ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನ, ಹೊಸ ತುಡಿತಗಳ ನಡುವೆ...

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಭಾರತ ಇತ್ತೀಚಿನ ವರ್ಷಗಳಲ್ಲಿ ಫುಟ್‌ಬಾಲ್‌ ರಂಗದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಹೊಸ ಕನಸು ಮತ್ತು ಹೊಸ ತುಡಿತಗಳ ಬೆನ್ನತ್ತಿ ಸಾಗುತ್ತಿದೆ. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಮತ್ತು ಐ ಲೀಗ್‌ ಎಂಬ ಎರಡು ಫುಟ್‌ಬಾಲ್ ಟೂರ್ನಿಗಳು ಹೊಸ ಆಸೆಗಳನ್ನು ಕಟ್ಟಿಕೊಟ್ಟಿವೆ.

ಫುಟ್‌ಬಾಲ್‌ನಲ್ಲಿ ವೃತ್ತಿಪರತೆ ಹೆಚ್ಚಿಸಬೇಕು ಎನ್ನುವ ಕಾರಣಕ್ಕಾಗಿ ಆರಂಭವಾದ ಐ ಲೀಗ್‌ ಈಗ ದೇಶದ ಪ್ರತಿಷ್ಠಿತ ಟೂರ್ನಿಯೆನಿಸಿದೆ. ಡುರಾಂಡ್‌ ಕಪ್‌, ಸಂತೋಷ್‌ ಟ್ರೋಫಿ, ಫೆಡರೇಷನ್ ಕಪ್‌ ಹೀಗೆ ಸಾಕಷ್ಟು ದೇಶಿಯ ಟೂರ್ನಿಗಳಿದ್ದರೂ, ಐ ಲೀಗ್‌ಗೆ ಅಗ್ರಸ್ಥಾನದ ಗೌರವವಿದೆ.

ಆದರೆ, ಐ ಲೀಗ್ ಆರಂಭದ ಕಾಲವನ್ನು ಒಮ್ಮೆ ಮೆಲುಕು ಹಾಕಿದರೆ ಇದು ಬೆಳೆದು ಬಂದ ಹಾದಿ ಹೇಗಿತ್ತು ಎಂಬುದು ಗೊತ್ತಾಗುತ್ತದೆ. 12 ವರ್ಷಗಳ ಹಿಂದೆ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ ಎನ್ನುವ ಹೆಸರಿನಿಂದ ಆರಂಭವಾದ ಟೂರ್ನಿ ಅದರ ಮುಂದಿನ ವರ್ಷದ ವೇಳೆಗೆ ಐ ಲೀಗ್‌ ಎಂದು ಬದಲಾಯಿತು. ಕ್ರೀಡಾಂಗಣದ ಸೌಲಭ್ಯವಿಲ್ಲದಿದ್ದರೂ ಕ್ಲಬ್‌ಗಳು ಐ ಲೀಗ್‌ನಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡಿದ್ದವು. ಅನೇಕ ಸಮಸ್ಯೆಗಳ ನಡುವೆಯೂ ಫುಟ್‌ಬಾಲ್‌ ಪ್ರೀತಿ ಉತ್ಕಟವಾಗಿ ಹರಿದಿತ್ತು.

ಆಗ ಆಟಗಾರರಿಗೆ ಹಣ ನೀಡಲು ಐ ಲೀಗ್‌ ಕ್ಲಬ್‌ಗಳಿಗೆ ಸಾಧ್ಯವಾಗುತ್ತಿರಲಿಲ್ಲ. 2000ರ ಋತುವಿನಲ್ಲಿ ಆಟಗಾರರಿಗೆ ವೇತನ ನೀಡಲು ಕೊಚ್ಚಿ ಫುಟ್‌ಬಾಲ್‌ ಕ್ಲಬ್‌ ಬಳಿ ಹಣವೇ ಇರಲಿಲ್ಲ! ಈ ಕ್ಲಬ್‌ ₹ 2.5 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿತ್ತು. ಇಂಥ ಸಂಕಷ್ಟದಲ್ಲೂ ಅರಳಿದ ಐ ಲೀಗ್‌ ಟೂರ್ನಿಯ ದಿಕ್ಕು ಈಗ ಸಾಕಷ್ಟು ಬದಲಾಗಿದೆ. ಕ್ಲಬ್‌ಗಳು ಶ್ರೀಮಂತವಾಗಿವೆ. ಈ ಟೂರ್ನಿಯಲ್ಲಿ ಆಡುವುದು ಆಟಗಾರರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆದ್ದರಿಂದ ಆಟದ ಗುಣಮಟ್ಟವೂ ಹೆಚ್ಚಿದೆ. ತಂಡಗಳನ್ನು ಖರೀದಿಸಲು ಕಾರ್ಪೋರೇಟ್‌ ವಲಯದಲ್ಲಿ ತುಂಬಾ ಪೈಪೋಟಿಯಿದೆ.

ಕರ್ನಾಟಕದ ಫುಟ್‌ಬಾಲ್‌ ರಂಗದಲ್ಲಿ ಹೆಚ್ಚು ಹೆಸರು ಮಾಡಿರುವ ಐಟಿಐ ಮತ್ತು ಎಚ್‌ಎಎಲ್‌ ತಂಡಗಳು ಚೊಚ್ಚಲ ಐ ಲೀಗ್‌ನಲ್ಲಿ ಆಡಿದ್ದವು. ಪಿ. ಮುರಳೀಧರನ್‌, ಮನೋಹರ್‌, ಶರವಣನ್‌, ನೈಜೀರಿಯಾದ ಜಾರ್ಜ್‌ ಎಕ್ಕಾ, ಗೋಲ್‌ಕೀಪರ್‌ ಆಗಿದ್ದ ಕೇರಳದ ಫ್ರಾನ್ಸಿನ್‌ ಇಗ್ನೇಷಿಯಸ್‌ ಅವರಿದ್ದ ರಾಜ್ಯ ಐಟಿಐ ತಂಡ ಆಗಿನ ಬಲಿಷ್ಠ ತಂಡವೆನಿಸಿತ್ತು.

‘ದೇಶದ ಮೊದಲ ಐ ಲೀಗ್ ಟೂರ್ನಿಯಲ್ಲಿ ಆಡಿದ ಬಗ್ಗೆ ಹೆಮ್ಮೆಯಿದೆ. ಐಟಿಐಯಲ್ಲಿ ಉದ್ಯೋಗಿಯಾಗಿ ದ್ದರಿಂದ ₹ 10 ರಿಂದ 15 ಸಾವಿರದವರೆಗೆ ಮಾತ್ರ ವೇತನ ಸಿಗುತ್ತಿತ್ತು. ಆದರೆ, ಆಗ ನಾವು ಹಣಕ್ಕಿಂತ ಫುಟ್‌ಬಾಲ್‌ ಆಡುವುದೇ ಪ್ರತಿಷ್ಠೆ ಎಂದು ಕೊಂಡಿದ್ದೆವು. ಆದರೆ, ಈಗಿನ ಪರಿಸ್ಥಿತಿ ಬದಲಾಗಿದೆ. ಆಟಗಾರರು ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಸಾಕಷ್ಟು ಕ್ಲಬ್‌ಗಳು ಇರುವ ಕಾರಣ ಅವಕಾಶವೂ ಹೆಚ್ಚಿದೆ’ ಎಂದು ಐಟಿಐ ತಂಡದ ಮಾಜಿ ಆಟಗಾರ ಪಿ. ಮುರಳೀಧರನ್‌ ಹಳೆಯ ನೆನಪುಗಳನ್ನು ‘ಪ್ರಜಾವಾಣಿ’ ಎದುರು ಬಿಚ್ಚಿಟ್ಟರು.
ಐಟಿಐ ಮತ್ತು ಎಚ್‌ಎಎಲ್‌ ತಂಡಗಳ ಬಳಿಕ ಐ ಲೀಗ್‌ನಲ್ಲಿ ಹೊಸ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌. ಕೊಚ್ಚಿ ಮೂಲದ ಈ ತಂಡ ಕರ್ನಾಟಕವನ್ನು ಪ್ರತಿನಿಧಿಸುತ್ತಿತ್ತು. ಬಿಇಎಂಎಲ್‌ ಮತ್ತು ಸೌತ್‌ ಯುನೈಟೆಡ್‌ ತಂಡಗಳು ಐ ಲೀಗ್‌್ ಎರಡನೇ ಡಿವಿಷನ್‌ನಲ್ಲಿ ಆಡಿದವಾದರೂ ಮೊದಲ ಹಂತಕ್ಕೆ ಏರಲು ಸಾಧ್ಯವಾಗಲಿಲ್ಲ.

ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ಎಚ್ಎಎಲ್‌ ತಂಡ ಐ ಲೀಗ್‌ನಲ್ಲಿ ಭರವಸೆಯನ್ನು ಹುಟ್ಟು ಹಾಕಿತ್ತು. ಆದರೆ, ಟೂರ್ನಿಯಿಂದ ಟೂರ್ನಿಗೆ ತಂಡದ ಕಳಪೆ ಪ್ರದರ್ಶನ ಹೆಚ್ಚುತ್ತಲೇ ಹೋಯಿತು. ಇಡೀ ಟೂರ್ನಿಯ 18 ಪಂದ್ಯಗಳಲ್ಲಿ ಒಂದೆರಡಷ್ಟೇ ಗೆಲುವು ಪಡೆಯುತ್ತಿದ್ದ ಎಚ್‌ಎಎಲ್‌ ಐ ಲೀಗ್‌ನಿಂದ ಹೊರಬಿತ್ತು. ಈ ತಂಡ ಮಣಿವಣ್ಣನ್‌, ಮುರಳೀಧರನ್‌, ರವಿ ಕುಮಾರ್‌, ಕ್ಸೇವಿಯರ್‌ ವಿಜಯ್‌ ಕುಮಾರ್‌ ಅವರಂಥ ಪ್ರತಿಭಾನ್ವಿತರನ್ನು ಹೊಂದಿತ್ತಾದರೂ ಮತ್ತೆ ಐ ಲೀಗ್ ಅಂಗಳಕ್ಕೆ ಕಾಲಿಡಲು ಸಾಧ್ಯವಾಗಿಲ್ಲ.
ಹೊಸ ಅಲೆ: ಕರ್ನಾಟಕದಲ್ಲಿ ಫುಟ್‌ಬಾಲ್‌ಗೆ ವಿಶೇಷ ಸ್ಥಾನವಿದೆ. ಈ ಆಟದ ಮೇಲೆ ಅಪಾರ ಪ್ರೀತಿಯೂ ಇದೆ. ಇಲ್ಲಿನ ಅಭಿಮಾನಿಗಳ ಆಸೆಯನ್ನು ಚೆನ್ನಾಗಿ ಅರಿತಿದ್ದ ಜೆಎಸ್‌ಡಬ್ಲ್ಯು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಆರಂಭಿಸಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಆ್ಯಷ್ಲೆ ವೆಸ್ಟ್‌ವುಡ್‌ ಅವರನ್ನು ಕೋಚ್‌ ಆಗಿ ನೇಮಿಸಿತು.

ರಾಬಿನ್‌ ಸಿಂಗ್‌, ಪವನ್‌ ಕುಮಾರ್‌, ನಂಜನಗೂಡು ಮಂಜು, ಸೀನ್‌ ರೂನಿ, ಸುನಿಲ್‌ ಚೆಟ್ರಿ, ಥಾಯ್‌ ಸಿಂಗ್‌, ಜೋಶ್‌ ವಾಕರ್ ಮತ್ತು ಗುರ್ಜಿತ್‌ ಸಿಂಗ್ ಅವರಂಥ ಪ್ರತಿಭಾನ್ವಿತರನ್ನು ಹೊಂದಿರುವ ಬಿಎಫ್‌ಸಿ ತನ್ನ ಚೊಚ್ಚಲ ಟೂರ್ನಿಯಲ್ಲಿಯೇ ಐ ಲೀಗ್‌ ಚಾಂಪಿಯನ್ ಆಯಿತು. ಫೆಡರೇಷನ್‌ ಕಪ್‌ನಲ್ಲೂ ಟ್ರೋಫಿ ಎತ್ತಿ ಹಿಡಿಯಿತು. ಆದ್ದರಿಂದ ಬಿಎಫ್‌ಸಿ ರಾಜ್ಯದಲ್ಲಿ ಹೊಸ ಆಶಾಕಿರಣವಾಗಿ ಗೋಚರಿಸಿದೆ.
ಯಾವುದು ಹೆಚ್ಚು: ಹೋದ ವರ್ಷ ನಡೆದ ಐಎಸ್‌ಎಲ್‌ ಟೂರ್ನಿ  ಐ ಲೀಗ್‌ಗಿಂತಲೂ ಹೆಚ್ಚು ಪ್ರಚಾರ ಪಡೆಯಿತು. ಆದ್ದರಿಂದ ಐ ಲೀಗ್‌ಗಿಂತಲೂ ಐಎಸ್‌ಎಲ್‌ ಶ್ರೇಷ್ಠ ಎನ್ನುವ ವಿಷಯ ಈಗ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಐಪಿಎಲ್‌ ಮಾದರಿಯನ್ನೇ ಅನುಕರಿಸಿ ಸಾಕಷ್ಟು ಲೀಗ್‌ಗಳು ಹುಟ್ಟಿಕೊಂಡವು. ಅದರಲ್ಲಿ ಐಎಸ್‌ಎಲ್‌ ಕೂಡಾ ಒಂದು. ಇಂಗ್ಲಿಷ್‌, ಪೋರ್ಚುಗಲ್‌, ಚಾಂಪಿಯನ್ಸ್‌, ಸ್ಪೇನ್‌, ಜರ್ಮನಿ ಮತ್ತು ಇಟಲಿ ಪ್ರೀಮಿಯರ್‌ ಲೀಗ್‌ಗಳಂಥ ಮಹತ್ವದ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರು ಐಎಸ್‌ಎಲ್‌ನಲ್ಲಿ ಆಡಿದರು. ಸಿನಿ ತಾರೆಯರು, ಕ್ರಿಕೆಟಿಗರು ಐಎಸ್‌ಎಲ್‌ ತಂಡಗಳನ್ನು ಖರೀದಿಸಿದ್ದು ಲೀಗ್‌ ಖ್ಯಾತಿ ಪಡೆಯಲು ಕಾರಣವಾಯಿತು.

ಐಎಸ್‌ಎಲ್‌ ಆರಂಭವಾಗಿದ್ದು ಭಾರತದ ಫುಟ್‌ಬಾಲ್‌ ವಲಯಕ್ಕೆ ಸಂತಸದ ಸುದ್ದಿಯೇ. ಯುರೋಪಿಯನ್ ಶೈಲಿಯ ಆಟವನ್ನೇ ರೂಢಿಸಿಕೊಂಡ ಆಟಗಾರರು ಲೀಗ್‌ನಲ್ಲಿ ಇದ್ದರು. ಅವರೊಂದಿಗೆ ಆಡಿ, ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಭಾರತದ ಆಟಗಾರರಿಗೆ ಉತ್ತಮ ವೇದಿಕೆಯೆನಿಸಿತು.

‘ವಿದೇಶಿ ಆಟಗಾರರ ಪಾದರಸದಂತ ವೇಗ, ಕಿಕ್‌ ಮಾಡುವ ಶೈಲಿ, ಗೋಲು ಗಳಿಸಲು ಹೂಡುವ ತಂತ್ರ, ಫಾರ್ವರ್ಡ್‌ ಆಟಗಾರರ ಚುರುಕುತನ ಹೀಗೆ ಪ್ರತಿ ವಿಷಯವನ್ನೂ ಕಲಿಯಲು ಐಎಸ್‌ಎಲ್‌ ನೆರವಾಗಿದೆ. ಪರಿಣತ ಆಟಗಾರರ ಜೊತೆ ಆಡಲು ಅವಕಾಶ ಸಿಕ್ಕಿದ್ದರಿಂದ ನಮ್ಮ ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿದೆ’ ಎಂದು ಎಚ್‌ಎಎಚ್‌ ತಂಡದ ಮಾಜಿ ಆಟಗಾರ ಕ್ಸೇವಿಯರ್‌ ವಿಜಯ್ ಕುಮಾರ್‌ ಅನಿಸಿಕೆ ಹಂಚಿಕೊಂಡರು.

‘ಐಎಸ್‌ಎಲ್‌ ಭವಿಷ್ಯದಲ್ಲಿ ಎತ್ತರಕ್ಕೇರುವುದಂತೂ ನಿಜ. ಆದರೆ, ವಿದೇಶಿ ಆಟಗಾರರಿಗೆ ಅವಕಾಶ ಹೆಚ್ಚು. ಇದರಿಂದ ಸ್ಥಳೀಯ ಪ್ರತಿಭೆಗಳನ್ನು ಮೂಲೆಗುಂಪು ಮಾಡಿದಂತೆ ಆಗುತ್ತದೆ. ಆದ್ದರಿಂದ ಬೆಂಗಳೂರಿನ ತಂಡವೂ ಇರಬೇಕಿತ್ತು. ಇದರಿಂದ ರಾಜ್ಯದಲ್ಲಿ ಲೀಗ್‌ಗೆ ಮತ್ತಷ್ಟು ಪ್ರಚಾರ ಸಿಗುತ್ತಿತ್ತು. ಮುಂದಿನ ಸಲ ಯಾರಾದರೂ ಬೆಂಗಳೂರು ತಂಡ ಖರೀದಿಸಲಿ’ ಎಂದು ಐ ಲೀಗ್‌ನಲ್ಲಿ ಆಡಿದ್ದ ಎಚ್‌ಎಎಲ್ ತಂಡದ ಆರ್‌.ಸಿ. ಪ್ರಕಾಶ್‌ ಅಭಿಪ್ರಾಯಪಟ್ಟರು.

ಐಎಸ್‌ಎಲ್‌ ಮತ್ತು ಐ ಲೀಗ್‌ ನಡುವೆ ಹೆಚ್ಚು ಬದಲಾವಣೆಗಳು ಇಲ್ಲವಾದರೂ, ಈ ಎರಡೂ ಟೂರ್ನಿಗಳು ಭಾರತದ ಫುಟ್‌ಬಾಲ್‌ನಲ್ಲಿ ಹೊಸ ಅಲೆಗೆ ಕಾರಣವಾಗಿವೆ. ಎಲ್ಲಿಯೇ ಐ ಲೀಗ್‌ ಪಂದ್ಯಗಳು ನಡೆಯಲಿ ಕ್ರೀಡಾಂಗಣ ಭರ್ತಿಯಾಗಿರುತ್ತದೆ. ಯಾವ ಟೂರ್ನಿ ಶ್ರೇಷ್ಠ ಎನ್ನುವ ಚರ್ಚೆಗಿಂತಲೂ ಹೆಚ್ಚಾಗಿ ಭಾರತದ ಫುಟ್‌ಬಾಲ್‌ ಆಟಗಾರರು ಹೊಸತನದತ್ತ ತುಡಿಯುತ್ತಿರುವುದು ಖುಷಿಯ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT