ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬ್ರೌಸರ್ ‘ಸ್ಪಾರ್ಟನ್’

ತಂತ್ರೋಪನಿಷತ್ತು
Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್‌ ಅಂದರೆ ಎಕ್ಸ್‌ಪ್ಲೋರರ್‌. ಇಂಟರ್‌ನೆಟ್‌ ಬಳಕೆ ಮಾಡಬೇಕು ಎಂದರೆ ಎಕ್ಸ್‌ಪ್ಲೋರರ್‌ಗೇ  ಹೋಗಬೇಕು. ಇದು ಫೈರ್ ಫಾಕ್ಸ್, ಒಪೆರಾ, ಕ್ರೋಮ್ ಬರುವವರೆಗೂ ನಮ್ಮಲ್ಲಿದ್ದ ಭಾವನೆ. ಹೊಸ ಬ್ರೌಸರ್‌ಗಳು ಬಂದರೂ ಇದರ ಬಳಕೆಯೇನೂ ತಗ್ಗಿಲ್ಲ.

ಇ-ಮೇಲ್ ಕಳುಹಿಸಲಷ್ಟೇ ಅಲ್ಲದೆ, ಆನ್‌ಲೈನ್‌ ಅರ್ಜಿ ತುಂಬಲು, ರೈಲು, ಬಸ್‌ ಟಿಕೆಟ್‌ ಬುಕ್‌ ಮಾಡಲು ಹೀಗೆ ಇನ್ನಿತರ ಅತ್ಯಗತ್ಯ ಕೆಲಸಗಳನ್ನು ಮಾಡಲು ಇಂದಿಗೂ ಬಹಳಷ್ಟು ಜನರಿಗೆ ಎಕ್ಸ್‌ಪ್ಲೋರರ್‌ ನೆಚ್ಚಿನ ಬ್ರೌಸರ್. ವಿಂಡೋಸ್ 95 ಮತ್ತು ನಂತರದ ಅಂದರೆ ಸದ್ಯ ವಿಂಡೋಸ್ 8ರಲ್ಲೂ ಪರಿಷ್ಕೃತ ಆವೃತ್ತಿ ಎಕ್ಸ್‌ಪ್ಲೋರರ್‌11 ಬಳಕೆಯಲ್ಲಿದೆ. ಕಾಲಕ್ಕೆ ತಕ್ಕಂತೆ ಮೈಕ್ರೋ ಸಾಫ್ಟ್ ತನ್ನ ಬ್ರೌಸರ್ ಅಭಿವೃದ್ಧಿಪಡಿಸುತ್ತಿರು ವುದೂ ಇದಕ್ಕೆ ಕಾರಣ. ಇದರಿಂದಲೇ 19 ವರ್ಷಗಳಿಂದಲೂ ತನ್ನ ಜನಪ್ರಿಯತೆ ಕಾಯ್ದುಕೊಂಡು ಬಂದಿದೆ.

ಆದರೆ, ಮೈಕ್ರೋಸಾಫ್ಟ್ ಕಂಪೆನಿ ಮೊನ್ನೆಯಷ್ಟೇ (ಜ.21) ತನ್ನ ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿ ‘ವಿಂಡೋಸ್10’ರ ಜತೆಗೇ ಹೊಸ ಬ್ರೌಸರ್ ‘ಸ್ಪಾರ್ಟನ್’ ಪರಿಚಯಿಸಿದೆ. ಇದು ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ (IE) ಬದಲಿಗೆ ವಿಂಡೋಸ್‌10ರಲ್ಲಿ Default Browser ಆಗಲಿದೆ ಎನ್ನುವುದೇ ತುಸು ಆತಂಕ, ಅಚ್ಚರಿ ಮೂಡಿಸಿದೆ. Edge ಎಂಬ ರೆಂಡ ರಿಂಗ್‌ ಎಂಜಿನ್‌ ಹೊಂದಿರುವ ಈ ಬ್ರೌಸರ್‌, ಕೀಬೋರ್ಡ್‌, ಮೌಸ್‌, ಟಚ್‌, ಸಂಜ್ಞೆ, ಧ್ವನಿ, ಸೆನ್ಸರ್ ಹೀಗೆ ಎಲ್ಲದಕ್ಕೂ ಬೆಂಬಲ ನೀಡುತ್ತದೆ. ವೆಬ್‌ ಪುಟದಲ್ಲಿ ಟಿಪ್ಪಣಿ ಸೇರಿಸಲು ಸಾಧ್ಯವಿದೆ. ಈ ರೀತಿಯ ಇನ್ನಿತರ ಹಲವು ವಿಶೇಷ ಆಯ್ಕೆಗಳಿಂದ ‘ಸ್ಪಾರ್ಟನ್‌’ ಹೆಚ್ಚು ಬಳಕೆದಾರ ಸ್ನೇಹಿಯಾಗಲಿದೆ ಎನ್ನುವುದು ಕಂಪೆನಿ ಅಭಿಮತ.

ವಿಂಡೋಸ್ 10ರಲ್ಲಿ ಎಕ್ಸ್‌ಪ್ಲೋರರ್‌ಗೆ ಬೆಂಬಲವೇ ಇಲ್ಲ ಎಂದೇನೂ ಹೇಳಿಲ್ಲವಾದರೂ, ಬೆಂಬಲ ಮುಂದುವರಿಸುವ ಬಗ್ಗೆಯೂ ಕಂಪೆನಿ  ಸದ್ಯಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದು ಸಾಕಷ್ಟು ಗೊಂದಲಗಳನ್ನು ಹುಟ್ಟಿಹಾಕಿದೆ.

ವಿಂಡೋಸ್‌ 10ರಲ್ಲಿ ಎಕ್ಸ್‌ಪ್ಲೋರರ್‌ ಮತ್ತು ಸ್ಪಾರ್ಟನ್‌ ಎರಡಕ್ಕೂ ಬೆಂಬಲ ಇದೆ ಅಂದುಕೊಂಡರೂ ಇದು ಬಳಕೆದಾರರನ್ನು ಗೊಂದಲಕ್ಕೆ ದೂಡುತ್ತದಷ್ಟೆ. ಈ ಹಿಂದೆ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂನಲ್ಲಿ ಡೆಸ್ಕ್‌ಟಾಪ್‌ ಮತ್ತು ಮೆಟ್ರೋ ಸ್ಟೈಲ್ ಎರಡನ್ನೂ ಪರಿಚಯಿಸಿ ಬಳಕೆದಾರರನ್ನು ಗೊಂದಲಕ್ಕೆ ದೂಡಿದ್ದರ ಜತೆಗೇ ವಿಂಡೋಸ್‌ 7ರಂತೆ ಜನಪ್ರಿಯತೆ ಗಳಿಸುವಲ್ಲಿ ವಿಫಲವಾಗಿದೆ ಎಂಬುದು ಜಗಜ್ಜಾಹೀರಾಗಿರುವ ವಿಷಯ.

ಹೀಗಾಗಿ, ಒಂದೊಮ್ಮೆ ವಿಂಡೋಸ್ 10ರಲ್ಲಿ ಎಕ್ಸ್‌ಪ್ಲೋರರ್‌ ಇದ್ದರು ಕೂಡಾ ಅದು ಸೀಮಿತವಾಗಿ ಅಥವಾ ಬಳಕೆದಾರ ಬೇಕು ಎಂದಾಗ ಬಳಸಬಹುದೇ ವಿನಃ Default ಆಗಿರುವುದಿಲ್ಲ ಎನ್ನುವುದು ತಜ್ಞರ ವಾದ. ಅದೇನೇ ಇರಲಿ, ಈ ಹೊಸ ಬ್ರೌಸರ್‌ ಪರಿಚಯಿಸುವ ಮೂಲಕ ತನ್ನದೇ ಆದ ಎಕ್ಸ್‌ಪ್ಲೋರರ್‌ನ ಏಕಚಕ್ರಾಧಿಪತ್ಯ ಕೊನೆಗಾಣಿಸಲು ಸ್ವತಃ ಮೈಕ್ರೊಸಾಫ್ಟ್‌ ಕಂಪೆನಿಯೇ ಮುಂದಾಗಿದೆ ಎನ್ನುವುದೂ ಅಚ್ಚರಿ ವಿಷಯವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT