ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೇನಕಲ್‌: ಕಾವೇರಿ ರಚಿಸಿದ ದೃಶ್ಯಕಾವ್ಯ

ಸುತ್ತಾಣ
Last Updated 13 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನಿಂದ ಒಂದು ದಿನದಲ್ಲಿ ಹೋಗಿ ಬರಬಹುದಾದ ಪ್ರವಾಸಿತಾಣಗಳಲ್ಲಿ ಹೊಗೇನಕಲ್‌ ಕೂಡಾ ಒಂದು. ಬಂಡೆಗಳ ನಡುವಿಂದ ಧುಮ್ಮಿಕ್ಕುವ ಕಾವೇರಿ ಇಲ್ಲಿ ಹೊಗೆ ಹೊಗೆಯಾಗಿ ಹಬ್ಬುವ ದೃಶ್ಯ ನಯನ ಮನೋಹರ. ನದಿಯಲ್ಲಿ ಈಜುವ ಸಾಹಸ ಮಾಡುವುದಕ್ಕಿಂತ ಕವಲೊಡೆದಿರುವ ಸಣ್ಣ ಸಣ್ಣ ಝರಿಗಳಲ್ಲಿ ನೀರಾಟವಾಡುವುದು ಲೇಸು.

ಕಾವೇರಿ ನದಿ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡು ಸೇರುವವರೆಗೂ ಅನೇಕ ದೃಶ್ಯಕಾವ್ಯಗಳನ್ನು  ಸೃಷ್ಟಿಸುತ್ತಾಳೆ. ರಾಜ್ಯದಿಂದ ತಮಿಳುನಾಡಿಗೆ ಅಡಿಯಿಡುವ ಕಾವೇರಿ ಹೊಗೇನಕಲ್‌ನಲ್ಲಿ ರಚಿಸುವ ದೃಶ್ಯಕಾವ್ಯ ಅಮೋಘವಾದುದು. ಹಾಗೆಯೇ ಇದು ರಾಜ್ಯದಲ್ಲಿ ಕಾವೇರಿಯ ಕೊನೆಯ ಸೊಬಗೂ ಹೌದು.

ಬೆಂಗಳೂರಿನಿಂದ ಹೊಸೂರಿನ ಮೂಲಕ ಸಾಗಿದರೆ ಸುಮಾರು 180 ಕಿ.ಮೀ ದೂರದಲ್ಲಿರುವ ಹೊಗೇನಕಲ್‌ ಕಾವೇರಿ ನದಿ ತಮಿಳುನಾಡು ಸೇರುವ ತಾಣ. ಹೆಬ್ಬಂಡೆಗಳನ್ನು ಸೀಳುವಂತೆ ಕಾವೇರಿ ನದಿ ಧುಮ್ಮಿಕ್ಕಿ ಭೋರ್ಗರೆಯುವ ಈ ಜಾಗದಲ್ಲಿ ನೀರು ಹೊಗೆ ಹೊಗೆಯಾಗಿ ಮೇಲೇಳುತ್ತದೆ. ಹೀಗಾಗಿ ಈ ಜಲರಾಶಿಗೆ ಹೊಗೇನಕಲ್‌ ಎಂಬ ಹೆಸರು ಬಂದಿದೆ.

ರಾಜ್ಯದ ಚಾಮರಾಜನಗರ ಜಿಲ್ಲೆ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಗಡಿಯಲ್ಲಿದೆ ಹೊಗೇನಕಲ್‌. ಭಾರತದ ನಯಾಗರಾ ಎಂದೇ ಕರೆಯಲಾಗುವ ಹೊಗೇನಕಲ್‌ನ ಜಲ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು.

ಹೊಗೇನಕಲ್‌ ಜಲಪಾತಕ್ಕೆ ಮಾತ್ರವಲ್ಲದೆ ಇಲ್ಲಿನ ಮಸಾಜ್‌ನ ಕಾರಣದಿಂದಲೂ ಹೆಸರಾಗಿದೆ. ಇಲ್ಲಿ ಮಸಾಜ್‌ ಮಾಡಿಸಿಕೊಂಡು ಇಲ್ಲಿನ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಇಲ್ಲಿನ ಬಂಡೆಗಳ ಮೇಲಿನಿಂದ ಬೀಳುವ ನೀರಿಗೆ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಹೊಗೇನಕಲ್‌ಗೆ ಬಂದವರು ಇಡೀ ದೇಹವನ್ನು ಮಸಾಜ್‌ಗೆ ಒಡ್ಡಿ ನೀರಧಾರೆಯಲ್ಲಿ ಮೀಯುವುದು ಸಾಮಾನ್ಯ.

ಹೊಗೇನಕಲ್‌ನ ತಮಿಳುನಾಡು ಭಾಗದಲ್ಲಿ ಅಲ್ಲಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಆದರೆ ನಮ್ಮ ಕಡೆ ಮೂಲಸೌಕರ್ಯದ ಕೊರತೆ ಇದೆ. ನಿರ್ಮಾಣವಾಗಿರುವ ವೀಕ್ಷಣಾ ಗೋಪುರ, ತಂಗುದಾಣಗಳ ನಿರ್ವಹಣೆಯೂ ಹೇಳಿಕೊಳ್ಳುವ ಹಾಗೆ ಇಲ್ಲ.

ಹೊಗೇನಕಲ್‌ನಲ್ಲಿ ನೀರಿನ ಸೆಳೆತ ಹಾಗೂ ಹೆಬ್ಬಂಡೆಗಳ ಕಾರಣ ನೀರಿಗಿಳಿಯುವುದು ಒಳ್ಳೆಯದಲ್ಲ. ನದಿಯಲ್ಲಿ ಈಜುವ ಸಾಹಸ ಮಾಡುವುದಕ್ಕಿಂತ ಕವಲೊಡೆದಿರುವ ಸಣ್ಣ ಸಣ್ಣ ಝರಿಗಳಲ್ಲಿ ನೀರಾಟವಾಡುವುದು ಲೇಸು.

ಬೆಂಗಳೂರಿನಿಂದ ಕೊಳ್ಳೇಗಾಲ, ಹನೂರು, ಮಹದೇಶ್ವರಬೆಟ್ಟ, ಗೋಪಿನಾಥಂ ಮೂಲಕ ಸಾಗಿದರೆ ಹೊಗೇನಕಲ್‌ಗೆ ಬಳಸುದಾರಿ. ಈ ಮಾರ್ಗದಲ್ಲಿ ಸಾಗಿದರೆ ಹೊಗೇನಕಲ್‌ಗೆ 280 ಕಿ.ಮೀ ದೂರ. ತಮಿಳುನಾಡಿನ ಹೊಸೂರು, ರಾಯಕೋಟ್ಟೈ, ಪಾಲಕಾಡ್‌ ಮೂಲಕ ಸಾಗಿದರೆ ಹೊಗೇನಕಲ್‌ಗೆ 180 ಕಿ.ಮೀ ಮಾತ್ರ. ಹೀಗಾಗಿ ತಮಿಳುನಾಡು ಮಾರ್ಗದಲ್ಲೇ ಹೊಗೇನಕಲ್‌ಗೆ ಹೋಗಿ ಬರುವುದು ಹತ್ತಿರ.

ಮಹದೇಶ್ವರಬೆಟ್ಟದ ಮಾರ್ಗದಲ್ಲಿ ಸಾಗಿದರೆ ಕಾವೇರಿ ವನ್ಯಜೀವಿ ತಾಣದ ಹಸಿರನ್ನು ಕಣ್ತುಂಬಿಕೊಂಡು ಹೊಗೇನಕಲ್‌ ತಲುಪಬಹುದು. ಬೆಟ್ಟದ ಮಹದೇವನ ದರ್ಶನ ಮಾಡಿಕೊಂಡು ಸಮಯವಿದ್ದವರು ಹೊಗೇನಕಲ್‌ಗೆ ಹೋಗಿಬರಬಹುದು. ಬೆಂಗಳೂರಿನಿಂದ ಒಂದು ದಿನದಲ್ಲಿ ಹೋಗಿ ಬರುವವರಿಗೆ ಹೊಸೂರು ಮಾರ್ಗವೇ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT