ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಂತ್ರಜ್ಞಾನದತ್ತ ಬ್ಯಾಂಕಿಂಗ್

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಹೊಸ, ಹೊಸ ತಂತ್ರಜ್ಞಾನವು ಎಲ್ಲರನ್ನೂ ಸಾಕಷ್ಟು ಹತ್ತಿರ ತರುತ್ತಿದೆ.  ತಂತ್ರಜ್ಞಾನದ ಸಣ್ಣ ತರಂಗಗಳು ಪ್ರಪಂಚದಾದ್ಯಂತ ಅಲೆಗಳನ್ನು ಸೃಷ್ಟಿಸುವಷ್ಟು ಸಾಮರ್ಥ್ಯ ಹೊಂದಿವೆ. ತಂತ್ರಜ್ಞಾನ ಬಳಕೆಗೆ ಭಾರತವು ಭರವಸೆದಾಯಕ ಮಾರುಕಟ್ಟೆಯಾಗಿ ಪರಿಣಮಿಸಿದ್ದು, ಬ್ಯಾಂಕಿಂಗ್ ಕ್ಷೇತ್ರವನ್ನು ಇನ್ನೂ ಎತ್ತರದ ಹಂತಕ್ಕೆ ಕೊಂಡೊಯ್ಯಲು ಅದು ಪರಿಣಾಮಕಾರಿ ಪಾತ್ರ ವಹಿಸಲಿದೆ.

ಬ್ಯಾಂಕಿಂಗ್ ಕೆಲಸ ತುಂಬ ಶ್ರಮದಾಯಕವಾಗಿದ್ದ ಹಾಗೂ ಕೆಲವು ಪ್ರಕ್ರಿಯೆಗಳಿಗೆ ಒಂದು ಇಡೀ ದಿನ  ಬೇಕಾಗುವಂತಹ   ದಿನಮಾನಗಳು ಈಗ ಗತ ಇತಿಹಾಸ. ಅಂತರ್ಜಾಲ ಹಾಗೂ ಮೊಬೈಲ್ ಫೋನ್‌ಗಳು ಗ್ರಾಹಕರಿಗೆ ತಾವಿದ್ದ ಜಾಗದಿಂದಲೇ ತಮಗೆ ಅನುಕೂಲವಾದ ಸಮಯದಲ್ಲಿ ಬ್ಯಾಂಕ್ ಜೊತೆ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯವಾಗಿಸುವ ಮೂಲಕ ಗ್ರಾಹಕರಿದ್ದಲ್ಲಿಗೇ ಬ್ಯಾಂಕ್ ತಲುಪುವಂತೆ ಮಾಡಿವೆ. ತಂತ್ರಜ್ಞಾನ ಅಭಿವೃದ್ಧಿ ಜೊತೆ ಜೊತೆಗೆ ಬ್ಯಾಂಕಿಂಗ್ ವಹಿವಾಟು ಕೂಡ ಹೆಚ್ಚುತ್ತಿದ್ದು, ಗ್ರಾಹಕ ಕೇಂದ್ರಿತ ಸೇವೆ ಇನ್ನಷ್ಟು  ಸುಧಾರಿಸಲಿದೆ.

ಇಂದು ನಾವು 2000ನೇ ಇಸವಿಗಿಂತ 2030ನೇ ಇಸವಿಗೆ ಹತ್ತಿರ ಇದ್ದೇವೆ.  ಕೆಲ ವರ್ಷಗಳ ಹಿಂದೆ  ಯಾರಾದರೂ ಮೊಬೈಲ್‌ ಮೂಲಕವೇ ಮೂಲಕ ದಿನದ ಇಪ್ಪತ್ತನಾಲ್ಕು ಗಂಟೆಗಳ  ಕಾಲ ಬ್ಯಾಂಕಿಂಗ್ ಸೇವೆ ಮಾಡಬಹುದು ಹಾಗೂ ಬ್ಯಾಂಕ್‌ನ ಬಹುತೇಕ ವಹಿವಾಟುಗಳನ್ನು ಕ್ಷಣಗಳಲ್ಲಿ ಮಾಡಿ ಮುಗಿಸಬಹುದು ಎಂದಿದ್ದರೆ ಅನೇಕರು ಅದನ್ನು ನಂಬುತ್ತಿರಲಿಲ್ಲ. ಆದರೆ ಮೊಬೈಲ್ ಬ್ಯಾಂಕಿಂಗ್ ಎಂಬುದು ಈಗ ನಿಜವಾಗಿದ್ದು, ತಿಂಗಳಿಗೆ 2.7 ಕೋಟಿಗಳಷ್ಟು ವಹಿವಾಟುಗಳು ಮೊಬೈಲ್‌ ಮೂಲಕವೇ ನಡೆಯುತ್ತಿವೆ. 2030ರ ಅಂತ್ಯದ ವೇಳೆಗೆ ಇಂದಿನ ತಂತ್ರಜ್ಞಾನವೂ ಅನಗತ್ಯ ಎನಿಸಲಿದ್ದು, ಭವಿಷ್ಯದ ಸುಧಾರಿತ ತಂತ್ರಜ್ಞಾನಗಳಿಂದ ಅದು ಪಲ್ಲಟಗೊಳ್ಳಲಿದೆ. ಅಂತಹ ತಂತ್ರಜ್ಞಾನಗಳಲ್ಲಿ ಒಂದು ‘ವೇರೇಬಲ್ ಬ್ಯಾಂಕಿಂಗ್’ (Wearable Banking)  ಕೂಡ ಒಂದು.

ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಿಂದಾಗಿ ಬ್ಯಾಂಕಿಂಗ್ ವಹಿವಾಟು ಎನ್ನುವುದು ಜೇಬಿನಿಂದ ಮಣಿಕಟ್ಟಿಗೆ ಪಲ್ಲಟವಾಗಿದೆ. ಗ್ರಾಹಕರಿಗೆ ಸಕಾಲಕ್ಕೆ ನೀಡುವ  ಸೂಚನೆಗಳನ್ನು ತಲುಪಿಸುವಲ್ಲಿ ವೇರೇಬಲ್ ಬ್ಯಾಂಕಿಂಗ್ ನೆರವಾಗಲಿದೆ.  ಮಳಿಗೆಯೊಂದರ ಮುಂದೆ ಸಾಗುತ್ತಿದ್ದಂತೆ ಗ್ರಾಹಕರಿಗೆ ಸೂಕ್ತ ಎನಿಸುವ ಸೀಮಿತ ಅವಧಿಯ ಆಕರ್ಷಕ ಕೊಡುಗೆ ಅಥವಾ  ಬ್ಯಾಂಕ್ ಶಾಖೆ ಪಕ್ಕ ಹಾದುಹೋಗುತ್ತಿದ್ದಂತೆ   ಖಾತೆಯಲ್ಲಿನ ವಿವರಗಳ ಸಂಕ್ಷಿಪ್ತ ಮಾಹಿತಿಯು ಗ್ರಾಹಕರಿಗೆ ಸಿಗುವ ಸಾಧ್ಯತೆ ನಿಜವಾಗಲಿದೆ.

ಆದಾಗ್ಯೂ ಚುರುಕಿನ ಮೊಬೈಲ್‌ಗಳೇ ವೇರೇಬಲ್ ಟೆಕ್ನಾಲಜಿಯ ಕಟ್ಟಕಡೆಯ ಸಾಧನಗಳಲ್ಲ. ತಂತ್ರಜ್ಞಾನವು ಸ್ಮಾರ್ಟ್‌ಫೋನ್‌ಗಳ ಆಚೆಗೂ ವಿಸ್ತಾರಗೊಳ್ಳುವ ಸಾಧ್ಯತೆ ಇದೆ.  ಬ್ಯಾಂಕಿಂಗ್‌ ವಹಿವಾಟು ಮುಂಬರುವ ದಿನಗಳಲ್ಲಿ  ಗ್ರಾಹಕರಿಗೆ ಭವಿಷ್ಯ ಹೇಳುವ ‘ಪ್ರಿಡಿಕ್ಟಿವ್ ಬ್ಯಾಂಕಿಂಗ್‌’   (predictive  banking)  ಎಂಬ ರೋಚಕ ಪ್ರಪಂಚವಾಗಿ ಹೊರಹೊಮ್ಮಲಿದೆ.

ಗ್ರಾಹಕರ ದಿನನಿತ್ಯದ ಚಟುವಟಿಕೆ ಗಳ ಮಾಹಿತಿಯನ್ನು ಅವರ ಅನುಮತಿ ಮೇರೆಗೆ ಗ್ರಹಿಸುವ  ಮತ್ತು  ಅವುಗಳನ್ನು ವಿಶ್ಲೇಷಿಸುವುದು  ಅಡುಗೆ ಪರಿಕರಗಳಿಂದ ಹಿಡಿದು ಕಾರಿನವರೆಗೆ ಅಳವಡಿಸಿದ  ಸೆನ್ಸರ್ಸ್‌ಗಳಿಂದ ಸಾಧ್ಯವಾಗಲಿದೆ. ಸಂಶೋಧನೆಯ ವ್ಯಾಪ್ತಿ ಸೀಮಾತೀತವಾದದ್ದು.  ಹೆಚ್ಚು ಹೆಚ್ಚು ಸಂಶೋಧಿಸುತ್ತಿದ್ದಂತೆ ಅಗಣಿತ ಸಾಧ್ಯತೆಗಳು ಹೊರಹೊಮ್ಮಬಲ್ಲವು.

ದಿನನಿತ್ಯದ ಚಟುವಟಿಕೆಗಳಲ್ಲಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಸುತ್ತ ಅಗೋಚರ ರೀತಿಯಲ್ಲಿ ಸುತ್ತುವರೆಯಲಿವೆ. ಗ್ರಾಹಕರ ನಾಡಿಮಿಡಿತ, ನಿದ್ರೆಯ ಅಭ್ಯಾಸ, ದೈನಂದಿನ ದೇಹದಂಡನೆ, ಕ್ಯಾಲೊರಿ ಸೇವನೆ ಮತ್ತಿತರ ಆರೋಗ್ಯ ಸಂಬಂಧಿ ಮಾಹಿತಿ  ಮೇಲೂ ನಿಗಾ ಇಡಲು ಸಾಧ್ಯವಾಗಲಿದೆ. ಈ ಮೂಲಕ ವಿವಿಧ ಆರೋಗ್ಯ ಸಂಸ್ಥೆಗಳ ಜೊತೆಗಿನ ಪಾಲುದಾರಿಕೆ ಮೂಲಕ ಗ್ರಾಹಕರಿಗೆ ಸೂಕ್ತವೆನಿಸಿದ ಕಡಿಮೆ ಕಂತಿನ ವಿಮಾ ಯೋಜನೆಗಳ ಮಾಹಿತಿ ಮತ್ತು ಸೇವೆ ಒದಗಿಸಲು ಸಾಧ್ಯವಾಗಲಿದೆ. ವೈದ್ಯರ ಭೇಟಿಗೆ ಸಮಯ ನಿಗದಿಗೊಳಿಸುವುದು, ವೈದ್ಯಕೀಯ ಪರೀಕ್ಷೆಗಳು, ದೈಹಿಕ ಕಸರತ್ತುಗಳಿಗಾಗಿ ಜಿಮ್‌ ಸದಸ್ಯತ್ವ ಸಲಹೆ ನೀಡುವುದನ್ನೂ ಜಾರಿಗೆ ತರಬಹುದು.

ಭವಿಷ್ಯದಲ್ಲಿನ ಈ ಬಗೆಯ  ಬ್ಯಾಂಕಿಂಗ್‌ ವಹಿವಾಟುಗಳಿಗೆ ವೇರೇಬಲ್ಸ್ ಸಾಧನಗಳು ಬಹುಬಗೆಯಲ್ಲಿ ನೆರವಾಗಲಿವೆ. ವಹಿವಾಟು ಖಾತರಿಗೆ ಸದ್ಯಕ್ಕೆ ಬಳಕೆಯಲ್ಲಿ ಇರುವ ರಹಸ್ಯ ಸಂಖ್ಯೆ (ಪಿನ್‌) ಬದಲಿಗೆ ಜೈವಿಕ ದೃಢೀಕರಣವು  ಜಾರಿಗೆ ಬರಲಿದೆ. ಸ್ಮಾರ್ಟ್‌ವಾಚ್‌ನಲ್ಲಿನ ವ್ಯಕ್ತಿಯ ಎದೆಬಡಿತದ ಆ್ಯಪ್‌, ಪಿನ್‌ ಬದಲಿಗೆ ಬಳಸಲು ಸಾಧ್ಯವಾಗಲಿದೆ.

ಈ ಬಗೆಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ವ್ಯಾಪಕ ಬಳಕೆಯ  ಹೊರತಾಗಿಯೂ ಬ್ಯಾಂಕ್ ಶಾಖೆಗಳ ಮಹತ್ವವನ್ನು ನಿರ್ಲಕ್ಷಿಸುವಂತಿಲ್ಲ. ಬ್ಯಾಂಕ್ ಶಾಖೆಗಳು ಅಗತ್ಯವಾಗಿ ಇರಲೇಬೇಕು. ಈ ಹಿಂದಿನಂತೆ ಅವು ಆದ್ಯತಾ ಪಟ್ಟಿಯಲ್ಲಿ ಮೇಲೆ ಇರದಿದ್ದರೂ, ರಿಟೇಲ್ ಬ್ಯಾಂಕ್ ಶಾಖೆಗಳು ಭವಿಷ್ಯದಲ್ಲಿ ಹೊಸ ಬಗೆಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಲಿವೆ.

ಬ್ಯಾಂಕ್ ಹಾಗೂ ಗ್ರಾಹಕರಿಬ್ಬರಿಗೂ ತಂತ್ರಜ್ಞಾನವು ಹೊಸ ಹಾದಿಯನ್ನು ತೆರೆದರೂ, ಇಬ್ಬರ ಮಧ್ಯೆ ವಹಿವಾಟಿನ ಬಾಂಧವ್ಯ ಬೆಸೆಯಲು ಶಾಖೆಗಳು ಬೇಕಾಗುತ್ತವೆ.  ಗ್ರಾಹಕರ ಪ್ರತಿಯೊಂದು ನಡೆ, ಇಷ್ಟಾ ನಿಷ್ಟಗಳನ್ನು ಗ್ರಹಿಸುವ, ವಿಶ್ಲೇಷಿಸುವ ಅಸಂಖ್ಯ ಉಪಕರಣಗಳಿಂದ ಸಿಗುವ ಮಾಹಿತಿಯನ್ನು ಗ್ರಾಹಕರ ಹಣಕಾಸು ಅಗತ್ಯಗಳನ್ನೆಲ್ಲ ಈಡೇರಿಸಲು ಸಮರ್ಥವಾಗಿ ಬಳಸಿಕೊಂಡರೆ  ಬ್ಯಾಂಕಿಂಗ್‌ ವಹಿವಾಟು ಖಂಡಿತವಾಗಿಯೂ ಹೊಸ ಮಜಲು ತಲುಪಲಿದೆ.

ರಾಜೀವ್ ಆನಂದ್,
ಆಕ್ಸಿಸ್ ಬ್ಯಾಂಕ್‌ನ ರಿಟೇಲ್‌ ಬ್ಯಾಂಕಿಂಗ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT