ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರ ಹಾಡು ‘ಎರಡೊಂದ್ಲಾ ಮೂರು’

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಬಹುತೇಕ ಹೊಸಬರನ್ನೇ ಒಳಗೊಂಡ ಚಿತ್ರತಂಡ ನಿರ್ಮಿಸಿರುವ ‘ಎರಡೊಂದ್ಲಾ ಮೂರು’ ಇಂದು (ಮೇ 22) ತೆರೆಗೆ ಬರುತ್ತಿದೆ. ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿಯರು ಎಲ್ಲರಿಗೂ ಇದು ಮೊದಲ ಪ್ರಯತ್ನ. ಬಿಡುಗಡೆಯ ಸಂಭ್ರಮ ಹಂಚಿಕೊಳ್ಳಲು ತಂಡ ಮಾಧ್ಯಮದವರನ್ನು ಎದುರುಗೊಂಡಿತ್ತು.

ಚಿತ್ರವನ್ನು ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿರುವುದಾಗಿ ಹೇಳಿದ ನಿರ್ದೇಶಕ ಕುಮಾರದತ್ತ– ‘ಹಾಡುಗಳಿಗೆಂದು ಪ್ರತ್ಯೇಕವಾಗಿ ಖರ್ಚು ಮಾಡಲಿಲ್ಲ. ಮಾತಿನ ಭಾಗದ ದೃಶ್ಯಗಳ ಚಿತ್ರೀಕರಣದ ಜೊತೆಗೇ ಹಾಡುಗಳಿಗೂ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದೆವು. ಅದನ್ನೇ ಎಡಿಟ್ ಮಾಡಿದ್ದೇವೆ’ ಎಂದರು. ಸಂಭಾಷಣೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾಗಿ ಅವರು ಹೇಳುತ್ತಾರೆ.

ಯೋಗರಾಜ್ ಭಟ್ ಆರಂಭಿಸಿರುವ ‘ಭೂಸ್ವರ’ ಸಂಸ್ಥೆ ಮೊದಲ ಬಾರಿಗೆ ಹಂಚಿಕೆ ಮಾಡುತ್ತಿರುವ ಸಿನಿಮಾ ಎನ್ನುವುದು ‘ಎರಡೊಂದ್ಲಾ ಮೂರು’ ಚಿತ್ರದ ವಿಶೇಷಗಳಲ್ಲೊಂದು. ಹೊಸಬರ ಚಿತ್ರಗಳನ್ನು ಕೈಗೆತ್ತಿಕೊಳ್ಳಲು ಹಂಚಿಕೆದಾರರು ಹಿಂದೇಟು ಹಾಕುವುದನ್ನು ನೆನಪಿಸಿಕೊಂಡ ಯೋಗರಾಜ್ ಭಟ್– ‘ಸಿನಿಮಾ ನಿರ್ಮಾಣಕ್ಕಿಂತ ಹತ್ತು ಪಟ್ಟು ಹೆಚ್ಚು ಸಮಸ್ಯೆ ಬಿಡುಗಡೆಯದ್ದು. ಸಿನಿಮಾ ನಿರ್ಮಾಣವೆಂದರೆ ಆಸ್ಪತ್ರೆ ಬುಕ್ ಮಾಡದೇ ಗರ್ಭ ಧರಿಸಿದಂತೆ’ ಎಂದರು. ಅದಕ್ಕೆ ಪ್ರತಿಯಾಗಿ ನಿರ್ದೇಶಕ ಕುಮಾರದತ್ತ, ‘ನಮಗೆ ದೊಡ್ಡ ಆಸ್ಪತ್ರೆ ಸಿಗದಿದ್ದರೂ ಒಳ್ಳೆಯ ವೈದ್ಯರೇ ಸಿಕ್ಕಿದ್ದಾರೆ’ ಎಂದರು.

ಚಂದನ್ ಚಿತ್ರದ ನಾಯಕ. ಈಗಾಗಲೇ ಬಿಡುಗಡೆಯಾಗಿರುವ ‘ಕಟ್ಟೆ’ ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ. ‘ಕಡಿಮೆ ಬಜೆಟ್‌ನಲ್ಲಿ ಅತಿ ಹೆಚ್ಚು ಚಂದಗಾಣಿಸಲಾದ ಚಿತ್ರ ಇದು’ ಎಂಬುದು ಅವರ ಅನಿಸಿಕೆ. ‘ಪರಿಣಯ’ ಎಂಬ ಚಿತ್ರ ಮಾಡಿ ಸೋತ ನಂತರ ಅವಸರ ಪಡದೆ ನಿಧಾನವಾಗಿ ಕಥೆ ಕೇಳಿ ಒಪ್ಪಿಕೊಂಡ ಚಿತ್ರವಂತೆ ಇದು. ಈ ಚಿತ್ರ ಒಪ್ಪುವ ವೇಳೆಗಾಗಲೇ ಅವರು ನಲವತ್ತೈದು ಕಥೆ ಕೇಳಿದ್ದರಂತೆ.

ಇದುವರೆಗೆ ಧಾರಾವಾಹಿಗಳಲ್ಲಿ ನಟಿಸಿರುವ ಶೋಭಿತಾಗೆ ಇದು ಮೊದಲ ಚಿತ್ರ. ಮುಗ್ಧ ಹಳ್ಳಿ ಹುಡುಗಿಯ ಪಾತ್ರ ಅವರದು. ಮತ್ತೊಬ್ಬ ನಾಯಕಿ ಶ್ವೇತಾ ಪಂಡಿತ್ ಶಿರಸಿಯವರು. ‘ಪರಮಾತ್ಮ’ದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಅವರಿಗೆ ಇಲ್ಲಿ ರಂಗಕರ್ಮಿಯ ಪಾತ್ರ. ‘ನಿರೂಪಣೆ ಮತ್ತು ಚಿತ್ರಕಥೆ ಈ ಸಿನಿಮಾದ ಧನಾತ್ಮಕ ಅಂಶ’ ಎನ್ನುತ್ತಾರೆ ಅವರು.

ನಾಲ್ಕು ಹಾಡುಗಳಿಗೆ ಎ.ಎಂ. ನೀಲ್ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕರೇ ಎಲ್ಲ ಹಾಡುಗಳನ್ನು ಬರೆದಿದ್ದಾರೆ. ಟಿಪ್ಪು, ರಾಜೇಶ್, ಕೈಲಾಶ್ ಖೇರ್, ಸಂಗೀತಾ ಕಟ್ಟಿ ಹಾಡಿದ್ದಾರೆ. ನವೀನ್ ಅವರು ಕ್ಯಾಮೆರಾ ನಿರ್ವಹಿಸಿರುವ ಈ ಚಿತ್ರಕ್ಕೆ ಹೆಸರಘಟ್ಟ, ಬೆಂಗಳೂರು, ನಂದಿ ಬೆಟ್ಟ, ಸಾಗರ, ಸೊರಬದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಮಾರು ಅರವತ್ತರಿಂದ ಎಪ್ಪತ್ತು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT