ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಟ್ಟಿ ‘ಭಾಗ್ಯ’, ಮಧುಸೂದನ್ ಪೆಟ್ರೋಲ್!

Last Updated 30 ಮಾರ್ಚ್ 2015, 20:35 IST
ಅಕ್ಷರ ಗಾತ್ರ

ಬೆಂಗಳೂರು: ಬಜೆಟ್‌ ಕುರಿತು ವಿರೋಧ ಪಕ್ಷಗಳು ವ್ಯಕ್ತಪಡಿಸಿದ ಟೀಕೆ–ಟಿಪ್ಪಣಿಗಳಿಗೆ ಉತ್ತರಿಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ಒಂದಿಷ್ಟು ನಗೆ ಚಟಾಕಿ ಹಾರಿಸಿದರು. ಬಿಜೆಪಿಯ ಗೋ. ಮಧುಸೂದನ್, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರ ಕಾಲೆಳೆದರು!

‘ವಿರೋಧ ಪಕ್ಷ ಕಾಂಗ್ರೆಸ್‌ ಎಂದು ಏಳು ವರ್ಷಗಳಿಂದ ಹೇಳಿ, ಹೇಳಿ ಅಭ್ಯಾಸವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಸಾಂದರ್ಭಿಕವಾಗಿ ಹೇಳಿದರು. ಈ ಸಂದರ್ಭದಲ್ಲಿ ಮಧುಸೂದನ್, ‘ಸಿದ್ದರಾಮಯ್ಯ ಅವರಿಗೆ ನಮಗಿಂತ ಹೆಚ್ಚಿನ ವಿರೋಧ ಕಾಂಗ್ರೆಸ್ಸಿನಲ್ಲಿಯೇ ಇರುವಂತಿದೆ’ ಎಂದರು.

‘ಮಧುಸೂದನ್ ಅವರು ನಿಮ್ಮ ಅಂತರಂಗದ ಶಿಷ್ಯ’ ಎಂದು ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರಿಗೆ ಹೇಳಿ ದಾಗ, ‘ನಮ್ಮ ಊರಿನವರು ಅವರು. ಸ್ವಲ್ಪ ಪ್ರೀತಿ ಅವರ ಬಗ್ಗೆ’ ಎಂದು ಸಿದ್ದರಾಮಯ್ಯ ತಮ್ಮ ‘ಶಿಷ್ಯ’ನ ಬಗ್ಗೆ ಮಮತೆ ತೋರಿಸಿದರು!

‘ಮಧುಸೂದನ್ ಮಾತ್ರ ಯಾಕೆ ನಿಮಗೆ ಶಿಷ್ಯ? ಪ್ರತಿ ಬಾರಿಯೂ ಅವರ ಹೆಸರು ಮಾತ್ರ ಹೇಳುತ್ತೀರಿ’ ಎಂದು ಸಿದ್ದರಾಮಯ್ಯ ಮಾತಿಗೆ ಬಿಜೆಪಿಯ ವಿಮಲಾ ಗೌಡ ತಕರಾರು ಎತ್ತಿದರು. ‘ನಿಮ್ಮ ಬಗ್ಗೆಯೂ ಗೌರವ ಇದೆ ಗೌಡ್ರೆ. ನಿಮ್ಮ ಮನೆಯಲ್ಲಿ 80ರ ದಶಕದಲ್ಲಿ ನಾನು ನಾಟಿ ಕೋಳಿ ಸಾರು ತಿಂದಿದ್ದೆ. ನೆನಪಿದೆಯಾ?’ ಎಂದು ಸಿದ್ದರಾಮಯ್ಯ ಹೇಳಿದರು.

‘ಅದೇನು ಕೋಳಿ ಭಾಗ್ಯವೇ?!’ ಎಂದು ಹೊರಟ್ಟಿ ಪ್ರಶ್ನಿಸಿದಾಗ, ‘ನಿಮಗೆ ಅದನ್ನು ತಿನ್ನುವ ಭಾಗ್ಯ ಇಲ್ಲ ಬಿಡಿ. ನಿಮ್ಮ ಹುಟ್ಟು ಹಾಗಿದೆ’ ಎಂದು ಸಿದ್ದರಾಮಯ್ಯ ಹಾಸ್ಯದ ಧಾಟಿಯಲ್ಲಿ ಹೇಳಿದರು.

ನಂತರ ಬಿಜೆಪಿಯ ಗಣೇಶ್ ಕಾರ್ಣಿಕ್ ಅವರತ್ತ ತಿರುಗಿ, ‘ರೀ ಕಾರ್ಣಿಕ್, ನೀವು ಇವತ್ತು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯ ರಿಗೆ ಊಟ ಹಾಕಿಸಿದಿರಂತೆ. ನಮ್ಮವರನ್ನು ಯಾಕೆ ಕರೀಲಿಲ್ಲ? ಊಟದ ವಿಚಾರ ದಲ್ಲೂ ರಾಜಕೀಯ ಮಾಡ್ತೀರಾ?’ ಎಂದು ಹುಸಿಕೋಪ ದಿಂದ ಪ್ರಶ್ನಿಸಿದರು.

ಕಾರ್ಣಿಕ್ ಮುಗುಳ್ನಗುತ್ತಿದ್ದಾಗ, ‘ನಮ್ಮ ಮಧುಸೂದನ್ ಯಾಕೆ ಬಜೆಟ್‌ ಬಗ್ಗೆ ಮಾತನಾಡಲಿಲ್ಲ ಹೇಳಿ? ನನ್ನ ಬಜೆಟ್‌ ಚೆನ್ನಾಗಿದೆ ಎಂಬುದು ಅವರಿಗೆ ಗೊತ್ತು. ಆದರೆ ಬಿಜೆಪಿಯವರಾದ ಅವರು ಅದನ್ನು ಹೇಳಲಾರರು’ ಎಂದು ಸಿದ್ದರಾಮಯ್ಯ  ಕಿಚಾಯಿಸಿದರು.
‘ನನ್ನ ಸಮಯವನ್ನು ಡಾ.ಜಿ. ಪರಮೇಶ್ವರ್ ಅವರಿಗೆ ಧಾರೆ ಎರೆದಿದ್ದೆ’ ಎಂದರು ಮಧುಸೂದನ್. ‘ಯಾಕ್ರೀ ಬೆಂಕಿ ಹಾಕೋ ಕೆಲಸ ಮಾಡ್ತೀರಿ?’ ಎಂದು ಪರಮೇಶ್ವರ್ ಪ್ರಶ್ನಿಸಿದಾಗ, ‘ಬೆಂಕಿ ಹಾಕುವ ಕೆಲಸ ಎಂದೂ ಮಾಡಿಲ್ಲ. ಬೆಂಕಿಗೆ ಪೆಟ್ರೋಲ್ ಹಾಕುವ ಕೆಲಸವನ್ನು ಆಗಾಗ ಮಾಡಿದ್ದೇನೆ’ ಎಂದು ಮಧುಸೂದನ್ ಉತ್ತರಿಸಿದರು!

‘ಸಭಾಪತಿಗಳೇ, ಉತ್ತರ ನೀಡುವ ಮುನ್ನ ಸದನದಲ್ಲಿ ತುಸು ನಗು ಹರಡಲಿ ಎಂದು ಇಷ್ಟು ಮಾತನಾಡಿದೆ’ ಎಂದ ಸಿದ್ದರಾಮಯ್ಯ, ತಮಾಷೆಗೆ ಅಂತ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT