ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ಶಾಂತ: ಕಾಮಗಾರಿ ಚುರುಕು

ಸ್ಥಾವರಕ್ಕೆ ಮರಳುತ್ತಿರುವ ಹೊರ ರಾಜ್ಯಗಳ ಕಾರ್ಮಿಕರು
Last Updated 2 ಸೆಪ್ಟೆಂಬರ್ 2014, 6:14 IST
ಅಕ್ಷರ ಗಾತ್ರ

ವಿಜಾಪುರ: ಗೋಲಿಬಾರ್ ನಂತರ ಬಿರುಸು­ಗೊಂಡಿದ್ದ ಸ್ಥಾವರ ವಿರೋಧಿ ಹೋರಾಟ ವಾರದಿಂದ ಶಾಂತಗೊಂಡಿದೆ. ಇತ್ತ ಕೂಡಗಿಯ ಸೂಪರ್ ಥರ್ಮಲ್‌ ಪವರ್ ಘಟಕದಲ್ಲಿ ಕಾಮಗಾರಿಗಳು ಚುರುಕುಗೊಂಡಿವೆ.

ನಿಗದಿತ ಸಮಯದೊಳಗೆ ಮೊದಲ ಘಟಕ­ದಿಂದ 800 ಮೆಗಾವಾಟ್‌ ಶಾಖೋತ್ಪನ್ನ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿರುವ ಎನ್‌ಟಿಪಿಸಿಯ ಆಡಳಿತ ಸ್ಥಾವರದ ಕೆಲಸಕ್ಕೆ ತ್ವರಿತಗತಿಯಲ್ಲಿ ಚಾಲನೆ ನೀಡಿದ್ದು, ವಿವಿಧ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದೆ.

ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆ ಕಂಪೆನಿಗಳ ಪ್ರತಿನಿಧಿಗಳ ಜತೆ ಮತ್ತೊಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದು

‘ಮುಚ್ಚಳಿಕೆ ಪತ್ರ ನೀಡಲಿ’
ಎನ್‌ಟಿಪಿಸಿಯ ಹಿರಿಯ ಅಧಿಕಾರಿಗಳು ರೈತರಿಗೆ ನೀಡಿದ ಭರವಸೆಯಂತೆ ಸುಪ್ರೀಂ­ಕೋರ್ಟ್‌ಗೆ ಮೊದಲು ಮುಚ್ಚಳಿಕೆ ಪತ್ರ ಬರೆದುಕೊಟ್ಟು, ನಂತರ ಕಾಮಗಾರಿ ಆರಂಭಿಸಲಿ. ನಮ್ಮ ಯಾವುದೇ ಅಭ್ಯಂತ­ರವಿಲ್ಲ. ಆದರೆ ಇದೀಗ ಕೂಡಗಿಯಲ್ಲಿ ಕಾಮಗಾರಿ ನಡೆಯುತ್ತಿವೆ. ಇದನ್ನು ರೈತ ಸಂಘ ಖಂಡಿಸುತ್ತದೆ. ಇದು ಮುಂದುವರಿದರೆ ಮತ್ತೆ ಹೋರಾಟಕ್ಕಿಳಿಯುತ್ತದೆ.
ಅರವಿಂದ ಕುಲಕರ್ಣಿ, ರೈತ ಮುಖಂಡ

ಹೊರ ರಾಜ್ಯಗಳ ಕುಶಲಕರ್ಮಿ ಕಾರ್ಮಿಕರನ್ನು ಆದಷ್ಟು ಶೀಘ್ರದಲ್ಲಿ ಸ್ಥಾವರದ ಕಾಮಗಾರಿ ನಿರ್ವಹಿಸಲು ಕರೆಸುವಂತೆ ಸೂಚಿಸಿದೆ.
ಜುಲೈ 5ರ ದುರ್ಘಟನೆ ನಂತರ ಸ್ಥಾವರ ತೊರೆದಿದ್ದ ಕೆಲ ವಿದೇಶಿ ತಂತ್ರಜ್ಞರು ಮರಳಿ ತಮ್ಮ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ 1500ಕ್ಕೂ ಹೆಚ್ಚು ವಿವಿಧ ರಾಜ್ಯಗಳ ಕಾರ್ಮಿಕರು ಎನ್‌ಟಿಪಿಸಿಯ ಸ್ಥಾವರದ ಆವರಣಕ್ಕೆ ಮರಳಿದ್ದು ಚಿಕ್ಕ–ಪುಟ್ಟ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಸ್ಥಾವರ ನಿರ್ಮಾಣಕ್ಕೆ ಅಗತ್ಯವಿರುವ ಬೃಹತ್ ಪ್ರಮಾಣದ ಯಂತ್ರೋಪಕರಣಗಳನ್ನು ಹೊತ್ತ ಬೃಹತ್ ಲಾರಿಗಳು ಹೆದ್ದಾರಿ ಮೂಲಕ ಕೂಡಗಿ ಘಟಕಕ್ಕೆ ಬರುತ್ತಿವೆ. ಒಂದೆಡೆ ಯಂತ್ರೋ­ಪಕರಣಗಳನ್ನು ಸುರಕ್ಷಿತವಾಗಿ ಇಳಿಸುವ ಕೆಲಸ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಪ್ರಮುಖ ಕಾಮಗಾರಿಗಳನ್ನು ನಡೆಸಲು ಅಗತ್ಯವಿರುವ ಕುಶಲ ಕಾರ್ಮಿಕರನ್ನು ಬಿಹಾರ, ಪಶ್ಚಿಮ ಬಂಗಾಳ, ಓಡಿಶಾ, ಜಾರ್ಖಂಡ್‌ ರಾಜ್ಯಗಳಿಂದ ಕರೆತರುವ ತೀವ್ರ ಯತ್ನ ಬಿರುಸುಗೊಂಡಿದೆ.
 

ಬಾಯ್ಲರ್ ಕಾಮಗಾರಿ ಕುಂಠಿತ
ಸ್ಥಾವರದ ಪ್ರಮುಖ ಕಾಮಗಾರಿ ಬಾಯ್ಲರ್ ನಿರ್ಮಾಣ ಕಾರ್ಮಿಕರ ಕೊರತೆ­ಯಿಂದ ಕುಂಠಿತಗೊಂಡಿದೆ. ಉಳಿದ ಕಾಮ­ಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಪೂರ್ಣ ಪ್ರಮಾಣದಲ್ಲಿ ಕುಶಲ ಕಾರ್ಮಿಕರು ಘಟಕಕ್ಕೆ ಬಂದ ನಂತರ ವೇಗ ಪಡೆದು­ಕೊಳ್ಳಲಿವೆ. ಕಾರ್ಮಿಕರನ್ನು ಶೀಘ್ರವಾಗಿ ಕರೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಅವರು ಕಾರ್ಯೋ­ನ್ಮುಖರಾಗಿ­ದ್ದಾರೆ.
–ಎನ್‌ಟಿಪಿಸಿಯ ಹಿರಿಯ ಅಧಿಕಾರಿ

ಘಟಕದ ಎದುರೇ ನಡೆದ ದುರ್ಘಟನೆಯಿಂದ ಭಯಭೀತರಾಗಿದ್ದ ಐದು ಸಾವಿರಕ್ಕೂ ಅಧಿಕ ಕಾರ್ಮಿಕರು ಸೇರಿದಂತೆ 50ಕ್ಕೂ ಹೆಚ್ಚು ವಿದೇಶಿ ತಂತ್ರಜ್ಞರು ಅಂದೇ ಸ್ಥಾವರದ ಆವರಣದಿಂದ ಕಾಲ್ಕಿತ್ತಿದ್ದರು. ಪ್ರತಿಭಟನಾಕಾರರ ಆಕ್ರೋಶವನ್ನು ಕಣ್ಣಾರೆ ಕಂಡಿದ್ದ ಕಾರ್ಮಿಕರು ಮತ್ತೆ ಇತ್ತ ಸುಳಿಯಲ್ಲ ಎಂದು ಆ ಸಂದರ್ಭ ಊರುಗಳಿಗೆ ಮರಳಿದ ಕಾರ್ಮಿಕರು ಪ್ರತಿಕ್ರಿಯಿಸಿದ್ದರು.

ಕೆಲವರು ಸಂಬಳಕ್ಕಾಗಿ ಕಾದು ಕುಳಿತರೆ, ಬಹುತೇಕರು ಜೀವ ಉಳಿದರೆ ಸಾಕು ಎಂದು ಸ್ಥಾವರದ ಸ್ಥಳದಿಂದ ಓಡಿ ರೈಲು, ಬಸ್‌ಗಳ ಮೂಲಕ ತಮ್ಮೂರುಗಳಿಗೆ ಮರಳಿದ್ದರು. ಎನ್‌ಟಿಪಿಸಿಯಿಂದ ಪ್ರಮುಖ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಖಾಸಗಿ ಕಂಪೆನಿಗಳ ಪ್ರತಿನಿಧಿಗಳು ಈ ಕುಶಲಕರ್ಮಿಗಳನ್ನು ಮತ್ತೆ ಸ್ಥಾವರದ ಕಾಮಗಾರಿಗೆ ಕರೆತರಲು ಮನವೊಲಿಸುವಲ್ಲಿ ನಿರತರಾಗಿದ್ದಾರೆ.

ಕೆಲವರು ಈಗಾಗಲೇ ಬದುಕಿನ ಅನಿವಾರ್ಯತೆಗೆ ದೂರದ ರಾಜ್ಯಗಳಿಂದ ಎನ್‌ಟಿಪಿಸಿಯ ಕೂಡಗಿ ಸ್ಥಾವರದ ಆವರಣಕ್ಕೆ ಬಂದು ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಇನ್ನೂ 4ರಿಂದ 5 ಸಾವಿರ ಹೊರ ರಾಜ್ಯದ ಕುಶಲಕರ್ಮಿ ಕಾರ್ಮಿಕರು ಬರುವ ನಿರೀಕ್ಷೆ ಇದೆ ಎಂದು ಎನ್‌ಟಿಪಿಸಿಯ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT