ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವಿನ್ಯಾಸದ ಮಲೆನಾಡ ಮನೆ

Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ಇಂಗ್ಲೆಂಡಿನ ಪ್ರಕಾಶಕಿ  ಜರಾಲ್ಡಿನ್‌ ರೋಜ್‌ ಸಾಗರದ ಹೆಗ್ಗೋಡಿನ ‘ಚರಕ ಉತ್ಸವ’ಕ್ಕೆ  ಬಂದವರು ಸಮೀಪದ ಕುರುವರಿ ಸೀತಾರಾಮ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಅವರು ‘ಈ ಮನೆಯಲ್ಲಿ ಇರಲಿಕ್ಕೆ ಖುಷಿ ಆಗುತ್ತದೆ’ ಎಂದರು.

ಕಾರಣ ಕೇಳಿದರೆ, ‘ಮನೆ  ನಿಸರ್ಗಕ್ಕೆ ಹೆಚ್ಚು ತೆರೆದುಕೊಂಡಿರು­ವುದು ಹಾಗೂ ತಲೆಗೆ ಹತ್ತಿರದಲ್ಲಿ ಮುಚ್ಚಿಕೊಳ್ಳದೇ ಎತ್ತರವಾಗಿರು­ವುದೇ ಮೆಚ್ಚುಗೆಗೆ ಕಾರಣ’ ಎಂದು ಮುಗುಳ್ನಕ್ಕರು.


ಹೌದು, ಈ ಮನೆಗೆ ಬರುವ ಅನೇಕ ಅತಿಥಿಗಳೂ ರೋಜ್‌ ತರಹವೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಭೇಟಿ ನೀಡಿದ ಕಡಿದಾಳ್‌ ಶಾಮಣ್ಣ ಹಾಗೂ ಶ್ರೀಧರ್‌ ಕಲ್ಲಹಳ್ಳ ಕೂಡಾ ಸಂತಸಪಟ್ಟರು.

ಇದು ಯಾವುದೋ ಬಂಗಲೆ ಅಥವಾ ವಿಶೇಷ ರಚನೆಯ ಮನೆಯ ಬಗೆಗಿನ ಅಭಿಪ್ರಾಯವಲ್ಲ. ಬದಲಿಗೆ ಸಾಂಪ್ರದಾಯಿಕ ಮಲೆನಾಡು ಮನೆಗೆ ಭಿನ್ನ ರೀತಿಯ ರೂಪ ಕೊಟ್ಟಿದ್ದರ ಫಲ!

ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದವರೊಬ್ಬರು, ತಾನು ಈ ರೀತಿ ಮನೆ ಮಾಡದೇ ತಪ್ಪು ಮಾಡಿಬಿಟ್ಟೆ ಎಂದು ಚಡಪಡಿಸಿದ್ದರು.
ಮನೆ ಸರಳವಾಗಿರಬೇಕು. ಗಾಳಿ ಬೆಳಕು ಚೆನ್ನಾಗಿರಬೇಕು, ರಕ್ಷಣೆ ಕೊಟ್ಟು ನಮ್ಮ  ಅವಶ್ಯಕತೆಗಳನ್ನು ಪೂರೈಸಬೇಕು, ನಿಸರ್ಗಕ್ಕೆ ತೆರೆದುಕೊಂಡಿರಬೇಕು ಹಾಗೂ ಕಡಿಮೆ ಖರ್ಚಿನಲ್ಲಿ ಆಗಬೇಕು ಎನ್ನುವ ಪರಿಕಲ್ಪನೆ ಇಟ್ಟುಕೊಂಡು ಕುರುವರಿ ಸೀತಾರಾಮ ಅವರು ಮನೆ ಕಟ್ಟಲು ಅನೇಕ ಕಡೆ ತಿರುಗಾಡಿದ್ದಾರೆ.

ಸೀತಾರಾಮ ಅವರಿಗೆ ರಂಗಕರ್ಮಿ ಪ್ರಸನ್ನ ಅವರು ‘ನಮ್ಮ ಭಾಗದ ಜೋರು ಮಳೆಗೆ ತಡೆದುಕೊಳ್ಳುವ ಸರಳ ಮನೆ  ಎಂದರೆ ಟಿಪಿಕಲ್‌ ಮಲೆನಾಡು ಮನೆಯೇ ಸರಿ’ ಎಂದು ಒಮ್ಮೆ ಹೇಳಿದ್ದರು.

ಹಿಂದೆ ಶ್ರೀಮಂತರ ಮನೆಯಾಗಿದ್ದು ಈಗ ಸಾಮಾನ್ಯ ಜನರು (ಆಶ್ರಯ ಮನೆಯವರೂ ಕೂಡ) ನಿರ್ಮಿಸಿಕೊಳ್ಳುತ್ತಿರುವ ಮಲೆನಾಡ ಮನೆ ತನ್ನ ರಚನೆಯಲ್ಲಿ ಸರಳ ಹಾಗೂ ಸುಲಭ. ಜಡಿ ಮಳೆಯನ್ನೂ ತಡೆದುಕೊಳ್ಳಬಲ್ಲಷ್ಟು ಸಮರ್ಥ.

ಆದರೆ, ಇದರ ಸಾಂಪ್ರದಾಯಿಕ ಬಳಕೆಯಲ್ಲಿ ಆಗಿರುವ ತೊಂದರೆ ಯಾವುದೆಂದರೆ, ಸ್ಥಳ ಬಹಳವಿದ್ದರೂ ಬಳಕೆಗೆ ಸೂಕ್ತವಾಗಿಲ್ಲದೇ ಇರುವುದೇ ಆಗಿದೆ.

ಮನೆಯ ಮಧ್ಯ ಭಾಗ ತಂಪಾಗಿರುತ್ತದೆ. ಆದರೆ, ಸ್ವಲ್ಪ ಭಾಗ ಕತ್ತಲು ಕವಿದಂತಿರುತ್ತದೆ. ಜಗುಲಿ ಇಲ್ಲದೇ ಇರುವುದು, ಊಟದ ಹಜಾರಕ್ಕೆ ಜಾಗವಿರದೇ ಇರುವುದು, ಬೆಡ್‌ ರೂಮ್‌ಗಳು ಇಲ್ಲದೇ ಅನಾನುಕೂಲ ಎನ್ನುವಂತಾಗಿದೆ. ಈ ಕಾರಣದಿಂದ ಜನರು ಇತ್ತೀಚೆಗೆ ಮಲೆನಾಡಿಗೆ ಸೂಕ್ತವಲ್ಲದ, ಹೆಚ್ಚು ಖರ್ಚಿನ ಕಾಂಕ್ರೀಟ್‌ ಮನೆಗಳನ್ನೇ ನಿರ್ಮಿಸುತ್ತಿದ್ದಾರೆ.

ಸರಳ ರಚನೆಯ, ಆದರೆ ಅತ್ಯಧಿಕ ಪ್ರಮಾಣದ ಮಳೆಗೆ ಹೊಂದಿಕೊಳ್ಳುವ ಜನ ಸಾಮಾನ್ಯರಿಗೆ ಇಷ್ಟವಾಗುವಂತಹ ‘ಮಲೆನಾಡು ಮನೆ’ಗೆ ಜೀವ ತುಂಬಲೇ ಬೇಕು ಎಂದು ಕುರುವರಿ ಸೀತಾರಾಮ  ಅವರು ತೀರ್ಮಾನಿಸಿದರು. ಆಗ ಅವರಿಗೆ ಹೊಳೆದದ್ದು, ಮನೆಯನ್ನು ತಿರುಗಿಸಿ ನೋಡುವ ಅಥವಾ ಬಳಕೆಯ ರೀತಿಯನ್ನು ಬದಲಿಸುವ ಪರಿಕಲ್ಪನೆ.

ತಮ್ಮ ಆಲೋಚನೆ ಕುರಿತು ಕರ್ಕಿ ರಮೇಶ್‌ ಹಾಗೂ ಮಂಜುನಾಥ ಆಚಾರ್‌ ಬಳಿಯಲ್ಲಿ ಹೇಳಿಕೊಂಡಾಗ ಅವರಿಗೂ ಅದು ಒಪ್ಪಿಗೆ ಆಯಿತು.

ಕರ್ಕಿ ರಮೇಶ್‌, ಸೀತಾರಾಮ ಸೇರಿಕೊಂಡು ನೀಲನಕ್ಷೆ ತಯಾರಿಸಿದರು. ಮುಂದೆ ಹಿಂದೆ ಇರುತ್ತಿದ್ದ ಕಡಿಮಾಡುಗಳನ್ನು (ಇಳಿರಾಡು) ಪಕ್ಕಕ್ಕೆ ತಂದು ಮಧ್ಯದ ಮನೆಗೆ ಪ್ರವೇಶ ನೀಡಿದರು. ಆಗ ಚಮತ್ಕಾರವೇ ನಡೆದು ಹೋಯಿತು. ಕತ್ತಲಾಗಿದ್ದಲ್ಲಿ ಸಾಕಷ್ಟು ಬೆಳಕು ಬಂತು. ಅದನ್ನು ಎರಡು ಭಾಗ ಮಾಡಿದಾಗ ಜಗಲಿ ಹಾಗೂ ಊಟದ ಹಜಾರಗಳು  ಬಂದವು. ಪಕ್ಕಕ್ಕೆ ಬಂದ ಎರಡು ಕಡಿಮಾಡನ್ನು ಭಾಗ ಮಾಡಿದಾಗ ವಿಶಾಲವಾದ (10’x14’ ಅಡಿ ಉದ್ದ ಅಗಲದ) 4 ಬೆಡ್‌ ಕೊಠಡಿಗಳ ಬಂದವು.

ಊಟದ ಹಜಾರಕ್ಕೆ ಹೊಂದಿಕೊಂಡು ಅಡುಗೆ ಮನೆ, ಸ್ನಾನ ಮತ್ತು ಶೌಚದ ಕೋಣೆಗಳನ್ನು ನಿರ್ನಿಸಲು ಸಾಧ್ಯವಾಯಿತು. ಮನೆಯ ಅರ್ಧ ಭಾಗ (ಡೈನಿಂಗ್‌ ಹಾಲಿನ ಮೇಲ್ಭಾಗ) ಮಾತ್ರ ಅಟ್ಟ ಮಾಡಿದ್ದರಿಂದ ಬಾಲ್ಕನಿ ರೂಪ ಪಡೆದುಕೊಂಡು ಮನೆಯ ಶೋಭೆ ಹೆಚ್ಚಿಸುವಂತೆ ಮಾಡಿತು.

ಸೂಕ್ತ ರೀತಿಯಲ್ಲಿ ಗಾಳಿ ಮತ್ತು ಬೆಳಕು ಇಲ್ಲದೆ, ಬಳಕೆಗೆ ಸೂಕ್ತವಲ್ಲದೇ ನರಳುತ್ತಿದ್ದ ಮಲೆನಾಡಿನ ಸರಳ, ದೀರ್ಘ ಬಾಳಿಕೆಯ ಮನೆಗೆ ನಿಜವಾಗಿಯೂ ಹೊಸ ಜೀವ ಬಂದಿದೆ. ಮನೆಯೊಳಗಿದ್ದರೆ ಸಂತಸ ತುಂಬುತ್ತದೆ. ಆನಂದದಾಯಕ, ಆರಾಮದಾಯಕ ಎನಿಸುತ್ತದೆ.
ಸೃಜನಶೀಲತೆಗೆ ಪೂರಕವೆನ್ನುವ ಮನೆಗೆ ಸೀತಾರಾಮ ಅವರು ಕಂಡುಕೊಂಡ ಮನೆ ಸಾಕ್ಷಿಯಾಗಿದೆ. ಮಲೆನಾಡಿನ ಸಾಂಪ್ರದಾಯಿಕ ಸರಳ ಮನೆಯಲ್ಲಿಯೇ ಈ ರೀತಿಯ ಸೌಲಭ್ಯ ಹಾಗೂ ಸೌಂದರ್ಯ ದೊರೆತದ್ದು ಒಂದು ವಿಶೇಷವೇ ಸರಿ.

ಮನೆ ಕಟ್ಟಲಿಕ್ಕೆ ಇದು ಸುಲಭವಾಗಿ ಇರುವಂತೆಯೇ ಬಳಕೆಗೂ ಕೂಡ ಸರಳ. ಮನೆಯ ಒಳಾಂಗಣದ ಮಧ್ಯದಲ್ಲಿ ಒಂದು ಮೇಣದ ಬತ್ತಿಯ ಮಂದ ಬೆಳಕಿದ್ದರೂ ಸಾಕು, ಇಡೀ ಮನೆಗೆ ಬೆಳಕು ಹರಡಿಕೊಳುತ್ತದೆ. ಆಗ ಮಬ್ಬುಗತ್ತಲಲ್ಲಿಯೂ ಸರಾಗವಾಗಿ ಓಡಾಡಬಹುದು. ಮನೆಯ ಯಾವುದೇ ಭಾಗದಲ್ಲಿದ್ದರೂ ನಿಸರ್ಗಕ್ಕೆ ತೆರೆದುಕೊಂಡು ಸರಿಯಾಗಿ ಮಳೆಯನ್ನು, ಹೊಳೆವ ಬೆಳದಿಂಗಳನ್ನು, ಇಬ್ಬನಿಯ ನಡುವೆ ಸೀಳಿಬರುವ ಸೂರ್ಯ ರಶ್ಮಿ, ಹಕ್ಕಿಗಳ ಚಿಲಿಪಿಲಿ ಗಾನವನ್ನು ಆಸ್ವಾದಿಸಬಹುದು.

ಕೇವಲ 13 ಚದರ ಜಾಗದಲ್ಲಿ ವಿಶಾಲವಾದ ನಾಲ್ಕು ಕೊಠಡಿಗಳ, 12 ಇಂಚು ದಪ್ಪನೆಯ ಗೋಡೆ ಇರುವ (ಲ್ಯಾಟರೈಟ್‌ ಇಟ್ಟಿಗೆ ಬಳಸಿ ಕಟ್ಟಿದ, ಪ್ಲಾಸ್ಟರಿಂಗ್‌ ಮಾಡದ ಗೋಡೆ), ಸುತ್ತಲೂ ಸರಾಗ ಓಡಾಡಲು ಆಗುವಷ್ಟು ಜಾಗ ಬಿಟ್ಟು ಕಟ್ಟಿದರೆ ಇಂತಹ ಮನೆಗೆ ಈಗಿನ ದರದಲ್ಲಿ ನಾಲ್ಕೈದು ಲಕ್ಷ ರೂಪಾಯಿಯಾದರೂ ವೆಚ್ಚವಾಗುತ್ತದೆ. ಮನೆ ನಿರ್ಮಾಣದ ಕೆಲವು ಕೆಲಸಗಳನ್ನು ಮನೆ ಮಂದಿಯೇ ಮಾಡಿಕೊಂಡರೆ ನಿರ್ಮಾಣ ವೆಚ್ಚದಲ್ಲಿ ಇನ್ನಷ್ಟು ಕಡಿಮೆ ಆಗುತ್ತದೆ. ಸಾಮಾನ್ಯ  ಸ್ವರೂಪದ ಮನೆಯಾದರೆ ಜನರು ಎರಡು, ಮೂರು ಲಕ್ಷ ರೂಪಾಯಿಯೊಳಗೆ ನಿರ್ಮಿಸಿಕೊಳ್ಳಬಹುದು.

ರಚನೆಯನ್ನು ಗಮಸಿದರೆ ಇದು ಇನ್ನೂ ಬಡವರು ಕಟ್ಟಿಕೊಳ್ಳುವ  ಅದೇ ‘ಮಲೆನಾಡು ಮನೆ’. ಆದರೆ ಬಳಕೆಯ ವಿಧಾನವನ್ನು ಬದಲಾಯಿಸಿರುವುದರಿಂದ ಹೊಸ ಮೆರಗನ್ನು ಈ ಬಗೆಯ ಮನೆ ಪಡೆದಿದೆ. ಹೆಚ್ಚಿನ ಮಾಹಿತಿಗೆ ಸೀತಾರಾಮ ಕುರುವರಿ ಅವರ ದೂ: 08183–237713, ಮೊ: 9483395522, ಕರ್ಕಿ ರಮೇಶ್ 9945380260 ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT