ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತು ಹಳತರ ನಡುವೆ...

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೊರಿಯನ್‌ ಕಾರು ತಯಾರಿಕಾ ಕಂಪೆನಿ ಹ್ಯುಂಡೈ ಹೊಸ ವಿನ್ಯಾಸದ ಕಾರುಗಳ ತಯಾರಿಕೆಯಲ್ಲಿ ಸಿದ್ಧಹಸ್ತ. ಅದರಂತೆಯೇ ಇತ್ತೀಚೆಗೆ ಬಿಡುಗಡೆಗೊಂಡ ಐ20 ಎಲೀಟ್‌ ಕೂಡಾ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುವ ರೂಪಲಾವಣ್ಯ ಹೊಂದಿದೆ. ಫ್ಲೂಡಿಕ್‌ ವಿನ್ಯಾಸದ ಹೊಸ ಆಯಾಮದಲ್ಲಿ ಬಿಡುಗಡೆಗೊಂಡಿರುವ ಐ20 ಎಲೀಟ್‌ನಲ್ಲಿ ಹಲವು ಹೊಸತುಗಳಿವೆ.

2008ರಲ್ಲಿ ಬಿಡುಗಡೆಗೊಂಡ ಐ20 ಕಾರು 2012ರಲ್ಲಿ ಹೊಸ ರೂಪದಲ್ಲಿ ಭಾರತದ ಮಾರು ಕಟ್ಟೆಗೆ ಮರು ಪ್ರವೇಶ ಪಡೆಯಿತು. ಆದರೆ ಇದೀಗ 2ನೇ ತಲೆಮಾರಿನ ಐ20ಗೆ ಎಲೀಟ್‌ ಎಂಬ ಹೆಸರು ಜೋಡಿಸಿ ಮತ್ತೆ ಮಾರುಕಟ್ಟೆಗೆ ಬಿಡಲಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ಐ10ನ ಮುಂದು ವರಿದ ಮಾದರಿಯಂತೆ ಐ20 ಇರುವುದು ಸ್ಪಷ್ಟ. ಐ20 ದೇಹದ ಮೃದುವಾದ ಅಂಕುಡೊಂಕುಗಳು ಈಗ ಕಡಿದಾಗಿವೆ. ಹೊರ ಮೈ ಅಳತೆ ಈಗ ಕೊಂಚ ಉತ್ತಮ. ಅಗಲ ಹಾಗೂ ಚಕ್ರಗಳ ಅಳತೆ ಉತ್ತಮವಾಗಿದೆ.

ಹೊಸ ವಿನ್ಯಾಸದ ಹೆಡ್‌ಲೈಟ್‌ನಲ್ಲಿ ಸಮಕಾಲೀನ ಹ್ಯಾಲೋಜೆನ್‌ ಬಲ್ಬ್‌ ಹಾಗೂ ಇಂಡಿಕೇಟರ್‌ ಅಳವಡಿಸಲಾಗಿದೆ. ಮೇಲ್ಭಾಗದ ಗ್ರಿಲ್‌ಗೆ ಕಪ್ಪು ಬಣ್ಣದ ಹೊಸ ಬಗೆಯ ಹೆಚ್ಚುವರಿ ಗ್ರಿಲ್‌ ಅಳವಡಿಸಲಾಗಿದೆ. ಕೆಳಭಾಗದ್ದು ಅಷ್ಟಭುಜ ಆಕಾರದಲ್ಲಿದೆ. ದೇಹದ ಬಣ್ಣಕ್ಕೆ ಸಮವಾದ ಬಂಪರ್‌ಗೆ ಹೊಂದುವಂಥ ಫಾಗ್‌ ಲ್ಯಾಂಪ್‌ ಅಳವಡಿಸಲಾಗಿದೆ. ಆದರೆ ಇದು ಸ್ಪೋರ್ಟ್ಸ್‌ ಹಾಗೂ ಮೇಲಿನ ದರ್ಜೆಯ ಮಾದರಿಗಳಲ್ಲಿ ಮಾತ್ರ ಲಭ್ಯ. ಆರಂಭಿಕ ಮಾದರಿಯಾಗಿರುವ ‘ಎರಾ’ದಲ್ಲಿ ಕಪ್ಪು ಬಣ್ಣದ ಇಕ್ಕೆಲಗಳ ಕನ್ನಡಿಗಳು, ಬಾಗಿಲಿನ ಹಿಡಿಗಳು ಇವೆ.

ಮ್ಯಾಗ್ನಾ ಹಾಗೂ ಸ್ಪೋರ್ಟ್ಸ್‌ ಮಾದರಿಯಲ್ಲಿ ದೇಹದ ಬಣ್ಣವನ್ನೇ ಇವೂ ಹೊಂದಿವೆ. ಹಿಂಬದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ ಅಳವಡಿಸಲಾಗಿದೆ. ಹಿಂಬದಿಯ ಬಂಪರ್‌ಗೆ ಸುರಕ್ಷತೆಗೆ ಹೆಚ್ಚುವರಿ ಬ್ರೇಕ್ ದೀಪ ಅಳವಡಿಸಲಾಗಿದೆ. ಜತೆಗೆ ಪ್ರತಿಫಲಕಗಳನ್ನು ಅಳವಡಿಸಿರುವುದು ಹೊಸ ರೂಪ ನೀಡಿದಂತಾಗಿದೆ. ಕಾರಿನ ಉದ್ದ 10ಮಿ.ಮೀ ಕಡಿತಗೊಳಿಸಲಾಗಿದೆ. ಆದರೆ ವೀಲ್‌ಬೇಸ್‌ 45ಮಿ.ಮೀ ಹೆಚ್ಚಿಸಲಾಗಿದೆ. ಹಾಗೆಯೇ ಅಗಲವನ್ನೂ 24ಮಿ.ಮೀ ಹೆಚ್ಚಿಸಿರುವುದರಿಂದ ಒಳಭಾಗದಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಕ್ಕಂತಾಗಿದೆ. ಗ್ರೌಂಡ್‌ಕ್ಲಿಯರೆನ್ಸ್‌ 170ಮಿ.ಮೀಗೆ ಹೆಚ್ಚಿಸಲಾಗಿದೆ. ಹೊಸ ಕಾರಿನ ಒಟ್ಟು ಎತ್ತರ 1505ಮಿ.ಮೀ ಇದೆ.

ಸುಂದರ ವಿನ್ಯಾಸ
ಹೊಸ ಐ20 ಎಲೀಟ್‌ನ ಒಳಾಂಗಣವನ್ನು ಸುಂದರವಾಗಿ ಸಿದ್ಧಪಡಿಸಲಾಗಿದೆ. ಕಪ್ಪು ಹಾಗೂ ಬೇಝ್ ಬಣ್ಣದ ಒಳಾಂಗಣ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ. ಆದರೆ ಕಾರಿನ ದೇಹ ರಚನೆಗೆ ಬಳಸಿದ ಲೋಹ ಹಾಗೂ ಬಾಗಿಲುಗಳ ಸದೃಢತೆಯನ್ನು ಗಮನಿಸಿದಾಗ ಯುರೋಪಿಯನ್‌ ಕಾರುಗಳಾದ ಪುಂಟೊ ಹಾಗೂ ಪೋಲೊದಷ್ಟು ಗಟ್ಟಿತನವನ್ನು ನಿರೀಕ್ಷಿಸುವುದು ಕಷ್ಟ. ಉಳಿದಂತೆ ಕಾರಿನಲ್ಲಿ ಕೂತವರ ಕನಿಷ್ಠ ಅಗತ್ಯಗಳನ್ನು ಪೂರೈಸುವ ಸಲುವಾಗಿಯೇ ಕಾರ್ಡ್‌ ಹೋಲ್ಡರ್‌, ಸನ್‌ಗ್ಲಾಸ್‌ ಹೋಲ್ಡರ್‌, ಬಾಗಿಲಿನಲ್ಲಿ ಹೆಚ್ಚಿನ ಅವಕಾಶ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದೆ.

ಕಾರಿನಲ್ಲಿ ಅಳವಡಿಸಿರುವ ಸಂಗೀತ ಸಾಧನದಲ್ಲಿ 1ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಇದೆ. ಸ್ವಯಂ ಚಾಲಿತ ವಾತಾನುಕೂಲಿ ವ್ಯವಸ್ಥೆ ಹಿಂದಿನ ಆಸನಗಳಲ್ಲೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಸ್ವಯಂ ಚಾಲಿತ ವೈಪರ್‌, ಗುಂಡಿ ಒತ್ತಿ ಎಂಜಿನ್‌ ಚಾಲನೆ, ಹಿಂಬದಿ ಪಾರ್ಕಿಂಗ್‌ ಸೆನ್ಸರ್‌ ಹಾಗೂ ಕ್ಯಾಮೆರಾ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಈ ಹಿಂದಿನ ಮಾದರಿ ಯಲ್ಲಿದ್ದ ಹಗಲು ದೀಪ, ಬದಿಗಿರುವ ಏರ್‌ಬ್ಯಾಗ್‌ ಹಾಗೂ ಸನ್‌ರೂಫ್‌ಗಳನ್ನು ಎಲೀಟ್‌ ಮಾದರಿಯಲ್ಲಿ ಹಿಂಪಡೆಯಲಾಗಿದೆ.

ಹಿಂಬದಿಯ ಆಸನಕ್ಕೆ ಹೆಚ್ಚಿನ ಸ್ಥಳಾವಕಾಶ ನೀಡಿರುವುದರಿಂದ ಸಾಮಾನು ಸರಂಜಾಮು ಇಡುವ ಬೂಟ್‌ನಲ್ಲಿ 10ಮಿ.ಮೀ ಕಡಿತಗೊಳಿಸಲಾಗಿದೆ. ಹೀಗಾಗಿ ಬೂಟ್‌ನ ಒಟ್ಟು ಸ್ಥಳಾವಕಾಶ 295ಲೀ. ಹೊಂದಿದೆ. ಬಾಗಿಲು ಲಾಕ್‌ ಹಾಗೂ ಅನ್‌ಲಾಕ್‌ ಸೆಂಟರ್‌ ಕನ್ಸೋಲ್‌ನ ಮಧ್ಯದಲ್ಲಿ ನೀಡಲಾಗಿದೆ. ಗ್ರ್ಯಾಂಡ್‌ ಐ10ನಲ್ಲಿ ಪುಶ್‌ಬಟನ್‌ ಸ್ಟಾರ್ಟ್ ಗುಂಡಿ ಬಲಭಾಗದಲ್ಲಿದ್ದರೆ, ಐ20 ಎಲೀಟ್‌ನಲ್ಲಿ ಎಡದಲ್ಲಿದೆ. ಒಳಾಂಗಣ ದೊಡ್ಡದಾಗಿದೆ ಎಂದೆನಿಸುತ್ತದೆ. ಆಸನಗಳು ಆರಾಮದಾಯಕವಾಗಿದೆ.

ಪೆಟ್ರೋಲ್‌ ಮಾದರಿಯ 1.2ಲೀ ಸಾಮರ್ಥ್ಯದ ಎಂಜಿನ್‌ನ ಕಾರ್ಯಕ್ಷಮತೆ ಸಾಧಾರಣವಾಗಿದೆ. 1.4ಲೀ. ಸಾಮರ್ಥ್ಯದ ಯು2 ಡೀಸೆಲ್‌ ಎಂಜಿನ್‌ನ ಕಾರ್ಯಕ್ಷಮತೆ ಉತ್ತಮವಾಗಿದೆ. 90ಪಿಎಸ್‌ ಶಕ್ತಿ ಹಾಗೂ 220ಎನ್‌ಎಂ ಟಾರ್ಕ್‌ ಉತ್ಪಾದನೆ ಮಾಡಬಲ್ಲದು. ಈ ಮಾದರಿಯಲ್ಲಿ ಆರು ಗೇರ್‌ಗಳನ್ನು ಹೊಂದಿರುವ ಏಕೈಕ ಕಾರು ಹ್ಯುಂಡೈ ಐ20 ಎಲೈಟ್‌. ನಗರ ಸಂಚಾರಕ್ಕೆ ಆರಾಮ ಎನಿಸುವ ಈ ಕಾರು, ಹೆದ್ದಾರಿಯಲ್ಲಿ ಸಾಧಾರಣವಾಗಿದೆ. ತಿರುವು ರಸ್ತೆಯಲ್ಲಿ ನಿಯಂತ್ರಿಸಲು ತುಸು ಶ್ರಮ. ಎರಡನೇ ಗೇರ್‌ನಲ್ಲಿ ಪಿಕಪ್‌ ತೆಗೆದುಕೊಳ್ಳುವುದು ತಡ ಎನಿಸುತ್ತದೆ. ಕಾರಿನ ಸಸ್ಪೆನ್ಷನ್‌ ಉತ್ತಮವಾಗಿದೆ.

ಇಂಧನ ಕ್ಷಮತೆಯನ್ನು ಗಮನಿಸಿದಾಗ ಐ10 ಎಂಜಿನ್‌ ಹೊಂದಿರುವ ಪೆಟ್ರೋಲ್‌ ಐ20 ಇಂಧನ ಕ್ಷಮತೆ ಉತ್ತಮವಾಗಿದೆ. ಆದರೆ 1.4ಲೀ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ಹೆಚ್ಚಿನ ಹೊರೆ ಎಂದೆನಿಸಬಹುದು. ಡೀಸೆಲ್‌ ಎಂಜಿನ್‌ನ ಸಾಮರ್ಥ್ಯ 1396ಸಿಸಿ. ಡಿಒಎಚ್‌ಸಿ ವಾಲ್ವ್‌ ಸಂಯೋಜನೆಯಿಂದ ಅಭಿವೃದ್ಧಿಗೊಂಡಿರುವ ಈ ಎಂಜಿನ್‌ ಪ್ರತಿ ಲೀಟರ್‌ ಡೀಸೆಲ್‌ಗೆ 18ರಿಂದ 21 ಕಿ.ಮೀ ಇಂಧನ ಸಾಮರ್ಥ್ಯ ಹೊಂದಿದೆ (ಹೆದ್ದಾರಿಯಲ್ಲಿ). ಪೆಟ್ರೋಲ್‌ ಎಂಜಿನ್‌ 1197ಸಿಸಿ ಸಾಮರ್ಥ್ಯದ ವಿಟಿವಿಟಿ ಎಂಜಿನ್‌ ಹೊಂದಿದ್ದು, ಇದು ಡುಯೆಲ್‌ ಓವರ್‌ಹೆಡ್‌ ಕ್ಯಾಮ್‌ಶಾಫ್ಟ್‌ ವಾಲ್ವ್‌ ಸಂಯೋಜನೆಯಲ್ಲಿ ಅಭಿವೃದ್ಧಿಗೊಂಡಿದೆ.

ಇದು ಪ್ರತಿ ಲೀಟರ್‌ ಪೆಟ್ರೋಲ್‌ಗೆ 13 ಕಿ.ಮೀ. ಇಂಧನ ಕ್ಷಮತೆ ಹೊಂದಿದೆ. ಹೆದ್ದಾರಿಯಲ್ಲಿ ಇದು 18ಕಿ.ಮೀ ವರೆಗೂ ಹೋಗಬಹುದು. ಪಿಕಪ್‌ ವಿಭಾಗಕ್ಕೆ ಬಂದಲ್ಲಿ, ಪೆಟ್ರೋಲ್‌ ಎಂಜಿನ್‌ ಕಾರಿನಲ್ಲಿ 5 ಗೇರ್‌ಗಳಿವೆ. 0ಯಿಂದ 100ಕಿ.ಮೀ ವೇಗ ಪಡೆಯಲು 15ಸೆಕೆಂಡುಗಳು ಬೇಕು. ಗರಿಷ್ಠ 145 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಡೀಸೆಲ್ ಎಂಜಿನ್‌ ಕಾರು ಪ್ರತಿಗಂಟೆಗೆ 0ಯಿಂದ100 ಕಿ.ಮೀ. ವೇಗವನ್ನು 13 ಸೆಕೆಂಡು ಗಳಲ್ಲಿ ಕ್ರಮಿಸಲಿದೆ. ಅಂತೆಯೇ 165ಕಿ.ಮೀ. ವರೆಗೂ ಗರಿಷ್ಠ ವೇಗದಲ್ಲಿ ಚಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT