ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆಯ ಸುಳಿಯಲ್ಲಿ ಸಿಲುಕಿದಾಗ...

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಕಳೆದ 50 ವರ್ಷಗಳಲ್ಲಿ ಹೊಗೆ ಬಿಡುವ ಹೆಂಗಸರ ಸಂಖ್ಯೆ ಹೆಚ್ಚಾಗಿದೆ! ಹೌದು, ಮೊದಲು ಮಹಿಳಾ ರೋಗಿಗಳು ಬಂದಾಗ ‘ನೀವು ಸಿಗರೇಟು ಸೇದುತ್ತೀರಾ?’ ಎಂದು ಕೇಳಲೇಬೇಕಾಗಿಲ್ಲ ಎಂಬ ಭಾವನೆ ಇಂದು ವೈದ್ಯರು ನಿರ್ವಿಕಾರತೆಯಿಂದ ‘ನಿಮಗೆ ಧೂಮಪಾನ/ಕುಡಿತದ ಅಭ್ಯಾಸವಿದೆಯೇ’ ಎಂದು ಕೇಳಲೇಬೇಕಾದ ಪರಿಸ್ಥಿತಿಗೆ ಬಂದು ನಿಂತಿದೆ. ಕಳೆದ 50 ವರ್ಷಗಳಲ್ಲಿ ಧೂಮಪಾನದಿಂದ ಮರಣಿಸುವ ಸಾಧ್ಯತೆ  ಮೂರು ಪಟ್ಟು ಹೆಚ್ಚಾಗಿದೆ, ಪುರುಷರ ಸಮಕ್ಕೆ ಬಂದು ನಿಂತಿದೆ. ಧೂಮಪಾನ ನಗರಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ಹೆಚ್ಚಾಗಿದ್ದರೆ, ಅದೇ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಹೊಗೆ ಬಿಡದೆ ತಂಬಾಕು ಅಗಿಯುತ್ತಾರೆ! ಎಲ್ಲ ವಿಧದ ತಂಬಾಕು ಸೇವನೆಯೂ ಮಹಿಳೆಯರಲ್ಲಿ ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸಿದೆ. ಲಕ್ವ ಹೊಡೆಯುವುದು, ಸಕ್ಕರೆ ಕಾಯಿಲೆ, ಶ್ವಾಸಕೋಶದ  ಕಾಯಿಲೆಗಳು, ಇತ್ಯಾದಿ ಕಾಯಿಲೆಗಳು ಹೆಚ್ಚಿವೆ. 2014ರ ವರದಿಯ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆಯಂತೂ ಮಹಿಳೆಯರಲ್ಲಿ 1959ರಿಂದ 2010ರವರೆಗೆ 10ಪಟ್ಟು ಹೆಚ್ಚಾಗಿದೆ.

ಪುರುಷರು ಮತ್ತು ಮಹಿಳೆಯರು ಬೇರೆ ಬೇರೆ ಕಾರಣಗಳಿಗಾಗಿ ತಂಬಾಕನ್ನು ಉಪಯೋಗಿಸುತ್ತಾರೆ. ಅಷ್ಟೇ ಅಲ್ಲ, ಇಬ್ಬರ ಆರೋಗ್ಯದ ಮೇಲೂ ತಂಬಾಕು ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್ ತಂಬಾಕು ಕಂಪೆನಿಗಳನ್ನು ಹೊರತುಪಡಿಸಿ ಬೇರೆ ಯಾವ ಆರೋಗ್ಯದ ಯೋಜನೆಯೂ ಮಹಿಳೆಯರ ತಂಬಾಕು ಸೇವನೆಯನ್ನು ಗಂಭೀರ ಸಮಸ್ಯೆಯಾಗಿ ಪರಿಗಣಿಸುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ‘ಮಹಿಳೆ ಮತ್ತು ಆರೋಗ್ಯ ಇಂದಿನ ಆಧಾರ ನಾಳಿನ ಯೋಜನೆ’ ತಂಬಾಕು ಉದ್ಯಮ ಯುವತಿಯರನ್ನು ತನ್ನ ಗುರಿಯಾಗಿಟ್ಟುಕೊಂಡಿರುವುದನ್ನು ಸ್ಪಷ್ಟವಾಗಿ ತೋರಿಸಿದೆ. ಅಮೆರಿಕಾದಲ್ಲಿ 1920ರ ದಶಕದಲ್ಲಿ ಮಹಿಳಾ ತಂಬಾಕು ಸೇವನೆಯನ್ನು ಪ್ರಚೋದಿಸುವ ಜಾಹೀರಾತುಗಳ ಮೊದಲ ಹಂತ ಇಂದು ವಿವಿಧ ಸ್ವರೂಪಗಳನ್ನು ಪಡೆದುಕೊಂಡಿದೆ. ಸಾಮಾಜಿಕವಾಗಿ ಮಹಿಳೆಯರಿಗೆ ಸ್ಥಾನಮಾನ ದೊರಕಿಸುವ ಸೋಗಿನೊಂದಿಗೆ ಇದು ಬೆಳೆಯುತ್ತಲೇ ಬಂದಿದೆ. ತೆಳ್ಳಗಿರುವ ಕಾಯ ಹೊಂದಲು, ಹಸಿವು ಕುಗ್ಗಿಸಲು, ತಮ್ಮ ಪ್ರೆಸ್ಟೀಜ್ ಹೆಚ್ಚಿಸಲು, ಗೆಳೆಯ-ಗೆಳತಿಯರ ಗುಂಪಿನೊಂದಿಗೆ ಗುರುತಿಸಿಕೊಳ್ಳಲು, ಪ್ರಣಯ-ಲೈಂಗಿಕತೆಗಳಲ್ಲಿ ತೊಡಗಲು – ಹೀಗೆ ವಿವಿಧ ಕೋನಗಳನ್ನು ಬಳಸಿ ಮಹಿಳೆಯರಲ್ಲಿ ತಂಬಾಕು ಸೇವನೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಲೇ ಇದೆ.

ಇದರ ನಂತರದ ಹಂತ ‘ಮಹಿಳೆಯರು ಮಾತ್ರ’ ಬ್ರ್ಯಾಂಡ್‌ಗಳನ್ನು ಹೊರತರುವುದು. ಮಹಿಳೆಯರಿಗೆ ಇಷ್ಟವಾಗುವ ಬಣ್ಣದ ಕವರ್‌ಗಳು, ಇತರ ವಸ್ತುಗಳೊಂದಿಗೆ - ಟೀ ಶರ್ಟ್, ವಾಚ್, ಬ್ಯಾಗ್‌ಗಳೊಂದಿಗೆ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳನ್ನು ಉಚಿತವಾಗಿ ನೀಡುವುದು ಮೊದಲಾದ ಯಾವುದೇ ವಸ್ತುವಿನ ಮಾರಾಟದಲ್ಲಿ ಬಳಸುವ ತಂತ್ರಗಳು ಇಲ್ಲಿಯೂ ಬಳಕೆಯಾಗುತ್ತಿವೆ. ರಷ್ಯಾ ದೇಶವೊಂದರಲ್ಲೇ  ಮಹಿಳೆಯರಿಗೆಂದೇ ವಿಶೇಷವಾಗಿ ಹೊರತರಲಾದ ಸುಮಾರು 100 ಬ್ರ್ಯಾಂಡ್‌ಗಳಿವೆ.  ಇವೆಲ್ಲವೂ ಗ್ಲ್ಯಾಮರ್-ಫ್ಯಾಷನ್‌ನೊಂದಿಗೆ ತಳಕು ಹಾಕಿಕೊಂಡಿವೆ. ಅವುಗಳ ಹೆಸರುಗಳಾದರೂ ಅಷ್ಟೆ, ಸ್ಲಿಂ, ಸೂಪರ್ ಸ್ಲಿಂ, ಲೈಟ್ ಮಾದರಿಯವು! ರಷ್ಯಾದಲ್ಲಿ ಮಹಿಳೆಯರ ಧೂಮಪಾನ ಹೆಚ್ಚಲು ಇದು ಮುಖ್ಯ ಕಾರಣ ಎಂದು ಹೇಳಲಾಗಿದೆ.

ಇದು ತಾವೇ ಸ್ವತಃ ಸಿಗರೇಟು ಸೇದುವ ಹೆಂಗಸರ ಕತೆಯಾದರೆ, ತಾವು ಸೇದದೆ ಇತರರ ಧೂಮಪಾನದಿಂದ ತೊಂದರೆಗೊಳಗಾಗುವ ಮಹಿಳೆಯರ ಸಂಖ್ಯೆಯೂ ದೊಡ್ಡದೇ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದ್ದರೂ ಮನೆಗಳಲ್ಲಿ ನಿಷೇಧಿಸಲು ಸಾಧ್ಯವಿಲ್ಲವಷ್ಟೆ! ಸಂಶೋಧನೆಗಳ ಪ್ರಕಾರ ಆರುಲಕ್ಷ ಜನ ಪ್ರತಿವರ್ಷ ‘ಪರೋಕ್ಷ ಧೂಮಪಾನ’ದಿಂದ ಸಾಯುತ್ತಾರೆ.  ಇವರಲ್ಲಿ ಹೆಚ್ಚಿನವರು ಮಹಿಳೆಯರು.  ತಾವು ಸ್ವತಃ ಸೇದದೆಯೂ ಮನೆಯಲ್ಲಿನ ಇತರರ ಧೂಮಪಾನಿಗಳು ಬಿಡುವ ಹೊಗೆಯನ್ನು ಸೇವಿಸುವ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ, ಚರ್ಮರೋಗಗಳು ಬರುವ ಸಾಧ್ಯತೆ ಹೆಚ್ಚು.

ಧೂಮಪಾನಿಗಳು ಬಿಡುವ ಹೊಗೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರಾಸಾಯನಿಕಗಳು ಇರುತ್ತವೆ. ಇವುಗಳಲ್ಲಿ ಕನಿಷ್ಠ 250 ಮಾರಕ ರೋಗಗಳಿಗೆ ಕಾರಣವಾಗಬಲ್ಲಂತಹವು. ಶಿಶುಗಳಲ್ಲಿ ಹಠಾತ್ ಮರಣಕ್ಕೆ ಇವು ಕಾರಣವಾಗಬಹುದು. ಗರ್ಭಿಣಿಯರಲ್ಲಿ ಶಿಶುವಿನ ತೂಕ ಕಡಿಮೆಯಾಗಲು ಅವರು ಸಿಗರೇಟು ಸೇದದಿದ್ದರೂ ಇತರರು ಸೇದಿ ಬಿಟ್ಟ ಹೊಗೆ ಒಂದು ಮುಖ್ಯ ಅಂಶವಾಗಬಹುದು.

ಧೂಮಪಾನ ಮತ್ತು ತಂಬಾಕು ಸೇವನೆಯನ್ನು ನಿಯಂತ್ರಿಸುವ ಕಾರ್ಯ ಸುಲಭವಲ್ಲ. ಉದಾಹರಣೆಗೆ ತಂಬಾಕು ಸೇವನೆ ಬಿಡಲು ಇರುವ ಔಷಧಗಳ ಬಗ್ಗೆ ಮಾಹಿತಿ ಅದನ್ನು ಬಳಸುವ ಅಸಂಖ್ಯ ಗ್ರಾಮೀಣ ಜನರಿಗೆ ಇರುವುದಿಲ್ಲ. ಹಾಗೊಮ್ಮೆ ಇದ್ದರೆ ಅವರು ಆ ತಕ್ಷಣಕ್ಕೆ ಹೋಲಿಸಿ ನೋಡುವುದು ಅವುಗಳ ಬೆಲೆಯನ್ನು! ಮುಂದೊಮ್ಮೆ ಆಗುವ ಆರೋಗ್ಯದ ಸಮಸ್ಯೆಗಳಿಗೆ ಹೋಲಿಸಿ, ಅವುಗಳ ಅಪಾರ ಖರ್ಚು-ನೋವು ಇವುಗಳನ್ನು ಅವಲೋಕಿಸಿದರೆ ತಂಬಾಕಿಗಾಗಿ ಖರ್ಚು ಮಾಡುವುದಕ್ಕಿಂತ ತಂಬಾಕನ್ನು ತ್ಯಜಿಸುವುದು, ಹಾಗೇ ಬಿಡಲಾಗದಿದ್ದರೆ ವೈದ್ಯಕೀಯ ಸಲಹೆ ಪಡೆದು ಬಿಡುವುದು ಕಡಿಮೆ ಖರ್ಚಿನದು ಎಂಬುದು ಅರಿವಾಗುತ್ತದೆ.

ಆದರೆ ಈ ಅರಿವು, ಅದನ್ನು ನಿಧಾನವಾಗಿ ಯೋಚಿಸುವ ಪ್ರವೃತ್ತಿ ಹೆಚ್ಚಿನವರಲ್ಲಿ ಇರಲಾರದು. ಅಥವಾ ಧೂಮಪಾನ ಮಾಡಬಹುದಾದ ದುಷ್ಪರಿಣಾಮವನ್ನು ಬಹಳಷ್ಟು ಜನ ಹಗುರವಾಗಿ ಭಾವಿಸುತ್ತಾರೆ. ಧೂಮಪಾನ ತಾವು ಮಾಡಲೇಬೇಕೆನ್ನುವುದಕ್ಕೆ  ವಿವಿಧ ಕಾರಣಗಳನ್ನೂ ನೀಡುತ್ತಾರೆ. ಉದಾಹರಣೆಗೆ, ‘ನನಗೆ ಹಲ್ಲುನೋವು ಅದಕ್ಕೇ ತಂಬಾಕು ಅಗಿಯುತ್ತೇನೆ’, ’ನನಗೆ ತುಂಬ ಟೆನ್ಷನ್, ಹಾಗಾಗಿ ಸಿಗರೇಟು ಬೇಕೇ ಬೇಕು! ’ಏನೋ ಅಭ್ಯಾಸ ಆಗ್ಬಿಟ್ಟಿದೆ, ಬಿಡೋದು ಕಷ್ಟ ಕಣ್ರೀ’ ಇತ್ಯಾದಿ ಇತ್ಯಾದಿ. ಅಂದರೆ ಈಗಾಗಲೇ ನಡೆದಿರುವ ಸಂಶೋಧನೆಗಳ ಬಗ್ಗೆ ಹೆಚ್ಚಿನ ಜನಸಾಮಾನ್ಯರಿಗೆ ಮಾಹಿತಿಯಿಲ್ಲ. ಸರ್ಕಾರ ಮಾಡಿರುವ ಕಾನೂನುಗಳ ಬಗ್ಗೆಯೂ ಅಷ್ಟೆ – ಬಹುಜನರಿಗೆ ಗೊತ್ತಿಲ್ಲ. ಉದಾಹರಣೆಗೆ, ತಂಬಾಕು-ಹೊಗೆಸೊಪ್ಪು ಮೆಲ್ಲುವ ಮಹಿಳೆಯರಿಗೆ ತಂಬಾಕು ಉತ್ಪನ್ನಗಳ ಮೇಲೆ ‘ತಂಬಾಕು ಆರೋಗ್ಯಕ್ಕೆ ಹಾನಿಕರ ’ ಎಂದು ಮುದ್ರಿಸಿರುತ್ತಾರೆ. ಹಾಗೆ ಮುದ್ರಿಸುವುದು ತಮ್ಮನ್ನು ಎಚ್ಚರಿಸಲು, ಎಂಬುದೇ ಗೊತ್ತಿರುವುದಿಲ್ಲ.

ಹಾಗಿದ್ದರೆ ಇಂಥ ಪರಿಸ್ಥಿತಿ ಬದಲಾಗುವುದು ಹೇಗೆ? ತಂಬಾಕಿನ ವಿವಿಧ ಸ್ವರೂಪಗಳು ನಮ್ಮ ಆರೋಗ್ಯ ಕೆಡಿಸದಂತೆ ನಾವೇನು ಮಾಡಲು ಸಾಧ್ಯವಿದೆ?
ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ, ಕಾನೂನುಗಳನ್ನು ಆರೋಗ್ಯದ ಸಲುವಾಗಿಯಾದರೂ ಪಾಲಿಸಿ, ಬಲಪಡಿಸಿ.
ಸಾರ್ವಜನಿಕ ಸ್ಥಳಗಳಲ್ಲಿ, ಬಸ್-ರೈಲು ಮೊದಲಾದೆಡೆ ಧೂಮಪಾನ ಮಾಡಬೇಡಿ, ಬೇರೆಯವರು ಮಾಡಿದರೆ ಅದನ್ನು ಬಲವಾಗಿ ವಿರೋಧಿಸಿ, ನಮಗ್ಯಾಕೆ ಗೊಡವೆ ಎಂದು ಸುಮ್ಮನಾಗದಿರಿ, ಅವರು ಬಿಡುವ ಹೊಗೆ ನಿಮ್ಮ ಆರೋಗ್ಯವನ್ನೂ ಹಾಳು ಮಾಡುತ್ತಿದೆ ಎಂದು ನೆನಪಿರಲಿ.

ಮನೆಯಲ್ಲಿ ಯಾರೇ ಧೂಮಪಾನಿಗಳಿದ್ದರೂ  ನಿಮಗೂ, ಆ ವ್ಯಕ್ತಿಗೂ ಒಂದಲ್ಲ ಒಂದು ಆರೋಗ್ಯದ ಸಮಸ್ಯೆ ತಪ್ಪಿದ್ದಲ್ಲ. ಹಾಗಾಗಿ ಇನ್ನೂ ಸಿಗರೇಟು ಸಂಖ್ಯೆ ‘ಒಂದೆರಡಷ್ಟೆ’ ಎನ್ನುವಾಗಲೇ ಅದನ್ನು ಬಿಡಿಸಿ, ವೈದ್ಯರ ಸಹಾಯ ಪಡೆಯಿರಿ.

ತಂಬಾಕನ್ನು ವಿರೋಧಿಸುವ, ಅನಕ್ಷರಸ್ಥರಿಗೂ ಅರ್ಥವಾಗುವ ದೊಡ್ಡ ಚಿತ್ರಗಳು, ಸಮಸ್ಯೆಯ ವಿವಿಧ ಮುಖಗಳನ್ನು ಚಿತ್ರಿಸುವ ಪೋಸ್ಟರ್‌ಗಳು, ತಂಬಾಕಿನ ಪೊಟ್ಟಣಗಳನ್ನು ಅನಾಕರ್ಷಕವಾಗಿ ಮಾಡುವ ‘ಸಾದಾ ಪ್ಯಾಕಿಂಗ್’ – ಇವು ಸಿಗರೇಟು ಮತ್ತು ಇತರ ತಂಬಾಕಿನ ಉತ್ಪನ್ನಗಳನ್ನು ಜನರು ಬಳಸದಿರುವಲ್ಲಿ ಪರಿಣಾಮ ಬೀರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT