ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಹೊಳಲಿನ ಶಿಲ್ಪ ಕಥೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ಪಟ್ಟಣದಿಂದ ಎರಡು ಕಿ.ಮೀ. ದೂರವಿರುವ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯ ಶಿಲ್ಪಗಳ ಬೀಡು. ವಿವಿಧತೆಯಲ್ಲಿ ಏಕತೆ ಮೈದುಂಬಿಕೊಂಡು ಕಲೆ, ಸಾಹಿತ್ಯ, ಸಂಗೀತ, ಜಾನಪದ, ರಂಗಭೂಮಿ, ವಾಸ್ತುಶಿಲ್ಪ, ವಿಭಿನ್ನ ಸಂಸ್ಕೃತಿಯನ್ನು ಅರಳಿಸಿಕೊಂಡು ಬಂದಿದೆ ಈ ಗ್ರಾಮ.  ಹೊಸಹೊಳಲು ಎಂದಾಗ ಪ್ರವಾಸೋದ್ಯಮ ಇಲಾಖೆಯ ‘ಒಂದು ದೇಶ ಹತ್ತು ಪ್ರಪಂಚ’ ಎಂಬ ಮಾತು ನೆನಪಿಗೆ ಬರುತ್ತದೆ.

ಹೊಸಹೊಳಲಿನ ಶ್ರೀಲಕ್ಷ್ಮಿನಾರಾಯಣ ಸ್ವಾಮಿ ದೇಗುಲ ಶಿಲ್ಪಕಲೆಗೆ, ಅಪರೂಪದ ನವರಂಗಕ್ಕೆ, ವಾಸ್ತುಶಿಲ್ಪಕ್ಕೆ, ನವಿರಾದ ಕೆತ್ತನೆಗೆ, ಕೆತ್ತನೆ ಕಂಬಗಳಿಗೆ ಹೆಸರಾದುದು. ದೇಗುಲದ ಹೊರಭಿತ್ತಿಯಲ್ಲಿನ ವಿಗ್ರಹಗಳು, ಮದನಿಕೆಯರ ಶಿಲ್ಪಗಳು ಮೋಡಿ ಮಾಡುತ್ತವೆ. ಹೊಯ್ಸಳ ಶಿಲ್ಪಕಲೆಯ ದೇಗುಲಗಳಲ್ಲಿ ಹೊಸಹೊಳಲಿನ ಈ ದೇಗುಲಕ್ಕೆ ತನ್ನದೇ ಮಹತ್ವವಿದೆ. ಮಂಡ್ಯ ಜಿಲ್ಲೆಯ ಹೊಯ್ಸಳ ದೇಗುಲಗಳಲ್ಲಿ ಹೊರನೋಟಕ್ಕೆ ಹಾಗೂ ಒಳಗಿನ ಚಿತ್ತಾರಕ್ಕೆ ಹೆಸರಾದುದು ಹೊಸ ಹೊಳಲಿನ ಈ ದೇಗುಲ.

ಹೊಸಹೊಳಲು ಆದ ಬಗೆ...
ಈ ಗ್ರಾಮದ ಇತಿಹಾಸ  ಕ್ರಿ.ಶ.724ರಿಂದ ಆರಂಭವಾಗುತ್ತದೆ. ಪಾಳೇಗಾರನಾಗಿದ್ದ ನರಸನಾಯಕ ಈ ಗ್ರಾಮದ ನಿರ್ಮಾತೃ. ವೀರತೆಯ ಸಂಕೇತವಾದ ಆಂಜನೇಯನ ದೇವಸ್ಥಾನವನ್ನು ನಿರ್ಮಿಸಿ, ಗರುಡಗಂಭದ ಪ್ರತಿಷ್ಠಾಪನೆಗಾಗಿ ಭೂಮಿಯನ್ನು ಅಗೆದಾಗ ಹೊಳೆಯುವ ಹರಳುಗಳು ಸಿಕ್ಕಿದವು. ಇದರಿಂದಾಗಿ ಹೊಸನಗರ, ಹೊಸಪಟ್ಟಣ ಎಂದು ನಾಮಾಂಕಿತವಾಗಬೇಕಿದ್ದ ಈ ಗ್ರಾಮ ಹರಳಿನಿಂದಾಗಿ ‘ಹೊಸಹರಳು’ ಎಂದು ಕರೆಸಿಕೊಂಡಿತು. ಹೊಸಹರಳು ಗ್ರಾಮ ಈಗ ಜನರ ಬಾಯಲ್ಲಿ ಹೊಸೊರಳು ಆಗಿ, ಹೊಸಹೊಳಲು ಆಗಿದೆ.

ಆದರೆ ಇಲ್ಲಿನ ದೇಗುಲಗಳಲ್ಲಿ ದೊರೆತಿರುವ ಶಾಸನಗಳ ಪ್ರಕಾರ “ಅನಾದಿ ಅಗ್ರಹಾರ ರಾಯಪುರ’ ಎಂಬ ಹೆಸರಿದ್ದುದು ತಿಳಿದುಬರುತ್ತದೆ. ಇಲ್ಲಿರುವ ಎಂಟು ಶಾಸನಗಳು ಇದನ್ನೇ ದೃಢೀಕರಿಸಿದ್ದು, ಇಲ್ಲಿಂದ 4 ಕಿ.ಮೀ ದೂರದಲ್ಲಿರುವ ಕತ್ತರಘಟ್ಟ ಗ್ರಾಮದಲ್ಲಿ ಜಿನದೇಗುಲಗಳನ್ನು ನಿರ್ಮಿಸಿದಾಗ ಈ ಗ್ರಾಮವನ್ನು ದತ್ತಿ ಬಿಡಲಾಯಿತು ಎಂಬ ಉಲ್ಲೇಖವಿದೆ. ಈ ಎಲ್ಲಾ ಆಧಾರದ ಮೇರೆಗೆ ಹೊಯ್ಸಳ ದೊರೆ ಮೂರನೇ ನರಸಿಂಹ ಬಲ್ಲಾಳ ಈ ದೇಗುಲ ನಿರ್ಮಾತೃ ಎಂಬ ವಿಚಾರ ತಿಳಿದು ಬರುತ್ತದೆ. ಈಗ ರಾಷ್ಟ್ರೀಯ ಸ್ಮಾರಕ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಈ ದೇಗುಲ ಹೊಯ್ಸಳ ದೇಗುಲದಂತೆ ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಾಣಗೊಂಡಿದೆ.

ಅದ್ಭುತ ಕಲಾಕುಸರಿ
ದೇಗುಲದ ಆಲಂಕಾರಿಕ ಶಿಲ್ಪಗಳ ಸಂಯೋಜನೆ ಉತ್ಕೃಷ್ಟವಾಗಿದೆ. ಮೂರು ಅಡಿ ಎತ್ತರದ ನಕ್ಷತ್ರಾಕಾರದ ಜಗುಲಿ ಮೇಲೆ ದೇಗುಲವಿದೆ. ಮೂರು ಗರ್ಭಗೃಹವಿದೆ. ಈ ಮೂರನ್ನೂ ಒಂದೇ ನವರಂಗ ಒಗ್ಗೂಡಿಸಿದೆ. ಪ್ರಧಾನ ಗರ್ಭಗೃಹದ ಬಾಗಿಲವಾಡವು ಆಕರ್ಷಕವಾಗಿದೆ. ನಂಬಿನಾರಾಯಣ, ಶ್ರೀದೇವಿ, ಭೂದೇವಿಯರ ಉತ್ಸವಮೂರ್ತಿಗಳು ಸ್ಥಾನಿಕ ಭಂಗಿಯಲ್ಲಿದ್ದು, ನವರಂಗದ ಉತ್ತರಕ್ಕೆ ಅಳೆತ್ತರದ ಸುಮಾರು 2 ಅಡಿ ಎತ್ತರದ ಶ್ರೀ ಲಕ್ಷ್ಮಿನಾರಾಯಣ ಮೂರ್ತಿ ಇದೆ.

ಪ್ರಧಾನ ಗರ್ಭಗೃಹವು ದ್ರಾವಿಡ ಶಿಖರ, ಶುಕನಾಸಿ, ಕಲಾತ್ಮಕ ಕುಸುರಿ ಶಿಲ್ಪಗಳಿಂದ ಕೂಡಿದೆ. ನವರಂಗವನ್ನು ಹೊತ್ತು ನಿಂತಿರುವ ಬೃಹದಾಕಾರದ ಚರಕಿ ಕಂಬಗಳು ಆಕರ್ಷಣೀಯ. ಕಾಳಿಂಗ ಮರ್ದನ, ಹೆಬ್ಬೆಟ್ಟು ಆಂಜನೇಯ ಗಮನ ಸೆಳೆಯುತ್ತದೆ. ಆನೆ, ಕುದುರೆ, ಲತೆ, ಪೌರಾಣಿಕ ಕಥನ, ಮಕರ, ಹಂಸ ಹಾಗೂ ಬಳ್ಳಿಯ  ಕೆತ್ತನೆಗಳಿಂದ ಒಳಾಂಗಣವನ್ನು ಸಿಂಗರಿಸಲಾಗಿದೆ. ಕೆಳಗಿನ ಹಂತದಲ್ಲಿ ವಿವಿಧ ದೇವತೆಗಳಿವೆ. ಮೇಲಿನ ಹಂತವು ಏಕಸ್ತಂಭ ದ್ವಿ ಸ್ತಂಭ, ಶಿಖರ, ಕಿರುದೇವ ತೋಷ್ಠಗಳಿಂದ ತುಂಬಿದೆ.

ರಾಮಾಯಣ, ಮಹಾಭಾರತ, ಭಾಗವತ ಕಥನ ಶೈಲಿಯ ಪಟ್ಟೆಗಳಿಂದ ‘ಕತ್ತೆ ಮುಂದೆ ಕೈ ಮುಗಿದು ನಿಂತಿರುವ ವಾಸುದೇವ’ ಎಳನೀರು ಕುಡಿಯುವ ಮಂಗ, ವಿಷ್ಣುವಿನ ದಶಾವತಾರ, ಮಿಥುನಶಿಲ್ಪಗಳು ಆಕರ್ಷಕವಾಗಿದೆ. ಸಿಂಹದ ಮುಖವುಳ್ಳ ಕಲಾ ಕೆತ್ತನೆ ದೇವಾಲಯದ ಸುತ್ತಲೂ ಮೆರೆದಿದೆ. ಹೊಸಹೊಳಲಿನ ಶ್ರೀ ಲಕ್ಷ್ಮಿನಾರಾಯಣ ದೇಗುಲದ ಮತ್ತೊಂದು ಆಕರ್ಷಣೆ ಭುವನೇಶ್ವರಿ. ಅಷ್ಟಮಾಲೆಯಿಂದ ಕಂಗೊಳಿಸುವ ಇವು ನಕ್ಷತ್ರಾಕಾರ ವಾಗಿರುತ್ತದೆ. ಇಂತಹ ಹತ್ತು ಭುವನೇಶ್ವರಿ ಇಲ್ಲಿದೆ.

ಇಲ್ಲಿನ ಅರಾಧ್ಯ ದೈವ ಶ್ರೀ ಲಕ್ಷ್ಮಿನಾರಾಯಣ ಚೆಲುವಾಂತ ಚೆನ್ನಿಗನಾಗಿದ್ದಾನೆ. ಈತನನ್ನು ‘ನಂಬಿನಾರಾಯಣ’ ಎಂದು ಕರೆಯುತ್ತಾರೆ. ಇಷ್ಟೇ ಅಲ್ಲ, ಗ್ರಾಮದ ಒಳಗೆ ಪ್ರವೇಶಿಸುತ್ತಿದ್ದಂತೆ ಆಂಜನೇಯ ದೇವಸ್ಥಾನ ಎದುರುಗೊಳ್ಳುತ್ತದೆ. ಗ್ರಾಮದಲ್ಲಿ ಸುಮಾರು 15 ಕ್ಕೂ ಅಧಿಕ ದೇವಸ್ಥಾನಗಳಿವೆ. ಅದರಲ್ಲಿ ಕೋಟೆ ಭೈರವೇಶ್ವರ ದೇವಸ್ಥಾನ, ಪಾರ್ಶ್ವನಾಥಸ್ವಾಮಿ ಬಸದಿ ಅತ್ಯಂತ ಪ್ರಮುಖವಾದುದು.

ವೈಭವದ ರಥೋತ್ಸವ
ಶ್ರೀ ಲಕ್ಷ್ಮಿನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ಪ್ರತೀವರ್ಷ ಫಾಲ್ಗುಣ ಮಾಸದ ಶುದ್ಧ ಸಪ್ತಮಿಯಂದು ನಡೆಯುತ್ತದೆ. ಅಷ್ಟಮಿಯಂದು ಹಗಲು ನಿತ್ಯೋತ್ಸವ ನಡೆದರೆ, ನವಮಿಯಂದು ತೆಪ್ಪೋತ್ಸವ ನಡೆಯುತ್ತದೆ. ದೇಗುಲದ ರಥ ಶಿಥಿಲಾವಸ್ಥೆಯಿಂದ ಕೂಡಿತ್ತು. ಗ್ರಾಮಸ್ಥರು ದಾನಿಗಳೊಂದಿಗೆ ಹೊಸದಾಗಿ ರಥವನ್ನು ನಿರ್ಮಿಸಿದ್ದಾರೆ. ಅಲ್ಲದೆ ಗ್ರಾಮದ ಕುರುಹಿನಶೆಟ್ಟಿ ಜನಾಂಗದವರು, ನೀಲಕಂಠೇಶ್ವರ ಯುವಕ ಸಂಘವು ಗ್ರಾಮಸ್ಥರೊಂದಿಗೆ ಕೈಜೋಡಿಸಿ ದೇಗುಲದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಮೈಸೂರಿನಿಂದ 60 ಕಿ.ಮೀ, ಮಂಡ್ಯದಿಂದ 40 ಕಿ.ಮೀ, ಬೆಂಗಳೂರಿನಿಂದ 120 ಕಿ.ಮೀ., ಹಾಸನದಿಂದ 65 ಕಿ.ಮೀ ದೂರದಲ್ಲಿದೆ ಈ ತಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT