ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಬಳಿ ಕಸ ವಿಲೇವಾರಿ: ಆಕ್ರೋಶ

ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ಗ್ರಾಮಸ್ಥರು * ನೊಣ, ನಾಯಿ ಹಾವಳಿಗೆ ಬೇಸತ್ತ ಜನರು
Last Updated 30 ನವೆಂಬರ್ 2015, 11:26 IST
ಅಕ್ಷರ ಗಾತ್ರ

ದೇವನಹಳ್ಳಿ: ಬಿಬಿಎಂಪಿ ಕಸವನ್ನು ಈಗ  ತಾಲ್ಲೂಕು ವ್ಯಾಪ್ತಿಯ ಹೆದ್ದಾರಿ ಬದಿ ಮತ್ತು ಸುತ್ತ ಮುತ್ತ ಗ್ರಾಮಗಳ ವ್ಯಾಪ್ತಿ ಯಲ್ಲಿ ರಾತ್ರಿ ವೇಳೆ ಸುರಿಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 207ರ ದೇವನಹಳ್ಳಿ– ದೊಡ್ಡಬಳ್ಳಾಪುರ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಬಿಬಿಎಂಪಿ ಕಸ ಸುರಿಯುತ್ತಿದೆ. ಟೆರಾಫಾರ್ಮ್‌ನಲ್ಲಿ ಕಸ ವಿಲೇವಾರಿಗೆ ಮಾರ್ಚ್‌ವರೆಗೂ ಅವಕಾಶವಿದ್ದರೂ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಸ ಸುರಿಯಲು ಕಾರಣವೇನು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಚಪ್ಪರದ ಕಲ್ಲು ಕ್ರಾಸ್ ಬಳಿ ಇರುವ ಪೊಲೀಸ್ ಠಾಣೆಯಿಂದ 100 ಮೀ. ದೂರದಲ್ಲೆ ಕಸ ಸುರಿಯಲಾಗಿದೆ. ಕಸ ವಿಲೇವಾರಿ ಗುತ್ತಿಗೆ ಪಡೆದವರು ಅಥವಾ ಕಸಹೊತ್ತ ಲಾರಿ ಚಾಲಕರು ಸಹಚರರೊಂದಿಗೆ ಪಾನಮತ್ತರಾಗಿ ಬಂದು ಕಸ ಸುರಿಯುತ್ತಾರೆ. ರಾತ್ರಿ ವೇಳೆ ಕಸ ಸುರಿಯುವುದರಿಂದ ಯಾವ ಸಮಯದಲ್ಲಿ ಲಾರಿ ರಸ್ತೆಯಲ್ಲಿ ಬರುತ್ತವೆ ಎಂಬುದು ತಿಳಿಯುತ್ತಿಲ್ಲ. ಅವರೇನಾದರೂ ಸಿಕ್ಕರೆ ಕಂಬಕ್ಕೆ ಕಟ್ಟಿ ತಕ್ಕ ಶಾಸ್ತಿ ಮಾಡುತ್ತೇವೆ ಎನ್ನುತ್ತಾರೆ ಬೀರಸಂದ್ರ ಗ್ರಾಮಸ್ಥರು.

ಕೊಳೆತ ನಾಯಿ, ಕೊಳೆತ ಕುರಿ ಮತ್ತು ಕೋಳಿ ತ್ಯಾಜ್ಯ, ಮದ್ಯದಂಗಡಿ ಮತ್ತು ಹೋಟೆಲ್, ಆಸ್ಪತ್ರೆ ತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತಿದೆ. ಬಿಬಿಎಂಪಿ ಕಸ ಬೆಂಗಳೂರಿಗೆ ಸೀಮಿತಗೊಳಿಸುವ ಬದಲು ಗ್ರಾಮೀಣ ಭಾಗದಲ್ಲಿ ತಂದು ಸುರಿದು ಇಲ್ಲಿನ ವಾತಾವರಣವನ್ನು ಕಲುಷಿತಗೊಳಿಸಲಾಗುತ್ತದೆ. ಇದರ ಪರಿಣಾಮವನ್ನು ಸಂಬಂಧಪಟ್ಟ ಇಲಾಖೆ ಎದುರಿಸಬೇಕಾಗುತ್ತದೆ ಎಂದು ವಿಶ್ವನಾಥಪುರ ಗ್ರಾಮಸ್ಥರು ಎಚ್ಚರಿಸಿದ್ದಾರೆ.

‘ರಸ್ತೆ ಪಕ್ಕದಲ್ಲಿಯೇ ಟನ್‌ಗಟ್ಟಲೆ ಕಸವನ್ನು ತಂದು ಸುರಿದಿರುವುದರಿಂದ ಕೆಟ್ಟವಾಸನೆಯ ಜತೆಗೆ ನೊಣಗಳ ಹಿಂಡನ್ನು ಸಹಿಸುವುದು ಅಸಾಧ್ಯವಾಗಿದೆ. ರಸ್ತೆ ಬದಿಯಲ್ಲಿಯೇ ಕಸ ಸುರಿದಿರುವುದರಿಂದ ಗ್ರಾಮದ ಬೀದಿ ನಾಯಿಗಳ ಹಿಂಡಿನ ಹಾವಳಿಯೂ ಈ ಭಾಗದಲ್ಲಿ ಹೆಚ್ಚಾಗಿದೆ. ಅಲ್ಲದೆ ನಮ್ಮಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಆಲೂರು ದುದ್ದನಹಳ್ಳಿ ಮತ್ತು ವಿಶ್ವನಾಥಪುರ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಎಚ್ಚೆತ್ತು ತಹಶೀಲ್ದಾರಿಗೆ ಮನವಿ ಸಲ್ಲಿಸಿ ಕಸ ಸುರಿಯುತ್ತಿರುವವರ ವಿರುದ್ಧ ಸೂಕ್ತಕ್ರಮಕೈಗೊಳ್ಳಬೇಕು. ಗ್ರಾಮಸ್ಥರು ರೊಚ್ಚಿಗೇಳುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಶಿವರಾಮಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT