ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹುಡುಗನ ಬಣ್ಣದ ಕನಸು

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

‘ಮಹಿಳೆಯ ಮೇಲೆ ಬಹಿರಂಗವಾಗಿ ನಡೆಯುವ ದೈಹಿಕ ದೌರ್ಜನ್ಯ ಎಲ್ಲರಿಗೂ ತಿಳಿಯುತ್ತದೆ. ಆದರೆ ಮಾನಸಿಕವಾಗಿ ನಡೆಯುವ ದೌರ್ಜನ್ಯ ಯಾರಿಗೂ ಕಾಣಿಸುವುದೇ ಇಲ್ಲ. ಇಂತಹ ಮಾನಸಿಕ ದೌರ್ಜನ್ಯದ ಮೇಲೆ ನಮ್ಮ ಕಿರುಚಿತ್ರ ಬೆಳಕು ಚೆಲ್ಲುತ್ತದೆ’ ಎಂದ ಹುಡುಗನ ಕಣ್ಣಲ್ಲಿನ ಚಿತ್ರರಂಗದ ಬಗೆಗಿನ ದಟ್ಟ ಕನಸುಗಳು ಮಾತಿನಲ್ಲೂ ವ್ಯಕ್ತವಾಗುತ್ತಿದ್ದವು.

  ಅಶೋಕ್‌ ಸಾಮ್ರಾಟ್‌ ಎಂಬ ಈ ಯುವಕ ‘ನಾನು ಬೇವರ್ಸಿ ಗೊತ್ತಾ’ ವಿಚಿತ್ರ ಹೆಸರಿನ ಕಿರುಚಿತ್ರದ ನಿರ್ದೇಶಕ. ನಿರ್ದೇಶಕನಾಗುವ ಕನಸು ಹೊತ್ತು ಕಳೆದ ಐದು ವರ್ಷದಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅಶೋಕ್‌ ‘ಈ ಸಂಭಾಷಣೆ’, ‘ಬಿಲಿಯನ್‌ ಡಾಲರ್‌ ಬೇಬಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ನಾಗತಿಹಳ್ಳಿ ಚಂದ್ರಶೇಖರ್‌ ಅವರು ನಿರ್ದೇಶಿಸಿದ ‘ಒಲವೇ ನಮ್ಮ ಬದುಕು’ ಎಂಬ ಧಾರಾವಾಹಿಯಲ್ಲಿಯೂ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಇವರಿಗಿದೆ.

ಚಿಕ್ಕಂದಿನಿಂದಲೂ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಅಶೋಕ್‌ ಓದಿದ್ದು ಬಿಎಸ್‌ಸಿ ಕಂಪ್ಯೂಟರ್‌ ಸೈನ್ಸ್‌. ‘ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಹಂಬಲದಿಂದ ಈ ಕಿರುಚಿತ್ರ ಮಾಡಿದ್ದೇನೆ’ ಎನ್ನುವ ಅವರು ‘ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ತೋರಿಸಬೇಕು ಎಂಬ ಉದ್ದೇಶವೂ ಇದರ ಹಿಂದಿದೆ’ ಎಂದು ವಿವರಿಸುತ್ತಾರೆ.

‘ಈ ಚಿತ್ರವು ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯದ ಕುರಿತಾಗಿದ್ದು, ಸಾಮಾಜಿಕ ಸಂದೇಶವನ್ನೂ ಒಳಗೊಂಡಿದೆ. ‘ನಾನು ಬೇವರ್ಸಿ ಗೊತ್ತಾ’ ಎಂಬ ಹೆಸರು ಸ್ವಲ್ಪ ನಕಾರಾತ್ಮಕವಾಗಿ ಕಾಣಬಹುದು. ಆದರೆ ಹೆಸರಿನಲ್ಲಿರುವ ನಕಾರಾತ್ಮಕ ಗುಣ ಕಿರುಚಿತ್ರದಲ್ಲಿ ಇಲ್ಲ. ಕೊನೆಯಲ್ಲಿ ಸಕಾರಾತ್ಮಕ ಸಂದೇಶವನ್ನು ಹೊಂದಿರುವ ಚಿತ್ರ ನಮ್ಮದು’ ಎಂಬ  ಸಮರ್ಥನೆ ಅವರದು. ಈ ಕಿರುಚಿತ್ರಕ್ಕೆ ಕತೆ, ಚಿತ್ರಕಥೆ, ಸಂಭಾಷಣೆಯನ್ನು ಅಶೋಕ್‌ ಅವರೇ ಒದಗಿಸಿದ್ದಾರೆ.

‘ನಮ್ಮ ಇಡೀ ತಂಡವೇ ಯುವಕರ ತಂಡ. ಕಲಾವಿದರು, ತಂತ್ರಜ್ಞರಿಂದ ಹಿಡಿದು ಭಿತ್ತಿಪತ್ರ ವಿನ್ಯಾಸದವರೆಗೆ ಎಲ್ಲರೂ ನನ್ನಂತೆಯೇ ಚಿತ್ರರಂಗದಲ್ಲಿ ನೆಲೆಯೂರಬೇಕು ಎಂಬ ಅದಮ್ಯ ಹಂಬಲ ಹೊಂದಿದವರು’ ಎಂದು ತಮ್ಮ ತಂಡದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅಶೋಕ್‌. ಈ ಕಿರುಚಿತ್ರದ ಸ್ಕ್ರಿಪ್ಟ್‌ಗಾಗಿ ಅಶೋಕ್‌ ಆರು ತಿಂಗಳು ವ್ಯಯಿಸಿದ್ದಾರಂತೆ.

‘ಆರು ತಿಂಗಳು ಕೂತು ಸ್ಕ್ರಿಪ್ಟ್‌ ಮತ್ತಿತರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆ. ಆದರೆ ಹಣ ಹೊಂದಿಸುವುದೇ ಕಷ್ಟವಾಯ್ತು. ಆಗ ನೆರವಿಗೆ ಬಂದಿದ್ದು ಸ್ನೇಹಿತ ಬಿ.ಟಿ. ಮುರುಳಿ. ನಾವಿಬ್ಬರೂ ಒಂದನೇ  ತರಗತಿಯಿಂದ ಬಿ.ಎಸ್‌ಸಿವರೆಗೂ ಸಹಪಾಠಿಗಳು. ನನ್ನ ಕಿರುಚಿತ್ರಕ್ಕೆ ಹಣ ಹೂಡಿದ್ದೂ ಅವನೇ’ ಎಂದು ಸ್ನೇಹಿತನ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಚಿತ್ರಿಸಲಾಗಿರುವ ಈ ಕಿರುಚಿತ್ರಕ್ಕೆ ₨ 80,000 ಹಣ ಖರ್ಚಾಗಿದೆಯಂತೆ. ‘ಯೂ ಟ್ಯೂಬ್‌’ಗೆ ಅಪ್‌ಲೋಡ್‌ ಮಾಡಿದ ಎರಡೇ ವಾರದಲ್ಲಿ 27 ಸಾವಿರ ಜನರು ನಮ್ಮ ಚಿತ್ರವನ್ನು ವೀಕ್ಷಿಸಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸಿನಿಮಾ ನಿರ್ದೇಶನಕ ಕನಸು
‘ಈ ಕಿರುಚಿತ್ರದಿಂದ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಯಾವ ಕಲಾವಿದರನ್ನಾದರೂ ನಿಭಾಯಿಸಬಲ್ಲೆ ಎಂಬ ಧೈರ್ಯ ಹುಟ್ಟಿಕೊಂಡಿದೆ’ ಎನ್ನುವ ಅಶೋಕ್‌ ಪೂರ್ಣಪ್ರಮಾಣದ ಸಿನಿಮಾ ನಿರ್ದೇಶಿಸುವ ತಮ್ಮ ಕನಸನ್ನು ಒಳಗೊಳಗೇ ಪೊರೆಯುತ್ತಿದ್ದಾರೆ. ‘ಈಗಾಗಲೇ ಸ್ಕ್ರಿಪ್ಟ್‌ ರೆಡಿ ಮಾಡಿಟ್ಟುಕೊಂಡಿದ್ದೇನೆ. ನಿರ್ಮಾಪಕರನ್ನು ಹುಡುಕಬೇಕಷ್ಟೆ. ಹೊಸಬರ ತಂಡವನ್ನೇ ಕಟ್ಟಿಕೊಂಡು ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ’ ಎನ್ನುವ ಅಶೋಕ್‌ ಅವರಿಗೆ ಪುಟ್ಟಣ್ಣ ಕಣಗಾಲ್‌ ಆದರ್ಶವಂತೆ.

‘ಪುಟ್ಟಣ್ಣ ಕಣಗಾಲ್‌ ನಾನು ಅತ್ಯಂತ ಗೌರವಿಸುವ ನಿರ್ದೇಶಕ. ಅವರು ಆ ಕಾಲದಲ್ಲಿಯೇ ಸಮಾಜದ ಮೌಲ್ಯಗಳಿಗೆ ವಿರುದ್ಧವಾದ ವಿಷಯಗಳ ಮೇಲೆ ಸಿನಿಮಾ ಮಾಡಿದರು. ಮಾಡಿದ್ದಷ್ಟೇ ಅಲ್ಲ, ಅದನ್ನು ಪ್ರೇಕ್ಷಕರಿಗೆ ಕನ್ವಿನ್ಸ್‌ ಆಗುವಂತೆ ಹೇಳಿ ಗೆದ್ದರಲ್ಲ. ಅದು ದೊಡ್ಡ ಸಾಧನೆ’ ಎನ್ನುವ ಅಶೋಕ್‌ ಅವರಿಗೂ ಸಮಾಜದ ವೈರುಧ್ಯಗಳ ಮೇಲೆ ಸಿನಿಮಾ ಮಾಡುವ ಆಸೆಯಿದೆಯಂತೆ.

‘ನಾನು ಸಿನಿಮಾಕ್ಕೆ ಹೋಗುವುದು ಮನೆಯಲ್ಲಿ ಯಾರಿಗೂ ಇಷ್ಟವಿಲ್ಲ. ಅವರ ವಿರೋಧದ ನಡುವೆಯೂ ನಿರ್ದೇಶಕನಾಗುವ ಕನಸು ಕಟ್ಟಿಕೊಂಡಿದ್ದೇನೆ. ಒಮ್ಮೆ ಅವಕಾಶ ಸಿಕ್ಕರೆ ಸಾಕು, ನನ್ನ ಪ್ರತಿಭೆಯನ್ನು ಸಾಬೀತುಪಡಿಸುತ್ತೇನೆ’ ಎನ್ನುವ ಅಶೋಕ್‌ ಅವರ ಚಿತ್ರಲೋಕದ ಕನಸಿನ ಬಣ್ಣ ಚಿತ್ತಾರ ಮೂಡಿಸುವುದೇ ಅಥವಾ ಗಾಂಧಿನಗರದ ಪ್ರವಾಹದಲ್ಲಿ ಕೊಚ್ಚಿಹೋಗುವುದೇ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.

ಪ್ರಶಸ್ತಿಯ ಗರಿ
ಅಶೋಕ್ ಅವರ ‘ನಾನು ಬೇವರ್ಸಿ ಗೊತ್ತಾ’ ಕಿರುಚಿತ್ರ ಇತ್ತೀಚೆಗೆ ನಗರದಲ್ಲಿ ನಡೆದ ‘ರೋಲಿಂಗ್‌ ಫ್ರೇಮ್ಸ್‌’ ಎಂಬ 17 ದೇಶಗಳು ಭಾಗವಹಿಸಿದ್ದ ಕಿರುಚಿತ್ರ ಸಮ್ಮೇಳನದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿ ಪ್ರಶಸ್ತಿಯನ್ನೂ ಪಡೆದಿದೆ. ಈ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಕಿರುಚಿತ್ರ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT