ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗೆ ರಾಜಕುಮಾರ, ಒಳಗೆ ಜಯಣ್ಣ

Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇವರು ಥೇಟ್ ಡಾಕ್ಟರ್ ರಾಜಕುಮಾರ್‌ ಹಾಗೆ ಕಾಣುತ್ತಾರೆ. ಅಭಿನಯದಲ್ಲೂ ಅವರ ಛಾಯೆ ಇದೆ. ಹಾಗೆಯೇ ಸ್ವಂತಿಕೆಯೂ ಇದೆ. ಇವರೇ ವೃತ್ತಿ ರಂಗಭೂಮಿಯ ಹೆಸರಾಂತ ನಟ ದಾವಣಗೆರೆ ಜಯಣ್ಣ ಅಲಿಯಾಸ್ ಜಯಕುಮಾರ್ ಕೊಡಗನೂರು.

ರಾಜಕುಮಾರರನ್ನು ಹೋಲುವ ನೀವು ಅಭಿನಯದಲ್ಲೂ ಅವರನ್ನೇ ಅನುಕರಣೆ ಮಾಡಿದ್ದು ಯಾಕೆ ಎಂದರೆ, ‘ಅದೇನೋ ಗೊತ್ತಿಲ್ಲ. ಚಿಕ್ಕಂದಿನಿಂದಲೂ ನನಗೆ ಅಭಿನಯದ ಹುಚ್ಚು. ಅದರ ಜತೆಗೆ ನಮ್ಮ ಊರಿನ ಜನರೆಲ್ಲಾ ನೀನು ರಾಜಕುಮಾರ್ ಹಾಗೇ ಕಾಣ್ತೀಯ ಎನ್ನುತ್ತಿದ್ದರು. ರಾಜಣ್ಣನವರ ಸಿನಿಮಾಗಳನ್ನೂ ಹೆಚ್ಚು ನೋಡ್ತಾ ಇದ್ದೆ. ನಾಟಕಗಳಲ್ಲಿ ಅಭಿನಯಿಸಬೇಕು ಅನ್ನಿಸಿದಾಗ ಅವರ ಪ್ರಭಾವ ಬಿದ್ದಿರಬೇಕು. ಅಥವಾ ಅದೆಲ್ಲ ದೇವರ ಕೊಡುಗೆ ಇರಬೇಕು...’ ಎನ್ನುತ್ತಾರೆ. ಹೌದು. ಅಭಿನಯದ ಧ್ಯಾನದಲ್ಲೇ ಬಾಲ್ಯ ಹರೆಯಕ್ಕೆ ತಿರುಗುತ್ತಿದ್ದ ದಿನಗಳಲ್ಲಿ ಸಿನಿಮಾದ ರಾಜಣ್ಣ ಗಾಢ ಪ್ರಭಾವ ಬೀರಿದ್ದಿರಬೇಕು. ಅದೆಲ್ಲ ಮುಪ್ಪರಿಗೊಂಡು ಒಬ್ಬ ಒಳ್ಳೆಯ ನಟನನ್ನೇ ನಿರ್ಮಿಸಿತು.

ರಾಜಕುಮಾರ್ ಅಭಿನಯದ ಅನುಕರಣೆಯನ್ನೇ ತಮ್ಮ ಕಲಾವೃತ್ತಿ ಮಾಡಿಕೊಂಡವರಿದ್ದಾರೆ. ಅಂತಹವರ ಪೈಕಿ ಹಾವೇರಿಯ ಅಶೋಕ ಬಸ್ತಿ ಪ್ರಮುಖರು. ವೇಷ ಹಾಕಿದರೆ ಅವರು ಅಪ್ಪಟ ರಾಜಕುಮಾರರೇ! ಹಾಡು, ಮಾತು, ಅಭಿನಯ ಎಲ್ಲವೂ ರಾಜಕುಮಾರರ ಪಡಿಯಚ್ಚು. ಆದರೆ ಜಯಣ್ಣ ಹೊರಗೆ ನೋಡುವುದಕ್ಕೆ ಥೇಟ್ ರಾಜಕುಮಾರ. ಅಭಿನಯದ ಆಂತರಿಕ ಜಗತ್ತಿನಲ್ಲಿ ಅವರದೇ ಆದ ವಿಶಿಷ್ಟ ಶೈಲಿಯೊಂದಿದೆ. ಅಲ್ಲಿ ರಾಜಕುಮಾರರೂ ಇದ್ದಾರೆ, ಜಯಣ್ಣನೂ ಇದ್ದಾರೆ.

ದಾವಣಗೆರೆ ಸಮೀಪದ ಕೊಡಗನೂರು ಗ್ರಾಮದಲ್ಲಿ ಹನುಮಂತಪ್ಪ–ಗಂಗಮ್ಮ ದಂಪತಿಗೆ 1951ರಲ್ಲಿ ಜನಿಸಿದ ಜಯಕುಮಾರ್ 12ನೇ ವಯಸ್ಸಿನಲ್ಲೇ ಮುಖಕ್ಕೆ ಬಣ್ಣ ಹಚ್ಚಿ ರಂಗದ ಮೇಲೆ ಬಂದವರು. 20ರ ಹರೆಯ ದಾಟುತ್ತಲೇ ಮುನಿರಂಗಪ್ಪನವರ ‘ರಾಜರಾಜೇಶ್ವರಿ ನಾಟಕ ಸಂಘ’ ಸೇರಿ ‘ಸದಾರಮೆ’ ನಾಟಕದ ಮುನಿರಾಜು ಪಾತ್ರದಲ್ಲಿ ಮೊದಲು ಕಾಣಿಸಿಕೊಂಡರು. ನಿಧಾನಕ್ಕೆ ಎಲ್ಲ ಪಾತ್ರಗಳನ್ನೂ ಆವಾಹಿಸಿಕೊಂಡರು. ಕೆ.ಎನ್. ಸಾಳುಂಕೆ ಅವರ ‘ವರ ನೋಡಿ ಹೆಣ್ಣು ಕೊಡು’ ನಾಟಕದ ಕಟಕರೊಟ್ಟಿ ಮತ್ತು ಶಿವಣ್ಣ ಪಾತ್ರ; ‘ಬದುಕು ಬಂಗಾರವಾಯ್ತು’ ನಾಟಕದ ಮುಕ್ಕಣ್ಣ ಪಾತ್ರ ವಾಸ್ತವ ಶೈಲಿಯ ಸಹಜ ಅಭಿನಯದ ಪಾಠವಾದವು.

ನಂತರ ಗುಬ್ಬಿ ಕಂಪನಿ ಪ್ರವೇಶ. ಅಲ್ಲಿನ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಅನುಭವ ಪಡೆದ ಜಯಣ್ಣ, ಚಿತ್ರದುರ್ಗದ ಕುಮಾರಸ್ವಾಮಿ ನಾಟಕ ಕಂಪನಿ ಸೇರುವ ಹೊತ್ತಿಗೆ ಯಾವುದೇ ಪಾತ್ರದಲ್ಲಿ ನಟಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಹೊಂದಿದ್ದರು. ‘ನಾಯಕನಹಟ್ಟಿ ತಿಪ್ಪೇಸ್ವಾಮಿ’ ಮತ್ತು ‘ರಾಜಾ ವೀರ ಮದಕರಿ ನಾಯಕ’ ಆ ಕಂಪನಿಯ ಪ್ರತಿಷ್ಠಿತ ನಾಟಕಗಳು.

ಜಯಕುಮಾರರ ತಿಪ್ಪೇಸ್ವಾಮಿ ಮತ್ತು ಮದಕರಿ ನಾಯಕನ ಪಾತ್ರ ಆ ಕಂಪನಿಯಲ್ಲಿ ಅದುವರೆಗಿನ ನಟರ ಸಾಧನೆಯನ್ನು ಮೀರಿ ಮುಂದೆ ಹೋಗಿತ್ತು. ಹಿಂದಿನ ನಟರುಗಳಲ್ಲಿ ಅಬ್ಬರ ಜಾಸ್ತಿ ಇರುತ್ತಿತ್ತು. ಆದರೆ ಜಯಣ್ಣನ ನಟನೆ ಹಿತಮಿತ. ಪೌರಾಣಿಕ ನಾಟಕಗಳೆಂದರೆ ಕಿರುಚಲೇ ಬೇಕಿಲ್ಲ ಎಂಬ ಎಚ್ಚರಿಕೆಯನ್ನು ಅವರೊಳಗಿದ್ದ ರಾಜಕುಮಾರ ಕೊಡುತ್ತಿದ್ದ. ಔಚಿತ್ಯದ ಎಲ್ಲೆ ಮೀರದ ಅವರ ಪಾತ್ರಗಳು ನಾಡಿನಲ್ಲಿ ದೊಡ್ಡ ಹೆಸರು ಮಾಡಿದವು. ಜಯಣ್ಣನೊಳಗಿನ ಆ ಎಚ್ಚರ ಮತ್ತು ವಿಮರ್ಶೆ ಪ್ರಜ್ಞೆ ಎಲ್ಲ ರೀತಿಯ ಪಾತ್ರಗಳನ್ನು ಅವುಗಳ ಸ್ವಭಾವಕ್ಕನುಗುಣವಾಗಿ ಅನುಕರಣೆ ಮಾಡಬೇಕೆಂಬ ಪಾಠ ಕಲಿಸಿತು. ಅಂತೆಯೇ ಅವರಿಗೆ ಎಲ್ಲ ರೀತಿಯ ಪಾತ್ರಗಳೂ ದೊರೆತವು.

ಸುಳ್ಳ ದೇಸಾಯಿಯವರ ಕಂಪನಿಯಲ್ಲಿ ‘ಕಿತ್ತೂರು ಚೆನ್ಮಮ್ಮ’ ನಾಟಕದ ರುದ್ರಪ್ಪ ನಾಯಕನ ಪಾತ್ರ; ‘ಸಿಂಧೂರ ಲಕ್ಷ್ಮಣ’ ನಾಟಕದ ಲಕ್ಷ್ಮಣ ಮತ್ತು ಗೌಡನ ಪಾತ್ರವನ್ನು ಅರಿತು ಮಾಡುತ್ತಿದ್ದ ಅವರದ್ದೇ ಆದ ಶೈಲಿ ಅವರನ್ನು ವಿಶಿಷ್ಟ ನಟರಾಗಿಸಿತು. ಓಬಳೇಶರ ಕಂಪನಿಯಲ್ಲಿ ‘ಖಾದಿಸೀರೆ’ ನಾಟಕದ ಕಿರಣ, ಭರಣ ಪಾತ್ರಗಳು, ‘ಮುಂಡೇಮಗ’ ನಾಟಕದ ಅಚ್ಯುತ ಪಾತ್ರ ಸಾಮಾಜಿಕ ನಾಟಕಗಳ ಅಭಿನಯ ಪರಿಯನ್ನು ಮತ್ತಷ್ಟು ಹೇಳಿಕೊಟ್ಟವು. ಅಂತೆಯೇ ಅವರು ಗುಡಿಗೇರಿ ಬಸವರಾಜ ಮತ್ತು ಪ್ರೇಮಾ ಗುಳೇದಗಡ್ಡ ಅವರ ನಾಟಕ ಕಂಪನಿಗಳನ್ನು ಸೇರುವ ಹೊತ್ತಿಗೆ ಸಹಜ ವಾಸ್ತವ ಶೈಲಿ ಕರಗತ ಆಗಿಬಿಟ್ಟಿತ್ತು. ನಾ.ದೇ. ನರಸಿಂಹ ಮೂರ್ತಿಯವರ (ನಾದೇ) ‘ಎಚ್ಚರ ತಂಗಿ ಎಚ್ಚರ’ ಮತ್ತು ‘ಛಲ ತೀರಿಸಿದ ಹೆಣ್ಣು’ ನಾಟಕಗಳ ಅಶೋಕ ಮತ್ತು ಆನಂದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದರು.

ಮುಂದೆ ಅವರು ಚಿಂದೋಡಿ ಲೀಲಾ ಅವರ ‘ಕೆಬಿಆರ್ ಡ್ರಾಮಾ ಕಂಪನಿ’ಯಲ್ಲಿ ‘ಕಳ್ಳ ದೇವರಿಗೆ ಸುಳ್ಳ ಪೂಜಾರಿ’, ‘ಪೊಲೀಸನ ಮಗಳು’ ಮುಂತಾದ ಹಲವು ನಾಟಕಗಳ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದರು. ರಂಗಪಯಣದಲ್ಲಿ ಜಯಣ್ಣನ ಜತೆಗೂಡಿದ ರವಿಕಲಾ ಮುಂದೆ ಅವರ ಪತ್ನಿಯಾದರು. ಅವರೂ ವೃತ್ತಿ ರಂಗಭೂಮಿಯ ಹೆಸರಾಂತ ನಟಿ.

ಸಾಮಾಜಿಕ ನಾಟಕಗಳ ಜಯಣ್ಣನ ಪಾತ್ರಗಳನ್ನು ವೀಕ್ಷಿಸಿದವರಿಗೆ ಇವರೇನಾ ಟಿಪ್ಪುಸುಲ್ತಾನ, ಎಚ್ಚಮ ನಾಯಕ, ಮಹಿಷಾಸುರ, ಕಾರ್ತ್ಯವೀರ್ಯಾರ್ಜುನ, ರಾಜಾ ವೀರಮದಕರಿ ನಾಯಕನಾಗಿ ಗರ್ಜಿಸಿದವರು ಎನಿಸುತ್ತಿತ್ತು. ಅಲ್ಲಿಯ ಗರ್ಜನೆ, ಇಲ್ಲಿಯ ಸೌಮ್ಯ ಎಲ್ಲವೂ ಅಷ್ಟೇ ಸಹಜವಾಗಿ ಮೂಡಿಬರುತ್ತಿದ್ದವು.

ಒಂದು ನಾಟಕದಲ್ಲಿ ನಾಯಕನೇ ಪ್ರಧಾನನಾಗಬೇಕು ಎಂದೇನಿಲ್ಲ! ಖಳನಾಯಕ ಪ್ರಧಾನ ಆಗಿಬಿಡಬಹುದು! ತಂದೆ, ಅಣ್ಣ, ತಮ್ಮ-ಹೀಗೆ ಯಾವುದೋ ಒಂದು ಪಾತ್ರ ಮುಖ್ಯ ಆಗಬಹುದು. ಅಂತಹ ಮುಖ್ಯ ಪಾತ್ರಗಳು ಜಯಣ್ಣನ ಪಾಲಾಗುತ್ತಿದ್ದವು. ಒಂದು ನಾಟಕದಲ್ಲಿ ಜಯಣ್ಣ ತಂದೆಯಾಗಿದ್ದರೆ, ಮತ್ತೊಂದರಲ್ಲಿ ಮಗನಾಗಿ ನಟಿಸುತ್ತಿದ್ದರು. ಐದಡಿ ಆರಿಂಚು ಎತ್ತರದ ಸಮತೂಕದ ಶರೀರ, ಶಾರೀರ ಹೊಂದಿರುವ ಜಯಣ್ಣ ಯಾವುದೇ ಪಾತ್ರಕ್ಕೆ ಒಗ್ಗಬಲ್ಲರು ಎಂದು ಬಹುತೇಕ ನಾಟಕ ಕಂಪನಿ ಮಾಲೀಕರು ನಿರ್ಧರಿಸಿಬಿಟ್ಟಿದ್ದರು.

ಅಂತೆಯೇ ಎಲ್ಲ ರೀತಿಯ ಪಾತ್ರಗಳನ್ನು ಅವರಿಗೆ ದಯಪಾಲಿಸಿದರು. ಈ ರೀತಿಯ ಗೌರವ ದೊರೆಯುವುದು ಕೆಲವೇ ನಟರಿಗೆ ಮಾತ್ರ.
ಜಯಣ್ಣ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನೂರಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹೊರ ನೋಟಕ್ಕೆ ಇನ್ನೂ ಅವರು ಹೀರೋ ಪಾತ್ರದಲ್ಲೇ ನಟಿಸಬಲ್ಲರು ಎನಿಸುತ್ತದೆ. ಆದರೆ ‘ಮಹಾಭಾರತ’ ಧಾರಾವಾಹಿಯ ಅಂಧರಾಜ ಧೃತರಾಷ್ಟ್ರನಾಗಿ ಅವರ ಅಭಿನಯ ಅನನ್ಯವಾದುದು. ಅದು ಪಾತ್ರವನ್ನು ಆವಾಹಿಸಿಕೊಳ್ಳುವ ಅವರ ಅದಮ್ಯ ಸೃಜನಶೀಲತೆಗೆ ಉತ್ತಮ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT