ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ದಕ್ಷಿಣ ಕನ್ನಡಕ್ಕೆ ಆಸ್ಟ್ರೇಲಿಯಾ ಪೊಲೀಸರು‌

ಪ್ರಭಾ ಹತ್ಯೆ ಪ್ರಕರಣ
Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ದಕ್ಷಿಣ ಕನ್ನಡ ಜಿಲ್ಲೆಯ ಐಟಿ ಉದ್ಯೋಗಿ ಪ್ರಭಾ ಅರುಣ್‌ಕುಮಾರ್‌   ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲೂ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದಾರೆ.

ಮಾರ್ಚ್‌ 7ರಂದು ಸಿಡ್ನಿಯಲ್ಲಿ ನಡೆದ ಪ್ರಭಾ ಹತ್ಯೆ ಪ್ರಕರಣದ ಆರೋಪಿಯ ಪತ್ತೆಗಾಗಿ ಹೊಸ ವಿಡಿಯೊ ದೃಶ್ಯಾವಳಿಯನ್ನು ಬಿಡುಗಡೆ ಮಾಡಿರುವ ಪೊಲೀಸರು ಈ ವಿಷಯ ತಿಳಿಸಿದ್ದಾರೆ.

ಕೊಲೆ ನಡೆದ ಸಂದರ್ಭದಲ್ಲಿ ದಾಖಲಾಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಆರೋಪಿಯ ಚಹರೆ ಲಭ್ಯವಾಗಿದ್ದು, ಇದು ತನಿಖೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ‘ಇದು ಮಹತ್ವದ ಪ್ರಕರಣವಾಗಿದ್ದು, ತನಿಖೆ ವ್ಯಾಪ್ತಿಯನ್ನು ಭಾರತಕ್ಕೂ ವಿಸ್ತರಿಸುವ ಸಾಧ್ಯತೆ ಇದೆ. ತನಿಖಾ ತಂಡವು ದಕ್ಷಿಣ ಕನ್ನಡದಲ್ಲಿರುವ ಪ್ರಭಾ ಅವರ ಹುಟ್ಟೂರಿಗೂ ಭೇಟಿ ನೀಡಿ ಪ್ರಭಾ ಅವರ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಿದೆ’ ಎಂದು ಪೊಲೀಸ್‌ ಅಧಿಕಾರಿ ರಿಟ್‌ಚೀ ಸಿಮ್  ಹೇಳಿದ್ದಾರೆ.

‘ಎಲ್ಲ ದೃಷ್ಟಿಕೋನಗಳಿಂದ ತನಿಖೆ ನಡೆಸುವ ಅಗತ್ಯವಿದೆ. ಕೇವಲ ಊಹೆ ಮೇಲೆ ಮಾತನಾಡುವುದು ಸರಿಯಲ್ಲ. ಅವರ ಕುಟುಂಬಸ್ಥರು, ಸಂಬಂಧಿಕರು, ಪರಿಚಯದವರಿಂದಲೂ ಮಾಹಿತಿ ಪಡೆಯಬೇಕಾಗುತ್ತದೆ’ ಎಂದು  ತಿಳಿಸಿದ್ದಾರೆ. ‘ಪ್ರಭಾ ಅವರ ಕುಟುಂಬದವರೊಂದಿಗೆ ಈಗಲೂ ನಿಕಟ ಸಂಪರ್ಕದಲ್ಲಿ ಇದ್ದೇವೆ. ತನಿಖಾ ತಂಡವು ಭಾರತಕ್ಕೆ ತೆರಳುವ ಮುನ್ನ ಅವರಿಗೆ ಮಾಹಿತಿ ನೀಡಲಿದೆ’ ಎಂದರು.

ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಯ ತುಣುಕು ಈಚೆಗೆ ಲಭ್ಯವಾಗಿದ್ದು, ಕೊಲೆ ನಡೆದ ಪ್ರದೇಶದಲ್ಲಿ ಅದನ್ನು ಪ್ರದರ್ಶಿಸಿ ಆರೋಪಿ ಪತ್ತೆಗೆ ಸಾರ್ವಜನಿಕರ ಸಹಕಾರ ಪಡೆಯಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT