ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರಣಧೀರ!

Last Updated 24 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಇಪ್ಪತ್ತು ಸಿನಿಮಾಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ರಣಧೀರ್ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಣಧೀರ್ ನಾಯಕನಾಗಿರುವ ಚಿತ್ರ ‘ನಿಗೂಢ ರಹಸ್ಯ’ ಇಂದು (ಡಿ. 25) ತೆರೆಗೆ ಬರುತ್ತಿದೆ.

ಸಿನಿಮಾ ಬಗ್ಗೆ ಹೇಳಿಕೊಂಡಿರುವ ಅವರ ಮಾತಲ್ಲಿ ಮೊದಲ ಬಾರಿ ನಾಯಕನಾದ ಉತ್ಸಾಹ ಇತ್ತು. ಜೊತೆಗೆ ಅದೇ ಕಾರಣಕ್ಕೆ ಕೊಂಚ ಆತಂಕವೂ ಇಣುಕಿತ್ತು.

ವಿತರಕ ಡಿ.ಐ. ಕಮಲಾಕರ ಅವರ ಪುತ್ರ ರಣಧೀರ್. ಅವರು ಹುಟ್ಟಿದ್ದು ಬಳ್ಳಾರಿಯಲ್ಲಿ. ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ರಣಧೀರ್ ಅರ್ಧದಲ್ಲೇ ಬಿಬಿಎಂ ಪದವಿ ಕೈಬಿಟ್ಟರು. ನಂತರ ಮುಂಬೈಗೆ ತೆರಳಿ ಅನುಪಮ್ ಖೇರ್ ಇನ್‌ಸ್ಟ್ಇಟ್ಯೂಟ್‌ನಲ್ಲಿ ಹತ್ತು ತಿಂಗಳ ಅಭಿನಯ, ಸ್ಕ್ರಿಪ್ ಬರವಣಿಗೆ ತರಬೇತಿ ಪಡೆದು ಬಂದರು. ನೃತ್ಯವಂತೂ ಅವರಿಗೆ ತುಂಬಾ ಇಷ್ಟದ ಮತ್ತು ಮೊದಲಿನಿಂದಲೇ ರೂಢಿಸಿಕೊಂಡು ಬಂದ ಕಲೆ.

‘ಎ.ಕೆ. 47’, ‘ಜ್ಯೇಷ್ಠ’, ‘ಪೊಲೀಸ್ ಬೇಟೆ’, ‘ಬಾವ ಬಾಮೈದ’, ‘ಕಿಡ್ನ್ಯಾಪ್’, ‘ಚೈತ್ರದ ಚಿಗುರು’ ಇವು ರಣಧೀರ್ ಬಾಲನಟನಾಗಿ ಅಭಿನಯಿಸಿದ ಮುಖ್ಯ ಚಿತ್ರಗಳು. ಚಿಕ್ಕಂದಿನಿಂದಲೇ ಕ್ಯಾಮೆರಾ ಸಂಗವಿದ್ದ ರಣಧೀರ್‌ಗೆ ನಾಯಕನಾಗಿ ಬಡ್ತಿ ಪಡೆದಾಗ ಕ್ಯಾಮೆರಾ ಭಯವೇನೂ ಕಾಡಲಿಲ್ಲ. ಈ ಮೊದಲು ಹಲವು ಸ್ಟಾರ್ ನಟರು, ಹಿರಿಯ ಕಲಾವಿದರೊಂದಿಗೆ ನಟಿಸಿದ್ದ ರಣಧೀರ್ ಅವರಿಂದ ಕೆಲವು ಕೌಶಲ, ವೃತ್ತಿಪರತೆಯನ್ನೂ ಕಲಿತಿದ್ದಾರೆ. ಆ ಅನುಭವಗಳನ್ನೆಲ್ಲ ಬೆನ್ನಿಗಿಟ್ಟುಕೊಂಡು ಅವರೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ವಿಷ್ಣುವರ್ಧನ್ ಅಭಿನಯದ 2004ರಲ್ಲಿ ತೆರೆಕಂಡ ‘ಜ್ಯೇಷ್ಠ’ ಚಿತ್ರದ ನಂತರ ರಣಧೀರ್ ಅಭಿನಯಿಸಿದ್ದ ಸಿನಿಮಾ ಚಿತ್ರ ತೆರೆಗೆ ಬಂದಿಲ್ಲ. ಹಾಗಾಗಿ ರಣಧೀರ್ ನಟನೆಯಿಂದ ದೂರವಿದ್ದಿದ್ದು ನಾಲ್ಕು ವರ್ಷಗಳಾದರೂ ತೆರೆಯ ಮೇಲೆ ಕಾಣಿಸಿಕೊಳ್ಳದೇ ಹತ್ತು ವರ್ಷಗಳೇ ಕಳೆದಿವೆ. ಮಗನನ್ನು ಹೀರೊ ಆಗಿ ನೋಡಬೇಕೆಂಬ ತಂದೆಯ ಹಂಬಲ ಅವರನ್ನು ನಾಯಕನನ್ನಾಗಿ ಮಾಡಿದೆ. ನಿರ್ದೇಶಕ ಎಂ.ಡಿ. ಕೌಶಿಕ್ ಒಂದೊಳ್ಳೆಯ ಕಥೆ ಇದೆ ಎಂದಾಗ ಅವರನ್ನು ಭೇಟಿಯಾಗು ಎಂದು ಮಗನಿಗೆ ಕಮಲಾಕರ ಅವರು ಹೇಳಿದ್ದರು. ಆದರೆ ರಣಧೀರ್‌ಗೆ ಎರಡು ಬಾರಿ ಕೌಶಿಕ್ ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದಾಗ ಅವರಿಗೆ ಕೋಪವೂ ಬಂದಿತ್ತಂತೆ. ಮೂರನೇ ಬಾರಿ ನಿರ್ದೇಶಕರನ್ನು ಭೇಟಿಯಾದ ರಣಧೀರ್ ಕಥೆಯನ್ನು ಮೆಚ್ಚಿಕೊಂಡಿದ್ದಾರೆ.

ಬೀಚಿ ಅವರ ‘ಸತ್ತವನು ಎದ್ದು ಬಂದಾಗ’ ಕಾದಂಬರಿಯನ್ನು ಚಿತ್ರಕ್ಕೆ ಆಯ್ದುಕೊಂಡಿದ್ದಾರೆ ಕೌಶಿಕ್. ‘ಬೀಚಿ ಅವರು ಈ ಕಾದಂಬರಿ ಬರೆದು ಎಷ್ಟೋ ವರ್ಷಗಳೇ ಆದರೂ ಅದರ ಕಥಾವಸ್ತು ಮಾತ್ರ ಹಳೆಯದಾಗಿರಲಿಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾದ ಕಾರಣ ಸೇಫ್ ಜೋನ್‌ನಲ್ಲಿ ಇರಬಹುದು ಎಂದು ಈ ಕಥೆಯನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ರಣಧೀರ್. ಅವರಿಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸನೊನಬ್ಬನಿಗೆ ಅಚಾನಕ್ಕಾಗಿ ಎದುರಾಗುವ ಕಷ್ಟಗಳನ್ನು ಆತ ಹೇಗೆಲ್ಲ ಎದರಿಸುತ್ತಾನೆ ಎಂಬ ಕಥಾಹಂದರದಲ್ಲಿ ತಮ್ಮ ಪಾತ್ರಕ್ಕೆ ನಾಯಕತ್ವದ ಗುಣವೂ ಇರುವುದು ಅವರಿಗೆ ಇಷ್ಟವಾಗಿದೆ.

‘ನಿಗೂಢ ರಹಸ್ಯ’ದಲ್ಲೂ ಚರಣ್ ರಾಜ್, ಸುಂದರ್ ರಾಜ್‌ರಂಥ ಹಿರಿಯ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ರಣಧೀರ್. ‘ಅವರೆಲ್ಲ ನನ್ನ ನಟನೆ ಮತ್ತು ಡೈಲಾಗ್ ಡೆಲಿವರಿಯನ್ನು ಉತ್ತಮಪಡಿಸಿಕೊಳ್ಳಲು ಸಲಹೆ ನೀಡಿದರು’ ಎನ್ನುತ್ತಾರೆ ರಣಧೀರ್. ಎಂ.ಡಿ. ಕೌಶಿಕ್ ಅವರದೇ ನಿರ್ದೇಶನದಲ್ಲಿ ‘ಮುತ್ತಿನ ಪಲ್ಲಕ್ಕಿ’ ಎಂಬ ಚಿತ್ರಕ್ಕೂ ರಣಧೀರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಅವರದು ಸೈನಿಕನ ಪಾತ್ರ. ಅದರ ಹೊರತಾಗಿ ಮಧುಸೂದನ್ ಹವಾಲ್ದಾರ್ ನಿರ್ದೇಶನದ ‘ಹೊಸಪೇಟೆಯಲ್ಲಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಸ್ಪೆನ್ಸ್ ಹಾರರ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ನಾಲ್ವರು ಮುಖ್ಯ ಪಾತ್ರಧಾರಿಗಳಲ್ಲಿ ರಣಧೀರ್ ಕೂಡ ಒಬ್ಬರು.

‘ನಿಗೂಢ ರಹಸ್ಯ’ ಸಿನಿಮಾದಿಂದಾಗಿ ಚಿತ್ರೋದ್ಯಮದಲ್ಲಿ ಭವಿಷ್ಯ ಬೆಳಗಬಹುದು ಎಂಬ ನಿರೀಕ್ಷೆಯಿಂದ ಅವರು ಸೈ ಎಂದಿದ್ದಾರೆ. ಚಿತ್ರದ ಮೇಲೆ ಭರಪೂರ ಭರವಸೆ ಇಟ್ಟುಕೊಂಡ ರಣಧೀರ್, ‘ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ. ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಎನ್ನುತ್ತಾರೆ.

‘ಮಾಸ್ಟರ್ ಪೀಸ್’ ಚಿತ್ರ ಬಿಡುಗಡೆಯಾಗಿದ್ದರೂ ತಮ್ಮ ಚಿತ್ರದ ಗಟ್ಟಿತನ ಅವರಲ್ಲಿ ಭರವಸೆಗಳನ್ನು ಹುಟ್ಟಿಸಿದೆ. ನೆಗೆಟಿವ್ ಶೇಡ್ ಇರುವ ಪಾತ್ರಗಳನ್ನು ಹೆಚ್ಚಾಗಿ ಇಷ್ಟ ಪಡುವ ರಣಧೀರ್ ಅಂಥ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

***
ಇಂದಿನಿಂದ ‘ರಹಸ್ಯ’ ಬಯಲು!
ಈ ವಾರ ಯಶ್ ಅಭಿನಯದ ಬಹು ನಿರೀಕ್ಷಿತ ದೊಡ್ಡ ಸಿನಿಮಾ ‘ಮಾಸ್ಟರ್ ಪೀಸ್’ ತೆರೆಗೆ ಅಪ್ಪಳಿಸುತ್ತಿದೆ. ಅದರ ಬೆನ್ನಿಗೆ ತಾನೂ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ ‘ನಿಗೂಢ ರಹಸ್ಯ’. ಎಂ.ಡಿ. ಕೌಶಿಕ್ ಈ ಚಿತ್ರದ ನಿರ್ದೇಶಕರು. ‘ಮಾಸ್ಟರ್ ಪೀಸ್’ ಬಿಡುಗಡೆ ಆದ ಮರುದಿನ, ಅಂದರೆ ಇಂದು (ಡಿ. 25) ಚಿತ್ರ ಬಿಡುಗಡೆಯಾಗುತ್ತಿದೆ.

ಬೀಚಿ ಅವರ ‘ಸತ್ತವನು ಎದ್ದು ಬಂದಾಗ’ ಎಂಬ ಪತ್ತೇದಾರಿ ಕಾದಂಬರಿಯನ್ನು ಸಿನಿಮಾ ರೂಪಕ್ಕೆ ಇಳಿಸಿದ್ದಾರೆ ಕೌಶಿಕ್. ಅವರೇ ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಶೇ 90ರಷ್ಟು ಮೂಲ ಕಥೆಯನ್ನೇ ಉಳಿಸಿಕೊಂಡು ಉಳಿದ ಭಾಗವನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದಾಗಿ ನಿರ್ದೇಶಕರು ಹೇಳುತ್ತಾರೆ. ಒಂದೊಳ್ಳೆ ಕಥೆಯನ್ನು ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದೀನಿ ಎಂಬುದು ಅವರ ಭರವಸೆ.

ಒಮ್ಮೆಲೇ ಇಪ್ಪತ್ತು ಕೆಜಿ ತೂಕ ಇಳಿಸಿಕೊಂಡು ಸಣ್ಣಗಾಗಿರುವ ಖಳ ನಟನ ಖ್ಯಾತಿಯ ಚರಣ್ ರಾಜ್ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕರು ಮೊದಲು ಕರೆ ಮಾಡಿದಾಗ ‘ಈಗ ಕಾದಂಬರಿಗಳನ್ನು ಸಿನಿಮಾ ಮಾಡಿದರೆ ನೋಡುತ್ತಾರಾ?’ ಎಂದು ಕೇಳಿದ್ದ ಅವರು ನಿರ್ದೇಶಕರ ಕಾರ್ಯವೈಖರಿಗೆ ಬೆರಗಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದ ರಣಧೀರ್ ಈ ಚಿತ್ರದಿಂದ ನಾಯಕನ ಪಾತ್ರಕ್ಕೆ ಬಡ್ತಿ ಪಡೆದಿದ್ದಾರೆ.

ಪತ್ರಿಕೋದ್ಯಮ ಪದವೀಧರೆ ಚೈತ್ರಾ ಸಿನಿಮಾಕ್ಕಾಗಿ ಮೊದಲ ಬಾರಿ ಬಣ್ಣಹಚ್ಚಿದ್ದಾರೆ. ಸುಂದರ್‌ರಾಜ್ ಹಳ್ಳಿಯ ಗೌಡನ ಪಾತ್ರದಲ್ಲಿದ್ದಾರೆ. ‘ರಂಗಿತರಂಗ’, ‘ಬಜರಂಗಿ’ ಚಿತ್ರಗಳಲ್ಲಿ ಕಾಣಿಸಿಕೊಂಡ ಚೇತನ್, ನಯನ ಕೃಷ್ಣ, ಜ್ಯೋತಿ ಕುಲಕರ್ಣಿ ಇತರರು ತಾರಾಗಣದಲ್ಲಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT