ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರಿಗೆ ಸೂರಿ ವೇದಿಕೆ

Last Updated 26 ಫೆಬ್ರುವರಿ 2015, 12:06 IST
ಅಕ್ಷರ ಗಾತ್ರ

ಸಿನಿಮಾದಲ್ಲಿ ಆಸಕ್ತಿ ಇದ್ದು, ಗಾಡ್‌ಫಾದರ್‌ ಇಲ್ಲದವರು ಒಂದು ಅವಕಾಶಕ್ಕಾಗಿ ನಿರ್ದೇಶಕರು, ನಿರ್ಮಾಪಕರ ಕಚೇರಿ ಬಾಗಿಲಿಗೆ ಅಲೆದಾಡುವುದು ಗಾಂಧಿನಗರದಲ್ಲಿ ಸಾಮಾನ್ಯ. ಬೆರಳೆಣಿಕೆಯಷ್ಟು ಕಲಾವಿದರು–ತಂತ್ರಜ್ಞರು ಈ ಪ್ರಯತ್ನದಲ್ಲಿ ಯಶಸ್ವಿಯಾದರೆ, ಅತ್ತ ಅವಕಾಶವೂ ಸಿಕ್ಕದೆ, ಇರುವ ಸಮಯವೂ ವ್ಯರ್ಥವಾಗಿ ಎಲ್ಲೂ ಸಲ್ಲದೆ ಹೋದ ಅದೆಷ್ಟೋ ಉದಾಹರಣೆಗಳು ಇವೆ.

ಇಂಥ ವ್ಯರ್ಥ ಪ್ರಯತ್ನಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಮಳ ಫಿಲ್ಮ್ ಫ್ಯಾಕ್ಟರಿ ಹೊಸ ಪ್ರಯತ್ನವೊಂದಕ್ಕೆ ಕೈಹಾಕಿದೆ. ಈ ಸಂಸ್ಥೆಯ ಮೊದಲ ಬಾರಿ ನಿರ್ಮಿಸುತ್ತಿರುವ ‘ಕೆಂಡಸಂಪಿಗೆ; ಭಾಗ 2 ಗಿಣಿಮರಿ ಕೇಸ್’ ಚಿತ್ರಕ್ಕಾಗಿ ರಾಜ್ಯಮಟ್ಟದ ‘ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್’ ಸ್ಪರ್ಧೆ ನಡೆಸಲು ಮುಂದಾಗಿದೆ.

‘ದುನಿಯಾ’ ಸೂರಿ ನಿರ್ದೇಶನದ ಹೊಸ ಚಿತ್ರ ‘ಕೆಂಡಸಂಪಿಗೆ; ಭಾಗ 2 ಗಿಣಿಮರಿ ಕೇಸ್’. ಪರಿಮಳ ಫಿಲ್ಮ್ ಫ್ಯಾಕ್ಟರಿ ಹಾಗೂ ಸೂರಿ ಅವರು ಸೇರಿಕೊಂಡು ಪ್ರತಿಭಾಶೋಧಕ್ಕೆ ಮುಂದಾಗಿದ್ದಾರೆ. ಚಂದನವನದ ಬಣ್ಣ ಮೆತ್ತಿಕೊಳ್ಳಲು ಹಾತೊರೆಯುತ್ತಿರುವ ಯಾರಾದರೂ ಇದರಲ್ಲಿ ಭಾಗವಹಿಸಬಹುದಾಗಿದೆ. ‘ಕನಸು ಕಾಣೋರಿಗೆ ವೆಲ್‌ಕಂ, ನಮ್ಮಲ್ಲಿದೆ ಪ್ಲಾಟ್ ಫಾರಂ’ ಎಂದು ಆಯೋಜಕರು ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ.

ಸ್ಪರ್ಧೆಯ ನಿಯಮ
ಯಾರು ಬೇಕಾದರೂ ಸ್ಪರ್ಧೆಯಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶವಿದೆ. ಕಲಾವಿದರು, ತಂತ್ರಜ್ಞರು, ಬರಹಗಾರರು ಸೇರಿದಂತೆ ಚಿತ್ರರಂಗದ ಯಾವುದೇ ವಿಭಾಗಕ್ಕೆ ಸಂಬಂಧಿಸಿದವರಿಗೂ ಇಲ್ಲಿ ಮುಕ್ತ ಅವಕಾಶವಿದೆ. ಒಂದು ಸಿನಿಮಾದಲ್ಲಿ ಬರುವ ಎಲ್ಲ ವಿಭಾಗಗಳನ್ನೂ ಇಲ್ಲಿ ಪರಿಗಣಿಸಲಾಗುತ್ತದೆ.

ಹಾಗೆಂದು ನೀವು ನೇರವಾಗಿ ಬೆಂಗಳೂರಿಗೆ ಬಂದು ವೇದಿಕೆಯ ಮೇಲೆ ನಿಮ್ಮ ನಟನೆ, ತಂತ್ರಗಾರಿಕೆ ಪ್ರದರ್ಶಿಸುವ ಅಗತ್ಯವಿಲ್ಲ. ನಿಮ್ಮ ಪ್ರತಿಭೆಯನ್ನು ಮನದಟ್ಟು ಮಾಡಿಸಲು ಗರಿಷ್ಠ ಐದು ನಿಮಿಷಗಳ ಕಿರುಚಿತ್ರ ಮಾಡಿ ಆಯೋಜಕರಿಗೆ ಕಳುಹಿಸಬೇಕು. ಚಿತ್ರೀಕರಣಕ್ಕೆ ದೃಶ್ಯ ಮಾಧ್ಯಮದ ಯಾವುದೇ ಉಪಕರಣ ಬಳಸಬಹುದಾಗಿದೆ. ಶಿಕ್ಷಣ, ಲಿಂಗ, ವಯಸ್ಸು ಅಥವಾ ಇನ್ನಾವುದೇ ಮಿತಿಯಿಲ್ಲ. ನಿಮ್ಮ ಪ್ರತಿಭೆಯಷ್ಟೇ ಗಣನೆಗೆ ಬರುವುದು.

ಇಂಥದ್ದೇ ವಿಚಾರದ ಮೇಲೆ ಕಿರುಚಿತ್ರ ತಯಾರಿಸಬೇಕು, ಇಂಥದ್ದೇ ದೃಶ್ಯಗಳಿರಬೇಕು ಎಂದೇನೂ ಇಲ್ಲ. ಆದರೆ ಕಿರುಚಿತ್ರದಲ್ಲಿ ಯಾವುದೇ ಧರ್ಮ, ಜನಾಂಗವನ್ನು ಹೀಗಳೆಯುವ ಅಂಶಗಳಿರಬಾರದು. ಯಾರ ಭಾವನೆಗಳಿಗೂ ಧಕ್ಕೆ ಉಂಟಾಗುವಂತಿರಬಾರದು. ಅಶ್ಲೀಲ ದೃಶ್ಯಗಳಿಗೆ ಎಡೆಯಿಲ್ಲ. ಅಂತರ್ಜಾಲದಿಂದ ಬಟ್ಟಿ ಇಳಿಸಿದ ದೃಶ್ಯಗಳನ್ನು ಸೇರಿಸುವಂತಿಲ್ಲ. ಈಗಾಗಲೇ ಬೇರೆ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಕಿರುಚಿತ್ರಗಳಿಗೆ ಪ್ರವೇಶವಿಲ್ಲ. ನಿರ್ಣಾಯಕರ ನಿರ್ಧಾರವೇ ಅಂತಿಮ.

ಪ್ರವೇಶ ಉಚಿತ
ಪ್ರವೇಶಕ್ಕೆಂದು ಯಾವುದೇ ಶುಲ್ಕ ಭರಿಸಬೇಕಾದ ಅಗತ್ಯವಿಲ್ಲ. ಈ ಸ್ಪರ್ಧೆಯಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಯಾರಾದರೂ ಹಣದ ಮಾತನಾಡಿದರೆ ನೇರವಾಗಿ ಸಂಯೋಜಕರಿಗೆ ತಿಳಿಸಬಹುದು. ನಿಮ್ಮ ಸಂಪೂರ್ಣ ವಿವರವೂ ಇರುವ ಕಿರುಚಿತ್ರವನ್ನು ಡಿ.ವಿ.ಡಿ ಅಥವಾ ಪೆನ್‌ಡ್ರೈವ್ ರೂಪದಲ್ಲಿ ಆಯೋಜಕರ ವಿಳಾಸಕ್ಕೆ ತಲುಪಿಸಬೇಕು. ಇವು ಮಾರ್ಚ್ 25ರ ಒಳಗಾಗಿ ಆಯೋಜಕರ ಕೈ ಸೇರಬೇಕು. ಏಪ್ರಿಲ್ 10ರಂದು ವಿಜೇತರನ್ನು ಘೋಷಣೆ ಮಾಡಲಾಗುತ್ತದೆ. ನೀವು ಖುದ್ದಾಗಿ ತಲುಪುವ ಪ್ರಸಂಗವಿಲ್ಲ.

ನಿಮ್ಮ ಜಿಲ್ಲೆಯಲ್ಲೇ ನಿಮಗೆ ಬಹುಮಾನ ಸ್ಪರ್ಧೆಯ ವಿಜೇತರು ಯಾವ ಜಿಲ್ಲೆಯವರಾಗಿರುತ್ತಾರೋ ಅದೇ ಜಿಲ್ಲೆಗೆ ಸಂಯೋಜಕರು ತೆರಳಿ ಅಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳುತ್ತಾರೆ. ಆ ಮೂಲಕ ನಿಮ್ಮವರ ಎದುರು ನಿಮ್ಮನ್ನು ‘ಲಾಂಚ್’ ಮಾಡಲಾಗುತ್ತದೆ.

ನಿಮಗೇನು ಪ್ರಯೋಜನ?
‘ಯಾರು ಬೇಕಾದರೂ ಚಿತ್ರ ಮಾಡಬಹುದು. ಒಂದು ಸಣ್ಣ ಪ್ರೋತ್ಸಾಹ ಒಂದು ದೊಡ್ಡ ಕಲಾಕೃತಿಗೆ ನಾಂದಿಯಾಗಬಹುದು’ ಎಂಬುದು ಪರಿಮಳ ಫಿಲ್ಮ್ ಫ್ಯಾಕ್ಟರಿಯ ಆಶಯ. ಹೊಸಬರನ್ನು ಈ ಕ್ಷೇತ್ರಕ್ಕೆ ಪರಿಚಯಿಸಬೇಕು ಎಂಬುದು ಅವರ ಹಂಬಲ. ಅದರಂತೆಯೇ ‘ಕೆಂಡಸಂಪಿಗೆ; ಭಾಗ 2 ಗಿಣಿಮರಿ ಕೇಸ್’ನಲ್ಲೂ ನಾಯಕ ನಾಯಕಿಯರೂ ಸೇರಿ ಬಹಳಷ್ಟು ಜನ ಹೊಸಬರನ್ನು ನಿರ್ದೇಶಕ ಸೂರಿ ಪರಿಚಯಿಸಿದ್ದಾರೆ. ಈ ಚಿತ್ರ ಒಟ್ಟು ಐದು ಸರಣಿಯಲ್ಲಿ ಬರಲಿದೆ.

ನೀವು ಈ ಕಿರುಚಿತ್ರ ಸ್ಪರ್ಧೆಯ ವಿಜೇತರಾದಲ್ಲಿ, ನಿಮ್ಮ ಕೆಲಸ ಸಂಯೋಜಕರಿಗೆ ಇಷ್ಟವಾದರೆ ‘ಕೆಂಡಸಂಪಿಗೆ’ಯ ಮುಂದಿನ ಸರಣಿಯಲ್ಲಿ ಭಾಗಿಯಾಗುವ ಅವಕಾಶ ನಿಮ್ಮದಾಗುತ್ತದೆ. ಸೂರಿ ಅವರದೇ ಆದ ‘ಕಾಗೆ ಬಂಗಾರ’, ‘ಬ್ಲ್ಯಾಕ್ ಮ್ಯಾಜಿಕ್’ ಚಿತ್ರಗಳಲ್ಲೂ ಅವಕಾಶವಿದೆ. ಅದಲ್ಲದೇ ಬೇರೆ ಬೇರೆ ಚಿತ್ರ ನಿರ್ಮಾರ್ತೃಗಳಿಗೂ ನಿಮ್ಮನ್ನು ಶಿಫಾರಸು ಮಾಡಬಹುದಾಗಿದೆ.

ವಿಳಾಸ: ಪರಿಮಳ ಫಿಲ್ಮ್ ಫ್ಯಾಕ್ಟರಿ, ಪೋಸ್ಟ್ ಬಾಕ್ಸ್ ಸಂಖ್ಯೆ ನಂ–4106, ಬೆಂಗಳೂರು. ಮೊಬೈಲ್– 8971511654
ಮಿಂಚಂಚೆ– talenthuntkendasampige@gmail.com

ಜಾಣ್ಮೆ ನೋಡುವ ಅವಕಾಶ

ಪ್ರತಿದಿನ ನನ್ನ ಕಚೇರಿ ಎದುರು ‘ಸರ್ ಕಥೆ ಬೇಕಾ’, ‘ಹಾಡು ಬರೆದಿದ್ದೀನಿ ಬೇಕಾ’, ‘ಎಂಥ ಪಾತ್ರವಾದರೂ ಸರಿ. ನಿಮ್ಮ ಚಿತ್ರದಲ್ಲಿ ಒಂದು ಅವಕಾಶ ಕೊಡಿ’ ಎಂದು ಕೇಳುವವರನ್ನು ಕಂಡು

ಸಾಕಾಗಿದೆ. ಅವರೆಲ್ಲ, ತಾನು ಆ ಸಂಸ್ಥೆಯಲ್ಲಿ ಕಲಿತಿದ್ದೇನೆ, ಈ ಕೋರ್ಸ್ ಮಾಡಿದ್ದೇನೆ ಎನ್ನುತ್ತ ಪ್ರಮಾಣಪತ್ರಗಳನ್ನು ಹಿಡಿದು ಬರುತ್ತಾರೆಯೇ ಹೊರತು ಅವರ ಕಲಾವಂತಿಕೆ, ತಾಂತ್ರಿಕ ಜಾಣ್ಮೆಯನ್ನು ನೋಡುವ ಅವಕಾಶವೇ ಇರುವುದಿಲ್ಲ. ಇಷ್ಟಕ್ಕೂ ಇದು ಕ್ರಿಯಾಶೀಲ ಕ್ಷೇತ್ರ. ಇಲ್ಲಿ ಬೇಕಿರುವುದು ಪ್ರಮಾಣಪತ್ರಗಳಲ್ಲ, ಬದಲಾಗಿ ಪಕ್ಕಾ ಪ್ರತಿಭೆ. ಚಿತ್ರರಂಗಕ್ಕೆ ಹೊಸಬರು ಬರಬೇಕು. ಆದರೆ ಅವರನ್ನು ವ್ಯವಸ್ಥಿತವಾಗಿ ಕರೆತರಬೇಕಿದೆ. ಅದೇ ಕಾರಣಕ್ಕೆ ಇಂಥ ಒಂದು ಸ್ಪರ್ಧೆ ಆಯೋಜಿಸುವ ಅನಿವಾರ್ಯವಿತ್ತು.  –ಸೂರಿ, ನಿರ್ದೇಶಕ

ಸ್ಪರ್ಧೆಯ ಹೊರತಾಗಿಯೂ...
ಸ್ಪರ್ಧೆಯ ಹೊರತಾಗಿಯೂ ಕಿರುಚಿತ್ರಗಳನ್ನು ಕಳುಹಿಸಬಹುದು. ನಿಮ್ಮ ಊರಿನಲ್ಲಿ ಈವರೆಗೂ ಚಿತ್ರೀಕರಣವಾಗದ ಸ್ಥಳಗಳಿದ್ದರೆ, ವಿಶೇಷ ಆಚರಣೆಗಳು, ಇದುವರೆಗೂ ಬೆಳಕಿಗೆ ಬಾರದ ಸ್ಥಳೀಯ ಕಲಾವಿದರು, ಗೀತ ರಚನೆಕಾರರು, ಹಾಡುಗಾರರಿದ್ದರೆ ಅವರ ಕುರಿತಾಗಿಯೂ ವಿಡಿಯೊ ಮಾಡಿ ಕಳುಹಿಸಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT