...

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ಅವರು ಮಾಮೂಲಿನಂತೆ ದೇವರ ಮನೆಯಲ್ಲಿ ಬಾಗಿನ, ಮೊಳ ಮಲ್ಲಿಗೆಹೂವು ಇಟ್ಟು ‘ಕುಂಕುಮ ಹಚ್ಚಿಕೊಳ್ಳಿ’ ಎಂದರು. ನಾನೂ ಈ ದೃಶ್ಯಕ್ಕೆ ಸಿದ್ಧಳಾದವಳಂತೆ ಕಣ್ಣು ತುಂಬಿಕೊಂಡು ಕುಂಕುಮ ಹಚ್ಚಿಕೊಂಡೆ. ನನ್ನ ಕಸಿನ್ ಮದುವೆ, ನಾವೇ ಮುಂದೆ ನಿಂತು ಮಾಡಿಸಿದ ಸಂಬಂಧವದು, ಹಾಗೆ ಸ್ವಲ್ಪ ಹೆಚ್ಚು ಬಾಂಧವ್ಯದ ಜವಾಬ್ದಾರಿಯೂ ನಮ್ಮ ಹೆಗಲ ಮೇಲೆ ಇತ್ತು.

ಅವಳು ಗಂಡನೊಂದಿಗೆ ಅಮೆರಿಕಕ್ಕೆ ಹಾರಿಹೋದ ಮೇಲೆ ಇಲ್ಲಿ ಅವಳ ಮನೆಗೆ ಆಗೊಮ್ಮೆ ಈಗೊಮ್ಮೆ ಹೋಗಿ ಸಂಬಂಧದ ಗಂಟನ್ನು ಗಟ್ಟಿಮಾಡುವ ಹೊಣೆ ನಮ್ಮ ಮೇಲಿತ್ತು. ಹಾಗೆ ಹೋಗಿ ಬರುವಾಗೆಲ್ಲ ನನ್ನ ಕಣ್ಣು ಮಂಜಾಗದೇ ನಾನು ಆ ಮನೆಯಿಂದ ಹೊರಬಂದದ್ದೇ ಇಲ್ಲ. ಕಾರಣ ಅವಳ ಮಾವ.

ಹೆಣ್ಣುಜೀವವಿಲ್ಲದ ಆ ಮನೆಯಲ್ಲಿ  ದೇವರಮನೆಯಲ್ಲಿ ಯಾವ ಹೆಣ್ಣುಮಕ್ಕಳಿಗೂ ಕಡಿಮೆಯಿಲ್ಲದಂತೆ ಅವರು ನನಗೆಂದೆ ತಯಾರು ಮಾಡಿಡುವ ಬಾಗಿನ, ಮೊಳ ಮಲ್ಲಿಗೆಹೂವು ಮತ್ತು ಮರೆಯದೇ ‘ಕುಂಕುಮ ಹಚ್ಚಿಕೊಳ್ಳಿ’ ಎಂದು ಹೇಳುವ ರೀತಿ,

ನನ್ನ ಕಣ್ಣು ಮಂಜಾಗುವಂತೆ ಮಾಡುತ್ತಿತ್ತು. ಪುಡಿಕೂದಲಿಗೆ ಹೂವನ್ನು ಮುಡಿಯುವ ಅಭ್ಯಾಸವಿಲ್ಲದಿದ್ದರೂ ಅವರಿಗಾಗಿ ಮಲ್ಲಿಗೆಯನ್ನು ಮುಡಿಗೇರಿಸಿಕೊಂಡೇ ಹೊರಡುತ್ತಿದ್ದೆ.

ಈ ಜೀವ, ಏಕಾಂಗಿಯಾಗಿ ಎರಡು ಗಂಡುಮಕ್ಕಳನ್ನು ಬೆಳೆಸಿ ವಿದ್ಯೆಯ ಜೊತೆಗೆ ಸಜ್ಜನಿಕೆಯನ್ನೂ ಕಲಿಸಿದ ವಿಶೇಷವ್ಯಕ್ತಿ. ಹೆಂಡತಿ, ಅನಾರೋಗ್ಯದಿಂದ ಆರರ ಮತ್ತು ಎರಡು ವರ್ಷದ ಇಬ್ಬರು ಗಂಡುಮಕ್ಕಳನ್ನು ಇವರ ಮಡಿಲಿಗೆ ಹಾಕಿ ಬದುಕು ಮುಗಿಸಿದ್ದರು. ಕುಟುಂಬದ ಅಷ್ಟೂ ಜನರ ನಿರಂತರ ಒತ್ತಾಯವಿದ್ದರೂ ಇವರು ಎರಡನೇ ಮದುವೆಯಾಗುವ ಯೋಚನೆ ಮಾಡಲೇ ಇಲ್ಲ.

ಯಾವ ತಾಯಿಗೂ ಕಡಿಮೆಯಿಲ್ಲದಂತೆ ಮಕ್ಕಳನ್ನು ಬೆಳೆಸಿದ್ದು ಮಾತ್ರವಲ್ಲದೆ ವೃತ್ತಿಯ ಜೊತೆಗೆ ಮನೆಯನ್ನು ಮಕ್ಕಳ ಬದುಕನ್ನೂ ಬೆಳಗಿದ, ಅದ್ಭುತ ಪುಳಿಯೋಗರೆ ಮಾಡುವ ಇವರು ನನ್ನ ಕಣ್ಣಿಗೆ ನನ್ನಮ್ಮನಂತೆ ಕಂಡಿದ್ದು ಸುಳ್ಳಲ್ಲ, ಈಗ ಹೇಳಿ ಈ ಗಂಡುಜೀವವೂ ತಾಯಲ್ಲವೆ?

ಹೆಣ್ಣುಜೀವದ ಅಸ್ತಿತ್ವವನ್ನು ಹೆರುವ ಪ್ರಕ್ರಿಯೆಯೊಂದಿಗೆ ಸಾಧಿಸಿಕೊಂಡೇ ಬಂದಿದೆ ಪ್ರಕೃತಿ. ಹಾಗೆ ಹೆತ್ತವಳನ್ನು ದೈವಕ್ಕೆ ಸಮೀಕರಿಸುವ ಅಭ್ಯಾಸವೂ ಅವಳನ್ನು ಸಮಾಧಾನಿಸುವ ಕಾಣ್ಕೆಯಾಗಿರಲೂಬಹುದು.

ಹೆಣ್ಣು ತನ್ನ ಜೀವವನ್ನೇ ಒತ್ತೆಯಾಗಿಟ್ಟು ಇನ್ನೊಂದು ಜೀವವನ್ನು ಭೂಮಿಗೆ ತರುವ ಪ್ರಕ್ರಿಯೆಗೆ ಇಷ್ಟು ಗೌರವ ಕೊಟ್ಟಿದ್ದು ನ್ಯಾಯವೇ. ಆದರೆ ಹೆರುವುದೊಂದೇ ಹೆಣ್ಣಿನ ಅಸ್ತಿತ್ವ ಅಥವಾ ಅವಳ ಹೆಣ್ತನಕ್ಕೆ, ಅವಳ ತಾಯ್ತನದ ಭಾವನೆಗೆ ಸಾಕ್ಷಿ ಖಂಡಿತ ಅಲ್ಲ.

ಇತ್ತೀಚೆಗೆ ಹೆರದೇ ತಾಯಾದ ಗೆಳತಿಯ ತಾಯ್ತನವನ್ನು ಕುಟುಕುವಂತೆ ಮಾತಾಡಿ ಅವಳ ಮಾತೃತ್ವದ ಭಾವಗಳನ್ನೇ ಪ್ರಶ್ನಿಸಿದ ಘಟನೆ ನೋಡಿ ತಾಯ್ತನದ ವ್ಯಾಖ್ಯಾನವನ್ನೇ ಮರುವಿಮರ್ಶೆಗೆ ಒಳಪಡಿಸಬೇಕೋ ಏನೋ ಎಂದೆನ್ನಿಸಿದ್ದು ಸತ್ಯ. ದುರದೃಷ್ಟವಶಾತ್ ಈ ಅವಕಾಶ ಮಾಡಿಕೊಟ್ಟದ್ದು ತಾಯಂದಿರೇ ಅನ್ನೋದು ಅಷ್ಟೇ ಕಟುವಾಸ್ತವ. 

ತಾಯ್ತನ, ತಂದೆತನ – ಈ ಎಲ್ಲಕ್ಕಿಂತ ಹೆಚ್ಚು ವಾಸ್ತವದಲ್ಲಿರುವುದು ಎಂದರೆ ಮನುಷ್ಯನ ‘ಈಗೋ’; ನಮ್ಮ ‘ಅಹಂ’.  ನಮ್ಮೆಲ್ಲರಿಗೂ ಎಲ್ಲ ‘ತನ’ಗಳಿಗಿಂತಲೂ ಹೆಚ್ಚು ಆಪ್ತವಾಗಿರುವುದೇ ಈ ‘ಈಗೋ’.

ಇದನ್ನು ಸಮಾಧಾನ, ತೃಪ್ತಿ ಪಡಿಸಲು ನಾವು ತಾಯ್ತನವನ್ನೇನು, ಯಾವುದನ್ನೂ ಘಾಸಿ ಮಾಡಲು ತಯಾರಾಗುತ್ತಿದ್ದೇವೆ. ಇಲ್ಲಿ ಮೊದಲು ‘ನಾನು’ ಪ್ರತಿಷ್ಠಾಪನೆಯಾಗಬೇಕು. ನನ್ನ ಬಳಿಕವಷ್ಟೇ ನೀನು.

ಇದಾದ ಮೇಲೆ ನನ್ನ ಮಾತೂ ಅಷ್ಟೇ ಮಟ್ಟದಲ್ಲಿ ನಡೆಯಬೇಕು ಅನ್ನುವ ಹಠ ಕೂಡ ಮನುಷ್ಯನದ್ದೇ. ಹೀಗಾಗಿ ಇಂಥ ಹಠಮಾರಿತನಗಳಿಗೆ ಒಂದಷ್ಟು ಮನಸ್ಸುಗಳು ನೊಂದುಕೊಳ್ಳಬೇಕಾಗಿ ಬರುತ್ತಿದೆ. ಕೊನೆಪಕ್ಷ ಇಂಥ ತಪ್ಪುಗಳನ್ನು ಗಂಡಸು ಮಾಡಿದರೂ ಸಹಿಸಬಹುದೇನೋ! ಏಕೆಂದರೆ ಸೂಕ್ಷ್ಮವೆನ್ನಿಸುವ ಸಂವೇದನೆಗಳು ಗಂಡಸಿಗೆ ಕಡಿಮೆಯೇ.

ತನ್ನ ಮೂಗಿನ ನೇರಕ್ಕೆ ಮಾತಾಡಿ ಕೈ ತೊಳೆದುಕೊಳ್ಳುವ ಗಂಡಿನ ಈ ಅಭ್ಯಾಸ ನಮ್ಮೆಲ್ಲರಿಗೂ ಅಭ್ಯಾಸವಾಗಿಯೇ ಶತಮಾನಗಳು ಕಳೆದಿವೆ. ಆದರೆ ಸೂಕ್ಷ್ಮತೆಗೇ ಇನ್ನೊಂದು ಹೆಸರೇ ಹೆಣ್ಣು ಎಂದುಕೊಳ್ಳುವಾಗ ಈ ರೀತಿ ಮಾತಾಡಿ ಅವಳ ಅಸೂಕ್ಷ್ಮತೆಯನ್ನು ಜಗಜ್ಜಾಹೀರು ಮಾಡುವುದು  ಸರಿಯೇ ಇದು?

ವಿದ್ಯಾಭ್ಯಾಸ ಹೆಣ್ಣುಮಕ್ಕಳನ್ನು ಸಶಕ್ತ ಮಾಡಿದಷ್ಟೇ ಮಾರ್ದವತೆಯನ್ನೂ ಹೊಸಕಿ ಹಾಕಿದೆಯೆಂದರೆ ತಪ್ಪಾಗದು ತಾನೇ? ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಇನ್ನೊಬ್ಬರ ಮೇಲೆ ಹೇರುವ ಆತುರ ಏಕೆ?

ಮನುಷ್ಯ ಸಂತೋಷವಾಗಿರಲು, ನೀರಸ, ಏಕತಾನತೆಯಿಂದ ನರಳುವ ಬದುಕಿಗೆ ಉತ್ಸಾಹ ತುಂಬಲು ಇರುವ ಸಾಧನವಾಗಿ ಸಂತಾನವನ್ನು ನೋಡಬೇಕೆ ಹೊರತು, ಮಕ್ಕಳು ನಮ್ಮ ಅಹಂಕಾರ ತಣಿಸುವ ಸಾಧನಗಳಲ್ಲ; ಹೆಣ್ತನ, ಗಂಡಸ್ತನಗಳಿಗೆ ಪುರಾವೆಯೂ ಖಂಡಿತ ಅಲ್ಲ. ಆದ್ದರಿಂದ ಮಕ್ಕಳಾಗದೇ ಇರುವ ದಂಪತಿಗಳು ಅಪರಾಧಿಗಳಲ್ಲ.

ಪರಿಸ್ಥಿತಿಯ ಕಠೋರತೆ ಎಷ್ಟಿದೆಯೆಂದರೆ ಮಕ್ಕಳಾಗದೇ ಇರುವ ದಂಪತಿಗಳು ಆನಂದವಾಗಿ ಯಾವುದರಲ್ಲೂ ಭಾಗಿಯಾಗುವಂತಿಲ್ಲ. ‘ಅವಳಿಗೇನು ಹಕ್ಕಿದೆ ಅಂತ ಅವಳು ಮಾತಾಡ್ತಾಳೆ’ ಅಥವಾ ‘ಇವ್ರಿಗೇನು ಮಕ್ಕಳನ್ನು ಸಾಕುವ ಸಂಕಷ್ಟ ಅರ್ಥ ಆಗುತ್ತೆ’ ಅಂತ.

ಇವೆಲ್ಲ ಒಂದಷ್ಟು ಸ್ಯಾಂಪಲ್ಲುಗಳಷ್ಟೇ. ಆ ಕ್ಷಣದಲ್ಲಿ ಮಾತಿನಿಂದ ತಿವಿದು ಸಂತೃಪ್ತರಾಗುವ ಮನುಷ್ಯರು, ಯಾವ ರೀತಿಯಲ್ಲಿ ಮಕ್ಕಳನ್ನು ಸಾಕಬಹುದು ಎಂದೇ ಅರ್ಥವಾಗದಿರುವ ಅಚ್ಚರಿ.

ಮಕ್ಕಳಾಗದೇ ಇರುವ ದಂಪತಿಗಳ ಯಾವುದೇ ಮಾತಿಗೆ ಇಲ್ಲಿ ಗೌರವವೇ ಇಲ್ಲ; ಮನುಷ್ಯರ ಸಂವಾದಕ್ಕೂ ಅವರನ್ನು ಅನರ್ಹವಾಗಿಸುವ ಕ್ರೌರ್ಯ ಖಂಡಿತ ಸಮರ್ಥನೀಯವಾಗಲಾರದು. ಆಸ್ತಿಪಾಸ್ತಿಯ ವಿಷಯದಲ್ಲಂತೂ ಮಕ್ಕಳಿಲ್ಲದ ದಂಪತಿಗಳ ಆಸ್ತಿಗೆ ಆಸೆಯಿಂದ ಕಾದುಕೊಂಡಿರುವ ಮನುಷ್ಯರನ್ನು ನೋಡುವಾಗ ವಿಷಾದ ಮೂಡುತ್ತದೆ.

‘ಯಾರಿಗಾದರೂ ಆಸ್ತಿಯನ್ನು ಬರೆದು ಬಿಡಿ’ ಎನ್ನುವ ಆತುರ ನೋಡಿದಾಗ ಹೇಸಿಗೆ ಮೂಡುತ್ತದೆ. ಇನ್ನು ದತ್ತು ತೆಗೆದುಕೊಂಡ ಮಕ್ಕಳ ಕಡೆಗೂ ಅಷ್ಟೇ ಸ್ವಲ್ಪ, ಉದಾಸೀನದ ಭಾವ. ಬೇರೆಲ್ಲ ವಿಷಯಗಳಲ್ಲಿ ಪಾಶ್ಚಾತ್ಯರ ನಡೆನುಡಿಗಳನ್ನು ಅನುಕರಿಸಿ, ಅನುಸರಿಸುವ ನಾವು ಇಂಥ ವಿಷಯಗಳಲ್ಲೂ ಅನುಕರಿಸಬೇಕು.

ಹಾಲಿವುಡ್ ನಟಿ ಆಂಜಲೀನಾ ಜೋಲಿ, ಪ್ರವಾಸ ಹೋದ ದೇಶಗಳಿಂದ ಒಂದೊಂದು ಮಗುವನ್ನು ದತ್ತು ತೆಗೆದುಕೊಂಡಾಗ, ಪ್ರತಿಬಾರಿ ಅವಳ ಹೊಸ ಭಾವಚಿತ್ರ ಪತ್ರಿಕೆಯಲ್ಲಿ ಪ್ರಕಟವಾದಾಗೆಲ್ಲ ಸೊಂಟದಲ್ಲಿ ಹೊಸ ಮಗುವಿರುವುದನ್ನು ಗಮನಿಸಬಹುದು; ಇದನ್ನು ನೋಡಿದರೆ ದತ್ತು ಅನ್ನುವುದೆಷ್ಟು ಸಹಜ ಪ್ರಕ್ರಿಯೆಯಾಗಿದೆ ಅಲ್ಲಿ ಎಂದು.

ನಾವಿನ್ನೂ, ಕುಟುಂಬದಲ್ಲಿ ಯಾರಾದರೂ ದತ್ತು ತೆಗೆದುಕೊಂಡ ಮಗುವಿನೊಂದಿಗೆ ಬಂದಾಗ ‘ಅದು ದತ್ತು ಮಗು’ ಎಂದು ಕೈತೋರಿಸಿ ಅವಳನ್ನು ಮಗುವನ್ನೂ ಝೂ–ಪ್ರಾಣಿಯಂತೆ ನೋಡುವುದರಲ್ಲೇ ನಿಂತಿದ್ದೇವೆ. ಇಂತಹುದನ್ನೂ ಸಹಜವಾಗಿ ಯಾವಾಗ ಸ್ವೀಕಾರ ಮಾಡುತ್ತೇವೆಯೋ ಆ ದಿನ ಬಹುಶಃ ನಾಗರಿಕಸಮಾಜದ ಸಭ್ಯದಿನ ಆಗಬಹುದು.

ಮಕ್ಕಳಿರುವ ಹೆಣ್ಣು ಕೇವಲ ತನ್ನ ಮಕ್ಕಳನ್ನು ಮಾತ್ರ ಪ್ರೀತಿಸಿದರೆ, ನೈಸರ್ಗಿಕವಾಗಿ ತಾಯಾಗದವಳು ಎಲ್ಲ ಮಕ್ಕಳನ್ನೂ ಪ್ರೀತಿಸುತ್ತಾಳೆ. ಏಕೆಂದರೆ ಅವಳಲ್ಲಿ ಇನ್ನೂ ಭೇದ ಹುಟ್ಟಿರುವುದಿಲ್ಲ. ತಾಯಾದವಳು ಏಷ್ಟೇ ಪ್ರೀತಿಯಿಂದ ಎಲ್ಲ ಮಕ್ಕಳನ್ನೂ ಪ್ರೀತಿಸಿದರೂ ತನ್ನ ಸ್ವಂತ ಮಗುವಿನ ಮೇಲೆ ಆಕೆಗೆ ತೀರದ ಮಮತೆಯಿರುತ್ತದೆ. ಹೆರುವ ಮತ್ತು ಹೊರುವ ವಿಷಯದಲ್ಲೇನು ಬಹಳ ವ್ಯತ್ಯಾಸವಿಲ್ಲ.

ಹೆರುವವಳು ಒಂದು ಸಾರಿ ಹೆತ್ತು ತಾಯಿ ಎನಿಸುತ್ತಾಳೆ ನಿಜ, ಆದರೆ ಹೊರುವವಳೂ ಜೀವನಪರ್ಯಂತ ತಾಯಿಯೇ. ಕುಟುಂಬದ, ಅಣ್ಣತಮ್ಮಂದಿರ ಅಷ್ಟೂ ಹೊಣೆಯನ್ನು ಹೊರುವ ದೊಡ್ಡಣ್ಣ, ಅವನೂ ತಾಯಿಯೇ. ಕೂಡುಕುಟುಂಬದಲ್ಲಿ ತಲೆಬಾಚಿ ಕಳಿಸುವ ಚಿಕ್ಕಪ್ಪನೂ ತಾಯಿಯ ಸ್ವರೂಪವೇ. ಹೆತ್ತ ತಾಯಿಗಿಂತಲೂ ಹೆಚ್ಚು ವಾತ್ಸಲ್ಯ ತೋರುವ ಅತ್ತೆ, ಚಿಕ್ಕಮ್ಮ, ಗುರುಗಳು ಅಪ್ಪಟ ತಾಯಂದಿರು.

ತಾಯಿ ಯಾರೂ ಆಗಬಹುದು; ಹೊರುವ ಚೈತನ್ಯವಿರಬೇಕಷ್ಟೇ. ಹೆಂಡತಿ ಮಕ್ಕಳನ್ನು ಪ್ರೀತಿಯಿಂದ ನೋಡುವ ಗಂಡೂ ಅಮ್ಮನೇ. ಪರಿಪೂರ್ಣ ವ್ಯಕ್ತಿತ್ವದ ಮೂರ್ತರೂಪವಾಗಿ ನಾವು ನೋಡುವ ಕೃಷ್ಣ, ಯಶೋದಾಕೃಷ್ಣನಾಗಿಯೇ ಹೆಚ್ಚು ಪರಿಚಿತ; ದೇವಕೀಕೃಷ್ಣನಾಗಿ ಅಲ್ಲವೇ ಅಲ್ಲ.

ಹಾಗಾಗಿ ಸ್ನೇಹಸಂಬಂಧಗಳನ್ನು ಪ್ರೀತಿಯಿಂದ ಹೊರುವವರಿಗೆ ನಮ್ಮ ಗೌರವವಿರಲಿ. ಭೂಮಿಯನ್ನೂ ಹೆಣ್ಣಾಗಿ ಪರಿಭಾವಿಸುವುದೂ ಆಕೆ ಹೊರುವವಳು ಎಂದೇ ಹೊರತು ಹೆತ್ತವಳು ಎಂದಲ್ಲ. ಮಮತೆ ಎಲ್ಲರಲ್ಲೂ ಇದೆ, ತಾಯ್ತನದ ಸಹಜ ವಾತ್ಸಲ್ಯ ಎಲ್ಲರಲ್ಲೂ ಅಡಗಿದೆ. ಮಲಗಿರುವ ಅದನ್ನಷ್ಟೇ ಎಚ್ಚರಿಸಿದರೆ ಸಾಕು.  ಆಗ ಅನಗತ್ಯ ಕಣ್ಣೀರು ಹರಿಯದು. 

‘ಅಮ್ಮನಾಗ್ಬೇಕು’ ಎಂದು ಒಮ್ಮೆಯಾದರೂ ಅನ್ನಿಸದೇ ಇರುವ ಹೆಣ್ಣುಮಕ್ಕಳೆ ಇಲ್ಲವೆನೋ! ಅಷ್ಟು ಪ್ರಕೃತಿಸಹಜ ಆಸೆಯದು. ಕಾಲೇಜುದಿನಗಳಲ್ಲಿಯೇ ಸಂಸಾರ–ಮಕ್ಕಳೆಂದು ಕನಸು ಕಾಣದೇ ಇರುವ ಹೆಣ್ಣುಮಕ್ಕಳು ಕಡಿಮೆಯೇನೋ!

ಕನಸು ಕಾಣದೇ ಇದ್ದರೆ ಬಾಲ್ಯದಲ್ಲಿ ಅಥವಾ ತೀರಾ ಹತ್ತಿರದ ಸಂಬಂಧದಲ್ಲಿ ಏನಾದರೂ ದುರಂತವನ್ನು ನೋಡಿ ಜುಗುಪ್ಸೆ ಹುಟ್ಟಿರಬೇಕು ಅಷ್ಟೇ ಹೊರತು ಹೆಣ್ಣಿಗೆ ಕುಟುಂಬ ಕಟ್ಟಿಕೊಳ್ಳುವ ಶಕ್ತಿ ತುಂಬ ಸಹಜವಾದುದು.

ಪ್ರತಿಯೊಂದನ್ನೂ ‘ಪ್ರಾಡಕ್ಟ್’ ಆಗಿ ನೋಡುತ್ತಿರುವ ನಮ್ಮ ಈಗಿನ ಪ್ರಪಂಚದಲ್ಲಿ ಮಕ್ಕಳೂ ಕೂಡ ವಿಶೇಷವಾದ ಜೈವಿಕ ಪ್ರಾಡಕ್ಟ್ ಅಂತೆ ಎಂದು ಮೊನ್ನೆ ಮೊನ್ನೆಯಷ್ಟೇ ಯಾವುದೊ ಕಥೆಯಲ್ಲಿ ಓದಿದ್ದೆ.

ಹೀಗೂ ಯೋಚಿಸಬಹುದೆಂದು ಆಗಲೇ ಅನ್ನಿಸಿದ್ದು. ಹಾಗಾದರೆ ಪ್ರೊಡಕ್ಟಿವಿಟಿ ನೀಡಲಾಗದೇ ಹೋಗುವವರನ್ನು ಕಡೆಗಣಿಸುವಂತೆ, ಮನುಷ್ಯಕುಲದಲ್ಲೂ ಸಂಬಂಧಗಳಲ್ಲೂ ಯೋಚಿಸಿದರೆ ಪ್ರಾಯಶಃ ನಾವು ಮನುಷ್ಯರು, ಮಾನವೀಯತೆ ಇರುವವರು ಎಂದು ಹೇಳಿಕೊಳ್ಳುವ ಯಾವ ಗುಣಲಕ್ಷಣವೂ ನಮಗಿರುವುದಿಲ್ಲ ಅಲ್ಲವೇ?

ಹಬ್ಬಹರಿದಿನಗಳಲ್ಲಿ ಸಾಂಪ್ರದಾಯಿಕ ಆಚರಣೆಗಳ ಹೊತ್ತಲ್ಲೂ ಇದೇ ಕಾರಣದಿಂದ ಎಷ್ಟೋ ಹೆಣ್ಣುಮಕ್ಕಳು ಕಣ್ಣೀರಲ್ಲಿ ಕೈತೊಳೆಯುತ್ತಾ ಶೋಕಿಸಿದರೆ ಗಂಡು ಮೂಕವಾಗಿ ಕಣ್ಣೀರನ್ನು ಕಣ್ಣಲ್ಲೇ ಬತ್ತಿಸಿಕೊಂಡು ರೋದಿಸುತ್ತಾನೆ. ಯಾಕೆ ಹೀಗೆ ಪದೇಪದೇ ನಾವು ಮಾನವೀಯತೆ ಇರುವ ಮನುಷ್ಯರು ಎಂದು ನೆನಪಿಸಬೇಕಾಗಿ ಬರುವಂತೆ ವರ್ತಿಸುತ್ತೇವೆ. ಯೋಚಿಸಬೇಕಾದ್ದೇ ಅಲ್ಲವೆ?

ಮಕ್ಕಳಿರುವ ಹೆಣ್ಣು ಕೇವಲ ತನ್ನ ಮಕ್ಕಳನ್ನು ಮಾತ್ರ ಪ್ರೀತಿಸಿದರೆ, ನೈಸರ್ಗಿಕವಾಗಿ ತಾಯಾಗದವಳು ಎಲ್ಲ ಮಕ್ಕಳನ್ನೂ ಪ್ರೀತಿಸುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT