ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಮೆಟ್ಟಲೇರಿದ ಸಿನಿಮಾ ಸಬ್ಸಿಡಿ

ಮೂಗು ತೂರಿಸುತ್ತಿರುವ ಮುಖ್ಯಮಂತ್ರಿ: ಆರೋಪ
Last Updated 5 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗುಣಾತ್ಮಕ ಕನ್ನಡ ಸಿನಿಮಾಗಳಿಗೆ ನೀಡಲಾಗುವ ಸಬ್ಸಿಡಿ ವಿಚಾರದಲ್ಲಿ ಸರ್ಕಾರದ ಸುತ್ತಿದ್ದು ಇದಕ್ಕೆ ಮುಖ್ಯಮಂತ್ರಿಗಳು  ತಲೆದೂಗುತ್ತಿರುವುದರಿಂದ ಸಬ್ಸಿಡಿ ನೀಡಿಕೆ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ’ ಎಂಬ ಆರೋಪ ಹೈಕೋರ್ಟ್‌ ಮೆಟ್ಟಿಲೇರಿದೆ.

ಪ್ರಾದೇಶಿಕ ಗುಣಾತ್ಮಕ ಸಿನಿಮಾಗಳ ಪ್ರಶಸ್ತಿ ನೀಡಿಕೆ ವಿಷಯಕ್ಕೆ ಸಂಬಂಧಿಸಿದ ತಕರಾರಿನ ಮೂಲ ಅರ್ಜಿಯಲ್ಲಿ ಉದ್ಭವವಾದ ಇಂತಹುದೊಂದು ಪ್ರಶ್ನೆ  ಈಗ ಮಧ್ಯಂತರ ಅರ್ಜಿಯ ಮುಖಾಂತರ  ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್ ಅವರ ಏಕಸದಸ್ಯ ಪೀಠದ ಮುಂದೆ  ವಿಚಾರಣೆ ಎದುರಿಸುತ್ತಿದೆ.

ಬೆಂಗಳೂರಿನ ಚಿಕ್ಕಲ್ಲಸಂದ್ರ ನಿವಾಸಿಯಾದ ಮೆಸರ್ಸ್‌ ಎಸ್‌.ಎನ್.ಆರ್‌ ಕ್ರಿಯೇಷನ್ಸ್‌ನ  ಎಸ್‌.ರಾಧಾ ಅವರು ಈ ಕುರಿತಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ‘2008ರಿಂದ 2013ರ ಅವಧಿಯ ನಡುವೆ ಸಬ್ಸಿಡಿ ನೀಡಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ. ಸಾಮಾಜಿಕ ಕಳಕಳಿ ಹೊಂದಿದ ಅಪ್ಪಟ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕೊಡ ಮಾಡುವ ₹ 10 ಲಕ್ಷ ಮೊತ್ತ ಅನರ್ಹರ ಪಾಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಪೊಣ್ಣರ ಮನಸ್ಸ್‌ ಚಲನಚಿತ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಬ್ಸಿಡಿ ನೀಡಲು  ಅಂದಿನ ಉನ್ನತ ಶಿಕ್ಷಣ ಸಚಿವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಆಧರಿಸಿ ಮುಖ್ಯಮಂತ್ರಿಗಳು ₹ 10 ಲಕ್ಷ ಸಬ್ಸಿಡಿ ನೀಡಲು ಆದೇಶ ಮಾಡಿದ್ದಾರೆ. ಇದು ಸಂಪೂರ್ಣ ನಿಯಮ ಬಾಹಿರ’ ಎಂಬುದು ರಾಧಾ ಅವರ ದೂರು.

2008ರಲ್ಲಿ ‘ಪಟ್ರೆ ಲೌವ್ಸ್‌ ಪದ್ಮಾ’,   2010ರಲ್ಲಿ ‘ಯಾರದು’ ಮತ್ತು ಶಿಫಾರಸು ಪಟ್ಟಿಯಲ್ಲೇ ಇರದಿದ್ದ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಚಿತ್ರಗಳನ್ನು ಸಬ್ಸಿಡಿಗೆ ಪರಿಗಣಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೋರಿದ್ದಾರೆ’ ಎಂಬುದು ಅವರ ಆರೋಪ.

‘ವಾರ್ತಾ ಇಲಾಖೆ ನಿರ್ದೇಶಕರ ಈ ಕೋರಿಕೆ ಪಾರದರ್ಶಕವಾಗಿಲ್ಲ ಹಾಗೂ ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಗುಣಾತ್ಮಕ ಚಲನಚಿತ್ರಗಳನ್ನು ಸಹಾಯಧನಕ್ಕಾಗಿ ಆಯ್ಕೆ ಮಾಡುವ  ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿದೆ’ ಎಂಬುದು ಅವರ ದೂರು.

‘ಆಯ್ಕೆ ಸಮಿತಿಯ ವೀಕ್ಷಣೆಗೆ ಒಳಪಡದೆ ಉನ್ನತ ಶಿಕ್ಷಣ ಸಚಿವರ ಪತ್ರದ ಆಧಾರದಲ್ಲಿ ಮುಖ್ಯಮಂತ್ರಿಗಳು ಪೊಣ್ಣರ ಮನಸ್ಸ್‌ ಚಿತ್ರಕ್ಕೆ ಸಬ್ಸಿಡಿ ನೀಡಿಕೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಆದೇಶಿಸಿದ್ದಾರೆ. ವಾಸ್ತವದಲ್ಲಿ ಸಬ್ಸಿಡಿ ನೀಡಿಕೆಯ ನಿಯಮಗಳಲ್ಲಿ ಮುಖ್ಯಮಂತ್ರಿ ಅಥವಾ ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರ ಬಳಸಲು ಅವಕಾಶವೇ ಇಲ್ಲ ಎಂಬುದು’ ರಾಧಾ ಅವರ ದೂರಿನ ಸಾರಾಂಶ.

‘ಸಬ್ಸಿಡಿ ನೀಡಿಕೆಯನ್ನು ಪರಿಗಣಿಸಲು ಪ್ರತ್ಯೇಕ ಸಮಿತಿಯೇ ಇರುತ್ತದೆ. ಆದರೆ 2008ರಿಂದ 2013ರ ನಡುವೆ ಸಬ್ಸಿಡಿ ನೀಡಲಾಗಿರುವ ಈ ನಾಲ್ಕೂ ಚಿತ್ರಗಳು ಇಲ್ಲಿನ ಅವ್ಯವಹಾರಗಳಿಗೆ ಕನ್ನಡಿ ಹಿಡಿದಂತಿದೆ. ಸಮಿತಿಯ ಶಿಫಾರಸು ಇಲ್ಲದೆ ಯಾವ ಚಿತ್ರಕ್ಕೂ ಸಬ್ಸಿಡಿ ನೀಡುವಂತಿಲ್ಲ. ಆದರೂ  ಇವಕ್ಕೆಲ್ಲಾ ನೀಡಲಾಗಿದೆ. 40 ವರ್ಷಕ್ಕೂ ಹೆಚ್ಚು ಕಾಲದಿಂದ ಚಾಲ್ತಿಯಲ್ಲಿರುವ ಈ ಸಬ್ಸಿಡಿ ನೀಡಿಕೆ ಪದ್ಧತಿ ಈಗ ಅಕ್ರಮಗಳ ತಾಣವಾಗಿದೆ’ ಎಂಬುದು ಅವರ ಅಳಲು.

ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ತಾ ಇಲಾಖೆ ನಿರ್ದೇಶಕ ಎನ್‌.ವಿಶುಕುಮಾರ್, ‘ಕೋರ್ಟ್‌ನಲ್ಲಿರುವ ಈ ಪ್ರಕರಣದ ಕುರಿತಂತೆ ನನಗೆ ಈತನಕ ಯಾವ ಮಾಹಿತಿ ಬಂದಿಲ್ಲ’ ಎಂದರು.

‘ದಂಧೆಯಾಗಿ ಪರಿಣಮಿಸಿದೆ’
‘ಸಬ್ಸಿಡಿ ನೀಡಿಕೆ ವ್ಯವಸ್ಥೆ ಅತ್ಯಂತ ಅನುಕೂಲಕರವಾಗಿದೆ. ಆದರೆ ಇದು ದುರುಪಯೋಗ ಆಗುತ್ತಿದೆ’ ಎಂಬುದು ನಿರ್ದೇಶಕ ಮತ್ತು ನಿರ್ಮಾಪಕ ಟೇಶಿ ವೆಂಕಟೇಶ್‌ ಅವರ ದೂರು.

‘ಕಲಾತ್ಮಕ ಚಿತ್ರಗಳ ಹೆಸರಿನಲ್ಲಿ ಈ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಕಲಾತ್ಮಕ ಸಿನಿಮಾಗಳು ಜನಸಾಮಾನ್ಯರನ್ನು ತಲುಪುವುದೇ ವಿರಳ. ಇವತ್ತು ಸಬ್ಸಿಡಿಗೆಂದೇ ಸಿನಿಮಾ ಮಾಡುವುದು ಒಂದು ದಂಧೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸಬ್ಸಿಡಿ ನೀಡಿಕೆಗೆ ನಿರ್ದಿಷ್ಟ ಮಾನದಂಡಗಳೇ ಇಲ್ಲವಾಗಿದೆ. ಒಳ್ಳೇ ಸಿನಿಮಾ ಮಾಡಿ ನಷ್ಟ ಆದರೆ ಅಂತಹ ಸಿನಿಮಾಗಳಿಗೆ, ನೇರ ಕಥೆಯ, ರಾಜ್ಯದಲ್ಲೇ ಸಂಪೂರ್ಣ ವಾಗಿ ನಿರ್ಮಾಣಗೊಂಡ ಯೋಗ್ಯ ಸಿನಿಮಾಗಳಿಗೆ ಈ ಹಣ ಸೇರಬೇಕು. ವಿಪರ್ಯಾಸ ಎಂದರೆ ಅಯೋಗ್ಯ ಸಿನಿಮಾಗಳಿಗೆ ಈ ಹಣ ಹರಿದು ಹೋಗುತ್ತಿದೆ’ ಎಂದು ಅವರು ಹೇಳುತ್ತಾರೆ.

‘ರಾಜಕೀಯ ಪ್ರಭಾವ, ಚಲನಚಿತ್ರ ವಾಣಿಜ್ಯ ಮಂಡಳಿಯ ಆಸರೆ, ಮುಖ್ಯಮಂತ್ರಿಗಳ ವಶೀಲಿ... ಹೀಗೆ ಅನೇಕ ವಾಮಮಾರ್ಗಗಳ ಮುಖಾಂತರ ಸಬ್ಸಿಡಿ ಸಮಿತಿ ಸೇರುವವರ ದಂಡು ಹೆಚ್ಚುತ್ತಿದೆ. ಇಂಥವರೆಲ್ಲಾ ತಮಗೆ ಬೇಕಾದವರಿಗೆ ನಿಯಮ ಉಲ್ಲಂಘಿಸಿ ಸಬ್ಸಿಡಿ ನೀಡುತ್ತಿದ್ದಾರೆ. ಇದರಿಂದ  ತಕರಾರುಗಳು ಉದ್ಭವವಾಗುತ್ತಿದೆ’ ಎಂಬುದು ಅವರ ಬೇಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT