ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಳಿಗಳ ಬ್ರಾಂಡ್‌ ಅಂಬಾಸಿಡರ್‌

Last Updated 29 ಜೂನ್ 2015, 19:30 IST
ಅಕ್ಷರ ಗಾತ್ರ

ಕೃಷಿಯಲ್ಲಿ ಸಾಂಪ್ರದಾಯಿಕ ಪದ್ಧತಿ ಬಿಟ್ಟು ಆಧುನಿಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಅನೇಕ ಕೃಷಿಕರು ಇಂದಿಗೂ ಹಿಂದೇಟು ಹಾಕುತ್ತಾರೆ. ಹೊಸ ವಿಧಾನಗಳನ್ನು ಏಕಾಏಕಿ ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ತಮ್ಮನ್ನು ತಾವು ಪ್ರಯೋಗಕ್ಕೆ ಒಡ್ಡಿಕೊಳ್ಳುವವರು ತುಂಬಾ ಕಮ್ಮಿ. ಯಾವುದಾದರೂ ರೈತರು ಹೊಸ ವಿಧಾನಗಳ ಮೂಲಕ ಅಥವಾ ಹೊಸ ತಳಿಯನ್ನು ಪರಿಚಯಿಸಿ ಹೆಚ್ಚು ಇಳುವರಿ ಮತ್ತು ಆದಾಯ ಗಳಿಸಿದರೆ ಮಾತ್ರ ಉಳಿದ ರೈತರು ಅವರನ್ನು ಅನುಸರಿಸುವುದು ರೂಢಿ.

ಆದರೆ ಸವಾಲುಗಳನ್ನು ಸ್ವೀಕರಿಸುವ ಮೂಲಕ ಹೊಸ ಹೊಸ ವಿಧಾನಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿ ಅವುಗಳಲ್ಲಿ ಯಶಸ್ವಿ ಕಾಣುತ್ತಿದ್ದಾರೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರಿನ ಬಳಿಯ ಬೆಟ್ಟಹಳ್ಳಿ ಕೃಷಿಕ ಜಯರಾಮಯ್ಯ. ತಮ್ಮ ಅಂಕವೈಕಲ್ಯವನ್ನೂ ಮೀರಿ ಇಂಥ ಸಾಹಸಕ್ಕೆ ಕೈಹಾಕುವ ಪ್ರವೃತ್ತಿಯವರು ಇವರು.

ತಮ್ಮ ಬೇಸಾಯದ ಕ್ರಮದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದು ಸುತ್ತಮುತ್ತಲಿನಲ್ಲೆಲ್ಲ ಯಶಸ್ವಿ ಕೃಷಿಕರೆನಿಸಿದ್ದಾರೆ. ಹೊಸಹೊಸ ಪ್ರಯೋಗಗಳ ಹುಚ್ಚುತನ ಬಿಟ್ಟು ಇರುವ ಪದ್ಧತಿಯಲ್ಲಿಯೇ ಕೃಷಿ ಮುಂದುವರಿಸುವಂತೆ ಹೇಳುವ ಅನೇಕರ ‘ಬುದ್ಧಿಮಾತಿ’ಗೂ ಕಿವಿಗೊಡದೇ ಈಗಾಗಲೇ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ ಇವರು.

ಇದರಿಂದಾಗಿ ಇವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಬೆಟ್ಟಹಳ್ಳಿ ಹಾಗೂ ಸುತ್ತಲಿನ ಕೃಷಿಕರು ತಮ್ಮ ಕೃಷಿಭೂಮಿಯಲ್ಲಿ ಹೊಸ ಆವಿಷ್ಕಾರ ಮಾಡುವ ಮುನ್ನ ಜಯರಾಮಯ್ಯ ಅವರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ, ಜಯರಾಮಯ್ಯ ಅವರಿಗೆ ಆಧುನಿಕ ಕೃಷಿಯಲ್ಲಿ ಇರುವ ಆಸಕ್ತಿಯನ್ನು ಅರಿತಿರುವ ಕೃಷಿ ಅಧಿಕಾರಿಗಳು ಯಾವುದೇ ಪ್ರಾತ್ಯಕ್ಷಿಕೆ ನೀಡುವುದಿದ್ದರೂ ಅಥವಾ ಹೊಸ ತಳಿ ಪರಿಚಯಿಸಬೇಕೆಂದರೆ ಇವರನ್ನೇ ‘ಬ್ರಾಂಡ್ ಅಂಬಾಸಿಡರ್’ ರೀತಿ ಬಳಸಿಕೊಳ್ಳುತ್ತಿದ್ದಾರೆ.

ಕೃಷಿಯೇ ಜೀವ, ಬೇಸಾಯವೇ ಉಸಿರು ಎಂದು ನಂಬಿರುವ ಜಯರಾಮಯ್ಯನವರು ಎಂದಿಗೂ ಲಾಭದ ದೃಷ್ಟಿಯಿಂದ ಬೇಸಾಯ ಮಾಡಿದವರಲ್ಲ. ಏಕೆಂದರೆ ಹೊಸ ಪ್ರಯೋಗಗಳನ್ನು ಮಾಡಿದಾಗ ಅದು ಲಾಭವನ್ನೇ ತಂದುಕೊಡುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗದು. ‘ಆದರೆ ನಾನು ನಂಬಿದ ಭೂತಾಯಿ ನನ್ನ ಶ್ರಮಕ್ಕೆ ಎಂದಿಗೂ ಮೋಸ ಮಾಡಿಲ್ಲ. ನಾನು ಮಾಡುವ ಎಲ್ಲ ಕಾರ್ಯಗಳಿಗೂ ಆಕೆ ನನಗೆ ಲಾಭವನ್ನೇ ತಂದುಕೊಟ್ಟಿದ್ದಾಳೆ’ ಎನ್ನುತ್ತಾರೆ ಜಯರಾಮ.

ಜಯರಾಮ್ ಅವರು ಕಾಲಿನ ವೈಕಲ್ಯವನ್ನು ಹೊಂದಿದ್ದರೂ ಯಾವುದಕ್ಕೂ ಜಗ್ಗದೆ ವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ಎಲ್ಲಾ ಕೃಷಿ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಭಾಗವಹಿಸುತ್ತಾರೆ. ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾಗುವ ಇವರ ಕಾಯಕ ಮುಗಿಯುವುದು ಸಂಜೆ 7 ಗಂಟೆಗೆ. ಟ್ರಾಕ್ಟರ್ ಚಾಲನೆ, ಗುದ್ದಲಿ ಕೆಲಸ, ಔಷಧ ಸಿಂಪಡಣೆ ಮುಂತಾದ ಬೇಸಾಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಖುದ್ದು ನಿರ್ವಹಿಸುತ್ತಾರೆ. ತೀರಾ ಕಷ್ಟಕರ ಕಾರ್ಯಗಳಿಗೆ ಇವರ ಸಹೋದರ ಗೋವಿಂದರಾಜು ಅವರು ಸಹಕಾರ ನೀಡುತ್ತಿದ್ದಾರೆ.

ಹೈನುಗಾರಿಕೆ
ಹೈನುಗಾರಿಕೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಜಯರಾಮಯ್ಯ. ಇದನ್ನು ತಮ್ಮ ಉಪ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಕಣ್ಮರೆಯಾಗುತ್ತಿರುವ ನಾಟಿ ಹಸುಗಳು, ಎಮ್ಮೆ ಹಾಗೂ ಸೀಮೆಹಸುಗಳನ್ನು ಮಾತ್ರವಲ್ಲದೇ ನಾಟಿಕೋಳಿಗಳ ಸಾಕಣೆಯನ್ನೂ ಇವರು ಮಾಡುತ್ತಿದ್ದಾರೆ.

ಹಾಲಿನ ಮಾರಾಟದಿಂದ ಬರುವ ಆದಾಯ ಮನೆಯ ಖರ್ಚಿನ ಮೂಲ. ‘ಇವುಗಳಿಂದ ಸಿಗುವ  ಗೊಬ್ಬರವನ್ನೇ ಸಾವಯವ ಗೊಬ್ಬರಗಳನ್ನಾಗಿ ಬೆಳೆಗಳಿಗೆ ಉಣಿಸುತ್ತೇನೆ. ಇದರಿಂದ ರಾಸಾಯನಿಕ ಗೊಬ್ಬರದ ಅಗತ್ಯ ಕಂಡುಬಂದಿಲ್ಲ. ಪರಿಣಾಮವಾಗಿ ಇಳುವರಿ ಅಧಿಕವಾಗಿದ್ದು ಮಣ್ಣಿನ ಫಲವತ್ತತೆಯೂ ಹೆಚ್ಚಿದೆ, ಆರ್ಥಿಕ ಹೊರೆಯೂ ಕಡಿಮೆಯಾಗಿದೆ’ ಎನ್ನುತ್ತಾರೆ ಜಯರಾಮಯ್ಯ. ‘ನನಗೆ ಚಿಕ್ಕಂದಿನಿಂದ ಕೃಷಿ ವ್ಯಾಮೋಹ ಹೆಚ್ಚು. ಈ ಆಸೆಗೆ ಮಡದಿ ಲಕ್ಷ್ಮಿ, ಸಹೋದರ ಗೋವಿಂದರಾಜು ಮತ್ತು ಕುಟುಂಬ ಸದಾ ಸಹಕಾರ ನೀಡುತ್ತಾ ಬಂದಿದೆ. ನಾನು ಏನೇ ಸಾಧಿಸಿದ್ದರೂ ಇದರಲ್ಲಿ ನನ್ನ ಕುಟುಂಬದ ಸಹಕಾರದ ಪಾಲೇ ಹೆಚ್ಚು’ ಎನ್ನುತ್ತಾರೆ ಅವರು.

ಸಾಧಕನಿಗೊಲಿದ ಪುರಸ್ಕಾರಗಳು
ಅಂಗವೈಕಲ್ಯವನ್ನು ಮೀರಿ ಅಪರೂಪದ ಸಾಧನೆ ಮಾಡಿರುವ ಜಯರಾಮಯ್ಯ ಅವರಿಗೆ ಅನೇಕ ಪ್ರಶಸ್ತಿ - ಪುರಸ್ಕಾರಗಳು ಹುಡುಕಿ ಬಂದಿವೆ. ‘ನನ್ನ ವೈಕಲ್ಯವನ್ನು ದೋಷವಾಗಿಸಿಕೊಂಡು ಅಸಹಾಯಕರಾಗದೆ ಮತ್ತೊಬ್ಬರಿಗೆ ಹೊರೆ ಎನಿಸದೆ ಸ್ವಂತ ಪರಿಶ್ರಮದಿಂದ ಉತ್ತಮವಾಗಿ ಬಾಳು ಕಟ್ಟಿಕೊಡಬೇಕು ಎನ್ನುವುದೇ ನನ್ನ ಆಸೆ’ ಎನ್ನುತ್ತಾರೆ ಅವರು.

ದೈಹಿಕವಾಗಿ ಸಮರ್ಥರಾಗಿರುವ ಎಷ್ಟೋ ರೈತರು ತಮ್ಮ ಮೂಲ ಸೌಕರ್ಯಗಳನ್ನು ಈಡೇರಿಸಿಕೊಳ್ಳಲಾಗದೆ ಮತ್ತು ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ಎಷ್ಟೆಲ್ಲಾ ಸೌಲಭ್ಯ ನೀಡುತ್ತಿದ್ದರೂ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳದೆ ಸರ್ಕಾರವನ್ನೇ ದೂಷಿಸುತ್ತಾರೆ. ಇವರ ಮಧ್ಯೆ ಜಯರಾಮಯ್ಯ ಅವರು ವಿಭಿನ್ನರಾಗಿ ಕಾಣುತ್ತಾರೆ. ಅವರ ಸಂಪರ್ಕಕ್ಕೆ 9740294449.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT