ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರೆಯಾದ ನೀರಿನ ದರ

Last Updated 3 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೊದಲೇ ಸಮರ್ಪಕ ಹಾಗೂ ಶುದ್ಧ ನೀರು ಕೊಡದೆ ಸತಾ­ಯಿ­ಸುತ್ತಿರುವ ಬೆಂಗಳೂರು ಜಲಮಂಡಳಿ ಈಗ ನೀರಿನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದೆ. ದರ ಪರಿಷ್ಕರಣೆ ಪಟ್ಟಿಯ ಮೇಲೆ ಕಣ್ಣು ಹಾಯಿಸಿದರೆ ಬಡವರ ಮೇಲೆ ಈ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಕಳಕಳಿ ಇಲ್ಲ ಎನ್ನುವುದು ವೇದ್ಯ.

ಕನಿಷ್ಠ ಶುಲ್ಕದಲ್ಲಿ ಶೇ 19ರಷ್ಟು ಹೆಚ್ಚಳವನ್ನಷ್ಟೇ ಮಾಡಲಾಗಿದೆ ಎನ್ನುವ ಅಸ್ಪಷ್ಟ ಲೆಕ್ಕವನ್ನು ಕೊಡುವ ಜಲಮಂಡಳಿ, ತಿಂಗಳ ನೀರಿನ ಬಿಲ್‌ ಮೇಲೆ ಆಗುವ ಒಟ್ಟಾರೆ ಪರಿಣಾಮದ ಬಗೆಗೆ ಜಾಣ ಮೌನ ವಹಿಸಿದೆ. ಇದು­ವರೆಗೆ ಮಾಸಿಕ ₨ 100ರಷ್ಟು ಬಿಲ್‌ ಪಾವತಿಸುತ್ತಿದ್ದ ಪ್ರತಿ ಗ್ರಾಹಕ, ನೀರು, ಒಳಚರಂಡಿ ಹಾಗೂ ಸೇವಾ ದರದಲ್ಲಿ ಆಗಿರುವ ಏರಿಕೆಯಿಂದಾಗಿ ಇನ್ನು ಮುಂದೆ ₨ 170ರಷ್ಟು ಶುಲ್ಕ ಭರಿಸಬೇಕಾಗುತ್ತದೆ.

ನಿಜ, ನೂರು ಕಿ.ಮೀ. ದೂರದಿಂದ ನೀರು ತಂದು ನಗರದ ಜನರಿಗೆ ವಿತರಿಸುವುದು ಅಷ್ಟು ಸುಲಭದ ಕೆಲಸ ಅಲ್ಲ. ನಗರದ ಜಲಮೂಲಗಳಾಗಿದ್ದ ಕೆರೆಗಳನ್ನೆಲ್ಲ ಭೂ­ಗಳ್ಳರು ನುಂಗಿ ನೀರು ಕುಡಿಯಲು ಬಿಟ್ಟ ತಪ್ಪಿಗಾಗಿ ದುಬಾರಿಯಾದ ಈ ಹೊಣೆ­ಯನ್ನು ಹೊರಲೇಬೇಕಿದೆ. ಸೇವೆಯೇ ಮುಖ್ಯ ಗುರಿಯಾಗಬೇಕಾದ ಸಂಸ್ಥೆಗಳು ಸಹ ಲಾಭ–ನಷ್ಟದ ತಕ್ಕಡಿಯನ್ನು ಹಿಡಿದು ನಿಂತಾಗ ನಾಗರಿಕರೆಲ್ಲ ಗ್ರಾಹಕರಾಗಿ ಕಾಣುತ್ತಾರೆ. ಜೀವ ಜಲವೂ ಮಾರಾಟದ ಸರಕಾಗಿ ಗೋಚರಿಸುತ್ತದೆ.

ಕಳೆದ ಒಂಬತ್ತು ವರ್ಷಗಳಿಂದ ದರ ಪರಿಷ್ಕರಣೆಯನ್ನೇ ಮಾಡಿರಲಿಲ್ಲ ಎನ್ನು­ವುದು ಜಲಮಂಡಳಿ ಸಮರ್ಥನೆ. ರಾಜಕೀಯ ಕಾರಣಗಳಿಗಾಗಿ ಇದು­ವರೆಗೆ ಸುಮ್ಮನಿದ್ದು ಈಗ ಏಕಾಏಕಿ ದೊಡ್ಡ ಹೊರೆಯನ್ನು ಜನರ ಮೇಲೆ ಹೊರಿಸಿರುವ ಕ್ರಮ ನ್ಯಾಯಸಮ್ಮತವಲ್ಲ; ಸಮರ್ಥನೆಗೂ ಅರ್ಹವಲ್ಲ.

ಜಲ ಸಂಗ್ರಹಾಗಾರಗಳ ಶೇಖರಣೆ ಪ್ರಮಾಣಕ್ಕೂ ಪೂರೈಕೆಯಾಗುವ ನೀರಿಗೂ ತಾಳೆ ಆಗದಿರುವುದು ಇಂದು–ನಿನ್ನೆಯ ವಿದ್ಯಮಾನ ಅಲ್ಲ. ಪೂರೈಕೆ­ಯಾ­ಗುವ ಶೇ 48ರಷ್ಟು ಪ್ರಮಾಣದ ನೀರಿಗೆ ಲೆಕ್ಕವೇ ಇಲ್ಲ ಎಂದು ಸ್ವತಃ ಮುಖ್ಯ­ಮಂತ್ರಿ ಹೇಳಿದ್ದಾರೆ. ಆ ನೀರಿಗೂ ಶುಲ್ಕ ವಿಧಿಸುವಂತಾಗಿದ್ದರೆ ಈಗ ದರ ಏರಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಹಳೆಯದಾದ ಕೊಳವೆಗಳಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ವಲಯಗಳಲ್ಲಿ ನಲ್ಲಿ ಸಂಪರ್ಕ ಪಡೆದವರು ಮೀಟರ್‌ ಅಳ­ವಡಿಕೆಗೆ ಆಸ್ಪದ ನೀಡದೆ ಬಿಟ್ಟಿಯಾಗಿ ನೀರು ಪಡೆಯುತ್ತಿದ್ದಾರೆ. ಅಂತಹ ಜನ­ರಿಗೆ ರಾಜಕಾರಣಿಗಳೂ ಬೆಂಬಲವಾಗಿ ನಿಂತಿದ್ದಾರೆ.

ಸಾಲ ಕೊಟ್ಟ ಅಂತರ­ರಾಷ್ಟ್ರೀಯ ಬ್ಯಾಂಕ್‌ಗಳ ತಾಳಕ್ಕೆ ತಕ್ಕಂತೆ ಕುಣಿದು ದರ ಹೆಚ್ಚಿಸಲು ತೋರುವ ಉತ್ಸಾಹವನ್ನು ಜಲಮಂಡಳಿ ಇಂತಹ ಮಾಫಿಯಾವನ್ನು ಮಟ್ಟ ಹಾಕುವಲ್ಲಿ ತೋರಬೇಕು. ಶುಲ್ಕ ಹೆಚ್ಚಳದ ಮೇಲಿರುವ ಆತುರ ಶುದ್ಧ ನೀರಿನ ಪೂರೈಕೆ­ಯಲ್ಲೂ ಇರಬೇಕು.

ಜನರೂ ಅಷ್ಟೇ. ನೀರಿನಂತಹ ಅಮೂಲ್ಯ ನೈಸರ್ಗಿಕ ಸಂಪ­ನ್ಮೂಲವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾ ಹೋದರೆ ಅದರಿಂದ ತಮಗೇ ಅಪಾಯ ಎಂಬುದನ್ನು ಅರಿಯಬೇಕು. ಮಿತವ್ಯಯದ ಮೂಲಕ ಜಲ­ಮಂಡಳಿ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು. ಜಲಾಶಯಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಮಳೆ ನೀರಿನ ಸಂಗ್ರಹದತ್ತ ತುರ್ತಾಗಿ ಗಮನಹರಿಸಬೇಕು. ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಿ ವರ್ಷ­ಗಳೇ ಉರುಳಿದ್ದರೂ ಶುದ್ಧ ನೀರು ಪಡೆಯುವ ಈ ಸುಲಭ ವಿಧಾನದ ಕಡೆಗೆ ಜನ ಒಲವು ತೋರದಿರುವುದು ವಿಷಾದದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT