ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ನತ್ತ ಟ್ರಕ್ ಸವಾರಿ

Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಕಡುಬಡತನದಲ್ಲಿದ್ದಾಗ ಎಲ್ಲಿಯೂ ಕೆಲಸ ಸಿಗದವರು ಜೀವನೋಪಾಯಕ್ಕೆ ಟ್ರಕ್ ಕ್ಲೀನರ್‌ಗಳಾಗಿ ಸೇರಿ, ಮುಂದೆ ಚಾಲಕರಾಗಿ ಬಡ್ತಿ ಪಡೆಯುತ್ತಾರೆ. ಮರದ ಬೆಂಚೋ ಅಥವಾ ವೈರ್‌ನಿಂದ ಹೆಣೆದ ಕುರ್ಚಿಯ ಮೇಲೆ ಕುಳಿತು ದಿನದ ಬಹುಪಾಲು ಹೆದ್ದಾರಿಯಲ್ಲೇ ಕಳೆಯುವ ಇವರ ಬದುಕು ಕ್ಯಾಬಿನ್ ಒಳಗಿನ ಎಂಜಿನ್‌ ಶಾಖ ಹಾಗೂ ಹೊರಗಿನ 40ಡಿಗ್ರಿಗೂ ಹೆಚ್ಚಿನ ತಾಪದಲ್ಲಿ ಬೆಂದು ಹೋಗಿರುತ್ತದೆ.

ಹಳೇ ಮಾದರಿಯ ಟ್ರಕ್‌ನಲ್ಲಿ ಊರೂರು ಅಲೆಯುವ ಇವರು ಹೆದ್ದಾರಿ ಬದಿಯ ಡಾಬಾದಲ್ಲೊಂದು ಊಟ, ಸೂರ್ಯ ಮುಳುಗುವವರೆಗೂ ನಿದ್ರೆ, ಅಲ್ಲೇ ಎಲ್ಲೋ ಇರುವ ಹಮಾಮ್‌ನಲ್ಲಿ ‘ಮೈಭಾರ’ ಇಳಿಸಿ ಮತ್ತೆ ಅದೇ ಬೆಂಚಿನ ಮೇಲೆ ಕುಳಿತು, ಬಾಯಿ ತುಂಬಾ ಗುಟುಕಾ ಹಾಕಿ ಹೊರಟರೆ ನಿದ್ರೆ ಇಲ್ಲದೆ ಸಂಚರಿಸುವ ಸಾಹಸಿಗಳು. ಆದರೆ ಇವರ ಬದುಕೂ ಈಗ ಬದಲಾಗುತ್ತಿದೆ. ಕಾರಣ, ಜಗತ್ತಿನ ಇತರ ರಾಷ್ಟ್ರಗಳಂತೆ ಟ್ರಕ್‌ ಚಾಲನೆ ಈಗ ಅನಕ್ಷರಸ್ಥರ ವೃತ್ತಿಯಾಗಿಲ್ಲ. ಹಾಗೆಯೇ ಟ್ರಕ್‌ಗಳು ಅವೇ ಮರದ ಬೆಂಚಿನ ಹಾಗೂ ಎಂಜಿನ್‌ ಬಿಸಿ ಶಾಖದಲ್ಲಿ ಕೂತು ಓಡಿಸುವಂಥದ್ದಲ್ಲ.

ಚಾಲಕ ವೃತ್ತಿಗೆ ವಿದೇಶದಲ್ಲಿ ಅತಿ ಹೆಚ್ಚು ಬೇಡಿಕೆ. ಅದೇ ರೀತಿಯ ವಾತಾವರಣ ಈಗ ಭಾರತದಲ್ಲೂ ಸೃಷ್ಟಿಯಾಗುತ್ತಿದೆ. ಬೇಡಿಕೆ ಮಟ್ಟಿಗೆ ಹಾಗೇ ಇದ್ದರೂ, ಟ್ರಕ್‌ಗಳು ಬದಲಾಗುತ್ತಿವೆ. ಚಾಲಕರೂ ಹಾಯಾಗಿ ಹವಾನಿಯಂತ್ರಣ ಕ್ಯಾಬಿನ್‌ನಲ್ಲಿ ಕುಳಿತು, ಮೃದುವಾದ ಪವರ್‌ ಸ್ಟಿಯರಿಂಗ್‌ ಹಿಡಿದು, ಸಾಕಷ್ಟು ಹೊಸ ಸೌಲಭ್ಯಗಳನ್ನೊಳಗೊಂಡ ಟ್ರಕ್ ಓಡಿಸುವುದು ಹಿಂದೆಂದಿಗಿಂತಲೂ ಸುಲಭ.

ಹೀಗೆ ಬದಲಾಗುತ್ತಿರುವ ಟ್ರಕ್‌ಗಳ ಕುರಿತಾಗಿಯೇ ಭಾರತೀ ಯರ ಗಮನ ಸೆಳೆಯಲು ಟಾಟಾ ಕಂಪೆನಿ ಇತ್ತೀಚೆಗೆ ಟ್ರಕ್‌ ರೇಸ್‌ ಆಯೋಜಿಸಿತ್ತು. ಟ್ರಕ್‌ಗಳೂ ಕಾರುಗಳಂತೆ ರೇಸ್‌ನಲ್ಲಿ ಓಡು ವಂಥದ್ದು ಎಂಬುದನ್ನು ತೋರಿಸುವುದರ ಜತೆಗೆ, ಎಫ್‌1 ಚಾಲಕರಂತೆಯೇ ಟ್ರಕ್‌ ರೇಸ್‌ನ ಟಿ1 ಚಾಲಕರೂ ಹೆಚ್ಚು ಬೇಡಿಕೆ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತಾ, ಚಾಲಕ ವೃತ್ತಿಯನ್ನು ತುಸು ಮೇಲ್ಮಟ್ಟಕ್ಕೆ ತರುವ ಪ್ರಯತ್ನ ಇದಾಗಿತ್ತು. ಹೊಸ ತಲೆಮಾರಿನ ಟ್ರಕ್‌ಗಳು ಭಾರತದಲ್ಲೇ ಅಭಿವೃದ್ಧಿ ಯಾಗಿಲ್ಲ. ಪ್ರತಿಯೊಂದು ಭಾರತೀಯ ಟ್ರಕ್‌ ತಯಾರಕರು ವಿದೇಶಿ ಕಂಪೆನಿಯೊಂದಿಗೆ ಜತೆಗೂಡಿ ಇಂಥ ಚಾಲಕಸ್ನೇಹಿ ಹಾಗೂ ಆಧುನಿಕ ತಂತ್ರಜ್ಞಾನದ ಟ್ರಕ್‌ಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ದೇಶದಲ್ಲಿ ಟ್ರಕ್‌ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಕಂಪೆನಿ, ಡೆವೂ (20ವರ್ಷಗಳ ಹಿಂದೆ ಭಾರತದಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿದ್ದ ಮ್ಯಾಟಿಜ್‌ ಹಾಗೂ ಸಿಯಾಲೊ ಕಾರುಗಳ ತಯಾರಿಕಾ ಸಂಸ್ಥೆ) ಎಂಬ ಕಂಪೆನಿ ಜತೆಗೂಡಿ ಪ್ರೈಮಾ ಮಾದರಿಯ ಮುಂದಿನ ತಲೆಮಾರಿನ ಟ್ರಕ್‌ ಅಭಿವೃದ್ಧಿಪಡಿಸಿದೆ.

ಭಾರತದ ರಸ್ತೆಗಳು ಈಗ ಉತ್ತಮವಾಗಿವೆ. ಹೀಗಾಗಿ ಬೃಹತ್‌ ಟ್ರಕ್‌ಗಳನ್ನು ಖರೀದಿಸಲು ಗ್ರಾಹಕರು ಚಿಂತಿಸುವುದಿಲ್ಲ. ಇದರಿಂದ ನಿರ್ವಹಣೆಯೂ ಹೆಚ್ಚು ಹೊರೆಯಾಗದು.

–ಆರ್‌.ರಾಮಕೃಷ್ಣನ್‌,ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳ ವ್ಯವಹಾರಗಳ ವಿಭಾಗದ ಹಿರಿಯ ಉಪಾಧ್ಯಕ್ಷ

ಇದರಂತೆಯೇ ಮಹೀಂದ್ರಾ ಅಂಡ್‌ ಮಹೀಂದ್ರಾ ಕಂಪೆನಿ ಉತ್ತರ ಅಮೆರಿಕದ ನವಿಸ್ಟಾರ್‌ ಜತೆಗೂಡಿ ಪ್ರೀಮಿಯಂ ಮಾದರಿಯ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಿದೆ. ಲೇಲ್ಯಾಂಡ್‌ ಜತೆಗೂಡಿ ಅಶೋಕ್‌, ಜರ್ಮನಿಯ ಮ್ಯಾನ್‌ ಕಂಪೆನಿ ಜತೆಗೂಡಿ ಫೋರ್ಸ್‌ ಕಂಪೆನಿ ಇಲ್ಲಿ ಇಂಥ ಹೈಟೆಕ್‌ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಿವೆ. ಇವುಗಳ ಜತೆಯಲ್ಲಿ ವಿದೇಶಿ ಕಂಪೆನಿಗಳೇ ನೇರವಾಗಿ ಭಾರತದ ನೆಲದಲ್ಲಿ ಟ್ರಕ್‌ ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿವೆ. ಅಂಥವುಗಳಲ್ಲಿ ಯುರೋಪ್‌ನ ವೊಲ್ವೊ ಹಾಗೂ ಡ್ಯಾಮ್ಲೀಯರ್‌ ಬೆಂಜ್‌ ಕೂಡಾ ಇವೆ.

2009ರಿಂದ ಹೆಚ್ಚು ಪ್ರಚಲಿತಕ್ಕೆ ಬಂದ ಈ ಹೊಸ ಮಾದರಿಯ ಅತ್ಯಾಧುನಿಕ ಟ್ರಕ್‌ಗಳು 3.549 ಟನ್‌ನಿಂದ 40 ಟನ್‌ ಸಾಮರ್ಥ್ಯದವರೆಗೂ ಬಗೆಬಗೆಯ ಮಾದರಿಯನ್ನು ಹೊಂದಿವೆ. ಅತ್ಯಧಿಕ ಹಾರ್ಸ್‌ ಪವರ್‌ ಹಾಗೂ ಗರಿಷ್ಠ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. ವಿದೇಶಗಳಲ್ಲಿ 500ಕ್ಕೂ ಅಧಿಕ ಅಶ್ವಶಕ್ತಿಯ ಟ್ರಕ್‌ಗಳು ಇದ್ದರೂ ಭಾರತದಲ್ಲಿ ಇದನ್ನು ನಿಯಂತ್ರಿಸಲಾಗಿದೆ. ಹೀಗಾಗಿ ಇಲ್ಲಿ ಗರಿಷ್ಠ 280 ಅಶ್ವಶಕ್ತಿಯ ಟ್ರಕ್‌ಗಳು ಲಭ್ಯ. ಆದರೆ ಒಂದೊಮ್ಮೆ ಭಾರತ ಸರ್ಕಾರ ಟ್ರಕ್‌ಗಳ ಶಕ್ತಿಯನ್ನು ನಿಯಂತ್ರಣಮುಕ್ತಗೊಳಿಸಿದರೆ ಇಲ್ಲಿಯೂ 560 ಅಶ್ವಶಕ್ತಿ ಟ್ರಕ್‌ಗಳನ್ನು ನಿರ್ಮಿಸಲು ಸಿದ್ಧ ಎಂದು ಟಾಟಾ ಕಂಪೆನಿಯ ಅಧಿಕಾರಿಗಳು ಹೇಳಿಕೊಂಡಿದೆ.

ಇವು ಶಕ್ತಿ ಸಾಮರ್ಥ್ಯದಲ್ಲಿ ಮಾತ್ರ ಅತ್ಯಾಧುನಿಕವಲ್ಲ. ಬದಲಿಗೆ ಹವಾನಿಯಂತ್ರಿತ ಕ್ಯಾಬಿನ್‌ಗಳು, ಬದಲಿ ಚಾಲಕನಿಗೆ ಸುಸಜ್ಜಿತ ಮಂಚ, ಟ್ರಕ್‌ ಸಾಗುವ ಹಾದಿಯ ಇಂಚಿಂಚೂ ಮಾಹಿತಿ ನೀಡುವ ವ್ಯವಸ್ಥೆ ಇತ್ಯಾದಿಗಳು ಇದರಲ್ಲಿವೆ.
ಭಾರತದಲ್ಲಿ 16 ಟನ್‌ ಟ್ರಕ್‌ ಎಂದರೆ ಭಾರೀ ವಾಹನ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗಿನ ಇಂಥ ಟ್ರಕ್‌ಗಳು ಆ ರೀತಿಯ ನಂಬಿಕೆಯನ್ನೇ ಬದಿಗೆ ತಳ್ಳಿವೆ. 35 ಟನ್‌ ಸಾಮರ್ಥ್ಯದ ಟ್ರಕ್‌ಗಳನ್ನೂ ಈಗ ಲೀಲಾಜಾಲವಾಗಿ ಓಡಿಸಬಹುದಾದಷ್ಟು ಸುಲಭವಾಗಿರುತ್ತವೆ. ಹೀಗಾಗಿಯೇ ಟ್ರಕ್‌ನ ಈಗಿನ ರೂಪ ತಂತ್ರಜ್ಞಾನದ ಉತ್ಪನ್ನವೇ ಹೊರತು, ಗ್ರಾಹಕರ ಉತ್ಪನ್ನವಲ್ಲ ಎಂಬ ಮಾತು ಮಾರುಕಟ್ಟೆಯಲ್ಲಿದೆ.

ಭಾರತೀಯ ಟ್ರಕ್ ಮಾಲೀಕರು ಪ್ರತಿ ಟ್ರಕ್‌ನ ಖರೀದಿಗೂ ಮುನ್ನ ಎರಡು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಒಂದು ಟ್ರಕ್‌ನ ಬೆಲೆ ಹಾಗೂ ಮತ್ತೊಂದು ಅದರ ನಿರ್ವಹಣಾ ವೆಚ್ಚ. ಆದರೆ ಟ್ರಕ್‌ನ ಬೆಲೆ ಎಲ್ಲಿಯೂ ಯಾವ ಕಂಪೆನಿಯೂ ನಮೂದಿಸುವುದಿಲ್ಲ. ಇದು ಪ್ರದೇಶದಿಂದ ಪ್ರದೇಶಕ್ಕೆ, ಗ್ರಾಹಕರಿಂದ ಗ್ರಾಹಕರಿಗೆ ಬದಲಾಗುತ್ತದೆ. ಆದರೂ ₨20ರಿಂದ 50ಲಕ್ಷದವರೆಗೂ ಬಗೆಬಗೆಯ ಟ್ರಕ್‌ಗಳು ಲಭ್ಯ.

ಹೈಟೆಕ್‌ ಟ್ರಕ್‌ನಲ್ಲಿರುವ ಎಲೆಕ್ಟ್ರಾನಿಕ್‌ ಸೌಲಭ್ಯಗಳು
ಆಧುನಿಕ ಹೈಟೆಕ್‌ ಟ್ರಕ್‌ಗಳಲ್ಲಿ ಇಂಧನ ಕ್ಷಮತೆ, ಚಾಲಕರಿಗೆ ಮಾಹಿತಿ ವ್ಯವಸ್ಥೆ (ಡಿಐಎಸ್‌), ಎಂಜಿನ್‌ ತಪಾಸಣೆ ಇತ್ಯಾದಿ ಸೌಲಭ್ಯಗಳು ಲಭ್ಯ. ಇಂಥ ಆಧುನಿಕ ಸೌಲಭ್ಯಗಳಿಂದಾಗಿ ಎಂಜಿನ್‌ ಕಾರ್ಯಕ್ಷಮತೆ, ಉತ್ಪಾದಕತೆ, ನಿರ್ವಹಣೆ, ಲಾಭ, ಚಾಲಕನ ಹಿತ ಹಾಗೂ ಸುರಕ್ಷತೆ ಮತ್ತು ಪರಿಸರಸ್ನೇಹಿ ಟ್ರಕ್‌ಗಳು ಈಗ ಹೈಟೆಕ್‌ ಸ್ವರೂಪದಲ್ಲಿ ರಸ್ತೆ ಮೇಲಿವೆ.
ಉದಾಹರಣೆಗೆ ಇಂಧನ ಕ್ಷಮತೆ ಕುರಿತಂತೆ ಆಗಿಂದಾಗಿಯೇ ಮಾಹಿತಿ ನೀಡುವ ವ್ಯವಸ್ಥೆ, ಚಾಲಕನ ಚಾಲನೆಯನ್ನು ಗಮನಿಸಿ ಆ ಮೂಲಕ ಇಂಧನ ಕ್ಷಮತೆ ಹೆಚ್ಚಿಸಲು ಸೂಕ್ತ ಮಾರ್ಗದರ್ಶನ ನೀಡುವ ಸೌಲಭ್ಯವೂ ಇದರಲ್ಲಿದೆ. ಟ್ರಕ್‌ ಹೊತ್ತಿರುವ ಭಾರ ಹಾಗೂ ಹೋಗಬೇಕಾದ ಹಾದಿಯನ್ನು ನಮೂದಿಸಿದರೆ, ಮುಂದೆ ಎಲ್ಲಿ ಡೀಸೆಲ್‌ ತುಂಬಿಸಬೇಕು, ಹೋಗುವ ಹಾದಿಯಲ್ಲಿ ಉತ್ತಮವಾದ ಹಾಗೂ ಹತ್ತಿರದ ರಸ್ತೆಗಳ ಮಾಹಿತಿ, ವಾಹನ ದಟ್ಟಣೆಯ ಪ್ರಮಾಣ, ದಾರಿಯಲ್ಲಿರುವ ಹೆದ್ದಾರಿ ಸುಂಕ ಸಂಗ್ರಹ ಕೇಂದ್ರ, ಟ್ರಕ್ ಸೇವಾ ಕೇಂದ್ರದ ಮಾಹಿತಿ ಇತ್ಯಾದಿಗಳು ಲಭ್ಯ.

ಚಾಲಕನ ಮೇಲಿನ ಹೊರೆ ತಗ್ಗಿಸಲು ಟ್ರಕ್‌ಗಳಲ್ಲೂ ಈಗ ಕಾರುಗಳಂತೆ ಸ್ವಯಂಚಾಲಿತ ಹಾಗೂ ವೈಯಕ್ತಿಕ ಚಾಲಿತ ಟ್ರಾನ್ಸ್‌ಮಿಷನ್‌ (ಎಎಂಟಿ), ಕ್ಲೈಮೇಟ್‌ ಕಂಟ್ರೋಲ್‌ ಎಸಿ, ಮಳೆ ಬಂದರೆ ತಂತಾನೇ ವೈಪರ್‌ ಕೆಲಸ ಆರಂಭಿಸುವ ವ್ಯವಸ್ಥೆ, ಚಾಲಕ ಸಾಗುವ ಹಾದಿಯನ್ನು ಮಾಲೀಕರಿಗೆ ತಿಳಿಸುವ ವ್ಯವಸ್ಥೆ, ಇಂಧನ ಕಳವು ಮಾಡಿದರೆ ಅಲಾರ್ಮ್ ವ್ಯವಸ್ಥೆ, ಟೈರ್‌ಗಳ ಗಾಳಿಯ ಒತ್ತಡವನ್ನು ತಿಳಿಸುವ ಸೌಲಭ್ಯ, ತಿರುವಿನಲ್ಲಿ ಸುರಕ್ಷಿತ ಚಾಲನೆಗೆ ಎಬಿಎಸ್‌, ಹಿಂಬದಿಯನ್ನು ತೋರಿಸುವ ಕ್ಯಾಮೆರಾ, ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸೌಕರ್ಯ, ಚಾಲಕ ನಿದ್ರೆಗೆ ಜಾರುವುದನ್ನು ಎಚ್ಚರಿಸುವುದು ಹಾಗೂ ಮದ್ಯ ಸೇವನೆಯನ್ನು ಪತ್ತೆ ಮಾಡುವ ಸೌಲಭ್ಯವೂ ಸೇರಿದಂತೆ ಟ್ರಕ್‌, ಚಾಲಕ, ಜನರು, ಮಾಲೀಕ ಹಾಗೂ ಪರಿಸರಸ್ನೇಹಿ ಸೌಲಭ್ಯವನ್ನು ಈ ಹೈಟೆಕ್‌ ಟ್ರಕ್‌ಗಳು ಹೊಂದಿವೆ.

ಹೆದ್ದಾರಿಯ ಹೀರೊಗಳು
ಭಾರತದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪೈಪೋಟಿ ನಡೆಸುತ್ತಿರುವ ವೊಲ್ವೊ ಹಾಗೂ ಡ್ಯಾಮಿಲಯರ್‌ನ ಟ್ರಕ್‌ಗಳು ಸಾಕಷ್ಟು ಹೊಸತನ ಹೊಂದಿದೆ. ಇವರು ದೇಶಿಯ ಮಾರುಕಟ್ಟೆ ಜತೆಗೆ, ಇಲ್ಲಿಂದ ಹೊರ ದೇಶಗಳಿಗೆ ರಫ್ತು ಮಾಡುವ ಅವಕಾಶವನ್ನೂ ಹೊಂದಿದ್ದಾರೆ. ಮಹೀಂದ್ರಾ ಕೂಡಾ ಈಗ ತನ್ನ ಟ್ರಕ್‌ಗಳನ್ನು ರಫ್ತು ಮಾಡುತ್ತಿದೆ. ಹೀಗಾಗಿ ಈಗ ಭಾರತದಿಂದ ಇಂಥ ಹೈಟೆಕ್‌ ಟ್ರಕ್‌ಗಳು ಆಸಿಯಾನ್‌ ರಾಷ್ಟ್ರಗಳು, ಆಫ್ರಿಕಾ, ದಕ್ಷಿಣ ಅಮೆರಿಕ, ದಕ್ಷಿಣ ಕೊರಿಯಾಕೂ ರಫ್ತಾಗುತ್ತಿದೆ.

ಮತ್ತೊಂದೆಡೆ ದೇಶಿಯ ಮಾರುಕಟ್ಟೆಯಲ್ಲೂ ಇಂಥ ಆಧುನಿಕ ಟ್ರಕ್‌ಗಳು ಹೆಚ್ಚು ಮಾರಾಟವಾಗುವಂತೆ ಅವುಗಳ ಸೌಲಭ್ಯವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಾಲಕರಿಗೆ ಟ್ರಕ್‌ಗಳ ನಿರ್ವಹಣಾ ತರಬೇತಿಯನ್ನೂ ಕಂಪೆನಿಗಳು ನೀಡುತ್ತಿವೆ. ಅದಕ್ಕೊಂದು ಉದಾಹರಣೆ ಟ್ರಕ್‌ ರೇಸಿಂಗ್‌ನ ಟಿ1 ರೇಸ್‌ಗೆ ಬರುವ ವರ್ಷದೊಳಗೆ ಟಾಟಾ ಕಂಪೆನಿ ಭಾರತೀಯ ಟ್ರಕ್‌ ಚಾಲಕರನ್ನು ಸಿದ್ಧಪಡಿಸುವ ಯೋಜನೆ ರೂಪಿಸಿರುವುದು. 

ಹೀಗಾಗಿ ಕಾಲಕ್ಕೆ ತಕ್ಕಂತೆ ಟ್ರಕ್‌ಗಳು ಬದಲಾಗುತ್ತಿವೆ. ಅವುಗಳ ವೇಗದಷ್ಟಲ್ಲದಿದ್ದರೂ ಚಾಲಕರ ವೃತ್ತಿಯೂ ಆಧುನಿಕತೆಯತ್ತ ಹೊರಳುತ್ತಿದೆ. ಮಹಿಳೆಯರು ಟ್ರಕ್ ಚಾಲನೆಗೆ ಮುಂದಾಗುತ್ತಿರುವುದೂ ಇದಕ್ಕೆ ಪೂರಕವೆಂಬಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT