ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬಹಿರಂಗಕ್ಕೆ ತಯಾರಿ

ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ
Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ ಇರಿಸಿರುವವರ ಹೆಸರುಗಳನ್ನು ಸದ್ಯಕ್ಕೆ ಬಹಿರಂಗಪಡಿಸಲು ಕಷ್ಟ ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ಆ ಹೆಸರುಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ತಯಾರಿ ನಡೆಸಿದೆ.

ಯೂರೋಪ್‌ನ ವಿವಿಧ ದೇಶಗಳು ಈ ತನಕ ಕಪ್ಪುಹಣ ಇರಿಸಿರುವವರ 800 ಹೆಸರುಗಳನ್ನು ನೀಡಿವೆ. ಇದರಲ್ಲಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ನಿರ್ಧರಿಸಿರುವ ಮೊದಲ ಪಟ್ಟಿಯಲ್ಲಿ 136 ಹೆಸರುಗಳು ಇರುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ ಇರಿಸಿರುವವರ ಹೆಸರುಗಳನ್ನು ಬಹಿರಂಗಗೊಳಿಸುವ ತನ್ನ ಯೋಜನೆಯನ್ನು ವಿವರಿಸಿ ಅ.28ಕ್ಕೆ ಮುನ್ನ ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಪೂರಕ ಪ್ರಮಾಣಪತ್ರವನ್ನು ಸಲ್ಲಿಸಲು ನಿರ್ಧರಿಸಿದೆ. ಕಪ್ಪುಹಣದ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿಯೊಂದು ಅ.28ರಂದು ವಿಚಾರಣೆಗೆ ಬರುತ್ತಿದೆ. ಹೀಗಾಗಿ ಅದಕ್ಕೆ ಮುನ್ನವೇ ಪೂರಕ ಪ್ರಮಾಣಪತ್ರ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

‘ಕಪ್ಪುಹಣ ಇರಿಸಿರುವವರ ಹೆಸರನ್ನು ತನಿಖೆ ಪ್ರಕ್ರಿಯೆ ಮುಗಿಯದ ಹೊರತು ಬಹಿ­ರಂಗಗೊಳಿಸಲಾಗದು; ಒಂದೊಮ್ಮೆ ಹೆಸರನ್ನು ಈಗಲೇ ಬಹಿರಂಗಗೊಳಿಸಿದರೆ ಬೇರೆ ದೇಶಗಳೊಡನೆ ಮಾಡಿಕೊಂಡಿರುವ ತೆರಿಗೆ ಒಪ್ಪಂದಗಳ ಕರಾರುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ’ ಎಂದು ಈ ಮುನ್ನ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ನಿಲುವನ್ನು ಬದಲಾಯಿಸಿದ್ದಾರೆ.

ಈ ನಿಲುವಿನ ಬಗ್ಗೆ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಮಾಡಿದ ಟೀಕೆಗಳ ಕುರಿತು ಮೋದಿ ಅವರು ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ಸರ್ಕಾರದ ಈ ನಿಲುವಿನ ಬಗ್ಗೆ ಬಿಜೆಪಿಯಲ್ಲೇ ಆಕ್ಷೇಪ ಕೇಳಿಬಂದಿತ್ತು. ‘ಲೋಕಸಭಾ ಚುನಾವಣಾ ಪ್ರಚಾರದ ವೇಳೆ, ವಿದೇಶಗಳಲ್ಲಿರುವ ಕಪ್ಪುಹಣ ವಾಪಸ್‌ ತರುವ ವಾಗ್ದಾನವನ್ನು ಪಕ್ಷ ನೀಡಿತ್ತು. ಒಂದೊಮ್ಮೆ ಈಗ ಕಪ್ಪುಹಣ ಇರಿಸಿರುವವರ ಹೆಸರು ಪ್ರಕಟಿಸದಿದ್ದರೆ ಅದರಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ’ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT