ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕುಲುಮೆಯಲ್ಲಿ ಮಾರ್ಕ್ಸ್ ಚಿಂತನೆ

Last Updated 20 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

`ಯಾಕೆ ಮಾರ್ಕ್ಸ್ ಹೇಳಿದ್ದು ಸರಿ~ ಎಂಬುದು ಟೆರಿ ಈಗಲ್‌ಟನ್ ಅವರ ತೀರಾ ಈಚಿನ ಪುಸ್ತಕ. ಯಾಲೆ ಯೂನಿವಿರ್ಸಿಟಿಯವರು ಇತ್ತೀಚೆಗೆ ಪ್ರಕಟಿಸಿದ ಈ ಪುಸ್ತಕ ಜಗತ್ತಿನಾದ್ಯಂತ ವಿಚಾರವಂತರ ಗಮನ ಸೆಳೆಯುತ್ತಿದೆ.

ಟೆರಿ ಈಗಲ್‌ಟನ್ (ಜ:1943) ಈಗ ಜೀವಂತವಿರುವ ಇಂಗ್ಲೀಷ್ ವಿಮರ್ಶಕರಲ್ಲಿ ಬಹಳ ಮುಖ್ಯರಾದವರು. ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕರಾದ ಅವರು ಇಂಗ್ಲೆಂಡ್‌ನ ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯ ಹಾಗೂ ಅಮೆರಿಕಾದ ನಾರ್ಥ್‌ಡಾಮ್ ವಿಶ್ವವಿದ್ಯಾನಿಲಯಗಳಲ್ಲಿ ಸಾಹಿತ್ಯದ ಪಾಠ ಹೇಳುತ್ತಾರೆ. ಡಬ್ಲಿನ್‌ನಲ್ಲಿ ವಾಸಿಸುತ್ತಾರೆ.
 
ರೇಮಂಡ್ ವಿಲಿಯಮ್ಸ, ವಾಲ್ಟರ್ ಬೆಂಜಮಿನ್ ಇವರಂತೆ ಎಡಪಂಥೀಯ ಚಿಂತನೆಗೆ ಹೆಸರಾದವರು. `ವೈ ಮಾರ್ಕ್ಸ್ ವಾಸ್ ರೈಟ್~ ಎನ್ನುವ ಈ ಕೃತಿಯಲ್ಲಿ ಸೋವಿಯತ್ ಒಕ್ಕೂಟದ ಪತನದ ಬಳಿಕ, ಮಾರ್ಕ್ಸ್‌ವಾದಕ್ಕೆ ಬಹು ಸಮರ್ಥವಾದ ವ್ಯಾಖ್ಯಾನ ನೀಡಿ, ಮಾರ್ಕ್ಸ್ ತತ್ವದ ಒಳನೋಟಗಳನ್ನು ಹೊಸ ಕಾಲದ ವಿಮರ್ಶೆಗಳಿಗೆ ಅನ್ವಯಿಸಿ, ಹೊಸ ಬೆಳಕಿನಲ್ಲಿ ಇನ್ನೊಮ್ಮೆ ವಿವರಿಸಿದ್ದಾರೆ.

ಈ ಕೃತಿಯಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಅವುಗಳಲ್ಲಿ ಇಂದು ಮಾರ್ಕ್ಸ್‌ವಾದದ ವಿರುದ್ಧ ಹಾಗೂ ಮಾರ್ಕ್ಸ್ ಇನ್ನು ಮುಂದೆ ನಿರುಪಯುಕ್ತ ಎಂದು ವಾದಿಸುವ ಹತ್ತು ಮುಖ್ಯ ವಿಮರ್ಶಾತ್ಮಕ ಆಕ್ಷೇಪಗಳನ್ನು ಸಂಗ್ರಹಿಸಿ ಅವುಗಳಿಗೆ ಉತ್ತರಿಸುವ ರೂಪದಲ್ಲಿ ಪುಸ್ತಕವನ್ನು ರಚಿಸಲಾಗಿದೆ.

ಟೆರಿ ಈಗಲ್‌ಟನ್ ಉತ್ತರಗಳು ಅವರ ವ್ಯಾಖ್ಯಾನ, ಸಮರ್ಥ ಪಾಂಡಿತ್ಯ, ಆಧುನಿಕ ಕಾಲದ ಆಮೂಲಾಗ್ರ ತಿಳಿವಳಿಕೆ, ವಿಮರ್ಶಾತ್ಮಕ ಒಳನೋಟ, ಅಲ್ಲಲ್ಲಿ ಹಾಸ್ಯಮಿಶ್ರಿತ ವ್ಯಂಗ್ಯ ಮತ್ತು ಶಕ್ತಿಯುತ ಸಂವಹನ ಶಕ್ತಿಯಿಂದ ಕೂಡಿದೆ. ಎಲ್ಲೂ ಈ ಕೃತಿ ಕೇವಲ ವಿಮರ್ಶಕರು, ಪಂಡಿತರು ಮಾತ್ರ ಓದಬಹುದಾದ ಪುಸ್ತಕ ಅನಿಸುವುದಿಲ್ಲ. ಸಾಮಾನ್ಯ ಓದುಗರೂ ಈ ಕೃತಿಯಲ್ಲಿ- ಪರಿಸರ, ಆಧುನಿಕತೆ ಮುಂತಾದ ವಿಚಾರಗಳನ್ನು ಚರ್ಚಿಸುವಾಗ, ತನ್ಮಯರಾಗಿ ತಮ್ಮದೇ ಅನುಭವಗಳ ವಿಸ್ತಾರವೆಂಬಂತೆ ಓದಿಕೊಳ್ಳಬಹುದು.

ಮಾರ್ಕ್ಸ್‌ವಾದದ ಬಗೆಗಿನ ಹತ್ತು ಆಕ್ಷೇಪಗಳನ್ನು ಹೀಗೆ ಪಟ್ಟಿ ಮಾಡಬಹುದು:
1. ಮಾರ್ಕ್ಸ್‌ವಾದ ಮುಗಿಯಿತು. ಕೈಗಾರಿಕಾ ಪಕ್ವತೆಯ ಬಳಿಕದ ಲೋಕಕ್ಕೆ ಮಾರ್ಕ್ಸ್‌ವಾದ ಪ್ರಸ್ತುತವಲ್ಲ.
2. ಮಾರ್ಕ್ಸ್‌ವಾದ ಅತ್ಯುತ್ತಮವಾದ ತತ್ವವಾಗಿರಬಹುದು. ಆದರೆ ಅದು ಜಾರಿಗೆ ತರುವುದು ಕೊನೆಗೂ ರಾಜಕೀಯ ನಿರಂಕುಶಾಧಿಕಾರವನ್ನು.
3. ಮಾರ್ಕ್ಸ್‌ವಾದ ಸ್ವಾತಂತ್ರ್ಯ ನೀಡದೆ ಗಂಡು-ಹೆಣ್ಣುಗಳನ್ನು ಕೂಡಾ ಚಾರಿತ್ರಿಕ ಘಟನೆಗಳ ಫಲಗಳಾಗಿಯೇ ನೋಡುತ್ತದೆ. ಅದು ಮಾರ್ಕ್ಸ್‌ವಾದ ಆಡಳಿತಕ್ಕೆ ಬಂದ ದೇಶಗಳಲ್ಲಿ ಆದಂತೆ ಮಾನವ ಘನತೆಗೆ ವಿರುದ್ಧವಾದದ್ದು.
4. ಮಾರ್ಕ್ಸ್‌ವಾದ ಎಂದೂ ಸಾಧ್ಯವಾಗದ ಒಂದು ಯುಟೋಪಿಯ. ಅದು ಸಾಧ್ಯವಾಗದ ಮಾನವ ಸಮಾನತೆಯ ಕನಸುಗಳನ್ನು ಬಿತ್ತುತ್ತದೆ. ಮನುಷ್ಯನ ಸ್ವಾರ್ಥ ಹಾಗೂ ದುಷ್ಟತನಗಳಿಗೆ ಕುರುಡಾಗಿದೆ.
5. ಮಾರ್ಕ್ಸ್‌ವಾದ ಸಕಲವನ್ನೂ ಆರ್ಥಿಕ ತಳಹದಿಗೆ ಇಳಿಸಿ ಸರಳಗೊಳಿಸುತ್ತದೆ. ಆರ್ಥಿಕತೆಯ ಮೇಲೆಯೇ ಎಲ್ಲವನ್ನೂ ನಿರ್ಧರಿಸುವ ಸ್ವಭಾವದ್ದು. ಮನುಷ್ಯ ಚೈತನ್ಯ ಅದಕ್ಕಿಂತ ದೊಡ್ಡದು.
6. ಮಾರ್ಕ್ಸ್ ಕೇವಲ ಒಬ್ಬ ಭೌತವಾದಿ. ಭೌತಿಕತೆ ಆಚೆ ಏನೂ ಇಲ್ಲ ಎನ್ನುವವ. ಧರ್ಮ, ದೇವರು ಮೊದಲಾದವನ್ನು ಸಾರಾಸಗಟು ತಿರಸ್ಕರಿಸುವ ಅಲೌಕಿಕದ ಅನುಭವದ ಬಗ್ಗೆ ಕುರುಡಾದವ.
7. ಮಾರ್ಕ್ಸ್‌ವಾದದ ವರ್ಗ ಕಲ್ಪನೆಗಿಂತ ಹೆಚ್ಚು ಅಪ್ರಸ್ತುತವಾದ್ದು ಹಾಗೂ ಹಳಸಲಾದ ವಿಚಾರ ಇಂದು ಇನ್ನೊಂದಿಲ್ಲ.
8. ಮಾರ್ಕ್ಸ್‌ವಾದಿಗಳು ಕ್ರೌರ್ಯದ ಪ್ರತಿಪಾದಕರು. ಹಿಂಸೆಯ ರಾಜಕೀಯವೇ ಅವರ ಪ್ರತಿಪಾದನೆ. ಅವರು ಕತ್ತಿ, ಕೋವಿಗಳಲ್ಲಿ ನಂಬಿಕೆ ಉಳ್ಳವರು.
9. ಮಾರ್ಕ್ಸ್‌ವಾದ ಶಕ್ತಿಶಾಲಿ ರಾಷ್ಟ್ರ ಕಲ್ಪನೆಯನ್ನು ಹೊಂದಿದೆ. ಖಾಸಗಿ ಆಸ್ತಿಯನ್ನು ಕೊನೆಗೊಳಿಸಿ ರಾಜ್ಯ ಪ್ರಭುತ್ವದ ಶಕ್ತಿಯಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡುವವರು.
10. ಕಳೆದ ನಾಲ್ಕು ದಶಕಗಳ ಎಲ್ಲಾ ಮುಖ್ಯ ವೈಚಾರಿಕ ಚಳವಳಿಗಳೂ ಮಾರ್ಕ್ಸ್‌ವಾದದ ಹೊರಗಿನಿಂದಲೇ ಬಂದಿವೆ. ಸ್ತ್ರೀವಾದ, ಪರಿಸರವಾದ, ಸಲಿಂಗ ಸಂಬಂಧ ಸ್ವಾತಂತ್ರ್ಯ ವಾದ, ಜನಾಂಗೀಯ/ವರ್ಣೀಯ ವಾದ, ಪ್ರಾಣಿಗಳ ಹಕ್ಕುಗಳ ವಾದ, ಶಾಂತಿ ಚಳವಳಿ, ಜಾಗತೀಕರಣದ ವಿರುದ್ಧದ ಚಳವಳಿ ಮೊದಲಾದವು ಈಗ ಸಾಮಾಜಿಕ ರಾಜಕೀಯ ಆಕ್ಟಿವಿಸಂ ಆಗಿ ಬೆಳೆಯುತ್ತಿವೆ. ಅವುಗಳಿಗೂ ಮಾರ್ಕ್ಸ್‌ವಾದಕ್ಕೂ ಏನೂ ಸಂಬಂಧವಿಲ್ಲ.

ಮೇಲೆ ನಾನು ಸರಳಗೊಳಿಸಿ ಸಂಗ್ರಹಿಸಿದ ಮಾರ್ಕ್ಸ್‌ವಾದದ ಮೇಲಿನ ಟೀಕೆಗಳಿಗೆ ಟೆರಿ ಈಗಲ್‌ಟನ್ ಶಾಂತರಾಗಿ ಪ್ರತಿಯೊಂದು ವಿಚಾರಗಳಿಗೂ ತಾತ್ವಿಕ ಒಳನೋಟ, ಕಾರ್ಲ್‌ಮಾರ್ಕ್ಸ್, ಎಂಗೆಲ್ಸ್ ಮತ್ತು ಆ ಬಳಿಕ ನಡೆದ ಚರ್ಚೆ, ಚಳವಳಿಗಳಿಂದ ವಿಚಾರಗಳನ್ನು ಆರಿಸಿ ವಿಶ್ಲೇಷಿಸಿ ತೋರಿಸಿಕೊಡುತ್ತಾರೆ.

ಈ ಕೃತಿ ಮಾರ್ಕ್ಸ್ ಹೇಳಿದ್ದೆಲ್ಲಾ ಸರಿ ಎಂದು ವಾದಿಸುವ ಕೃತಿಯಲ್ಲ. ಮಾರ್ಕ್ಸ್ ಹೇಳಿದ್ದರಲ್ಲಿ ಅಸಮಂಜಸವಾದದ್ದು ಯಾವುದೂ ಇಲ್ಲ ಎಂದು ಹೇಳುವ ಕೃತಿಯೂ ಅಲ್ಲ. ಮಾರ್ಕ್ಸ್‌ವಾದವನ್ನು ಇಂದಿನ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಾದ್ದು ಹೇಗೆ ಎಂದು ತೋರಿಸಿಕೊಡುವ ಕೃತಿ.

ಸಮಾಜವಾದಿ ಸೋವಿಯತ್ ರಷ್ಯಾ ಒಕ್ಕೂಟ ವಿಘಟನೆ ಹೊಂದಿದ ಬಳಿಕ ಮಾರ್ಕ್ಸ್‌ವಾದವನ್ನು ಕೇವಲ ರಾಜಕೀಯ ಅಧಿಕಾರ ಪಡೆಯುವ ಒಂದು ತತ್ವದ ಮಟ್ಟಕ್ಕೆ ಇಳಿಸಿದ ಚರ್ಚೆಗಳು ಹೆಚ್ಚಾದವು. ಹಾಗೆ ಕ್ರಾಂತಿಯಿಂದ ಅಧಿಕಾರಕ್ಕೆ ಬಂದ ಪ್ರಭುತ್ವ ಸರಿಯಾದದ್ದು ಅಲ್ಲ ಎಂಬುದು ಸೋವಿಯತ್ ಪತನದಿಂದ ಸಾಬೀತಾದ ಬಳಿಕ, ಮಾರ್ಕ್ಸ್‌ವಾದ ಇನ್ನು ಮುಂದೆ ಹೇಗೆ ಸರಿ? ಎಂಬ ಚರ್ಚೆ ಹೆಚ್ಚಾಯಿತು.

ರಾಜಕೀಯ ಅಧಿಕಾರ ಮಾರ್ಕ್ಸ್‌ವಾದದ ಒಂದು ಸೂಚನೆ ಮಾತ್ರ. ಆ ತತ್ವದ ಇತರ ನೆಲೆಗಳೇನು? ಇಂದು ಬಂಡವಳಶಾಹಿ ವ್ಯವಸ್ಥೆ ಹೊಸ ರೂಪಗಳಲ್ಲಿ ಜಾಗತೀಕರಣದ ಹೆಸರಲ್ಲಿ ಪಸರಿಸುತ್ತಿರುವಾಗ ಮಾರ್ಕ್ಸ್‌ವಾದದ ಹೊಸ ವ್ಯಾಖ್ಯಾನಗಳು ಹೇಗಿರಬೇಕು ಎಂಬುದನ್ನು ಈ ಕೃತಿ ಮನದಟ್ಟು ಮಾಡುತ್ತದೆ. ಈ ಲೇಖನಕ್ಕಿರುವ ಪುಟಗಳ ಮಿತಿಯಲ್ಲಿ ನಾವು ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಗಮನಿಸಬಹುದು.

ಭೌತ ಲೋಕದಲ್ಲಿ ಹುಟ್ಟಿದ ಪ್ರಜ್ಞೆ ವ್ಯಕ್ತಿ ಮತ್ತು ಭೌತಲೋಕದ ನಡುವಿನ ಸಂಪರ್ಕದಿಂದ ಬೆಳೆಯುವಂತಹದ್ದು. ಈ ರೀತಿಯ ಪರಸ್ಪರ ಪ್ರಭಾವ ಪ್ರಜ್ಞೆಯ ಬೆಳವಣಿಗೆಗೆ ಮುಖ್ಯ. ಅಂತಹ ಬೆಳವಣಿಗೆಯ ತಲೆತಲಾಂತರಗಳ ಸಂಗ್ರಹ ಒಂದು ಚಾರಿತ್ರಿಕ ಉತ್ಪತ್ತಿ.
 
ತನ್ನ ಹೊರಗಿನ ಇನ್ನೊಂದರ ತಿಳಿವಳಿಕೆ ತನ್ನತನದ ಎಚ್ಚರವನ್ನು ಉಂಟು ಮಾಡುವಂತಹುದು. ಈ ಅರ್ಥದಲ್ಲಿ ಅಸ್ಮಿತೆ ಕೂಡಾ ಸಾಮಾಜಿಕ ಉತ್ಪತ್ತಿ. ಮಾರ್ಕ್ಸ್, ನೀಚೆ, ಫ್ರಾಯ್ಡ ಮೊದಲಾದವರ ಹಿನ್ನೆಲೆಯಲ್ಲಿ ಟೆರಿ ಈಗಲ್‌ಟನ್ ಮಾಡುವ ಇಂತಹ ವ್ಯಾಖ್ಯಾನಗಳನ್ನು ನಾವು ಗಮನಿಸಬೇಕು.

ಸ್ತ್ರೀ ವಾದದ ಹಿನ್ನೆಲೆಯಲ್ಲಿ ಮಾರ್ಕ್ಸ್‌ನ `ಕಾರ್ಮಿಕ~ ಶಾಶ್ವತ ಗಂಡೆ? ಎಂಬ ಚರ್ಚೆಯನ್ನು ಟೆರಿ ಪ್ರಾರಂಭಿಸುತ್ತಾರೆ. ಗಂಡು-ಹೆಣ್ಣುಗಳ ಮೂಲಭೂತ ಆಕರ್ಷಣೆ ಸಂತಾನೋತ್ಪತ್ತಿಯಿಂದ ಪ್ರೇರೇಪಿತವಾದ ಪ್ರಾಕೃತಿಕ ಸತ್ಯ. ಆದರೆ ಅಂತಹ ಸಂಬಂಧ ಕುಟುಂಬವಾಗಿ, ಸಾಮಾಜಿಕವಾಗಿ ಸಾಧಿತವಾಗಬೇಕಾದಾಗ ಹುಟ್ಟುವ ಆಸ್ತಿಯ ಸಂಬಂಧದ ಕುರಿತಾದ ವಿಚಾರಗಳನ್ನು ಮಾರ್ಕ್ಸ್ ಹಾಗೂ ಎಂಗೆಲ್ಸ್‌ರಿಂದ ಹೆಕ್ಕಿ ತೋರಿಸಿ ಆಧುನಿಕ ಸ್ತ್ರೀ ಸಂವೇದನೆಯ ಮೂಲ ಬೇರುಗಳನ್ನು ಕಾಣಿಸುತ್ತಾರೆ.
 
ಶ್ರಮ ಹಾಗೂ ಜೀವೋತ್ಪತ್ತಿ ಹಿನ್ನೆಲೆಯಲ್ಲಿ ಮಾನವ ಚರಿತ್ರೆ ಹಾಸು ಹೊಕ್ಕ ಕ್ರಮಗಳ ಮೇಲಿನ ಬೆಳಕು ಇಂದಿನ ಸ್ತ್ರೀವಾದಗಳ ವಿಸ್ತೃತ ವಿಸ್ತಾರಗಳಿಗೆ ಮಾರ್ಕ್ಸ್‌ವಾದ ಹಿನ್ನೆಲೆಯ ಒಳನೋಟ ನೀಡುತ್ತದೆ.

ಇಂದಿನ ಪರಿಸರವಾದ ಹಿನ್ನೆಲೆಯಲ್ಲಿ ಮಾರ್ಕ್ಸ್ ವಿಚಾರಗಳ ವಿಶ್ಲೇಷಣೆ ಟೆರಿ ಅವರ ವ್ಯಾಖ್ಯಾನಗಳ ಸೂಕ್ಷ್ಮ ಸಂವೇದನೆಗಳನ್ನು ಸೂಚಿಸುತ್ತದೆ. ಮಾರ್ಕ್ಸ್ ಕಾಲದಲ್ಲಿ ಪ್ರಕೃತಿಯನ್ನು ಜಯಿಸುವುದು ಮನುಷ್ಯನ ಆದರ್ಶಗಳಲ್ಲಿ ಒಂದು. 1860ರಲ್ಲಿ ಪ್ಲಾಸ್ಟಿಕ್ ಬ್ಯಾಗುಗಳು, ಕಾರ್ಬನ್ ಹಾವಳಿ ಮೊದಲಾದವುಗಳ ಬಗ್ಗೆ ಚಿಂತೆ ಇರಲಿಲ್ಲ.

ರೋಗಗಳನ್ನು ಗೆಲ್ಲುವುದು, ಖನಿಜಗಳನ್ನು ಬಗೆಯುವುದು, ಪ್ರಕೃತಿಯನ್ನು ಬಳಸುವುದು ಯುರೋಪಿನ ಆಕಾಂಕ್ಷೆ. ಆದರೆ ಮಾರ್ಕ್ಸ್ ಸೂಚಿಸಿದ `ವಸ್ತು ಮೋಹ~ (fetishism of commodities) ಹಿನ್ನೆಲೆಯಲ್ಲಿ ಟೆರಿ ಇಂದಿನ ಪರಿಸರವಾದ ಗ್ರಹಿಸಬೇಕಾದ ಬಂಡವಾಳಶಾಹಿಯ ಲಾಭಕೋರತನವನ್ನು ಸೂಚಿಸುತ್ತಾರೆ.

ಪ್ರಕೃತಿಯ ಶೋಷಣೆಯಲ್ಲಿ ತಾತ್ಕಾಲಿಕ ಲಾಭಕೋರತನದಲ್ಲಿ ತೊಡಗುವ ಕ್ಯಾಪಿಟಲಿಸಂ (ನಮ್ಮ ಗಣಿಗಾರಿಕೆಯ ಕರ್ಮಕಾಂಡಗಳನ್ನು ನೆನಪಿಸಿಕೊಳ್ಳಿ) ಹಾಗೂ ದೂರಗಾಮಿತ್ವದ ನಿರಂತರ ಉತ್ಪಾದನಾ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಾಗಬೇಕಾದ ಮಾರ್ಗದ ಕಡೆಗೆ ಗಮನಹರಿಸುತ್ತಾರೆ.

ಟೆರಿ ಸೂಚಿಸುವ ಅನೇಕ ಪಾಂಡಿತ್ಯಪೂರ್ಣ ಒಳನೋಟಗಳ ಮಹಾಪೂರವನ್ನೇ ನಾವು ಈ ಕೃತಿಯಲ್ಲಿ ಕಾಣಬಹುದು. `ಸಿಪಾಯಿದಂಗೆ~ ಎಂದು ಬ್ರಿಟೀಷರಿಂದ ಕರೆಯಲ್ಪಟ್ಟ, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (1857)ದ ಬಗ್ಗೆ ಆ ಕಾಲದ ಭಾರತದ ಯಾವ ಸುಧಾರಣಾವಾದಿಗಳೂ, ಮಾರ್ಕ್ಸ್ ಮಾಡಿದಷ್ಟು ತೀವ್ರವಾದ ಭಾರತೀಯ ಸ್ವಾತಂತ್ರ್ಯಕ್ಕೆ ಪೂರಕವಾದ ಟೀಕೆಗಳನ್ನು ಮಾಡಲಿಲ್ಲ ಎಂಬುದು ಅವುಗಳಲ್ಲಿ ಒಂದು.
 
ಆ ಸಂದರ್ಭದಲ್ಲಿ ಮಾರ್ಕ್ಸ್ ಭಾರತದ ಬಗ್ಗೆ ಹೇಳಿದ `ವಿಲೇಜ್ ಈಡಿಯಸಿ~ ಎಂಬುದೊಂದನ್ನು ತಪ್ಪು ಕಲ್ಪನೆ ಎಂಬಂತೆ ಮಾತ್ರ ಕೇಳಿಸಿಕೊಂಡವರಿಗೆ ಮಾರ್ಕ್ಸ್ ಚಿಂತನೆಯ ಆನ್ವಯಿಕ ಶಕ್ತಿಯ ಬಗ್ಗೆ ಅನೇಕ ಒಳನೋಟಗಳು ಇಲ್ಲಿವೆ.

ಸೋವಿಯತ್ ಒಕ್ಕೂಟದ ಪತನದ ಬಳಿಕ ಕನ್ನಡದಲ್ಲಿ ಕಮ್ಯುನಿಸ್ಟರ ಬಗ್ಗೆ ತೀವ್ರವಾದ ಆಕ್ಷೇಪದ ಟೀಕೆ ನಡೆಸಿದವರಲ್ಲಿ ಡಾ. ಯು.ಆರ್.ಅನಂತಮೂರ್ತಿ ಮುಖ್ಯರು. ಸ್ವತಃ ಎಡಪಂಥೀಯ ಒಲವಿನ ಅನಂತಮೂರ್ತಿಗಳು `ಹಿಂಸೆಯ ಎಡ-ಬಲ~ ಕುರಿತಾಗಿ ಮಾತನಾಡುತ್ತಾ ಹಿಂಸೆಯ ಬಲಪಂಥ (ನಮ್ಮ ಹಿಂದೂ ಮೂಲಭೂತವಾದ ಹಿನ್ನೆಲೆಯಲ್ಲಿ) ಇತಿಹಾಸದ ಭೂತವನ್ನು ಕೆರಳಿಸಿ ಛೂ ಬಿಡುವಂತಹದಾದರೆ, ಅದರ `ಎಡಪಂಥ ಭವಿಷ್ಯದ ಭೂತವನ್ನು ಆವಾಹಿಸಿ ಅದಕ್ಕೆ ಅತ್ಯುಗ್ರ ನಿಷ್ಠೆಯಿಂದ ನಡೆದುಕೊಳ್ಳುವಂತಹುದು; ಅದರ ಮುನ್ನಡೆಗೆ ಅಡ್ಡಿಯಾಗುವವರನ್ನೆಲ್ಲ ನಿರ್ದಯವಾಗಿ ಬಲಿಕೊಡಲೆಳಸುವಂತಹುದು~ ಎಂದು ಹೇಳಿ ಚೀನಾ, ರಷ್ಯಾ ಮೊದಲಾದ ದೇಶಗಳ ಪ್ರವಾಸಗಳಲ್ಲಿ ತಮಗೆ ಎದುರಾದ ಉದಾಹರಣೆಗಳನ್ನು ನೀಡುತ್ತಾರೆ.

ನಕ್ಸಲೈಟರ ಬಗ್ಗೆ ಮಾಧ್ಯಮಗಳು ಅತಿರಂಜಿತವಾಗಿ ಬರೆಯುತ್ತಿರುವ ಕಾಲದಲ್ಲಿ ಮಾರ್ಕ್ಸ್‌ವಾದವನ್ನು ಹಿಂಸೆಯ ಹಿನ್ನೆಲೆಯಲ್ಲಿ ತಿರಸ್ಕರಿಸುವುದು ಬಹುಜನರಿಗೆ ಸುಲಭಗ್ರಾಹ್ಯ. ಅದಕ್ಕೆ ಮುಖ್ಯ ಕಾರಣ ಹಿಂಸೆಯ ಪರಿಣಾಮಗಳ ಪ್ರಭಾವ. ಅದು ಎಡ-ಬಲ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವಂತೆ ಪ್ರೇರೇಪಿಸುತ್ತದೆ. ಆಗ ಅವಿತು ಕೂತಿರುವ ಮಾರುಕಟ್ಟೆ ಪ್ರೇರಿತ ಬಲಪಂಥೀಯ ಹಿಂಸೆಯ ನೂರಾರು ರೂಪಗಳು ಗೋಚರಿಸುವುದಿಲ್ಲ.
 
ಯಾರೂ ಇಂದು ಸ್ಟಾಲಿನ್ ಅಥವಾ ಮಾವೋ ನಡೆಸಿದ ಹಿಂಸೆಯನ್ನು ಸಮರ್ಥಿಸುವುದು ಸಾಧ್ಯವಿಲ್ಲ. ವಾಲ್ಟರ್ ಬೆಂಜಮಿನ್ ಒಂದುಕಡೆ ಹೇಳಿದ ಹಾಗೆ, ಕ್ರಾಂತಿ ಎನ್ನುವುದು ನಿಯಂತ್ರಣವಿಲ್ಲದೆ ಓಡುವ ರೈಲುಗಾಡಿಯಲ್ಲ. ಅದು (ಕ್ರಾಂತಿ) ನಿಜವಾಗಿ ನಿಯಂತ್ರಿಸುವ ಎಮರ್ಜೆನ್ಸಿ ಬ್ರೇಕುಗಳು. ನಿಜದಲ್ಲಿ ನಿಯಂತ್ರಣ ಇಲ್ಲದಿರುವುದು ಕೇವಲ ಮಾರುಕಟ್ಟೆಯ ಹಿಡಿತದಲ್ಲಿರುವ ಬಂಡವಾಳಶಾಹಿ ವ್ಯವಸ್ಥೆಗೆ.

ಹಿಂಸೆ ತನಗೆ ತಾನೆ ಸ್ವಯಂಭೂ ಅಲ್ಲ. ಅದಕ್ಕೆ ವ್ಯಕ್ತಿ, ಸಮಾಜ, ಧರ್ಮ, ಆರ್ಥಿಕ, ರಾಜಕೀಯ ಹಾಗೂ ಪ್ರಾಕೃತಿಕ ಮೊದಲಾದ ಪರಿಪ್ರೇಕ್ಷ್ಯವಿರುತ್ತದೆ. ಅದರಿಂದಾಗಿ ಹಿಂಸೆಯ ಪರಿಣಾಮದ ಹೊರತಾಗಿ ಯೋಚಿಸಿದಾಗ ಎಡ-ಬಲಗಳೆರಡೂ ಹಿಂಸೆಯ ಎದುರು ಸಮಾನವಾಗಲು ಸಾಧ್ಯವೆ ಎಂಬುದು ಪ್ರಶ್ನೆ.

ಈ ಹಿನ್ನೆಲೆಯಲ್ಲಿ ಹಿಂಸೆಯ ವಾಸ್ತವ ಹಾಗೂ ಪರಿಕಲ್ಪನೆಗಳ ಎದುರು ಮಾರ್ಕ್ಸ್ ತತ್ವದ ಸಮಗ್ರ ವಿಶ್ಲೇಷಣೆಗಾಗಿ ಈ ಕೃತಿಯ ಎಂಟನೇ ಅಧ್ಯಾಯವನ್ನು ಟೆರಿ ಈಗಲ್‌ಟನ್ ಮೀಸಲಿಟ್ಟಿದ್ದಾರೆ. ಆ ಭಾಗದಲ್ಲಿ, ಕ್ರಾಂತಿ, ಪಾರ‌್ಲಿಮೆಂಟರಿ ಡೆಮಾಕ್ರಸಿ, ಕಮ್ಯುನಿಸ್ಟ್ ಅಧಿಕಾರದಲ್ಲಿದ್ದ ಸರಕಾರಗಳ ಚಾರಿತ್ರಿಕ ವಿಶ್ಲೇಷಣೆ, ಈ ಹಿಂದೆ ನಡೆದ ಮಹಾಯುದ್ಧಗಳಲ್ಲಾದ ಹಿಂಸೆ - ಹೀಗೆ ಹಿಂಸೆ ಹಾಗೂ ಮಾರ್ಕ್ಸ್‌ವಾದವನ್ನು ನಿಖರ ಅಂಕಿಅಂಶಗಳ ಸಹಿತ ಮುಖಾಮುಖಿಯಾಗಿಸಿ ಚರ್ಚಿಸುತ್ತಾರೆ.

ಅನಂತಮೂರ್ತಿಗಳ ಶೈಲಿಯಂತೆ ಹಿಂಸೆಯ ಬಗ್ಗೆ ಎಡ ಪಂಥಗಳ ಬಗೆಗಿನ ತಾತ್ವಿಕ ಹೇಳಿಕೆ ಮೂಲಕ ಪ್ರವೇಶಿಸಿ ಬಳಿಕ ರೂಪಕನಿಷ್ಠ ಚಿಂತನೆಯಾಗಿ ಅದನ್ನು ಬೆಳೆಸಿದಾಗ ಕ್ಯಾಪಿಟಲಿಸಂನ ಮಾರುಕಟ್ಟೆ ಪ್ರೇರಿತ ಹಿಂಸೆಯನ್ನು ಗ್ರಹಿಕೆಯಾಗಿ ಮರೆಮಾಚಲು ಅನೇಕ ಸಲ ಅದು ಅಪ್ರತ್ಯಕ್ಷ ಸಹಾಯ ಮಾಡುತ್ತದೆ.

ಮಾನವ ಸಂದರ್ಭಗಳಲ್ಲಿ ಇದ್ದೇ, ಟೆರಿ ನಡೆಸುವ ಹಿಂಸೆಯ ಬಗೆಗಿನ ತಾತ್ವಿಕ ಚರ್ಚೆ, ಅದೇ ಹಿಂಸೆಯ ಎದುರು ಎಡ-ಬಲಗಳು ಸಮಾನ ಎಂಬ ರೀತಿಯಲ್ಲಿ ಭಾವೋತ್ತೇಜಕ ಪ್ರಭಾವ ಬೀರುವ ರೂಪಕನಿಷ್ಠ ಚಿಂತನೆಯನ್ನು ಹೇಗೆ ಇನ್ನೊಂದು ದೃಷ್ಟಿಯಿಂದ ಸತ್ಯಶೋಧನೆಗಾಗಿ ಚರ್ಚಿಸಬಹುದು ಎಂಬುದನ್ನೂ ತೋರಿಸಿಕೊಡುತ್ತದೆ.

ಅಂಕಿ ಅಂಶಗಳ ಸಹಿತ, ಜಗತ್ತಿನಾದ್ಯಂತ ಇರುವ ಸ್ಲಮ್‌ಗಳು, ಬಾಡಿ ಶಾಪಿಂಗ್‌ನ ನಾನಾ ಕೆಲಸಗಳು, ಆಹಾರದ ಸಮಸ್ಯೆ, ಬಂಡವಾಳ ಹೂಡಿಕೆ ಹಿನ್ನೆಲೆಯಲ್ಲಿ ಉಂಟಾಗುವ ಮಾರುಕಟ್ಟೆ ಒತ್ತಡ, ಅದರ ರಕ್ಷಣೆಗೆ ಬರುವ ಆಡಳಿತ ನಿಯಮಾವಳಿಗಳು, ಅದರ ಹಿಂದಿರುವ ಸರ್ಕಾರ, ರಾಷ್ಟ್ರ ವ್ಯವಸ್ಥೆ ಮತ್ತು ಆ ಮೂಲಕ ನಡೆಯುವ ಯುದ್ಧ- ಇವುಗಳೆಲ್ಲದರ ಮೂಲಕ ಟೆರಿ ಹಿಂಸೆಯ ಮೂಲಸ್ವರೂಪದ ಅಂತರಂಗ ದರ್ಶನಕ್ಕೆ ಪ್ರಯತ್ನಿಸುತ್ತಾರೆ. ಆ ಮೂಲಕ ಹಿಂಸೆಯ ಪರಿಣಾಮಗಳಿಗೆ ಮಾತ್ರ ನೀಡುವ ಪ್ರತಿಕ್ರಿಯೆ ಹೇಗೆ ಸಮಗ್ರ ಚಿತ್ರವನ್ನು ನೀಡಲಾರದು ಎಂಬುದನ್ನು ಕಾಣಿಸಿಕೊಡುತ್ತಾರೆ.

ಟೆರಿ ಈಗಲ್‌ಟನ್‌ರ `ವೈ ಮಾರ್ಕ್ಸ್ ವಾಸ್ ರೈಟ್~ ಕೃತಿ ಮಾರ್ಕ್ಸ್‌ವಾದವನ್ನು ಪರಿಚಯಿಸುವ ಉದ್ದೇಶ ಹೊಂದಿಲ್ಲ. ಇಂದು ಮಾರ್ಕ್ಸ್‌ನನ್ನು ಅರ್ಥ ಮಾಡಿಕೊಳ್ಳಬೇಕಾದ ಆಧುನಿಕೋತ್ತರ ಕ್ರಮವನ್ನು ಸೂಚಿಸುತ್ತದೆ. ಈ ಕೃತಿ ಜಗತ್ತಿನಾದ್ಯಂತ ಚಿಂತಕರನ್ನು ಆಕರ್ಷಿಸಿ ಬೌದ್ಧಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಾರ್ಕ್ಸ್‌ವಾದದ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಉರುಳಿದ ಬಳಿಕವೂ ಮಾರ್ಕ್ಸ್ ನಮಗೆ ಇಂದು ಕಾಣಿಸುವ ತಾತ್ವಿಕ ನೆಲೆಗಳನ್ನು ವಿವರಿಸಿ, ವಿಶ್ಲೇಷಿಸಿ ವ್ಯಾಖ್ಯಾನಿಸುತ್ತದೆ. ಹಾಗೆಯೇ, ಈ ಕೃತಿಯನ್ನು ವಿರೋಧಿಸುವ, ಅಲ್ಲಗಳೆಯುವ ಸಾಕಷ್ಟು ಕೃತಿಗಳೂ, ಲೇಖನಗಳೂ ಮುಂದೆ ಬರಲಿರುವುದರ ಬಗ್ಗೆ ಅನುಮಾನ ಬೇಡ.
ಇಂದಿನ ತಂತ್ರಜ್ಞಾನಗಳ ಆಧುನಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂಡವಾಳಶಾಹಿಯ ಸೂಕ್ಷ್ಮ ವಿಸ್ತರಣೆಯಂತೆ ಜಾಗತೀಕರಣ ಬಲಿಷ್ಠವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಅದರ ಎದುರಾಗಿ `ವೈ ಮಾರ್ಕ್ಸ್‌ವಾಸ್ ರೈಟ್~ ಎಂಬ ಪ್ರಖರ ತಾತ್ವಿಕ ಚಿಂತನೆಯ ಕೃತಿಯೊಂದು ಹೊರಬಂದಿದೆ ಎಂಬುದನ್ನೂ ನಾವು ನೆನಪಿಡಬೇಕು.    

ವೈ ಮಾರ್ಕ್ಸ್ ವಾಸ್ ರೈಟ್
ಪು: 258; ಬೆ: 25 ಯು.ಎಸ್. ಡಾಲರ್;
ಪ್ರ: ಯಾಲೆ ಯೂನಿವರ್ಸಿಟಿ ಪ್ರೆಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT