ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಪಿ ಎಂಡಿಂಗ್‌ (ಹಿಂದಿ)

ಪ್ರತಿಕ್ರಿಯೆಯ ಸೂಜಿಮೊನೆ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಿರ್ಮಾಣ:  ಸೈಫ್‌ ಅಲಿ ಖಾನ್‌, ದಿನೇಶ್‌ ವಿಜಾನ್‌, ಸುನಿಲ್‌ ಲಲ್ಲ
ನಿರ್ದೇಶನ: ರಾಜ್‌ ನಿಡಿಮೋರು–ಕೃಷ್ಣ ಡಿ.ಕೆ.
ತಾರಾಗಣ: ಸೈಫ್‌ ಅಲಿ ಖಾನ್‌, ಇಲಿಯಾನಾ, ಗೋವಿಂದ, ರಣವೀರ್‌ ಶೋರೆ, ಕಲ್ಕಿ ಕೊಯ್ಲಿನ್‌ ಮುಂತಾದವರು.

ಜನಪ್ರಿಯ ಸಿನಿಮಾ ಮಾದರಿಗಳು, ಸೂತ್ರ­­ಗ­­ಳನ್ನು ಉಜ್ಜುತ್ತಾ ಕೂರುವ­ವರಿಗೆ ಆಗೀಗ ವ್ಯಂಗ್ಯದ ಸೂಜಿಮೊನೆ ತಾಗಿಸು­ವಂಥ ಸಿನಿಮಾ ಮಾಡು­ವವರು ನಮ್ಮ ನಡುವೆ ಇದ್ದಾರೆ. ಕನ್ನಡದಲ್ಲಿ ಬಿಡಿಬಿಡಿಯಾಗಿ ಈ ಯತ್ನಗಳು ನಡೆಯುತ್ತಿವೆ.

ತಮಿಳಿ­ನಲ್ಲಿ ಜನಪ್ರಿಯ ದೃಶ್ಯಗಳನ್ನೇ ಅಣಕು ಮಾಡುವಂಥ ‘ತಮಿಳ್‌ ಪಡಂ’ ಸಿನಿಮಾ ಬಂದು, ಗಮನ ಸೆಳೆದಿತ್ತು. ‘ಹ್ಯಾಪಿ ಎಂಡಿಂಗ್‌’ ಅಂಥ ಆತ್ಮದ ಸಿನಿಮಾ. ಮೇಲು ಮಟ್ಟಕ್ಕೆ ಪ್ರತಿಕ್ರಿಯಾತ್ಮಕ ಎನಿಸಿದರೂ ಆಳದಲ್ಲಿ ಸೂಕ್ಷ್ಮ ಸಂವೇದನೆಯನ್ನು ಇಟ್ಟುಕೊಂಡೇ ವ್ಯಂಗ್ಯದ ರಸಾನುಭವ ಕಟ್ಟಿಕೊಡುವ ಸಿನಿಮಾ ಇದು.

ಒಂದೇ ಪುಸ್ತಕ ಬರೆದು, ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ನಾಯಕ. ಸಾಲುಸಾಲು ಹುಡುಗಿ­ಯರ ಸಹವಾಸ ಬೇಕಿದ್ದರೂ ‘ಐ ಲವ್‌ ಯೂ’ ಎಂಬ ನುಡಿಮುತ್ತು ಅವನಿಗೆ ಅಪಥ್ಯ.  ತ್ರಿವಳಿಗಳ ತಾಯಿ­ಯಾದ ಅವನ ಮಾಜಿ ಪ್ರೇಯಸಿ ಈಗಲೂ ಅವನೊ­ಟ್ಟಿಗೆ ಸ್ನೇಹ ಇಟ್ಟುಕೊಂಡಿದ್ದಾಳೆ. ಬಿಟ್ಟೇನೆಂದರೂ ಬಿಡಲೊಲ್ಲದ ಇನ್ನೊಬ್ಬ ಪ್ರೇಯಸಿ ಬೆನ್ನಿಗೆ ಬಿದ್ದಿದ್ದಾಳೆ. ಇಂಥ ಸಂದರ್ಭದಲ್ಲಿ ಅವನಿಗೆ ಹೊಸ ಬರಹಗಾರ್ತಿ­ಯನ್ನು ಪರಿ­ಚಯ ಮಾಡಿ­ಕೊ­ಳ್ಳುವ ಅನಿ­ವಾರ್ಯ ಸೃಷ್ಟಿ­ಯಾ­ಗು­­ತ್ತದೆ. ಆ ಬರಹ­ಗಾರ್ತಿ ಇವನ ಜನ­ಪ್ರಿಯತೆಯ ಬೂಟಿ­ನೊಳಗೆ ಆಗಿನ್ನೂ ಕಾಲಿಟ್ಟ­ವಳು. ಇಷ್ಟೆಲ್ಲಾ ಪೀಕ­ಲಾಟಗಳ ನಡುವೆ ಹಣದ ಮುಗ್ಗಟ್ಟಿ­ನಿಂದಾಗಿ ಜನ­ಪ್ರಿಯ ಸಿನಿಮಾ ಒಂದಕ್ಕೆ ‘ವಿಭಿನ್ನ­ವಾದ’ ಸ್ಕ್ರಿಪ್ಟ್‌ ಮಾಡಿ­ಕೊ­ಡುವ ಸವಾಲಿಗೆ ನಾಯಕ ಎದೆಗೊಡುತ್ತಾನೆ.

ಇಷ್ಟೆಲ್ಲಾ ಬಗೆಬಗೆಯ ಹೂರಣಕ್ಕೆ ಒಂದು ಸೂತ್ರ ಕಟ್ಟಿ, ಅದಕ್ಕೆ ಸುಖಾಂತ್ಯ ಕೊಡುವ ನಿರ್ದೇಶಕ ದ್ವಯರು, ನಡುನಡುವೆ ವ್ಯಂಗ್ಯದ ಗಮನಾರ್ಹ ಆಟ­ವಾಡಿದ್ದಾರೆ. ಜನಪ್ರಿಯ ಸಾಹಿತ್ಯ, ಜನಪ್ರಿಯ ಸಿನಿಮಾ ಎರಡರಲ್ಲೂ ನಡೆಯುವ ಢೋಂಗಿತನ­ವನ್ನು ಅವರು ಮೇಲುಮೇಲೆ ತಡವಿದ್ದಾರೆ. ಆದರೆ, ಇಡೀ ಸಿನಿಮಾ ನಿರೂಪಣೆಯಲ್ಲಿನ ನಾಟಕೀಯ ಅಣಕು ಪರಿಣಾಮ­ಕಾರಿಯಾಗಿದೆ.
ಹಾಸ್ಯ, ಹಾಡುಗಳು, ಸಂಭಾಷಣೆ, ಆಂಗಿಕ ಅಭಿನಯ ಎಲ್ಲ­ವನ್ನೂ ವ್ಯಂಗ್ಯದ ಉದ್ದೇಶ ದಾಟಿಸಲು ಸಮರ್ಪಕವಾಗಿ ಬಳಸಿಕೊಂಡಿ­ದ್ದಾರೆ. ಒಂದು ಕಡೆ ಜನಪ್ರಿಯ ಮಾಧ್ಯಮಗಳನ್ನು ಗೇಲಿ ಮಾಡುವ ಸಿನಿಮಾ, ಇನ್ನೊಂದು ಕಡೆ ಬದುಕಿನ ಬದ­ಲಾದ ಆದ್ಯತೆಗಳು, ಸ್ವಾರ್ಥದ ಸಿಕ್ಕುಗಳನ್ನೂ ತಡವುತ್ತದೆ.

ಸೈಫ್‌ ಅಲಿ ಖಾನ್‌ ನಿರ್ವಹಿಸಿರುವ ಪಾತ್ರ ಅಪರೂಪ­ದ್ದೆನ್ನಲು ಕಾರಣಗಳಿವೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಗೋವಿಂದ ನಿರ್ವಹಿಸಿರುವ ಪಾತ್ರ ಸಿನಿಮಾದ ಅಂತರಾತ್ಮದ ದೃಷ್ಟಿ­ಯಿಂದ ತುಂಬಾ ಮುಖ್ಯವಾದುದು. ನಾಯಕಿ ಇಲಿ­ಯಾನಾ ತಾವು ಕಲಿಯುತ್ತಿದ್ದೇನೆ ಎಂಬ ಜಾಡನ್ನು ಉಳಿಸಿದ್ದಾರೆ. ಸ್ಟಾರ್‌ ನಟರ ‘ಸೂತ್ರಬದ್ಧ’ ಧೋರಣೆಗೆ ಪ್ರತಿಕ್ರಿ­ಯಾತ್ಮಕ ಆಗಿರು­ವುದರಿಂದ ಈ ಸಿನಿಮಾ ಇಂದಿನ ಕಾಲಘಟ್ಟದಲ್ಲಂತೂ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT