ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಂತ್ರಜ್ಞಾನ ಬಳಸಿದ ‘ಐಎಸ್‌’ ಉಗ್ರರು

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಪ್ಯಾರಿಸ್‌ ಮೇಲೆ ಪೈಶಾಚಿಕ ದಾಳಿ ನಡೆಸಿದ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಕಾರ್ಯಾಚರಣೆ ಉದ್ದೇಶಕ್ಕೆ, ರಹಸ್ಯ ಸಂಕೇತಗಳ ಮೂಲಕ ಮಾಹಿತಿ ರವಾನಿಸುವ ಟೆಲಿಗ್ರಾಂ ಸಂದೇಶ ಆ್ಯಪ್‌ ಹಾಗೂ ಜನಪ್ರಿಯ ಆನ್‌ಲೈನ್‌ ಕಂಪ್ಯೂಟರ್ ಆಟ ‘ಪ್ಲೇ ಸ್ಟೇಷನ್‌ 4’ (ಪಿಎಸ್‌4) ಬಳಸಿದ್ದಾರೆ ಎನ್ನುವುದನ್ನು ಸಚ್ಚಿದಾನಂದ ಕುರಗುಂದ ಇಲ್ಲಿ ವಿಶ್ಲೇಷಿಸಿದ್ದಾರೆ.

ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ ಮೇಲೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಇತ್ತೀಚೆಗೆ ನಡೆಸಿದ ದಾಳಿಗೆ ಇಡೀ ಜಗತ್ತೇ ಬೆಚ್ಚಿಬಿದ್ದಿತ್ತು. ಉಗ್ರರು ನಡೆಸಿದ ಇಂತಹ ವಿಧ್ವಂಸಕವನ್ನು ತಡೆಯಲು ಬೇಹುಗಾರಿಕೆ ಸಂಸ್ಥೆಗಳು ವಿಫಲವಾಗಿಯೇ ಎನ್ನುವುದು   ಚರ್ಚೆಗೆ ಗ್ರಾಸವಾಯಿತು. ಉಗ್ರರ ನಿಗೂಢ ಕಾರ್ಯಾಚರಣೆ ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಹೊಂದಿರುವ ಬೇಹುಗಾರಿಕೆ ಸಂಸ್ಥೆಗಳು ಎಡವಿದ್ದು ಎಲ್ಲಿ ಎನ್ನುವ ಪ್ರಶ್ನೆ ಸಹಜವಾಗಿ ಮೂಡಿತು. 

ತೀವ್ರ ತರಹದ ತನಿಖೆಯ ನಂತರ ಕೆಲವು ಸಂಗತಿಗಳು ಇದೀಗ ಬೆಳಕಿಗೆ ಬಂದಿವೆ. ಅದರಲ್ಲಿ ಉಗ್ರರು ಪರಸ್ಪರ ಮಾಹಿತಿ ವಿನಿಯಮಯಕ್ಕೆ ಎರಡು ವಿಭಿನ್ನವಾದ ವಿಧಾನಗಳನ್ನು ಅನುಸರಿಸಿರುವ ಸಾಧ್ಯತೆಗಳನ್ನು ಬೇಹುಗಾರಿಕೆ ಸಂಸ್ಥೆಗಳು ಪತ್ತೆ ಮಾಡಿವೆ. ರಹಸ್ಯ ಸಂಕೇತಗಳ ಮೂಲಕ ಮಾಹಿತಿ ರವಾನಿಸುವ ಟೆಲಿಗ್ರಾಂ ಸಂದೇಶ ಆ್ಯಪ್‌ (Telegram messaging app) ಹಾಗೂ ಜನಪ್ರಿಯ ಆನ್‌ಲೈನ್‌ ಕಂಪ್ಯೂಟರ್ ಆಟ ‘ಪ್ಲೇ ಸ್ಟೇಷನ್‌ 4’  (ಪಿಎಸ್‌4) ಬಳಸಲಾಗಿದೆ ಎನ್ನುವ ಆಘಾತಕಾರಿ ಸಂಗತಿ ತಿಳಿದು ಬಂದಿದೆ. ಅಧಿಕೃತವಾಗಿ ಮಾಹಿತಿ ನೀಡಬೇಕಾದ ವ್ಯಕ್ತಿಗೆ ಮಾತ್ರ  ಸಂದೇಶ ತಲುಪುವ ವ್ಯವಸ್ಥೆಯೇ ರಹಸ್ಯ ಸಂಕೇತದ ಟೆಲಿಗ್ರಾಂ ಆ್ಯಪ್‌.

ಆಧುನಿಕ ಯುಗದ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್‌ ಅಥವಾ ಟ್ವೀಟರ್‌ ಅನ್ನು ಬಹುತೇಕ ಉಗ್ರಗಾಮಿ ಸಂಘಟನೆಗಳು ಬಳಸುತ್ತಿಲ್ಲ ಎನ್ನುವ ಅಚ್ಚರಿಯ ಸಂಗತಿಯೂ ಬೆಳಕಿಗೆ ಬಂದಿದೆ. ಸಾಮಾಜಿಕ ತಾಣಗಳ ಮೇಲೆ ನಿರಂತರವಾಗಿ ನಿಗಾ ವಹಿಸುತ್ತಿರುವುದೇ ಇದಕ್ಕೆ ಕಾರಣ ಎನ್ನುವುದು ಬೇಹುಗಾರಿಕೆ ಸಂಸ್ಥೆಗಳ ಅಭಿಪ್ರಾಯ. ಐಎಸ್‌ನಂತಹ ಉಗ್ರಗಾಮಿ ಸಂಘಟನೆಗಳು ತಮ್ಮ ವಿಚಾರಧಾರೆಗಳನ್ನು ಪ್ರಚುರಪಡಿಸಲು ಮತ್ತು ಯುವಕರನ್ನು ನೇಮಿಸಿಕೊಳ್ಳಲು ಮಾತ್ರ ಈ ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿವೆ. ಕಾರ್ಯಾಚರಣೆ ನಡೆಸುವ ವಿವರಗಳ ಮಾಹಿತಿ ವಿನಿಮಯಕ್ಕೆ ಮಾತ್ರ ರಹಸ್ಯ ವಿಧಾನದ ಟೆಲಿಗ್ರಾಂ ಕಳುಹಿಸುವ ವ್ಯವಸ್ಥೆಯನ್ನೇ ಅನುಸರಿಸುತ್ತಿವೆ.

ಈ ವಿಧಾನದಲ್ಲಿ ಕಳುಹಿಸುವ ಮಾಹಿತಿ ಇನ್ನೊಬ್ಬರಿಗೆ ಅರ್ಥವಾಗುವುದೇ ಇಲ್ಲ.  ಇಲ್ಲಿನ ಖಾಸಗಿ ಸಂದೇಶಗಳನ್ನು ಯಾರಿಂದಲೂ ನೋಡಲು ಸಹ ಸಾಧ್ಯವಾಗುವುದಿಲ್ಲ. ಮಾಹಿತಿ ಸ್ವೀಕರಿಸುವ ವ್ಯಕ್ತಿಗೆ ಮಾತ್ರ ವಿಶಿಷ್ಟವಾದ ಸಂಕೇತಗಳ ಮೂಲಕ ಸಂದೇಶ ರವಾನೆಯಾಗುತ್ತದೆ. ಈ ರೀತಿಯ ವ್ಯವಸ್ಥೆಯಲ್ಲಿ ಏಕಕಾಲಕ್ಕೆ 200 ಮಂದಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಸಂಪೂರ್ಣ ಖಾಸಗಿತನ ಕಾಪಾಡುವುದೇ ಟೆಲಿಗ್ರಾಂ ವಿಶಿಷ್ಟವಾಗಿದೆ ಎನ್ನುತ್ತಾರೆ ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಗಳು.

ಈ ವ್ಯವಸ್ಥೆಯಲ್ಲಿ ಇನ್ನೊಂದು ಮಹತ್ವದ ಆಯ್ಕೆಯೂ ಇದೆ. ಕೆಲವು ಕ್ಷಣಗಳ ನಂತರ ಯಾವುದೇ ಸಂದೇಶ ತಾನಾಗಿಯೇ ಅಳಸಿ ಹೋಗುತ್ತದೆ. ರಷ್ಯಾದ ಜನಪ್ರಿಯ ಸಾಮಾಜಿಕ ಜಾಲ ತಾಣ ‘ವಿಕೊಂಟಕ್ಟೆ’ ಅಭಿವೃದ್ಧಿಪಡಿಸಿದ  ನಿಕೊಲೈ ಮತ್ತು ಪವೆಲ್‌ ದುರೊವ್‌ ಸಹೋದರರೇ ಈ ಆಧುನಿಕ ಟೆಲಿಗ್ರಾಂ ಸೌಲಭ್ಯವನ್ನೂ  ಅಭಿವೃದ್ಧಿಪಡಿಸಿದ್ದಾರೆ. ‘ವಿಕೊಂಟಕ್ಟೆ’ ಮಧ್ಯ ಏಷ್ಯಾ ಮತ್ತು ಅರಬ್‌ ದೇಶಗಳಲ್ಲಿ  ಜನಪ್ರಿಯವಾಗಿದೆ. ಅದರಲ್ಲೂ ಇರಾನ್‌, ಉಜಬೇಕಿಸ್ತಾನ್‌, ಬಹರೇನ್‌, ಇರಾಕ್‌ ಮತ್ತು ಯೆಮನ್‌ನಲ್ಲಿ ಅತಿ ಹೆಚ್ಚು ಬಳಕೆದಾರರಿದ್ದಾರೆ. ಈ ಜಾಲ ತಾಣವನ್ನು ಅಂದಾಜು 6 ಕೋಟಿಗೂ ಹೆಚ್ಚು ಮಂದಿ ಬಳಸುತ್ತಿದ್ದಾರೆ.

ಇಸ್ಲಾಮಿಕ್‌ ಸ್ಟೇಟ್‌ ಸೇರಿದಂತೆ ಇತರ ಉಗ್ರಗಾಮಿ ಸಂಘಟನೆಗಳ ಬೆಂಬಲಿಗರು ಅಮೆರಿಕ ಮೂಲದ ಸಂಪರ್ಕ ಜಾಲ ತಾಣಗಳನ್ನು ನಿರ್ದಿಷ್ಟ ಪರಿಮಿತಿಗೆ ಮಾತ್ರ ಬಳಸುತ್ತಾರೆ. ಅದರಲ್ಲೂ ಅನಾಮಧೇಯ ಖಾತೆಗಳ ಮೂಲಕ ತಮ್ಮದೇ ಆದ ಪೂರ್ವನಿರ್ಧರಿತ ಸಂಕೇತಗಳಿಂದ ಈ ಸಂಘಟನೆಗಳ ಬೆಂಬಲಿಗರು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ಬೃಹತ್‌ ಪ್ರಮಾಣದಲ್ಲಿ ಕೈಗೊಳ್ಳುವ ಮಾಹಿತಿ ವಿನಿಮಯಕ್ಕೆ  ಹೆಚ್ಚಿನ ಸಮನ್ವಯತೆ ಬೇಕಾಗುತ್ತದೆ. ಹೀಗಾಗಿ  ಟ್ವೀಟರ್‌, ಫೇಸ್‌ಬುಕ್‌ ಮತ್ತು ಯುಟೂಬ್‌ ಬಳಕೆಗೆ ಕಡಿವಾಣ ಹಾಕಲು ನಿರ್ಧರಿಸಿವೆ.

ಅಮೆರಿಕದ ನೀತಿಗಳನ್ನು ಸದಾ ವಿರೋಧಿಸುತ್ತಾ ಬಂದಿರುವವರು ಸಹ ಆ ದೇಶದ ಸಾಮಾಜಿಕ ತಾಣಗಳ ಸೇವೆಗಳನ್ನು ನಿರಾಕರಿಸುತ್ತಿದ್ದಾರೆ ಎನ್ನುವ ಸಂಗತಿಯೂ ಈಗ ಬೆಳಕಿಗೆ ಬಂದಿದೆ. ಟೆಲಿಗ್ರಾಂ ಜತೆಗೆ  ಜನಪ್ರಿಯ ಕಂಪ್ಯೂಟರ್‌ ಆಟ ‘ಪ್ಲೇ ಸ್ಟೇಷನ್‌ 4’ ಸಹ ಪ್ರಮುಖ ಸಾಧನವಾಗಿ ಉಗ್ರರು ಬಳಸಿರುವ ಸಾಧ್ಯತೆಯೂ ಇದೆ ಎಂದು ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ‘ಐಎಸ್‌ಐಎಸ್‌ ಏಜೆಂಟರು ಸಂವಹನ ನಡೆಸಲು ಪಿಎಸ್‌4 ಬಳಸುತ್ತಿದ್ದಾರೆ. ಈ ಸಾಧನದ ಮೇಲೆ ನಿಗಾವಹಿಸುವುದು ಕಷ್ಟಸಾಧ್ಯವಾಗಿರುವುದರಿಂದ ಉಗ್ರರು ಇದನ್ನು ಆಯ್ಕೆ ಮಾಡಿಕೊಂಡಿರಬಹುದು’ ಎಂದು ಬೆಲ್ಜಿಯಂ ಗೃಹ ವ್ಯವಹಾರಗಳ ಸಚಿವ ಜಾನ್‌ ಜಂಬೋನ್‌ ಇತ್ತೀಚೆಗೆ ಬಹಿರಂಗ ಹೇಳಿಕೆ ನೀಡಿದ್ದರು.

ಮಾತುಕತೆ ಇಲ್ಲದೆ ಕೇವಲ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವಂತೆ ಉಗ್ರರು ‘ಪಿಎಸ್‌ 4’ ಅನ್ನು ಬಳಸುತ್ತಿದ್ದಾರೆ. ತಾಂತ್ರಿಕವಾಗಿ ಈ ಸಾಧನದ ಮೇಲೆ ನಿಗಾವಹಿಸಲು ಸಾಧ್ಯವಾಗದಿರುವುದೇ ಇದರ ವಿಶಿಷ್ಟವಾಗಿದೆ. ಹೀಗಾಗಿ ಉಗ್ರರು ಮಾಹಿತಿ ವಿನಿಯಮಕ್ಕೆ  ಪಿಎಸ್‌4 ಬಳಸುವ ಸುಲಭ ವಿಧಾನವನ್ನು ಕಂಡುಕೊಂಡಿದ್ದಾರೆ. ಉಗ್ರರ ಈ ರೀತಿಯ ವಿಭಿನ್ನ ಚಾಣಾಕ್ಷತನದ ಕಾರ್ಯಾಚರಣೆಗಳು ಮಾತ್ರ ಭದ್ರತಾ ಸಂಸ್ಥೆಗಳಿಗೆ ಸವಾಲೊಡ್ಡಿವೆ. ಇಂತಹ ಸವಾಲುಗಳನ್ನು ಎದುರಿಸಿದಾಗಲೇ ಉಗ್ರಗಾಮಿ ಸಂಘಟನೆಗಳ ನಿರ್ಮೂಲನೆ ಸಾಧ್ಯ ಎನ್ನುವುದು ತಜ್ಞರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT