ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನೇಪಾಳ ಮತ್ತು ನಾವು

ಸಂಗತ
Last Updated 29 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಭಾರತ ಹಿರಿಯಣ್ಣನಂತೆ ತನ್ನನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸುತ್ತಿದೆ ಎಂಬ ಭಾವನೆ ನೇಪಾಳಕ್ಕೆ ಬರದಂತೆ ನವದೆಹಲಿ ಮುಂದಿನ ಹೆಜ್ಜೆ ಇಡಬೇಕಾಗಿದೆ.

ನೇಪಾಳದಲ್ಲಿ ಈಚೆಗೆ ಘಟಿಸಿದ ಭಾರಿ ಭೂಕಂಪದ ಸಮಯದಲ್ಲಿ ಪರಿಹಾರ ಕಾಮಗಾರಿಗೆ ಧಾವಿಸಿದ ಭಾರತೀಯ ಸಂಸ್ಥೆಗಳು ಮತ್ತು ಮಾಧ್ಯಮಗಳು ಅಲ್ಲಿಯ ಜನರ ಮನ ನೋಯಿಸಿ ಅವರಿಂದ ‘ದೇಶಬಿಟ್ಟು ತೊಲಗಿ’ ಎಂದು ಹೇಳಿಸಿಕೊಂಡಿದ್ದವು. ಈ ಘಟನೆ ಇನ್ನೂ ನೆನಪಿನ ಅಂಗಳದಲ್ಲಿ ಹಸಿಯಾಗಿರುವಾಗಲೇ, ನಾವು ಮತ್ತೊಮ್ಮೆ ಅವರು ಗರಂ ಆಗುವಂತೆ ಮಾಡಿದ್ದೇವೆ. ಈ ಸಲ ಅವರ ಹೊಸ ಸಂವಿಧಾನದ ಕುರಿತು ನಾವು ತಳೆದಿರುವ ನೀತಿಯಿಂದಾಗಿ ಸಿಟ್ಟಿಗೆದ್ದು ನೇಪಾಳಿಗರು ಭಾರತದ ವಿರುದ್ಧ ಲಕ್ಷಾಂತರ ಟ್ವೀಟ್‌ಗಳನ್ನು ಹರಿಬಿಟ್ಟಿದ್ದಾರೆ. ‘ಇಂಡಿಯಾ ಬ್ಯಾಕ್ ಆಫ್’ ಎಂಬ ಟ್ವಿಟರ್ ಸರಣಿಯಲ್ಲಿ ನೋವು, ಕ್ರೋಧ ಹಂಚಿಕೊಂಡಿದ್ದಾರೆ. ಅಲ್ಲಿನ ಪತ್ರಿಕೆಗಳು ಭಾರತದ ಹಸ್ತಕ್ಷೇಪವನ್ನು ವಿಧವಿಧವಾಗಿ ಖಂಡಿಸಿವೆ.

ನಿಜ, ಭಾರತಕ್ಕೆ ನೇಪಾಳದ ಹೊಸ ಸಂವಿಧಾನದ ಬಗ್ಗೆ ಕೆಲವು ಆತಂಕಗಳಿವೆ. ಆ ಪುಟ್ಟ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮಾದೇಸಿ ಸಮುದಾಯಕ್ಕೆ ಅನ್ಯಾಯವಾಗಿದೆಯೆಂಬ ಭಾವನೆ ಇದೆ. ಅದರಲ್ಲೂ ಮಾದೇಸಿ ದಲಿತರೂ ಹೆಚ್ಚು ದಮನಕ್ಕೊಳಗಾಗಿದ್ದಾರೆ. ಭಾರತದ ಗಡಿಗುಂಟ ಇರುವ ದಕ್ಷಿಣದ ತೆರಾಯಿ ಪ್ರಾಂತವೇ ಮಾದೇಸ. ಈ ಪ್ರದೇಶದಲ್ಲಿ ನೇಪಾಳಿ ಮಾತನಾಡುವ ಮೂಲ ಮಾದೇಸಿಗಳೂ ಇದ್ದಾರೆ, ಭಾರತೀಯ ಮೂಲದವರೂ ಇದ್ದಾರೆ. ಮೈಥಿಲಿ, ಭೋಜಪುರಿ, ಅವಧ್, ಹಿಂದೂಸ್ತಾನಿ, ಬಾಜಿಕಾ ಭಾಷೆಗಳನ್ನು ಮಾತನಾಡುವವರೂ ಇದ್ದಾರೆ.

ಇವರಿಗೆ ಭಾರತೀಯರೊಡನೆ ಗಾಢ ಸಂಬಂಧಗಳಿವೆ. ವೈವಾಹಿಕ ಸಂಬಂಧಗಳೂ ಇವೆ. ಮಾದೇಸಿಗಳ ಸಂಖ್ಯೆಗೆ ತಕ್ಕಂತೆ ದೇಶದ ಸಂಪನ್ಮೂಲಗಳಲ್ಲಿ, ಸಂಸತ್ತಿನಲ್ಲಿ ಪಾಲು ಸಿಕ್ಕಿಲ್ಲ, ಸಿಗುವುದಿಲ್ಲವೆಂದೇ ನಂಬಲಾಗಿದೆ. ಭೌಗೋಳಿಕವಾಗಿ ದೇಶದ ಕಾಲು ಭಾಗದಲ್ಲಿ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಮಾದೇಸಿ ಜನ  ಪ್ರತ್ಯೇಕ ಪ್ರಾಂತ್ಯವನ್ನು ಬೇಡುತ್ತಲೇ ಬಂದಿದ್ದಾರೆ. ಸಂವಿಧಾನ ಇದನ್ನು ತಿರಸ್ಕರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮತ್ತು ಹೊಸ ಪ್ರಾಂತ್ಯಗಳ ಗಡಿ ಹಂಚಿಕೆ ವಿಷಯದಲ್ಲಿ ಸಂವಿಧಾನ ಸಮಿತಿಯ ತೀರ್ಮಾನದ ವಿರುದ್ಧ ನಡೆದ ಹಿಂಸೆಗಳಲ್ಲಿ ಇತ್ತೀಚೆಗೆ 40 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರ ಭಾರತಕ್ಕೂ ಹಬ್ಬಬಹುದೆಂಬ ಆತಂಕ ಭಾರತಕ್ಕಿದ್ದೇ ಇದೆ.

ನೇಪಾಳದಿಂದ ಜನರ ವಲಸೆ ಆರಂಭಗೊಳ್ಳುವುದು ಅಥವಾ ನೆರೆ ದೇಶ ಅತಂತ್ರಗೊಳ್ಳುವುದು ನಮಗೆ ಬೇಕಿಲ್ಲ. ಗಡಿ ಭಾಗದಲ್ಲಿ ಶಾಂತಿ ಬಯಸುತ್ತೇವೆ. ಭಾರತ ಮೊದಲಿನಿಂದಲೂ ಈ ಸಮುದಾಯದ ಹಿತರಕ್ಷಣೆಗೆ ಯತ್ನಿಸಿದೆ. ಆದರೆ ಹೆಚ್ಚಿನ ಪ್ರತಿಫಲ ಸಿಕ್ಕಿರಲಿಲ್ಲ.  ನೇಪಾಳ ಅತ್ಯಂತ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ತನ್ನ ಹೊಸ ಸಂವಿಧಾನವನ್ನು ಕಂಡುಕೊಂಡಿದೆ. ಅದು ಬಹುಮತದಿಂದ ಅಂಗೀಕೃತಗೊಂಡ ನಂತರ ನಮ್ಮ ವಿದೇಶ ವ್ಯವಹಾರಗಳ ಕಾರ್ಯದರ್ಶಿ ನೇಪಾಳಕ್ಕೆ ಹೋಗಿ ಸಂವಿಧಾನ ಜಾರಿಗೊಳಿಸುವುದನ್ನು ಮುಂದೂಡಲು ಒತ್ತಾಯ ಹೇರಿದ್ದು ಅಲ್ಲಿನ ಜನರನ್ನು ಕೆರಳಿಸಿದೆ.

ಅಲ್ಲದೆ ಸಂವಿಧಾನವನ್ನು ಸ್ವಾಗತಿಸದೆ, ಭಾರತವು ನೇಪಾಳದ ಈ ಬೆಳವಣಿಗೆಯನ್ನು ತನ್ನ ಅಧಿಕೃತ ಪ್ರಕಟಣೆಯಲ್ಲಿ ಇದನ್ನು ‘ಗಮನಿಸಿದೆ’ ಎಂಬುದಾಗಿ ಮಾತ್ರ ಹೇಳಿ, ನೇಪಾಳದ ಮಹತ್ವದ ಬೆಳವಣಿಗೆಯನ್ನು ಕಡೆಗಣಿಸಿತು. ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳು ಹೆಚ್ಚು ಬೆಚ್ಚಗಿನ ಪ್ರತಿಕ್ರಿಯೆ ನೀಡಿ ನೇಪಾಳದ ಹೃದಯಕ್ಕೆ ಹತ್ತಿರವಾದವು.

ಕೆಲವು ಪರಿಣತರು ಹೇಳಿರುವಂತೆ ಭಾರತವು ರಾಜತಾಂತ್ರಿಕವಾಗಿ ಎಷ್ಟೋ ತಿಂಗಳುಗಳ ಹಿಂದೆ ಸೂಕ್ತ ಪ್ರಯತ್ನ ಮಾಡಿ, ನೇಪಾಳದ ಸಂವಿಧಾನದಲ್ಲಿ ತನ್ನ ಕಾಳಜಿಗಳಿಗೆ ಉತ್ತರಗಳು ಸಿಗುವಂತೆ ನೋಡಿಕೊಳ್ಳಬೇಕಿತ್ತು. ಹಾಗಾಗಿಲ್ಲವೆಂದ ಮಾತ್ರಕ್ಕೆ ನೇಪಾಳಿಗರನ್ನು ಇನ್ನಷ್ಟು ಕೆರಳಿಸುವ ಅವಶ್ಯಕತೆ ಇತ್ತೆ? ಮುಂದೆಯೂ ನೇಪಾಳದ ಸಂವಿಧಾನದಲ್ಲಿ ಸೂಕ್ತ ಮಾರ್ಪಾಡಿಗೆ ಪ್ರಯತ್ನಿಸಬಹುದು. ಹಾಗೆ ಮಾಡಲು, ಮೊದಲ ಹೆಜ್ಜೆಯಾಗಿ ನಾವು ನೇಪಾಳದ ಹೊಸ ಸಂವಿಧಾನವನ್ನು ಕನಿಷ್ಠ ಪಕ್ಷ ಸ್ವಾಗತಿಸುತ್ತ ಆತಂಕಗಳನ್ನು ಬೇರೆ ವಿಧಾನದಲ್ಲಿ ತಿಳಿಸಬಹುದಿತ್ತು. ಹೆಚ್ಚು ಸಂಧಾನಚತುರತೆ ಪ್ರದರ್ಶಿಸಬಹುದಿತ್ತು.

ಇನ್ನಾದರೂ, ಹಿರಿಯಣ್ಣನಂತೆ ಹದ್ದುಬಸ್ತಿನಲ್ಲಿ ಇಡಲು ಯತ್ನಿಸುತ್ತಿದ್ದೇವೆ ಎಂಬ ಭಾವನೆ ಆ ದೇಶಕ್ಕೆ ಬರದಂತೆ ಮುಂದಿನ ಹೆಜ್ಜೆ ಇಡಬೇಕಷ್ಟೆ. ನೇಪಾಳೀಯರೊಬ್ಬರು ಟ್ವೀಟ್‌ನಲ್ಲಿ, ತಾವು ಭಾರತದ ವಿರೋಧಿಗಳಲ್ಲ, ಆದರೆ ತಮ್ಮ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಭಾರತದ ರಾಜಕೀಯವನ್ನು ಮಾತ್ರ ವಿರೋಧಿಸುತ್ತೇವೆ ಎಂದು ಹೇಳಿರುವುದನ್ನು ಗಮನಿಸಿ, ಗೌರವಿಸಬೇಕು. ಸುಮಾರು 1,700 ಕಿ.ಮೀ.ನಷ್ಟು ಮುಕ್ತ ಗಡಿಯನ್ನು ನೇಪಾಳದೊಡನೆ ಹಂಚಿಕೊಂಡಿದ್ದೇವೆ ತಾನೆ?

ನೇಪಾಳ ಬೇಕಾದಾಗ ಸಹಾಯ ಕೇಳುತ್ತದೆ, ಬೇಡವಾದಾಗ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ಆಪಾದಿಸುತ್ತದೆ ಎಂಬ ಭಾವನೆ ದೆಹಲಿಯಲ್ಲಿದೆ. ಆದರೆ ನಾವು ನೇಪಾಳದ ಸದ್ಯದ ಆಶೋತ್ತರಗಳನ್ನು, ಅವುಗಳಿಗೆ ಸಾಂವಿಧಾನಿಕ ಚೌಕಟ್ಟು ತೊಡಿಸುವ ಹವಣಿಕೆಯನ್ನು ಹೆಚ್ಚು ಪ್ರೌಢಿಮೆಯಿಂದಲೇ ನೋಡುವುದು ಸದ್ಯದ ಅಗತ್ಯವೆಂದೇ ತೋರುತ್ತದೆ.  ಒಂದು ದಶಕದುದ್ದಕ್ಕೂ ಯುದ್ಧ ನಡೆಸಿದ ಮಾವೊವಾದಿಗಳು 2006ರ ಶಾಂತಿ ಒಪ್ಪಂದದ ನಂತರ ಹೊಸ ಸಂವಿಧಾನದ ಬೇಡಿಕೆ ಇಟ್ಟಿದ್ದರು. ಎರಡು ವರ್ಷದ ನಂತರ ನಡೆದ ಚುನಾವಣೆಯಲ್ಲಿ ಅವರು ಗೆಲ್ಲುವುದರೊಂದಿಗೆ 240 ವರ್ಷಗಳ ರಾಜರ ಆಡಳಿತ ಕೊನೆಗೊಂಡಿತು.

ಹಲವು ವರ್ಷಗಳ ವಿಳಂಬದ ಬಳಿಕ, 601 ಸದಸ್ಯರಿರುವ ಸಂವಿಧಾನ ಸಭೆ ಹೊಸ ಸಂವಿಧಾನವನ್ನು ಅಂಗೀಕರಿಸಿ ದೇಶ ಹೊಸ ದೃಢ ಹೆಜ್ಜೆ ಇಡುವ ಸಂಕಲ್ಪ ಮಾಡಿದೆ. ಈ ಸಂದರ್ಭದಲ್ಲಿ, ಭಾರತದ ಸಂಸತ್ ಸದಸ್ಯರೊಬ್ಬರು ‘ನೇಪಾಳದ ಸಂವಿಧಾನ ತಿದ್ದುಪಡಿಗೆ ಅವಕಾಶವಿದೆ. ಪ್ರಾಂತ್ಯ ಸಮಸ್ಯೆಗಳನ್ನು ತಿದ್ದಿಕೊಳ್ಳಬಹುದು’ ಎಂದು ಹೇಳಿದ್ದಾರೆ. ನಮ್ಮಲ್ಲೂ ಕೆಲವು ರಾಜ್ಯಗಳ ಏಕೀಕರಣವಾದದ್ದು ಸ್ವಾತಂತ್ರ್ಯ ಬಂದು, ಸಂವಿಧಾನ ಜಾರಿಗೊಂಡ ಎಷ್ಟೋ ವರ್ಷಗಳ ಬಳಿಕ ತಾನೆ?

ಭಾರತದಲ್ಲೂ ಇಂದಿಗೂ ಕೆಳವರ್ಗಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸಂದರ್ಭ ಇರುವಾಗ, ನೇಪಾಳದಲ್ಲಿ ಎಲ್ಲವೂ ಮೊದಲಿನಿಂದಲೇ ಸರಿಯಾಗಿರಬೇಕೆಂದು ಎಷ್ಟರ ಮಟ್ಟಿಗೆ ಬಯಸಬಹುದು? ಹಾಗಾಗಿ, ‘ಭಾರತೀಯರೇ ನಾವು ಅಸಮರ್ಥರಲ್ಲ, ನಮ್ಮನ್ನು ನಾವು ಆಳಿಕೊಳ್ಳುತ್ತೇವೆ ಬಿಡಿ’ ಎಂದು ನೇಪಾಳಿಗರು ನಮಗೆ ಹೇಳುವುದರಲ್ಲಿ ಯಾವುದೇ ಆಡಂಬರದ ಗರ್ವ ಕಾಣುವುದಿಲ್ಲ. ಏಕೆಂದರೆ ನೇಪಾಳದ ಸಂವಿಧಾನದಲ್ಲಿ ಕೆಲವು ಉದಾತ್ತ ಅಂಶಗಳಿವೆ. ಭಾರತದಂತೆ ಅದು ಕೂಡ ಸರ್ವಧರ್ಮ ಸಹಿಷ್ಣುವಾಗಲಿದೆ. ಅನೇಕ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಭಾರತಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ತೃತೀಯ ಲಿಂಗಿಗಳ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದೆ.

ನಮಗೆ ಸ್ವಾತಂತ್ರ್ಯ ಬಂದಾಗ ಹಿಂದಿನ ಬ್ರಿಟನ್ ಪ್ರಧಾನಿ ವಿನ್ಸ್‌ಟನ್‌ ಚರ್ಚಿಲ್‌ ಭಾರತವನ್ನು ಅಪಹಾಸ್ಯ ಮಾಡಿ, ನಮ್ಮನ್ನು ನಾವು ಆಳಿಕೊಳ್ಳುವುದರಲ್ಲಿ ಅಸಮರ್ಥರು ಎಂದು ಹೇಳಿದ್ದು ನೆನೆದು, ನಾವೂ ನೇಪಾಳದ ವಿಷಯದಲ್ಲಿ ಹಾಗೆ ಮಾಡದಿದ್ದರೆ ಒಳ್ಳೆಯದಲ್ಲವೆ? ಸಂವಿಧಾನ ಆಧಾರಿತ ಹೊಸ ಪ್ರಜಾಪ್ರಭುತ್ವವನ್ನು ಸ್ವಾಗತಿಸಿ, ಭವಿಷ್ಯದತ್ತ ಆಶಾಭಾವದಿಂದ ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT