ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರ ಚಿಮ್ಮು ಹಲಗೆ–ಕೆಪಿಎಲ್‌

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಕರ್ನಾಟಕ ಪ್ರೀಮಿಯರ್‌ ಲೀಗ್ (ಕೆಪಿಎಲ್‌) ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯ ಮುಗಿಯುತ್ತ ಬಂದಿತ್ತು. ಬೆಳಗಾವಿ ಪ್ಯಾಂಥರ್ಸ್‌ ವಿರುದ್ಧ ಬಿಜಾಪುರ ಬುಲ್ಸ್‌ ಸೋಲಿನ ಅಂಚಿನಲ್ಲಿತ್ತು. ಬೇಸರದ ಗಳಿಗೆಯಲ್ಲೂ ತಂಡದ ಪ್ರಮುಖ ಬೌಲರ್‌ ಕೊಂಗಂಡ ಸಿ. ಕಾರ್ಯಪ್ಪ ಮುಖದಲ್ಲಿ ಕಳೆ ಇತ್ತು. ಡಗ್‌ ಔಟ್‌ನಲ್ಲಿ ಕುಳಿತಿದ್ದ ತಂಡದ ಮಾಲೀಕ ಕಿರಣ್‌ ಕಟ್ಟಿಮನಿ ಸೋಲಿನ ನಡುವೆಯೂ ಸಮಾಧಾನದ ನಿಟ್ಟುಸಿರು ಬಿಟ್ಟರು.

ಮೊದಲ ಬಾರಿ ಟೂರ್ನಿಯಲ್ಲಿ ಆಡಿದ ಕಾರ್ಯಪ್ಪಗೆ ತನ್ನ ಸ್ಪಿನ್‌ ವೈವಿಧ್ಯವನ್ನು ಕ್ರಿಕೆಟ್‌ ಪ್ರಪಂಚಕ್ಕೆ ತೋರಿಸಲು ಸಾಧ್ಯವಾದ ಬಗ್ಗೆ ಹೆಮ್ಮೆ ಇತ್ತು. ಕಟ್ಟಿಮನಿಗೆ ಎರಡು ಕ್ರಿಕೆಟ್‌ ತಂಡಕ್ಕಾಗುವಷ್ಟು ಹುಡುಗರನ್ನು ತಯಾರು ಮಾಡಿದ ಕುರಿತು ಅಭಿಮಾನವಿತ್ತು. ಆಫ್‌ ಸ್ಪಿನ್ನರ್ ಕಾರ್ಯಪ್ಪ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಎಂಬ ಹೆಸರಿಗೆ ಪಾತ್ರರಾಗಿದ್ದರು. ಸೆಮಿಫೈನಲ್‌ನ ಹಿಂದಿನ ದಿನ ತಂಡದವರನ್ನು ಸಂಪರ್ಕಿಸಿದ ಕೋಲ್ಕತ್ತ ನೈಟ್‌ ರೈಡರ್ಸ್‌ನ ಪ್ರತಿನಿಧಿಗಳು ಕಾರ್ಯಪ್ಪ ಬಗ್ಗೆ ವಿಚಾರಿಸಿದ್ದರು. ಇದು ಬುಲ್ಸ್‌ ತಂಡದ ಕಥೆ ಮಾತ್ರವಲ್ಲ.

ಈ ಬಾರಿಯ ಕೆಪಿಎಲ್‌ನಲ್ಲಿ ಬೆಳಗಿದ ಹೊಸ ಆಟಗಾರರ ಮೇಲೆ ಹಲವರ ಕಣ್ಣು ಬಿದ್ದಿದೆ. ಹುಬ್ಬಳ್ಳಿ ಟೈಗರ್ಸ್‌ನ ಕ್ರಾಂತಿಕುಮಾರ್‌, ಪ್ರವೀಣ್‌ ದುಬೆ ಮುಂತಾದವರಿಗೂ ಐಪಿಎಲ್‌ನ ಕೆಲ ಫ್ರಾಂಚೈಸಿಗಳಿಂದ ಕರೆ ಬಂದಿದೆ. ಮೈಸೂರು ತಂಡದ ಆಲ್‌ರೌಂಡರ್‌ ವೈಶಾಕ್‌ ವಿಜಯಕುಮಾರ್‌ ಭರವಸೆಯ ಕಿರಣ ಬೀರಿದ್ದಾರೆ. ಬೆಳಗಾವಿ ಪ್ಯಾಂಥರ್ಸ್‌ನ ಮೀರ್‌ ಕೌನೇನ್‌ ಅಬ್ಬಾಸ್‌, ದರ್ಶನ್‌ ಪಾಟೀಲ, ಭರತ್‌ ಕೆ, ರೋಹನ್ ಕದಮ್, ಅಕ್ಷಯ ಕೋಡದ್‌, ಪುಸ್ತಕ್‌ ನಾಗ್‌, ಬಳ್ಳಾರಿ ಟಸ್ಕರ್ಸ್‌ನ ಐ.ಜಿ.ಅನಿಲ್‌, ಹೊಯ್ಸಳ, ವಿಶ್ವನಾಥ, ಮೈಸೂರು ವಾರಿಯರ್ಸ್‌ನ ಕೆ.ಎನ್‌. ಭರತ್‌ ‌ ಮುಂತಾದವರು 14 ದಿನಗಳ ‘ಚುಟುಕು ಟೂರ್ನಿ’ಯಲ್ಲಿ ದಿಢೀರ್‌ ಆಗಿ ಬೆಳಕಿಗೆ ಬಂದಿದ್ದಾರೆ.


‘ಈ ಟೂರ್ನಿಯಿಂದಾಗಿ ರಾಜ್ಯ ಕ್ರಿಕೆಟ್‌ಗೆ ಕನಿಷ್ಠ 40 ಮಂದಿ ಹೊಸ, ಗಟ್ಟಿ ಪ್ರತಿಭೆಗಳು ಲಭಿಸಿದಂತಾಗಿದೆ’ ಎಂಬ ಅಭಿಪ್ರಾಯ ಮೂಡಿವೆ.
ಹೊಸಬರ ಚಿಮ್ಮು ಹಲಗೆ ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌ ಮುಂತಾದವರು ಟ್ವೆಂಟಿ–20 ಮಾದರಿಗೆ ಹೊಂದಿಕೊಳ್ಳುವುದಕ್ಕೂ ವರ್ಷಗಳಿಂದ ರಣಜಿ ಬಾಗಿಲು ತಟ್ಟುತ್ತಿರುವ ಶಿಶಿರ್‌ ಭವಾನೆಯಂಥ ಆಟಗಾರರಿಗೆ ಸಾಮರ್ಥ್ಯ ಪ್ರದರ್ಶಿಸುವುದಕ್ಕೂ ನೆರವಾಗಿರುವ ಟೂರ್ನಿ ಯುವ ಆಟಗಾರರಿಗೆ ಚಿಮ್ಮು ಹಲಗೆಯ ರೂಪದಲ್ಲಿ ಕೆಲಸ ಮಾಡಿದೆ.

ಕೆಪಿಎಲ್‌ಗೆ ಆಟಗಾರರ ಹರಾಜು ಸಂದರ್ಭದಲ್ಲಿ ಹಣದ ಹೊಳೆ ಹರಿದಿದೆ; ಆದರೆ ಇದು ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಯುವ ಆಟಗಾರರಲ್ಲಿ ನಿಕ್ಷೇಪವಾಗಿರುವ ಪ್ರತಿಭೆ ಎಂಬ ಅದಿರನ್ನು ಹೊರ ತೆಗೆದು ಚಿನ್ನ ಮಾಡುವ ಪ್ರಯೋಗ ಶಾಲೆ. ಎಲ್ಲರಿಗೆ ಆಡಲು ಅವಕಾಶ ಸಿಗದಿದ್ದರೂ ಹಿರಿಯರೊಂದಿಗೆ ಬೆರೆತು, ಮಾತನಾಡಿ ತಂತ್ರಗಳನ್ನು ಕಲಿಯಲು ಅನೇಕ ಕಿರಿಯ ಆಟಗಾರರಿಗೆ ಕೆಪಿಎಲ್‌ ಅವಕಾಶ ಒದಗಿಸಿದೆ.

ಮೈಸೂರು ವಾರಿಯರ್ಸ್‌ನಲ್ಲಿದ್ದ ವೇಗಿ, ‘ರಾಂಗ್‌ ಫೂಟ್‌’ ಬೌಲರ್‌ ಶಶಿಕುಮಾರ್‌, ಸೀಮ್‌ ಬೌಲರ್‌ ಎಂ.ಬಿ.ದರ್ಶನ್‌, ಹುಬ್ಬಳ್ಳಿ ತಂಡದಲ್ಲಿದ್ದ ಆಲ್‌ರೌಂಡರ್‌ ಆದಿತ್ಯ ಪಾಟೀಲ, ಬೆಳಗಾವಿ ತಂಡದ ಅಭಿಷೇಕ್‌ ರೆಡ್ಡಿ, ಜೀಶನ್‌ ಅಲಿ, ಬಿಜಾಪುರ ಬುಲ್ಸ್‌ನ ರಾಜಾ ನಾಯಕ್‌, ಶಶಿ ಬಿರಾದಾರ, ಬಂದೇ ನವಾಜ್‌, ಶರಣಗೌಡ ಪಾಟೀಲ ಮುಂತಾದವರು ಟೂರ್ನಿಯಲ್ಲಿ ಆಡಲಿಲ್ಲ. ಆದರೆ ಮುಂದಿನ ಟೂರ್ನಿಗೆ ಸಜ್ಜಾಗುವುದು ಹೇಗೆ ಎಂಬ ಪಾಠವನ್ನು ಡಗ್‌ಔಟ್‌ ಮತ್ತು ಡ್ರೆಸಿಂಗ್‌ ಕೊಠಡಿಯಲ್ಲಿ ಕಲಿತುಕೊಂಡಿದ್ದಾರೆ.

‘ಯಾವುದೇ ಆಟಗಾರನ ಶೈಲಿಯಲ್ಲಿ ಮಹತ್ವದ ಬದಲಾವಣೆ ತರುವುದು ಕಷ್ಟಸಾಧ್ಯ. ಆದರೆ ಪರಿಣಾಮಕಾರಿ ತಂತ್ರಗಳನ್ನು ಕಲಿಯಲು ಹಿರಿಯರ ಸಹವಾಸ ನೆರವಾಗುತ್ತದೆ. ಹೊಸ ಹುಡುಗರು ಬೇಗ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ದೊಡ್ಡವರನ್ನು ನೋಡುತ್ತಾ  ಇಂಥ ನಕಾರಾತ್ಮಕ ಗುಣಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಸ್ವಭಾವದಲ್ಲಿ ಆಗುವ ಬದಲಾವಣೆ ಆಟದ ವಿಧಾನದ ಮೇಲೆಯೂ ಪರಿಣಾಮ ಬೀರುತ್ತದೆ; ಆಟಗಾರನಲ್ಲಿ ವಿಶ್ವಾಸ ಹೆಚ್ಚಿಸುತ್ತದೆ’ ಎನ್ನುತ್ತಾರೆ ವಾರಿಯರ್ಸ್‌ನ ವ್ಯವಸ್ಥಾಪಕ ಎಂ.ಆರ್.ಸುರೇಶ.

ಕೆಪಿಎಲ್‌ ನೆಪವಾಗಿರಿಸಿಕೊಂಡು ರಾಯಚೂರು ವಲಯದಲ್ಲಿ ವಿಶೇಷ ತರಬೇತಿ, ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಬೌಲಿಂಗ್‌ ಮಷಿನ್‌ ವ್ಯವಸ್ಥೆ, ಬಿಡದಿ ಬಳಿ ಕ್ರೀಡಾಶಾಲೆ ತೆರೆಯಲು ಮುಂದಾಗಿರುವ ಬಿಜಾಪುರ ಬುಲ್ಸ್‌ ಕ್ರೀಡೆಯನ್ನು ತಮ್ಮ ಕಂಪೆನಿಯ ಪ್ರಮುಖ ಚಟುವಟಿಕೆಯನ್ನಾಗಿಸಲು ಮುಂದಾಗಿದೆ.

ಟೂರ್ನಿಯಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿರುವ ಬಳ್ಳಾರಿ ಟಸ್ಕರ್ಸ್‌ನ ಮಾಲೀಕರು ಹೆಚ್ಚು ಬೇಸರಗೊಂಡಿಲ್ಲ.
‘ಸ್ಪರ್ಧಾತ್ಮಕ ಆಟ ಪ್ರದರ್ಶಿಸುವುದರ ಜೊತೆಗೆ ಹೊಸಬರಿಗೆ ಅವಕಾಶ ನೀಡಬೇಕೆಂಬುದು ನಮ್ಮ ಅಭಿಲಾಷೆ ಆಗಿತ್ತು. ಈವರೆಗೆ ಕೆಪಿಎಲ್‌ ಆಡದ ನಾಲ್ಕು ಮಂದಿ ತಂಡದಲ್ಲಿದ್ದಾರೆ. ಬಹುತೇಕ ಎಲ್ಲರಿಗೂ ಅವಕಾಶ ನೀಡಲಾಗಿದೆ. ಹೀಗಾಗಿ ಪಂದ್ಯಗಳನ್ನು ಸೋತರೂ ಧನ್ಯತಾ ಭಾವ ಇದೆ’ ಎಂಬುದು ತಂಡದ ಪ್ರತಿನಿಧಿ ಪುರುಷೋತ್ತಮ ಅನಿಸಿಕೆ.

ಇಮ್ಮಡಿಗೊಂಡ ವಿಶ್ವಾಸ
ಟೂರ್ನಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಿರುವ ಬೆಳಗಾವಿ ಪ್ಯಾಂಥರ್ಸ್‌ನ ಕೆ.ಎನ್‌. ಭರತ್‌ ಮೊದಲ ಅವಕಾಶದಲ್ಲೇ ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ ಆಟಗಾರ. ‘ಜನರ ಹರ್ಷೋದ್ಗಾರದ ನಡುವೆ ಆಡುವುದು ರೋಮಾಂಚಕಾರಿ ಅನುಭವ. ರಣಜಿ ತಂಡವನ್ನು ಮುನ್ನಡೆಸಿದ ವಿನಯ್‌ ಕುಮಾರ್ ಅವರಂಥ ಆಟಗಾರನ ಜೊತೆಯಲ್ಲಿ ಆಡಲು ಅವಕಾಶ ಸಿಕ್ಕಿದ್ದರಿಂದ ವಿಶ್ವಾಸ ಇಮ್ಮಡಿಗೊಂಡಿದೆ. ಭವಿಷ್ಯದಲ್ಲಿ ಇದು ಪರಿಣಾಮ ಬೀರಲಿದೆ’
ಕೆ.ಎನ್‌. ಭರತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT