ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಪಿ ಟು ಬ್ಲೀಡ್‌

Last Updated 28 ನವೆಂಬರ್ 2015, 8:40 IST
ಅಕ್ಷರ ಗಾತ್ರ

#HappyToBleed ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ವಾರ ಕಂಡ ಬಹುತೇಕ ಮಹಿಳೆಯರ ಚಿತ್ರಗಳೊಂದಿಗೆ ಈ ವಾಕ್ಯ ಸಾಮಾನ್ಯವಾಗಿತ್ತು. ಮುಟ್ಟಿಗಂಟಿರುವ ‘ಅಸ್ಪೃಶ್ಯತೆ’ಯನ್ನು ತೊಡೆದು ಹಾಕುವ ಸಲುವಾಗಿ ‘ಜಾಗೃತ’ ಮಹಿಳೆಯರು ಕೈಗೊಂಡ ಸಾಮಾಜಿಕ ಆಂದೋಲನವಿದು. ಸಣ್ಣದಾಗಿ ಆರಂಭವಾದ ಈ ಜಾಲತಾಣದ ಅಭಿಯಾನ ಈಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿದೆ.

‘ಮಹಿಳೆಯರು ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಿಸುವುದು ನಿಷಿದ್ಧವಿದೆ. ಮುಟ್ಟು ಶೋಧಕ ಯಂತ್ರವೊಂದು ಅನ್ವೇಷಣೆ ಯಾದರೆ, ಅದನ್ನು ನಾವು ದೇವಾಲಯದಲ್ಲಿ ಅಳವಡಿಸಿದರೆ, ಆ ದಿನ ಮಹಿಳೆಯರು ದೇವಾಲಯ ಪ್ರವೇಶಿಸಬಹುದೇನೋ’ ಎಂಬ ಟ್ರವಾಂಕೋರ್‌ ದೇವಸ್ವಂ ಬೋರ್ಡ್‌ನ ಅಧ್ಯಕ್ಷ ಪ್ರಯಾರ್‌ ಗೋಪಾಲಕೃಷ್ಣನ್‍ ಹೇಳಿಕೆಗೆ ಮಹಿಳೆಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಗೋಪಾಲಕೃಷ್ಣನ್‍ ಹೇಳಿಕೆ ವಿವಾದವನ್ನು ಮಾತ್ರ ಸೃಷ್ಟಿಸಿಲ್ಲ; ಮುಟ್ಟಿಗಂಟಿರುವ ‘ಮೈಲಿಗೆ’ ಎಂಬ ಕೊಳೆ ತೊಳೆಯುವ ಅಭಿಯಾನವೂ ಅದರ ಬೆನ್ನಲ್ಲೇ ಆರಂಭವಾಗಿದೆ.

ಪಟಿಯಾಲದ ವಿದ್ಯಾರ್ಥಿನಿ ನಿಖಿತಾ ಆಜಾದ್‌ ಫೇಸ್‌ಬುಕ್‌ನಲ್ಲಿ ಹೊತ್ತಿಸಿದ ‘Happy To Bleed’ ಕಿಡಿಯಿಂದ ಸಾವಿರಾರು ಜಾಗೃತಿ ಹಣತೆಗಳು ಬೆಳಗುವಂತಾಗಿದೆ. ಮುಟ್ಟಿನ ಬಗೆಗಿರುವ ಮೈಲಿಗೆ ಎಂಬ ಅಂಟಿನಿಂದ ರೋಸಿಹೋಗಿರುವ ಸಾವಿರಾರು ಮಹಿಳೆಯರು ಈ ಆಂದೋಲನಕ್ಕೆ ಇನ್ನಿಲ್ಲದಂತೆ ಬೆಂಬಲ ಸೂಚಿಸಿದ್ದಾರೆ. ಮಾತ್ರವಲ್ಲ, ಪೇಪರ್‌, ನ್ಯಾಪ್‌ಕಿನ್‌ ಮೇಲೆ ಬರೆದ ‘Happy To Bleed’ ಘೋಷಣೆಯೊಂದಿಗೆ ತಮ್ಮ ಚಿತ್ರಗಳನ್ನು ಫೇಸ್‌ಬುಕ್‌ ಗೋಡೆಗೆ ತೂಗು ಹಾಕಿದ್ದಾರೆ.

ಮುಟ್ಟಿನ ಮೈಲಿಗೆ ಅಳಿಸುವ ದೃಷ್ಟಿಯಿಂದ ಮಾತ್ರವಲ್ಲದೆ ತಾನು ‘ಹೆಣ್ಣೆಂಬ ಹೆಮ್ಮೆ’ ವ್ಯಕ್ತಪಡಿಸಲೂ ಮಹಿಳೆಯರಿಗೆ ಈ ಅಭಿಯಾನ ವೇದಿಕೆಯಾಗಿದೆ. ನೂರಾರು ಮಂದಿ ಹದಿಹರೆಯದ ಹೆಣ್ಣುಮಕ್ಕಳು ಈ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ‘ಹೆಣ್ಣಾಗಿ ಹುಟ್ಟಿದ್ದು, ಮುಟ್ಟಾಗುವುದು ನಮ್ಮ ಅನನ್ಯತೆ. ಆ ಕಾರಣಕ್ಕಾಗಿ ನಾವು ‘ಅಸ್ಪೃಶ್ಯತೆ’ಗೆ, ಅಪಮಾನಕ್ಕೆ ಗುರಿಯಾಗ ಬೇಕಿಲ್ಲ’ ಎಂಬ ಗಟ್ಟಿ ಮಾತುಗಳು ಈಗ ಫೇಸ್‌ಬುಕ್‌ ತುಂಬುತ್ತಿವೆ.

‘ಮುಟ್ಟಿನ ಕಾರಣದಿಂದ ಹೆಣ್ಣು ಅಪವಿತ್ರ ಎನ್ನುವುದಾದರೆ ಹೆಣ್ಣಿಗೆ ಋತುಚಕ್ರ ಕೊಟ್ಟ ದೇವರು ಹೇಗೆ ಪವಿತ್ರ?’ ಎಂಬಂಥ ಮುಖ್ಯ ಪ್ರಶ್ನೆಗಳನ್ನೂ ಈ ಅಭಿಯಾನದ ಮೂಲಕ ಎತ್ತಲಾಗಿದೆ. ದೇವರೇ ನೀಡಿರುವ ಈ ಜೈವಿಕ ಚಕ್ರ ಅಪವಿತ್ರ ಎನ್ನುವುದಾದರೆ, ‘ದೇವರೇ, ನನ್ನ ಕಾಲುಗಳ ನಡುವೆ ನೋಡಬೇಡ’ ಎಂಬ ಬರಹದೊಂದಿಗೆ ಮೀನಾ ಕಂದಸಾಮಿ ತಮ್ಮ ಚಿತ್ರವನ್ನು ಫೇಸ್‌ಬುಕ್‌ ಗೋಡೆಗೆ ತೂಗಿಹಾಕಿದ್ದಾರೆ. ‘ಹೌದು ನಾನು ತಿಂಗಳಿಗೊಮ್ಮೆ ಮುಟ್ಟಾಗುತ್ತೇನೆ. ನಾನು ‘ಹೆಣ್ಣು’. ಆ ಕಾರಣಕ್ಕೆ ಮುಟ್ಟಾಗುತ್ತೇನೆ. ಏನೀಗ?’ ಎಂಬ ಪ್ರಶ್ನೆ ಹಲವು ಹೆಣ್ಣುಮಕ್ಕಳದ್ದು.

ಲಿಂಗದ ಕಾರಣದಿಂದ ತಾರತಮ್ಯ, ಅಪಮಾನಗಳನ್ನು ಅನುಭವಿಸುತ್ತಿರುವ ಹೆಣ್ಣನ್ನು ಈಗ ಮುಟ್ಟಿನ ಕಾರಣಕ್ಕೆ ಮತ್ತೆ ‘ಶಾಪಗ್ರಸ್ತೆ’ಯಾಗಿಸಲು ಹೊರಟಿರುವ ನವ ಸಾಂಪ್ರದಾಯಿಕತೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಕೇವಲ ಮಹಿಳೆಯರು ಮಾತ್ರವಲ್ಲ, ಯುವಕರು, ಪುರುಷರು ಕೂಡಾ ಈ ಅಭಿಯಾನ ಬೆಂಬಲಿಸಿದ್ದಾರೆ. ಬಹುತೇಕರು ಪುರುಷ ಪ್ರಧಾನ ವ್ಯವಸ್ಥೆ ಕೊನೆಯಾಗಿ ಲಿಂಗ ಸಮಾನತೆ ಬರಬೇಕೆಂದಿದ್ದಾರೆ. ಆದರೆ, ಕೆಲವು ಸಂಪ್ರದಾಯವಾದಿಗಳು ಈ ಅಭಿಯಾನವನ್ನು ಕುಚೋದ್ಯ ಮಾಡಿ ಕಮೆಂಟ್‌ಗಳನ್ನು ಹಾಕುವುದರ ಜತೆಗೆ ಪ್ರಯಾರ್‌ ಗೋಪಾಲಕೃಷ್ಣನ್‍ ಬೆಂಬಲಕ್ಕೂ ನಿಂತಿದ್ದಾರೆ!

ಸಂಪ್ರದಾಯವಾದಿ ಮನಸ್ಥಿತಿಯ, ಪುರುಷ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ಮುಟ್ಟು ಮೈಲಿಗೆ ಎಂಬ ಮನೋಭಾವ ಇನ್ನೂ ಬದಲಾಗಿಲ್ಲ. ಧಾರ್ಮಿಕ ವಿಚಾರಗಳು ಬಂದಾಗಲಂತೂ ಮುಟ್ಟು ಎಂಬ ಪದವೇ ಅಸ್ಪೃಶ್ಯವಾಗಿಬಿಡುತ್ತದೆ. ತನ್ನ ಹುಟ್ಟಿಗೆ ತನ್ನ ತಾಯಿಯ ಮುಟ್ಟು ಕಾರಣ ಎಂಬುದು ಸಂಪ್ರದಾಯವಾದಿಗಳ, ಅದರಲ್ಲೂ ಸಂಪ್ರದಾಯ ವಾದಿ ಪುರುಷರ ತಲೆಗೆ ಹೋಗದು. ಹೋದರೂ ಆ ವಿಚಾರ ಅಲ್ಲೂ ಅಸ್ಪೃಶ್ಯವಾಗಬಹುದು.

ಮುಟ್ಟಿನ ಕುರಿತಾದ ಧಾರ್ಮಿಕ ನಂಬಿಕೆಗಳ ಕಾರಣದಿಂದ ಇಂದಿಗೂ ಗ್ರಾಮೀಣ ಭಾಗದ ಕೆಲ ಜನಾಂಗಗಳಲ್ಲಿ ಮಹಿಳೆಯರನ್ನು ಮುಟ್ಟಿನ ದಿನಗಳಲ್ಲಿ ಚಳಿ, ಮಳೆ ಎನ್ನದೆ ಹಟ್ಟಿಯಿಂದ ಹೊರಗೆ ಅಮಾನವೀಯ ಸ್ಥಿತಿಯಲ್ಲಿ ಇಡಲಾಗುತ್ತಿದೆ. ಮಹಿಳೆಗೆ ತನ್ನ ಫಲವಂತಿಕೆಯ ಹೆಮ್ಮೆಯಾದ ಮುಟ್ಟು ಧಾರ್ಮಿಕ, ಸಾಮಾಜಿಕ ಕಾರಣಗಳಿಂದಾಗಿ ಅವಳನ್ನು ಮುಜುಗರ, ಅಪಮಾನ, ಮೈಲಿಗೆಯ ವ್ಯಾಧಿಗೆ ತಳ್ಳಿದೆ. ಮುಟ್ಟಾಗುವುದೇ ಶಾಪವೇನೋ ಎಂಬಂಥ ಸ್ಥಿತಿಯನ್ನು ಸಮಾಜ ನಿರ್ಮಿಸಿದೆ. ಇದೆಲ್ಲಕ್ಕೂ ಪ್ರತಿಭಟನೆಯ ರೂಪದಂತಿದೆ ಈ ‘Happy To Bleed’ ಅಭಿಯಾನ.

ಮಹಿಳಾವಾದಿಗಳು, ಸಾಮಾಜಿಕ ಕಾರ್ಯಕರ್ತೆಯರು, ಋತುಚಕ್ರದ ಬಗ್ಗೆ ಅರಿವು ಮೂಡಿಸುವ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ‘Happy To Bleed’ ಅಭಿಯಾನಕ್ಕೆ ಭಾರೀ ಸಂಖ್ಯೆಯಲ್ಲಿ ಬೆಂಬಲ ಸೂಚಿಸಿದ್ದಾರೆ. ಜತೆಗೆ ಅಭಿಯಾನವನ್ನು ಸಾಮಾಜಿಕ ಆಂದೋಲನದ ರೂಪದಲ್ಲಿ ಮುಂದುವರಿಸುವ ಪ್ರಯತ್ನವೂ ನಡೆಯುತ್ತಿದೆ.

ನಾವು ‘ಆಧುನಿಕ’ ಎಂದು ಕರೆಯುವ ಈ ದಿನಗಳಲ್ಲೂ ನೈಸರ್ಗಿಕ ಕ್ರಿಯೆಯಾದ ಮುಟ್ಟಿನ ಬಗ್ಗೆ ಮಡಿಮೈಲಿಗೆಯ ರೆಕ್ಕೆಪುಕ್ಕ ಕಟ್ಟಿ ಮಹಿಳೆಯನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿರುವುದು ವರ್ತಮಾನದ ದುರಂತ. ನಮ್ಮ ಅಮ್ಮ, ಅಕ್ಕ, ತಂಗಿ, ಅತ್ತಿಗೆ, ಹೆಂಡತಿ, ಮೈನೆರೆದ ಹೆಣ್ಣುಮಕ್ಕಳೂ ತಿಂಗಳಿಗೊಮ್ಮೆ ಮುಟ್ಟಿನ ನೋವನ್ನು ಅನುಭವಿಸುತ್ತಾರೆ ಎಂಬುದನ್ನು ನಾವು ಮರೆಯುತ್ತಿದ್ದೇವೆಯೇ?

***
ಅದು ನಮ್ಮ ಖಾಸಗಿತನ
‘ಹೌದು ನಾವು ಮುಟ್ಟಾಗುತ್ತೇವೆ. ಅದಕ್ಕಾಗಿ ನಾವು ಅಳುಕಬೇಕಿಲ್ಲ. ನಾವು ಅಪವಿತ್ರ ಎಂದು ನಿರ್ಧರಿಸುವ ಯಾವ ದೇವರೂ ಇಲ್ಲ. ಮುಟ್ಟು ನಮ್ಮ ದೇಹದೊಳಗಿನ ನೈಸರ್ಗಿಕ ಕ್ರಿಯೆ. ಅದು ನಮ್ಮ ಖಾಸಗಿತನ. ‘Happy To Bleed’ ಎಂದ ಮಾತ್ರಕ್ಕೆ ನಾವು ಮುಟ್ಟಾಗುವಾಗ ಸಂತೋಷವೇನೂ ಆಗುವುದಿಲ್ಲ. ಅವು ನೋವಿನ ದಿನಗಳು ಎಂಬುದು ಹೆಣ್ಣಿಗೆ ಮಾತ್ರ ಗೊತ್ತು’
–ನಿಖಿತಾ ಆಜಾದ್‌,
#
Happy To Bleed ಅಭಿಯಾನ ಆರಂಭಿಸಿದ ವಿದ್ಯಾರ್ಥಿನಿ

***
ತರತಮ ಸಹಿಸಲ್ಲ

‘ಇದು ಮುಟ್ಟಿನ ಸಮಯದಲ್ಲಿ ಮಂದಿರ, ಮಸೀದಿ, ಚರ್ಚು ಇಲ್ಲವೇ ಯಾವುದೇ ಧಾರ್ಮಿಕ ಸ್ಥಳಕ್ಕೆ ಹೋಗುವುದರ ಮೇಲಿನ ನಿರ್ಬಂಧದ ವಿಷಯ ಮಾತ್ರವಲ್ಲ; ಇದು ‘ಹೆಣ್ಣು’ ತಾನು ಯಾವುದೇ ಸ್ಥಳಕ್ಕೆ ಹೋಗಲು ಇರುವ ಸಹಜ ಹಕ್ಕನ್ನು ಕಸಿದುಕೊಳ್ಳುತ್ತಿರುವ ವಿಷಯ. ಮುಟ್ಟಿನ ಕಾರಣಕ್ಕೆ ಹೆಣ್ಣಿನ ಹಕ್ಕುಗಳನ್ನು ಕಸಿದುಕೊಳ್ಳುವುದು, ತಾರತಮ್ಯ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ’
– ಜಪ್ಲೀನ್‌ ಪಸ್ರಿಚಾ,
ಸಂಸ್ಥಾಪಕಿ, ‘Feminism In India

***
‘ಅಪವಿತ್ರ’ವಲ್ಲ

‘ಮುಟ್ಟಿನ ಸಮಯದಲ್ಲಿ ನಾನು ಪ್ರಾರ್ಥಿಸುವುದಿಲ್ಲ. ಹಾಗಾದರೆ ಮುಟ್ಟು ಹೇಗೆ ಅಪವಿತ್ರವಾಗುತ್ತದೆ. ಮುಟ್ಟು ‘ಅಪವಿತ್ರ’ ಎನ್ನುವವರೆಲ್ಲಾ ಆ ‘ಚಕ್ರ’ವೇ ನಿಮ್ಮನ್ನು ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿ ಕಾಯ್ದಿದ್ದು ಎಂಬುದು ಮರೆಯಬಾರದು’
– ಅದಿತಿ ಗುಪ್ತಾ,
ಸಹ ಸಂಸ್ಥಾಪಕಿ, menstrupedia.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT