ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನಲು ‘ಹೊಸಗನ್ನಡ’

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನದಿಯೊಂದು ಹಲವು ಕಿರು ತೊರೆಗಳನ್ನು ಕೂಡಿಕೊಂಡು, ಹಲವು ಬಗೆಯ ಮಣ್ಣನ್ನು ಹಾದುಕೊಂಡು ಹರಿಯುತ್ತದಲ್ಲವೇ? ಈ ಚಲನಶೀಲತೆಯನ್ನು ಭಾಷೆಯ ಬೆಳವಣಿಗೆಯಲ್ಲೂ ಕಾಣಬಹುದು. ಹಲವು ಸಮುದಾಯ, ಪರಿಸರ, ಸಂಸ್ಕೃತಿಗಳ ಸೊಗಡು ಒಂದು ಭಾಷೆಯ ಮೂಲಕ ವ್ಯಕ್ತಗೊಳ್ಳುತ್ತದೆ. ಈ ಹರಿವಿನ ಜೀವಂತಿಕೆಯ ಕಾರಣದಿಂದಲೇ, ಕನ್ನಡ ಪದಗಳ ಗುಂಗಿಗೆ ಬಿದ್ದ ತರುಣರ ಗುಂಪು ತಮ್ಮ ಗುಂಪನ್ನು ‘ಹೊನಲು’ ಎಂದು ಕರೆದುಕೊಂಡಿದೆ. ಇದು ಕನ್ನಡ ಪದಗಳ ಹೊನಲು; ಕನ್ನಡ ಸೊಗಡಿನ ಘಮಲು!

‘ಹೊನಲು’ ಬಳಗವನ್ನು ಒಂದೇ ಮಾತಿನಲ್ಲಿ ಬಣ್ಣಿಸುವುದಾದರೆ, ಈ ಬಳಗದ ಗೆಳೆಯರು– ‘ಕನ್ನಡ ಬರಹವನ್ನು ಸರಿಪಡಿಸೋಣ’ ಖ್ಯಾತಿಯ ಡಿ.ಎನ್. ಶಂಕರಬಟ್ಟರ ಕನಸುಗಳ ವಾರಸುದಾರರು. ಆಡುವ ಕನ್ನಡವೊಂದು, ಬರೆಯುವ ಕನ್ನಡವೊಂದು ಯಾಕಿರಬೇಕು? ಆಡಿದಂತೆಯೇ ಬರೆದರೆ ಯಾರಪ್ಪನ ಗಂಟು ಹೋಗುತ್ತದೆ ಎನ್ನುವ ಇರಾದೆಯಲ್ಲಿ ಕನ್ನಡವನ್ನು ಸರಳಗೊಳಿಸುವ ಹಂಬಲ ಈ ಮಿತ್ರಕೂಟದ್ದು. ಅನ್ಯಭಾಷೆಗಳ ಪದಗಳಿಂದಲೇ ತುಂಬಿಕೊಂಡಿರುವ ಕನ್ನಡವನ್ನು ನಾವು ಆಡುವ ಕನ್ನಡಕ್ಕಿಂತ ಬೇರೆಯಾಗಿ ಏಕೆ ಕಾಣಬೇಕು? ಮಹಾಪ್ರಾಣ ಏಕೆ ಬಳಸಬೇಕು? ಕಷ್ಟದಿಂದ ಒತ್ತಕ್ಷರ ಬರೆಯಬೇಕೆ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಹೊರಟು, ‘ಎಲ್ಲರ ಕನ್ನಡ’ ಚಲಾವಣೆಗೆ ತರಲು ಹೊರಟ ಒಂದಷ್ಟು ಮಂದಿ ಸಾಫ್ಟ್‌ವೇರ್ ಗೆಳೆಯರು ತಮ್ಮ ಯೋಚನೆಗಳಿಗೆ ಮೂರ್ತ ರೂಪ ಕೊಡಲು ರೂಪಿಸಿಕೊಂಡಿದ್ದು ‘ಹೊನಲು’ ಮಿಂದಾಣವನ್ನು.

‘ಹೊನಲು’ ಈಗ ಒಂದು ವರ್ಷದ ಕೂಸು. ಅಂದಹಾಗೆ, ಹೊನಲು ಆರಂಭವಾಗಿದ್ದು ಕಿರಣ್ ಬಾಟ್ನಿ, ಪ್ರಶಾಂತ್ ಸೊರಟೂರ, ಸಂದೀಪ್ ಕಂಬಿ, ಪ್ರಿಯಾಂಕ್ ಕತ್ತಲಗಿರಿ, ಭರತ್ ಕುಮಾರ್ ಹೀಗೆ ಸಮಾನಮನಸ್ಕ ಭಾಷಾ ಪ್ರೇಮಿಗಳಿಂದ. ಶಂಕರಬಟ್ಟರೊಂದಿಗೆ ಕೆಲಸ ಮಾಡುತ್ತಿದ್ದ ಕಿರಣ್ ಬಾಟ್ನಿ ಅವರಿಗೆ ‘ಎಲ್ಲರ ಕನ್ನಡ’ವನ್ನು ಎಲ್ಲರಿಗೂ ತಲುಪಿಸುವ ಬಯಕೆ. ಅಲ್ಲಲ್ಲಿ ಭೇಟಿಯಾಗುತ್ತಿದ್ದ ಒಬ್ಬಿಬ್ಬರು ಸ್ನೇಹಿತರೊಂದಿಗೂ ವ್ಯಾಕರಣದ ಹರಟೆಯೇ ನಡೆಯುತ್ತಿತ್ತು. ಇದು ಚರ್ಚೆಗಷ್ಟೇ ಸೀಮಿತವಾದರೆ ಸಾಲದು, ಪ್ರಾಯೋಗಿಕವಾಗಿ ಕನ್ನಡ ಕಟ್ಟುವ ಕೆಲಸ ನಡೆಯಬೇಕು ಎಂದು ಎರಡು ತಿಂಗಳ ತಯಾರಿಯೊಂದಿಗೆ ಮಿಂದಾಣ ಶುರು ಮಾಡಲು ನಿರ್ಧರಿಸಿಬಿಟ್ಟರು. ಕನ್ನಡದಲ್ಲಿ ಹೊಸ ರೀತಿಯ ಬರವಣಿಗೆಯೊಂದಿಗೆ ಎಲ್ಲರೂ ಸುಲಭವಾಗಿ ಬಳಸುವಂತಾಗಬೇಕು ಎಂದು ನಿರಂತರ ಪ್ರಯೋಗದಲ್ಲಿ ತೊಡಗಿಕೊಳ್ಳಲು ಮನಸ್ಸು ಮಾಡಿದರು

. ಬದಲಾವಣೆ ತಮ್ಮಿಂದಲೇ ಶುರುವಾಗಲಿ ಎಂದು ತಮ್ಮ ಹೆಸರುಗಳನ್ನು ಹೊನಲು ಬಳಗ ಅಲ್ಪಪ್ರಾಣಕ್ಕೆ ಒಗ್ಗಿಸಿಕೊಂಡಿತು.

ವಿಶ್ವಕನ್ನಡಿಗರು!
ನದಿಯನ್ನು ರೂಪಿಸುವ ತೊರೆಗಳ ಮೂಲ ಬೇರೆಬೇರೆಯಷ್ಟೇ. ‘ಹೊನಲು’ ಬಳಗದ ಗೆಳೆಯರು ಇರುವುದು ಕೂಡ ಬೇರೆಬೇರೆ ಸ್ಥಳಗಳಲ್ಲೇ. ಕನ್ನಡದ ಬಗೆಗಿನ ಪ್ರೀತಿ ಇವರೆಲ್ಲರನ್ನೂ ಮಿಂದಾಣದ ಮೂಲಕ ಸೇರಿಸಿದೆ. ಬೇರೆ ಕೆಲಸಗಳಲ್ಲಿ ವಾರವಿಡೀ ದಣಿದರೂ ಇವರ ಬಿಡುವಿನ ವೇಳೆ ಕನ್ನಡದ ಕೆಲಸಕ್ಕೆ ಮೀಸಲು. ಮೊಬೈಲ್ ಕೂಡ ಇವರನ್ನು ಬೆಸೆದಿದೆ; ಇವರ ಚರ್ಚೆ, ಪದ ಪ್ರಯೋಗಗಳಿಗೆ ಮೊಬೈಲ್ ಕುಲುಮೆಯ ರೂಪದಲ್ಲಿ ಪರಿಣಮಿಸಿದೆ.

ಭಾಷೆಯ ಬೆಳವಣಿಗೆ ಹಾಗೂ ಪದಗಳ ಹುಟ್ಟುವಿಕೆಗೆ ಅನುಕೂಲವಾಗುವಂತೆ ಮಿಂದಾಣ ನಾಲ್ಕು ಕವಲುಗಳಾಗಿ ಗುರ್ತಿಸಿಕೊಂಡಿದೆ. ‘ಅರಿಮೆ’ಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ, ‘ನಲ್ಬರಹ’ದಲ್ಲಿ ಸಾಹಿತ್ಯಾಸಕ್ತಿ ವಿಷಯ, ‘ನಡೆ ನುಡಿ’ಯಲ್ಲಿ ಸಂಸ್ಕೃತಿ ವಿಚಾರ, ‘ನಾಡು’ವಿನಲ್ಲಿ ರಾಜಕೀಯ, ವಿದ್ಯಮಾನ... ಹೀಗೆ ಹೊಸ ರೀತಿಯ ಕನ್ನಡವನ್ನು ಸುಲಭ ಬರವಣಿಗೆಗೆ ಒಗ್ಗಿಸುವ ಪ್ರಯತ್ನ ಈ ತಂಡದ್ದು.
ಹೊನಲು ಜಾಲತಾಣಕ್ಕೆ ಭೇಟಿ ನೀಡಿದವರೆಲ್ಲರೂ ಅರೆಕ್ಷಣ ದಂಗಾಗುವುದು ಸಹಜ. ಚವ್ಕಟ್ಟು, ಎಶ್ಟೊಂದು, ಗ್ನಾನಪೀಟ, ಸುಲಬ, ಸಂದರ್ಬ, ಕ್ರುಶಿ, ತಿಟ್ಟ, ನುಡಿಯಾಡುಗರು, ಅಯ್ದು, ಮುಕ್ಯ, ಮುಕ, ರಯ್ತ, ಬೇರಮೆ, ಸಂವಿದಾನ, ವಿದಿ, ಅರ್ತ, ವಿಶೇಶ, ಯಶವನ್ತ, ರಗುನಂದನ ಇಂಥವೇ ಶಬ್ದಗಳು ಇದಕ್ಕೆ ಕಾರಣ. ‘‘ಇದು ಹೊಸದನ್ನು ಕಂಡಾಗ ಆಗುವ ಎಂದಿನ ಕಳವಳವಲ್ಲದೇ ಮತ್ತೇನೂ ಅಲ್ಲ, ತಾಳ್ಮೆಯಿಂದ ಓದಿದರೆ ‘ಎಲ್ಲರ ಕನ್ನಡ’ ಸುಲಬ’’ ಎನ್ನುತ್ತಾರೆ

ಕಿರಣ್ ಬಾಟ್ನಿ.

ಋ, ಷ ಇವುಗಳ ಬದಲು ರು, ಶ ಬಳಸಬೇಕು. ಕೀ ಬೋರ್ಡ್‌ನಲ್ಲಿ  ಯಾವ ವಿಶೇಶ ಕೆಲಸವನ್ನೂ ಮಾಡದ ಐ, ಔ, ಮತ್ತು ಅರ್ಕಾವೊತ್ತಿನ ಬದಲು ಅಯ್, ಅವ್ ಮತ್ತು ರಕಾರಕ್ಕೆ ಒತ್ತು ಇವುಗಳನ್ನು ಬಳಸಬೇಕು. ಸುಖ = ಸುಕ, ಕೃಷಿ = ಕ್ರುಶಿ, ಕಷ್ಟ = ಕಶ್ಟ, ಐದು = ಅಯ್ದು, ಔತಣ = ಅವ್ತಣ, ಕರ್ನಾಟಕ = ಕರ್‌ನಾಟಕ...  ಹೀಗೆ ಸಾಗುತ್ತದೆ ‘ಹೊನಲು’ವಿನ ಹೊಸಗನ್ನಡ.

ಈಗಾಗಲೇ ಅನ್ಯ ಭಾಷೆಗಳ ದಾಳಿಯಿಂದ ಕನ್ನಡ ತತ್ತರಿಸುತ್ತಿರುವ ಈ ಹೊತ್ತಿನಲ್ಲಿ ಈ ಹೊಸ ಪ್ರಯೋಗ ಯಾವ ರೀತಿ ಯಶಸ್ಸು ತಂದುಕೊಡಬಹುದು ಎನ್ನುವ ಪ್ರಶ್ನೆ ಸಹಜವಷ್ಟೇ? ಇದಕ್ಕೆ ಉತ್ತರವಾಗಿ ‘ಹೊನಲು’ ಗೆಳೆಯರು ಹೇಳುವುದು– ‘ಇದು ಪ್ರಯೋಗವಲ್ಲ, ಸರಳೀಕರಣವಷ್ಟೆ. ಕನ್ನಡ ಭಾಷೆ ಮತ್ತು ಕನ್ನಡಿಗರ ನಡುವಿನ ಅಂತರ ಕಡಿಮೆ ಮಾಡುವುದು ನಮ್ಮ ಉದ್ದೇಶ. ಅಲ್ಪಪ್ರಾಣ ಬಳಕೆ, ಒತ್ತಕ್ಷರಗಳ ಸರಳ ಬರವಣಿಗೆ ಕನ್ನಡಕ್ಕೆ ಇರುವ ತುರ್ತು ಅಗತ್ಯ’.

ಅಲೆದಾಟದಲ್ಲಿ ಅರಿವು
ಬೇರೆ ಬೇರೆ ದೇಶಗಳನ್ನು ಸುತ್ತುವಾಗ ಅಲ್ಲಿನ ಜನರನ್ನು, ಭಾಷೆಯನ್ನು, ಅವರ ಭಾಷಾಪ್ರೀತಿಯನ್ನು ಕಂಡು ಬೆರಗಾಗಿರುವ ‘ಹೊನಲು’ ಬಳಗದವರಿಗೆ ಕರ್ನಾಟಕದಲ್ಲಿ ಭಾಷೆಯ ಬಗ್ಗೆ ಏಕಿಷ್ಟು ತಾತ್ಸಾರ ಎನ್ನಿಸಿದೆ. ಜಪಾನ್, ಟರ್ಕಿ, ಚೈನಾ, ಕೊರಿಯಾ, ಮಲೇಷಿಯಾದಂಥ ದೇಶಗಳಲ್ಲಿ ಅವರ ಭಾಷೆಯನ್ನು ಪ್ರೀತಿಸುವ ಜನರನ್ನು ಕಂಡಾಗ ಅವರು ನಮಗೆ ಮಾದರಿ ಅನ್ನಿಸಿದ್ದಿದೆ. ಬೇರೆ ದೇಶಗಳಂತೆ ತಮ್ಮತನವನ್ನು ತಮ್ಮ ಭಾಷೆಯಲ್ಲೂ ಕಂಡುಕೊಳ್ಳುವ ಹಂಬಲ ಇವರದು.

ಬೇರೆ ದೇಶಗಳು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಲು ತಮ್ಮ ಆಡು ನುಡಿಯಲ್ಲಿ ಕಲಿಕೆ ಸಾಧ್ಯವಾಗಿರಿಸಿರುವುದೇ ಕಾರಣ ಎನ್ನುತ್ತಾರೆ ಪ್ರಿಯಾಂಕ್. ನಮ್ಮ ದೇಶದಲ್ಲಿ ಈ ಅನುಕೂಲ ಇಲ್ಲದ್ದರ ಬಗ್ಗೆ ಅವರಿಗೆ ಬೇಸರ. ವಿಜ್ಞಾನ, ತಂತ್ರಜ್ಞಾನದ ಪದಗಳಿಗೆ ಕನ್ನಡದಲ್ಲಿ ಪದಗಳನ್ನೇ ಸೃಷ್ಟಿಸದೆ, ಯಥಾವತ್ತಾಗಿ ಸಂಸ್ಕೃತ ಅಥವಾ ಇಂಗ್ಲಿಷ್‌ ಪದಗಳನ್ನೇ ಬಳಸಿಕೊಂಡ ನಮ್ಮವರು ಕನ್ನಡದ್ದೇ ಪದ ಹುಟ್ಟಲು ಅವಕಾಶವನ್ನೇ ನೀಡಿಲ್ಲ ಎಂದು ದೂರುವ ಅವರು, ‘ಹೊನಲು’ ಮಿಂದಾಣದಲ್ಲಿ ‘ಅರಿಮೆ’ ಮತ್ತು ‘ಚಳಕದ ಬರಹ’ ಎಂದು ವಿಜ್ಞಾನ ಹಾಗೂ ತಂತ್ರಜ್ಞಾನದ ಕುರಿತು ಪ್ರತ್ಯೇಕ ಲೇಖನ ಸರಣಿಗಳನ್ನೇ ತಂದಿದ್ದಾರೆ. ಹೀಗೇ ಮುಂದುವರೆದರೆ ಎಂಜಿನಿಯರಿಂಗ್ ಇನ್ನಿತರ ಉನ್ನತ ಶಿಕ್ಷಣ ಕನ್ನಡದಲ್ಲೇ ಸಾಧ್ಯವಾಗ ಬಹುದು ಎನ್ನುವುದು ಅವರ ನಿರೀಕ್ಷೆ.

‘ಎರಡು ಸಾವಿರ ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬರೆಯಲೇಬೇಕೆಂಬ ಅನಿವಾರ್ಯತೆ ಎಲ್ಲರಿಗೂ ಇರಲಿಲ್ಲ. ಈಗ ಕಾಲ ಬದಲಾಗಿದೆ. ಓದು ಎಲ್ಲಕ್ಕೂ ಮೂಲ. ಆಗ ಮಾಡಿದ ಭಾಷಾ ನಿಯಮಗಳನ್ನು ಈಗ ಅನುಸರಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎನ್ನುವುದು ‘ಹೊನಲು’ ತಂಡದ ಮಾತು.

‘ಕನ್ನಡದ ಶಾಲೆಗಳಲ್ಲೂ ಕನ್ನಡವನ್ನು ನಮ್ಮದಾಗಿಸಿಕೊಳ್ಳುವ ಕಳಕಳಿಯೇ ಕಾಣುತ್ತಿಲ್ಲ’ ಎನ್ನುವ ಇವರು, ಆಟೊಮೊಬೈಲ್, ವಿಜ್ಞಾನ, ಗಣಿತ, ತಂತ್ರಜ್ಞಾನಗಳಲ್ಲಿ ಸುಲಭವಾಗಿ ಅರ್ಥಕ್ಕೆ ನಿಲುಕುವ 2000 ಅಚ್ಚಗನ್ನಡ ಪದಗಳನ್ನು ಕಂಡುಕೊಂಡಿದ್ದಾರೆ. ಒಂದು ವರ್ಷದ ಈ ಅವಧಿಯಲ್ಲಿ ಕನ್ನಡದ್ದೇ ಆದ ಸುಮಾರು ಐದು ಸಾವಿರ ಪದ ರೂಪಿಸಿದ್ದಾರೆ.

‘‘ಡಿಎನ್ಎಗೆ ‘ಪೀಳಿ’ ಎನ್ನಬಹುದು. ಆದರೆ ಅದರ ಬಗ್ಗೆ ಯೋಚಿಸುವುದೇ ಇಲ್ಲ, ಡಿಎನ್‌ಎ ಎಂದು ಬರೆದುಬಿಡುತ್ತಾರೆ. ಅದನ್ನೇ ಎಲ್ಲರೂ ಅನುಸರಿಸಲು ಆರಂಭಿಸುತ್ತಾರೆ. ನಂತರ ಅದೇ ಭಾಷೆಯಾಗಿ, ಮಾತಾಗಿ ಮುಂದುವರಿದು ಬಿಡುತ್ತದೆ. ಅಲ್ಲಿಗೆ ನಮ್ಮ ಭಾಷೆಯ ಬಿತ್ತನೆ ನಿಂತಂತೆ’’ ಎನ್ನುವ ಭರತ್, ಹಲವು ಉದಾಹರಣೆಗಳ ಮೂಲಕ ಕನ್ನಡದ ಸಾಧ್ಯತೆಗಳನ್ನು ಹಂಚಿಕೊಳ್ಳುತ್ತಾರೆ.

ಅನುಭವ ಮಂಟಪ
ಅಂದಹಾಗೆ, ಹೊನಲು ಬಳಗದ ಹೆಚ್ಚು ಬರಹಗಾರರು ಅನಿವಾಸಿ ಕನ್ನಡಿಗರು. ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಬೇರೆಬೇರೆ ದೇಶಗಳಲ್ಲಿರುವ ಅವರು ಕನ್ನಡದ ನಂಟನ್ನು ಉಳಿಸಿಕೊಂಡಿರುವ ರೀತಿ ಅಚ್ಚರಿ ಹುಟ್ಟಿಸುವಂತಿದೆ. ಭಾಷೆ ಸಾಮಾನ್ಯ ಜನರಿಗೂ ಹತ್ತಿರವಾಗಬೇಕು, ಅನವಶ್ಯಕ ಮಹಾಪ್ರಾಣಗಳನ್ನು ಬಳಸಬಾರದು, ಹೊಸ ಹೊಸ ಪದಗಳನ್ನು ಕನ್ನಡದಲ್ಲೇ ಹುಟ್ಟುಹಾಕಬೇಕು ಎನ್ನುವ ಉದ್ದೇಶದೊಂದಿಗೆ ಅವರೆಲ್ಲ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ಯಶವಂತ್ ಬಾಣಸವಾಡಿ, ಚೆನ್ನೈನಲ್ಲಿ ಪಿಎಚ್.ಡಿ ಮಾಡುತ್ತಿರುವ ರಗುನಂದನ್, ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ರತೀಶ ರತ್ನಾಕರ, ಚೇತನ್ ಜೀರಾಳ್, ಆಟೊಮೊಬೈಲ್ಸ್‌ ಎಂಜಿನಿಯರ್ ಆಗಿರುವ ಜಯತೀರ್ತ ನಾಡಗವ್ವ, ಅಮೆರಿಕದಲ್ಲಿ ಪೀಳಿಯರಿಮೆ ಕುರಿತು ಸಂಶೋಧನೆ ನಡೆಸುತ್ತಿರುವ ಸಿದ್ದರಾಜು ಬೋರೇಗವ್ಡ, ಶ್ರೀನಿವಾಸ ಮೂರ್ತಿ, ಉಪನ್ಯಾಸಕ ಸಿ.ಪಿ. ನಾಗರಾಜ, ಶ್ವೇತಾ, ಹರಶಿತ್ ಮಂಜುನಾತ, ಸಿ. ಮರಿಜೋಸೆಫ್, ದೇವೇಂದ್ರ ಅಬ್ಬಿಗೇರಿ, ಶ್ರೀಕಿಶನ್, ಕಾರ್ತಿಕ್ ಪ್ರಬಾಕರ್, ಆನಂದ್ ಜಿ., ಕಲ್ಪನಾ ಹೆಗಡೆ ಮುಂತಾದವರು ಈ ಬಳಗದ ಪ್ರಮುಖ ಬರಹಗಾರರು.

ಸದ್ಯಕ್ಕೆ ಈ ಮಿಂದಾಣದ ವರ್ಷದ ಹಾದಿಯಲ್ಲಿ ತೊಂಬತ್ತು ಮಂದಿ ಬರಹಗಾರರು ಹುಟ್ಟಿಕೊಂಡಿದ್ದಾರೆ. ಹಿಂದೆ ಮಾಡಿದ ಕೆಲಸವನ್ನು ನಾವು ಮಾಡದಿರೋಣ ಎಂದು ಕನ್ನಡದಲ್ಲಿ ಹೊಸ ಹೊಸ ಪದಗಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ನಿಧಾನವಾದರೂ ಬದಲಾವಣೆ ತರುತ್ತೇವೆ ಎಂಬ ವಿಶ್ವಾಸ ಇವರದ್ದು. ಕನ್ನಡದ ಪದಕೋಶಕ್ಕೆ ಇನ್ನಷ್ಟು ಪದಗಳನ್ನು ಸೇರಿಸುತ್ತಿದ್ದು, ಮಿನ್ನೋದುಗೆ
(ಇ–ಬುಕ್)ಯನ್ನೂ ಹೊರತಂದಿದ್ದಾರೆ. ಮಯ್ಯರಿಮೆ– ಅನಾಟಮಿ, ಮದ್ದರಿಮೆ–ಮೆಡಿಕಲ್ ಸೈನ್ಸ್‌, ಬಾನರಿಮೆ–ಆಸ್ಟ್ರಾನಮಿ, ಎಣಿಕೆಯರಿಮೆ–ಮ್ಯಾಥಮೆಟಿಕ್ಸ್‌, ಹಣಕಾಸರಿಮೆ–ಎಕನಾಮಿಕ್ಸ್‌– ಹೀಗೆ ಬೆಳೆಯುತ್ತಿದೆ ಅವರ ‘ನಿಗಂಟು’. ಇವರ ಜಾಲತಾಣಕ್ಕೆ ಭೇಟಿ ನೀಡಲು, www.honalu.net ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT