ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಿಇಟಿ ಮಸೂದೆ ಮಂಡನೆ ಯತ್ನ:ಶರಣ ಪ್ರಕಾಶ

Last Updated 27 ಫೆಬ್ರುವರಿ 2015, 20:13 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ­ಯಲ್ಲಿ ಬದಲಾವಣೆ ತರಲು 2006ರ ಮಾದರಿಯ ಸಿಇಟಿ ಕಾಯ್ದೆ ಜಾರಿಗೊಳಿಸುವ ಸಂಬಂಧ ವಿಧಾನ­ಮಂಡಲದ ಬಜೆಟ್‌ ಅಧಿವೇಶನದಲ್ಲೇ ಮಸೂದೆ ಮಂಡಿ­ಸುವ ಪ್ರಯತ್ನ ನಡೆಯುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಕಳೆದ ವಾರ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದು, ಮಸೂದೆ­ಯನ್ನು ಪರಿಷ್ಕರಿಸುವ ಸಂಬಂಧ ಚರ್ಚಿಸಿದ್ದಾರೆ. ಮಾರ್ಚ್‌ ಮೊದಲ ವಾರದ ಅಂತ್ಯದೊಳಗೆ ಮಸೂದೆ­ಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸ­ಲಾಗಿದೆ’ ಎಂದರು.

ಬಜೆಟ್‌ ಅಧಿವೇಶನದಲ್ಲಿ ಮಸೂದೆಗೆ ಒಪ್ಪಿಗೆ ಪಡೆದರೆ ಮಾತ್ರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಸಾಧ್ಯ. ಇಲ್ಲವಾದರೆ ಹಳೆಯ ವ್ಯವಸ್ಥೆ­ಯನ್ನು ಮುಂದುವರಿಸುವುದು ಅನಿ­ವಾರ್ಯ ಆಗುತ್ತದೆ. ಈ ಕಾರಣದಿಂದ ಬಜೆಟ್‌ ಅಧಿವೇಶನ­ದಲ್ಲೇ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಏಮ್ಸ್‌ ನಿರೀಕ್ಷೆ: ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಮಾದರಿಯ ಸಂಸ್ಥೆಯನ್ನು ರಾಜ್ಯದಲ್ಲೂ ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಈ ವಿಷಯದಲ್ಲಿ ಕೇಂದ್ರದ ಪ್ರತಿಕ್ರಿಯೆ­ಯನ್ನು ನಿರೀಕ್ಷಿಸ­ಲಾಗುತ್ತಿದೆ ಎಂದರು.

ರಾಜ್ಯದ ಯಾವುದೇ ಸ್ಥಳದಲ್ಲಿ ಏಮ್ಸ್‌ ಸ್ಥಾಪನೆಗೆ ಮುಂದಾದರೂ ರಾಜ್ಯ ಸರ್ಕಾರ ಅಗತ್ಯ ವಿಸ್ತೀರ್ಣದ ಜಮೀನು ಒದಗಿಸಲಿದೆ. ನಾಲ್ಕು ಸ್ಥಳಗಳನ್ನು ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ, ಅಂತಿಮ ನಿರ್ಧಾರ­ವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಿಂದೆ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಆದ್ಯತೆ ನೀಡಲಿದೆ. ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಹೊಸ ಕಾರ್ಯ­ಕ್ರಮ ಘೋಷಣೆಗೆ ಬೇಡಿಕೆ ಇರಿಸಿಲ್ಲ. ಕೇಂದ್ರ ಸರ್ಕಾರ­ದಿಂದ ಹೆಚ್ಚಿನ ಘೋಷಣೆ ನಿರೀಕ್ಷಿಸಲಾಗುತ್ತಿದೆ. ಬಳ್ಳಾರಿ, ಹುಬ್ಬಳ್ಳಿ­ಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಮಂಡ್ಯ ಮತ್ತು ಕಲಬುರ್ಗಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ­ಗಳ ಆರಂಭದ ಘೋಷಣೆ­ಯನ್ನು ಕೇಂದ್ರ ಸರ್ಕಾರ ಇನ್ನೂ ಈಡೇರಿಸಿಲ್ಲ ಎಂದರು.

ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ವೈದ್ಯಕೀಯ ಕಾಲೇಜು­ಗಳನ್ನು ಕಟ್ಟಡ ಮತ್ತು ಮೂಲ­ಸೌಕರ್ಯದ ಸಮೇತ ಉಚಿತವಾಗಿ ಹಸ್ತಾಂತರ ಮಾಡುವು­ದಾದರೆ ಮಾತ್ರ ನಿರ್ವಹಣೆಗೆ ಸಿದ್ಧ ಎಂಬ ಪ್ರಸ್ತಾವವನ್ನು ಕೇಂದ್ರ ಕಾರ್ಮಿಕ ಸಚಿವಾಲಯದ ಮುಂದಿಡಲಾಗಿದೆ. ಇದುವರೆಗೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT