ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಹರ್ಷ!

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

ಶಿಕ್ಷಣ ವ್ಯವಸ್ಥೆಯ ದೋಷಗಳ ವಿರುದ್ಧ ಕಳೆದ ತಿಂಗಳು ಸಿಡಿದೆದ್ದಿದ್ದ ಕಿಶೋರ್, ಈಗ ಮತ್ತೊಂದು ಸೆಣೆಸಾಟಕ್ಕೆ ಸಿದ್ಧ! ಹೌದು... ಶೈಕ್ಷಣಿಕ ಮಾಫಿಯಾವನ್ನು ‘ವಾಸ್ಕೋಡಿಗಾಮ’ನಾಗಿ ಬಗ್ಗುಬಡಿದ ಅವರು, ಈಗ ‘ಆಕ್ಟೋಪಸ್‌’ನ ಕಬಂಧ ಬಾಹುಗಳಿಂದ ವೈದ್ಯಕೀಯ ಲೋಕವನ್ನು ಪಾರು ಮಾಡಲು ಮುಂದಾಗಿದ್ದಾರೆ.

ತಮಿಳಿನ ‘ತುಂಗಾವನಂ’ ಚಿತ್ರದಲ್ಲಿ ಕಿಶೋರ್ ಅಭಿನಯವನ್ನು ಮೆಚ್ಚಿಕೊಂಡವರು ‘ಆಕ್ಟೋಪಸ್‌’ನಲ್ಲಿ ಅವರನ್ನು ಗಂಭೀರ ಪಾತ್ರದಲ್ಲಿ ನೋಡಲಿದ್ದಾರೆ. ‘ಹೀಗೆ ವಿಭಿನ್ನ ಬಗೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿರುವುದು ಒಂಥರ ಖುಷಿ ಕೊಡುತ್ತಿದೆ’ ಎನ್ನುತ್ತಾರೆ ಕಿಶೋರ್.

ಅಣ್ಣಯ್ಯ ನಿರ್ದೇಶನದ ‘ಆಕ್ಟೋಪಸ್’ ಒಂದು ಥ್ರಿಲ್ಲರ್. ಅಷ್ಟೇ ಅಲ್ಲ; ಅದಕ್ಕೊಂದು ಮಾನವೀಯ ಮುಖ ಕೂಡ ಇದೆ. ಬಡ ರೋಗಿಗಳಿಗೆ ವರದಾನವಾಗಬಲ್ಲ ಸಾಧನವೊಂದನ್ನು ಅಭಿವೃದ್ಧಿಪಡಿಸುವ ವಿಜ್ಞಾನಿಯು, ಅದಕ್ಕಾಗಿ ಮಾಫಿಯಾವನ್ನು ಎದುರು ಹಾಕಿಕೊಳ್ಳುವ ಕಥೆಯಿದು. ಬ್ಯಾಕ್‌ಡ್ರಾಪ್‌ನಲ್ಲಿ ವೈದ್ಯಕೀಯ ಲೋಕದ ಒಂದು ಮುಖ ತೋರಿಸಲಾಗಿದೆ. ಆದರೆ ಇದೊಂದು ಪಕ್ಕಾ ಕಮರ್ಷಿಯಲ್ ಥ್ರಿಲ್ಲರ್. ಸಾಕಷ್ಟು ನಿಗೂಢತೆಯಿಂದ ಚಿತ್ರಕಥೆ ಸಾಗುತ್ತದೆ ಎನ್ನುವ ಕಿಶೋರ್, ‘ರೆಗ್ಯುಲರ್‌ ಆಗಿ ಬರುವ ಕಮರ್ಷಿಯಲ್ ಸಿನಿಮಾಕ್ಕೆ ಏನೇನು ಬೇಕೋ ಎಲ್ಲವೂ ಇವೆ, ಐಟಂ ಸಾಂಗ್ ಸೇರಿ!’ ಎಂದು ಮಾಹಿತಿ ಕೊಡುತ್ತಾರೆ.

ಪ್ರಯೋಗಕ್ಕೆ ಒಡ್ಡಿಕೊಳ್ಳುವ ಸ್ವಭಾವದಿಂದಾಗಿಯೇ ತಮಗೆ ವೈವಿಧ್ಯಮಯ ಪಾತ್ರಗಳು ಸಿಗುತ್ತಿವೆ ಎಂಬ ಸಂತಸ ಕಿಶೋರ್‌ ಅವರದು. ‘ವಿಭಿನ್ನ ಬಗೆಯ ಪಾತ್ರವನ್ನು ಯಾರು ನಿರ್ವಹಿಸಬಹುದು ಎಂಬುದನ್ನು ಯೋಚಿಸುವ ನಿರ್ದೇಶಕರಿಗೆ ನನ್ನ ಹೆಸರು ಹೊಳೆಯುತ್ತದೆ ಎಂದಾದರೆ, ಅದು ನನ್ನಲ್ಲಿನ ಸಾಮರ್ಥ್ಯವನ್ನು ಅವರು ಗುರುತಿಸಿದಂತೆ ಅಲ್ಲವೇ?’ ಎಂದು ಪ್ರಶ್ನಿಸುತ್ತಾರೆ.

ಇಂಥ ಪಾತ್ರಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂಬುದು ಅವರ ನಿಲುವು. ‘ಸಿನಿಮಾದ ಸಾಧ್ಯತೆಗಳು ಎಷ್ಟಿವೆಯೆಂದರೆ, ಎಲ್ಲವನ್ನು ಉಪಯೋಗ ಮಾಡಿಕೊಳ್ಳಲು ಆಗುವುದೇ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳುವುದು ನನ್ನ ಉದ್ದೇಶ. ಜನರ ದುಡ್ಡನ್ನು ಜೇಬಿಗೆ ಹಾಕಿಕೊಂಡು ಬರೀ ಮನರಂಜನೆ ಕೊಡುವುದೇ ಸಿನಿಮಾದ ಉದ್ದೇಶವಾಗಬಾರದಲ್ಲ? ಮನರಂಜನೆಯ ಜತೆಗೆ ಒಂದಷ್ಟು ವಿಚಾರಗಳನ್ನು ಜನರ ತಲೆಗೆ ತುಂಬಬೇಕು’ ಎನ್ನುವ ಚಿಂತನೆ ಕಿಶೋರ್‌ ಅವರದು.

‘ನನಗೂ ಇಷ್ಟ’
ಒಂದೇ ಮಾದರಿಯ ನಾಯಕ ಪಾತ್ರಗಳಿಂದ ದೂರದಲ್ಲಿರುವ ಕಿಶೋರ್‌ಗೆ ಈವರೆಗೆ ಸಿಕ್ಕಿದ್ದು ವೈವಿಧ್ಯಮಯ ಪಾತ್ರಗಳೇ. ‘ಅಟ್ಟಹಾಸ’, ‘ಜಟ್ಟ’, ‘ಉಳಿದವರು ಕಂಡಂತೆ’, ‘ವಾಸ್ಕೋಡಿಗಾಮ’, ‘ತುಂಗಾ ವನಂ’, ಚಿತ್ರಗಳಲ್ಲಿ ಬೇರೆ ಬೇರೆ ಬಗೆಯ ಛಾಪು ಮೂಡಿಸಿರುವ ಕಿಶೋರ್‌ಗೆ ‘ಆಕ್ಟೋಪಸ್‌’ ಮತ್ತೊಂದು ಆಹ್ವಾನ ನೀಡಿದೆ. ಅದರಲ್ಲಿ ತಮ್ಮ ಯುವ ವಿಜ್ಞಾನಿಯ ಪಾತ್ರ ವೃತ್ತಿಜೀವನಕ್ಕೆ ಮಹತ್ವದ ತಿರುವು ಕೊಡಬಲ್ಲದು ಎಂಬ ನಂಬಿಕೆ ಅವರದು.

‘ಹೊಸ ಚಿತ್ರಕಥೆ ಬರೆದು, ಸಿನಿಮಾವನ್ನು ವಿಭಿನ್ನವಾಗಿ ಮಾಡುವ ಆಸೆಯಿರುವ ನಿರ್ದೇಶಕರು ನನ್ನ ಹತ್ತಿರ ಬರುತ್ತಾರೆ. ನಾನು ಅಂಥ ಪ್ರಯತ್ನಗಳನ್ನು ಒಪ್ಪುತ್ತೇನೆಂಬ ನಂಬಿಕೆ ಅವರದು. ನಾನಂತೂ ಆ ತೆರನಾದ ಪಾತ್ರಗಳನ್ನು ನಿರಾಕರಿಸುವುದಿಲ್ಲ’ ಎನ್ನುವ ಕಿಶೋರ್, ಈ ನಿಲುವಿನಿಂದಾಗಿಯೇ ವಿಶಿಷ್ಟ ಪಾತ್ರಗಳು ತಮ್ಮದಾಗುತ್ತಿವೆ ಎನ್ನುತ್ತಾರೆ.

‘ಕನ್ನಡಕ್ಕೆ ಹೋಲಿಸಿದರೆ ಇತರ ಭಾಷೆಗಳ ಚಿತ್ರಗಳಲ್ಲೇ ಬಿಝಿ ಆಗಿದ್ದೀರಲ್ಲ’ ಎಂಬ ಪ್ರಶ್ನೆಗೆ ಗಟ್ಟಿಯಾಗಿ ನಕ್ಕುಬಿಡುತ್ತಾರೆ ಕಿಶೋರ್. ‘ಖಂಡಿತ ಹಾಗೇನಿಲ್ಲ. ತೆಲುಗು, ತಮಿಳು, ಮಲಯಾಳಂ ಭಾಷೆಗಳ ಪೈಕಿ ಯಾವುದೋ ಒಂದು ಭಾಷೆಯಲ್ಲಿ ಒಂದಲ್ಲ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಲೇ ಇರುತ್ತೇನೆ. ಹೀಗಾಗಿ ನಾನು ಬಿಝಿ ಇದ್ದೀನೆಂದು ತಿಳಿದುಬಿಡುವುದೂ ಉಂಟು’ ಎನ್ನುತ್ತಾರೆ.

ಈ ವಾರ ತೆರೆಗೆ ಬರುತ್ತಿರುವ ‘ಆಕ್ಟೋಪಸ್‌’ ಸಿನಿಮಾ ಸಂಬಂಧಿ ಪ್ರಚಾರಕ್ಕೆ ಕಿಶೋರ್‌ ಕೈಕೊಟ್ಟಿದ್ದಾರೆ ಎಂಬ ಗುಸುಗುಸು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಆದರೆ ಅದನ್ನು ಅವರು ಸಾರಾಸಗಟಾಗಿ ತಳ್ಳಿಹಾಕುತ್ತಾರೆ. ‘ನಿರ್ಮಾಪಕರು ಚಿತ್ರದ ಬಿಡುಗಡೆ ದಿನವನ್ನು ದಿಢೀರ್‌ ಆಗಿ ನಿರ್ಧರಿಸಿದರು.

ನಾನು ಆಗ ಗೋವಾದ ಒಂದು ಹಳ್ಳಿಯಲ್ಲಿ ಶೂಟಿಂಗ್‌ನಲ್ಲಿದ್ದೆ. ಅಲ್ಲಿ ಮೊಬೈಲ್ ಸಿಗ್ನಲ್ ಕೂಡ ಸಿಗುತ್ತಿರಲಿಲ್ಲ. ಹೀಗಾಗಿ ವಿಷಯ ಗೊತ್ತಾಗಲಿಲ್ಲ’ ಎನ್ನುವ ಕಿಶೋರ್‌, ನಿರ್ದೇಶಕ ಅಣ್ಣಯ್ಯ ಅವರ ಚಿತ್ರಕಥೆಗೆ ಮನಸೋತು ಅವರಿಗಾಗಿಯೇ ತಾವು ಒಪ್ಪಿಕೊಂಡ ಸಿನಿಮಾ ಇದು ಎಂಬ ಮಾತನ್ನೂ ಸೇರಿಸುತ್ತಾರೆ.

ನಾಲ್ಕು ಭಾಷೆಗಳ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಕಿಶೋರ್, ಬೆಂಗಳೂರಿನಲ್ಲಿ ಸಾವಯವ ಪದಾರ್ಥಗಳ ಮಳಿಗೆ ‘ಬಫೆಲೊ ಬ್ಯಾಕ್’ ಆರಂಭಿಸಿದ್ದಾರೆ. ಅದರ ನಿರ್ವಹಣೆ ತೊಂದರೆಯನ್ನೆಲ್ಲ ಪತ್ನಿಗೆ ವಹಿಸಿದ್ದಾಗಿ ಹೇಳುತ್ತಾರೆ. ‘ಬನ್ನೇರುಘಟ್ಟ ಹಾಗೂ ಸಾಗರದಲ್ಲಿ ಜಮೀನು ಇದೆ. ಸಾಗರದ ತೋಟದಲ್ಲಿ ಈ ಸಲ ಸಾಂಪ್ರದಾಯಿಕ ತಳಿಯ ಎರಡು ಬಗೆಯ ಭತ್ತ ಬೆಳೆಯುತ್ತಿದ್ದೇನೆ. ಉಳಿದಂತೆ ಶೂಟಿಂಗ್‌ ಮಧ್ಯೆ ಸಮಯ ಸಿಕ್ಕಾಗ ಸಾವಯವ ತೋಟಗಳಿಗೆ ಭೇಟಿ ಕೊಡುತ್ತೇನೆ; ರೈತರಿಂದ ಕಲಿಯುತ್ತಿದ್ದೇನೆ’ ಎನ್ನುತ್ತಾರೆ. 
*
‘ತುಂಗಾ ವನಂ’
‘‘ಕಮಲಹಾಸನ್‌ ತಮಗೆ ಸರಿಹೊಂದುವಂಥ ನಿರ್ದೇಶಕರ ಜತೆ ಕೆಲಸ ಮಾಡುತ್ತಾರೆ. ವಾಸ್ತವವಾಗಿ ತುಂಗಾ ವನಂ ನಿರ್ದೇಶನ ಅವರೇ ಮಾಡಬೇಕಿತ್ತು. ಆದರೆ ಎಲ್ಲ ಬದಲಾಗಿ, ಆ ಹೊಣೆಯನ್ನು ತಮ್ಮ ಜತೆ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಜೇಶ್ ಸೆಲ್ವ ಅವರಿಗೆ ವಹಿಸಿದರು. ರಾಜೇಶ್‌ಗೆ ಕಮಲಹಾಸನ್ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದ್ದರು. ‘ವಾಸ್ಕೋಡಿಗಾಮ’ ನೋಡಿದ್ದ ರಾಜೇಶ್‌, ‘ತುಂಗಾ ವನಂ’ ಚಿತ್ರದಲ್ಲಿ ಒಂದು ಪಾತ್ರವನ್ನು ನನಗೆ ಕೊಟ್ಟರು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಮಲ್‌ ಸರ್‌ ಜತೆ ಕೆಲಸ ಮಾಡುವುದೇ ಒಂದು ಅದೃಷ್ಟ. ಅಷ್ಟರ ಮಟ್ಟಿಗೆ ನಾನು ಅದೃಷ್ಟಶಾಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT