ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಳು ದಾರಿಯಲ್ಲಿ ನಮ್ಮೂರ ಮಂದಾರ

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಚಿತ್ರದ ಛಾಯಾಗ್ರಾಹಕರನ್ನು ನಾನು ಭೇಟಿ ಮಾಡಬೇಕು. ಮುಂದಿನ ಸಲ ಬರುವಾಗ ಅವರನ್ನು ಜತೆಯಲ್ಲಿ ಕರೆದುಕೊಂಡು ಬನ್ನಿ’.
‘ಪ್ರಕೃತಿ’ ಸಿನಿಮಾ ನೋಡಿದ ನಂತರ ಆ ಚಿತ್ರದ ನಿರ್ದೇಶಕ ಪಂಚಾಕ್ಷರಿ ಅವರಿಗೆ ಯು.ಆರ್‌. ಅನಂತಮೂರ್ತಿ ಅವರು ಹೇಳಿದ ಮಾತಿದು.

ಆ ಛಾಯಾಗ್ರಾಹಕ ಭೇಟಿ ಆದಾಗ, ‘ಎಂಥಾ ಅದ್ಭುತ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದೀಯಾ. ನಾನು ಓಡಾಡಿದ ಸ್ಥಳಗಳನ್ನೆಲ್ಲ ತುಂಬಾ ಚೆನ್ನಾಗಿ ಕಾಣಿಸಿದ್ದೀಯಾ’ ಎಂದು ಅನಂತಮೂರ್ತಿ ಅವರು ಮೆಚ್ಚಿಕೊಂಡು ತಬ್ಬಿಕೊಂಡರಂತೆ. ಹೀಗೆ ಅನಂತಮೂರ್ತಿ ಅವರಿಂದ ಮೆಚ್ಚುಗೆಯ ಅಪ್ಪುಗೆ ಪಡೆದ ಪುಳಕ ರವಿಕುಮಾರ್ ಸನಾ ಅವರದು.

‘ಪ್ರಕೃತಿ’ ಚಿತ್ರದಲ್ಲಿ ಮಲೆನಾಡನ್ನು ಅದ್ಭುತವಾಗಿ ಸೆರೆಹಿಡಿದ ರವಿಕುಮಾರ್‌ ಮೂಲತಃ ಹೈದ್ರಾಬಾದ್‌ನವರು. ಆದರೆ ಅವರು ಬೆಂಗಳೂರಿಗರಾಗಿ, ಕನ್ನಡಿಗರಾಗಿ ದಶಕಗಳೇ ಕಳೆದಿವೆ. ತಮ್ಮ ಇರುವನ್ನು ಚಿತ್ರಿಕೆಗಳ ಮೂಲಕ ಸಾಬೀತುಪಡಿಸುವ ಪ್ರತಿಭೆ ಅವರದು. ‘ಒಲವೇ ­­ಮಂದಾರ’ ಮತ್ತು ‘ಉಗ್ರಂ’ ಅವರ ಪ್ರಖರ ಪ್ರತಿಭೆಗೆ ಉದಾಹರಣೆಗಳು.

ಹಲವರು ಮೆಚ್ಚಿಕೊಂಡ ‘ಪ್ರಕೃತಿ’ ಸಿನಿಮಾದ ಛಾಯಾಗ್ರಹಣಕ್ಕೆ ರಾಜ್ಯ ಪ್ರಶಸ್ತಿಯ ಗರಿ ಖಂಡಿತಾ ದೊರೆಯುತ್ತದೆ ಎಂದು ರವಿಕುಮಾರ್‌ ನಿರೀಕ್ಷಿಸಿದ್ದರು. ಆದರೆ, ನಿರೀಕ್ಷೆ ಸುಳ್ಳಾಯಿತು. ‘ಉತ್ತಮ ಕೆಲಸ ಮಾಡಿದರೂ ಗುರ್ತಿಸುವುದಿಲ್ಲ’ ಎನ್ನುವ ಬೇಸರ ಅವರಿಗಿದೆ. 

‘ಪ್ರಕೃತಿ’ ತಂದ ನಿರಾಸೆ
‘‘ಪ್ರಕೃತಿ ಚಿತ್ರಕ್ಕೆ 20 ದಿನ ಕೆಲಸ ಮಾಡಿದ್ದೇನೆ. ಒಪ್ಪಿಕೊಂಡ ದೊಡ್ಡ ಚಿತ್ರವೊಂದನ್ನು ಕೈಬಿಟ್ಟು, ಪಡೆದಿದ್ದ ಮುಂಗಡ ಹಣ ವಾಪಸ್‌ ಮಾಡಿ ಈ ಸಿನಿಮಾ ಒಪ್ಪಿಕೊಂಡೆ. ಆದರೆ, ನನ್ನ ಕೆಲಸವನ್ನು ಪ್ರಶಸ್ತಿಯ ಆಯ್ಕೆ ಸಮಿತಿ ಅವರು ಗುರ್ತಿಸಲಿಲ್ಲ. ರಾಷ್ಟ್ರೀಯ ಚಲನಚಿತ್ರ ಆಯ್ಕೆ ಸಮಿತಿ ಸದಸ್ಯರೊಬ್ಬರು ಪೋನ್ ಮಾಡಿ ಛಾಯಾಗ್ರಹಣ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರು.

ರಾಜ್ಯದ ಆಯ್ಕೆ ಸಮಿತಿ  ಬಗ್ಗೆ ಹೇಳಬೇಕಾದ್ದೇನೂ ಇಲ್ಲ! ಗಿರೀಶ್ ಕಾಸರವಳ್ಳಿ, ಅನಂತಮೂರ್ತಿ ಅವರಂಥ ಹಿರಿಯರು ಮೆಚ್ಚಿದ್ದಷ್ಟೇ ನನ್ನ ಪಾಲಿಗೆ ಉಳಿದ ಖುಷಿ’’ ಎನ್ನುತ್ತಾರೆ ರವಿಕುಮಾರ್.ಅಂದಹಾಗೆ, ಪುಕ್ಕಟ್ಟೆ ಕೆಲಸ ಮಾಡಿದರೂ ಪರವಾಗಿಲ್ಲ, ವರ್ಷಕ್ಕೊಂದು ಉತ್ತಮ ಕಲಾತ್ಮಕ ಕನ್ನಡ ಚಿತ್ರಕ್ಕೆ ಸೊಬಗು ತುಂಬಬೇಕು ಎನ್ನುವ ಹಂಬಲ ಅವರಲ್ಲಿದೆ. ‘ಪ್ರಕೃತಿ’ ಸಿನಿಮಾದ ಕೆಲಸಕ್ಕೆ ಅವರು  ಒಂದು ಪೈಸೆ ಸಂಭಾವನೆಯನ್ನೂ ತೆಗೆದುಕೊಂಡಿಲ್ಲ!

ಕಳೆದ ನಾಲ್ಕು ತಿಂಗಳಿಂದ ಹೈದ್ರಾಬಾದ್‌ನಲ್ಲಿ ತೆಲುಗಿನ ‘ತ್ರಿಪುರ’ ಚಿತ್ರದ ಶೂಟಿಂಗ್‌ನಲ್ಲಿರುವ ರವಿ, ಕನ್ನಡ ನೆಲಕ್ಕೆ ಆಗಾಗ್ಗೆ ಬಂದು ಹೋಗುವ ಅತಿಥಿ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ ‘ಇಷ್ಟಕಾಮ್ಯ’ ಕಾದಂಬರಿ ಆಧಾರಿತ ಚಿತ್ರಕ್ಕೆ ಅವರು ಕ್ಯಾಮೆರಾ ಹಿಡಿಯಲಿದ್ದಾರೆ. ‘ನನಗೆ ನಿಮ್ಮ ಕ್ವಾಲಿಟಿ ಬೇಕು. ನಿಮ್ಮ ಡೇಟ್ಸ್‌ಗೆ ನಾನು ಚಿತ್ರೀಕರಣದ ದಿನ ಹೊಂದಿಸಿಕೊಳ್ಳುವೆ ಚಿತ್ರೀಕರಣ ಮಾಡೋಣ’ ಎಂದು ನಾಗತಿಹಳ್ಳಿ ಅವರು ಹೇಳಿದ್ದು ರವಿಕುಮಾರ್‌ ಅವರಿಗೆ ಖುಷಿ ತಂದಿದೆ.

‘ಭಾಷೆಯ ಗಡಿ ರೇಖೆಗಳನ್ನು ನಾನು ಹಾಕಿಕೊಳ್ಳುವುದಿಲ್ಲ. ನಿಮ್ಮ ಕೆಲಸ ನಮಗೆ ಬೇಕು ಎನ್ನುವವರ ಜತೆ ಕೆಲಸ ಮಾಡುವೆ’ ಎನ್ನುವ ರವಿಕುಮಾರ್‌ ಅವರಿಗೆ ಪಂಜಾಬಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರಿದೆ. ಕಡಿಮೆ ಅವಧಿಯಲ್ಲಿ ಅಲ್ಲಿ ಮಾಡಿರುವ ಮೂರು ಸಿನಿಮಾಗಳು ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಆ ಮೂರು ಚಿತ್ರಗಳ ನಿರ್ಮಾಪಕರು ಒಬ್ಬರೇ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದ್ದ ಸಾನಾ ಅವರ ಚಮತ್ಕಾರಿ ದೃಶ್ಯ ಸೆರೆಯನ್ನು ಕಂಡು ಪಂಜಾಬಿ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಅವಕಾಶ ನೀಡಿದ್ದಾರೆ. 

ಕಾಸರವಳ್ಳಿ ಪ್ರಭಾವ
ಗಿರೀಶ ಕಾಸರವಳ್ಳಿ ಅವರ ಬಳಿ ಸ್ಥಿರ ಛಾಯಾಗ್ರಾಹಕರಾಗಿ ರವಿಕುಮಾರ್ ಕೆಲಸ ಮಾಡಿದ್ದಾರೆ. ಆ ಅನುಭವ ತಮ್ಮ ಕೆಲಸವನ್ನು ಮಾಗಿಸಿದೆ ಎನ್ನುತ್ತಾರೆ. ‘ಕಾಸರವಳ್ಳಿ ಅವರು ಫ್ರೇಮ್‌ಗಳ ಮೇಲೆ ಕೆಲಸ ಮಾಡುತ್ತಾರೆ. ಸಣ್ಣ ಸಣ್ಣ ಫ್ರೇಮ್‌ಗಳಲ್ಲಿ ಹೇಗೆ ಕೆಲಸ ಮಾಡಬಹುದು ಎನ್ನುವುದನ್ನು ಅವರಿಂದ ಕಲಿತೆ’ ಎನ್ನುತ್ತಾರೆ. ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಯೋಗರಾಜ್‌ ಭಟ್ಟರ ನಿರ್ದೇಶನ ವೈಖರಿಯನ್ನು ಮೆಚ್ಚುವ ರವಿಕುಮಾರ್, ಶಶಾಂಕ್ ಅವರ ನಿರೂಪಣಾ ಶೈಲಿಯನ್ನೂ ಮೆಚ್ಚುತ್ತಾರೆ. ಕನ್ನಡದಲ್ಲಿ ಬ್ರಿಡ್ಜ್ ಮಾದರಿಯ ಚಿತ್ರಗಳಲ್ಲಿ ತೊಡಗುವ ಮನಸ್ಸು ಅವರದು.

ತೇಜಸ್ವಿ ಕಥೆಗಳ ಪ್ರಭಾವ
ರವಿಕುಮಾರ್ ಅವರು ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದ ಮೋಹಿ! ‘ತೇಜಸ್ವಿ ಸಾಹಿತ್ಯದ ಓದು ನನ್ನನ್ನು ಒಬ್ಬ ಛಾಯಾಗ್ರಾಹಕನನ್ನಾಗಿ ರೂಪಿಸಿತು’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ತೇಜಸ್ವಿ ಅವರ ಸಾಹಿತ್ಯದ ಗೀಳನ್ನು ಹತ್ತಿಸಿದ್ದು ನಿರ್ದೇಶಕ ಬಿ. ಸುರೇಶ್ ಅವರಂತೆ. ‘ನಾನು ಕೆಲಸ ಆರಂಭಿಸಿದ್ದೇ ಸುರೇಶ್ ಅವರ ಕಚೇರಿಯಿಂದ.

ನನ್ನ ಸಾಹಿತ್ಯಾಸಕ್ತಿ ನೋಡಿ, ‘ನಿನಗೆ ಬೇಕಿರುವ ಪುಸ್ತಕಗಳನ್ನು ಕೊಡುವೆ’ ಎಂದು ತೇಜಸ್ವಿ ಅವರ ಪುಸ್ತಕಗಳನ್ನು ಕೊಟ್ಟರು ಸುರೇಶ್. ಇಂದಿಗೂ ನನ್ನ ಬಳಿ ತೇಜಸ್ವಿ ಅವರ ಎಲ್ಲ ಪುಸ್ತಕಗಳಿವೆ. ಅವರು ಮಲೆನಾಡನ್ನು, ಪರಿಸರವನ್ನು ಮತ್ತು ಸನ್ನಿವೇಶಗಳನ್ನು ವರ್ಣಿಸಿರುವಂತೆ ಆ ಫ್ರೇಮ್‌ಗಳಡಿ ದೃಶ್ಯಗಳನ್ನು ಸೆರೆ ಹಿಡಿಯಲು ಯತ್ನಿಸುವೆ. ನಾನು ಸಿನಿಮಾ ನಿರ್ದೇಶಿಸಿದರೆ ಅದು ಮಲೆನಾಡಿನ ಹಿನ್ನೆಲೆಯದ್ದೇ ಆಗಿರುತ್ತದೆ’ ಎಂದು ರವಿಕುಮಾರ್ ಹೇಳುತ್ತಾರೆ. ಡಾ. ಕೆ.ಎನ್. ಗಣೇಶಯ್ಯ ಅವರ ‘ಏಳು ರೊಟ್ಟಿಗಳು’ ಅವರು ಇತ್ತೀಚೆಗೆ ಓದಿದ ಪುಸ್ತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT