ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸೊಳ್ಳೆಗೂ ಅಮಲೇರಿಸುವ ಅಡಿಕೆ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸೊಳ್ಳೆ ಕಾಟ ತಪ್ಪಿಸಲು ಹಲವಾರು ಬತ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವು ಸೊಳ್ಳೆಯನ್ನು ಸಾಯಿಸುತ್ತವೆಯೋ, ಓಡಿಸುತ್ತವೆಯೋ ಬೇರೆ ಮಾತು, ಆದರೆ ಬತ್ತಿಗಳು ಉಗುಳುವ ಹೊಗೆಯ ಸೇವನೆ ಮಾಡುವ ನಾವಂತೂ ಬಗೆ ಬಗೆ ಕಾಯಿಲೆಗೆ ತುತ್ತಾಗುವುದು ಖಚಿತ ಎಂದು ಈಗಾಗಲೇ ಹಲವು ಸಂಶೋಧನೆಗಳು ದೃಢಪಡಿಸಿವೆ. 

‘ಒಂದು ಸೊಳ್ಳೆ ಬತ್ತಿ ಉಗುಳುವ ಹೊಗೆ 100 ಸಿಗರೇಟ್ ಹೊಗೆಗೆ ಸಮ’ ಎಂದು ಮಲೇಷಿಯಾ ‘ಚೆಸ್ಟ್ ರಿಸರ್ಚ್ ಫೌಂಡೇಶನ್’ ನಡೆಸಿದ ಅಧ್ಯಯನದಿಂದ ಬಹಿರಂಗಪಟ್ಟಿದೆ. ಭಾರತದಲ್ಲಿ ಬಹಳಷ್ಟು ಜನರ ಆರೋಗ್ಯದ ಮೇಲೆ ಸೊಳ್ಳೆಬತ್ತಿಗಳು ದುಷ್ಪರಿಣಾಮ ಉಂಟು ಮಾಡುತ್ತಿವೆ ಎಂದು ಈ ಅಧ್ಯಯನ ತಿಳಿಸಿದೆ.

ಇದಕ್ಕೆಲ್ಲ ಸೆಡ್ಡು ಹೊಡೆಯಲು ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆಯ ಕೃಷಿಕ ದಯಾನಂದ ಪಟವರ್ಧನ ಅಡಿಕೆಯಿಂದ ಮಾಡಿರುವ ಸೊಳ್ಳೆ ಬತ್ತಿಯನ್ನು ತಯಾರಿಸುತ್ತಿದ್ದಾರೆ. ಅಡಿಕೆಯಿಂದ ತಯಾರಾಗುತ್ತಿರುವ ರಾಸಾಯನಿಕಮುಕ್ತ ಬತ್ತಿ ದೇಶದಲ್ಲಿಯೇ ಪ್ರಥಮ ಎನ್ನಲಾಗಿದೆ.

ಹೊಸತನದ ಹುಟ್ಟು
ಚಾಲಿ ಅಡಿಕೆ ತುಂಡರಿಸಿ, ಬೀಡಾ ಅಂಗಡಿಗಳಿಗೆ ಪೂರೈಸುವ ಕಾಯಕದಲ್ಲಿ 25 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ ದಯಾನಂದ. ಮನೆಯಲ್ಲಿಯೇ ಇರುವ ಯಂತ್ರದಲ್ಲಿ ಅಡಿಕೆಯನ್ನು ತುಂಡು ಮಾಡಿ (ಡೈಮಂಡ್ ಕಟ್ಟಿಂಗ್) ಅದನ್ನು ಮಾರಾಟ ಮಾಡುತ್ತಾರೆ. ಹೀಗೆ ಅಡಿಕೆ ಜೊತೆಯಲ್ಲಿನ ಎರಡೂವರೆ ದಶಕಗಳ ಒಡನಾಟ ಇಂಥ ಹೊಸ ಸಂಶೋಧನೆಗೆ ನಾಂದಿ ಹಾಡಿತು.

ವೀಳ್ಯದ ಜೊತೆಯಾಗಿ ಅಥವಾ ಪ್ರತ್ಯೇಕವಾಗಿ ಅಡಿಕೆ ಸೇವಿಸಿದಾಗ ಹಲವರಿಗೆ ಇದು ಮತ್ತು ಬರಿಸಿದರೆ, ಇನ್ನು ಹಲವರಿಗೆ ಇದನ್ನು ಹೆಚ್ಚಿಗೆ ತಿಂದಾಕ್ಷಣ ತಲೆ ತಿರುಗಿದ ಅನುಭವವಾಗುತ್ತದೆ. ಇಷ್ಟೇ ಅಲ್ಲದೇ ಅಡಿಕೆಯನ್ನು ಸುಟ್ಟಾಗ ಬರುವ ಹೊಗೆಗೂ ಮತ್ತು ಬರಿಸುವ ಗುಣವಿದೆ.

ಇದನ್ನೇ ತಮ್ಮ ಪ್ರಯೋಗಕ್ಕೆ ಮೂಲವಾಗಿಸಿಕೊಂಡವರು ದಯಾನಂದ. ಅಡಿಕೆ ತಿಂದಾಗ ಜನರಿಗೇ ತಲೆ ತಿರುಗಿದರೆ, ಸೊಳ್ಳೆಗಳಿಗೂ ತಲೆತಿರುಗಬಹುದಲ್ಲವೇ ಎನ್ನುವುದು ಅವರನ್ನು ಕಾಡಿತು. ಆದದ್ದು ಆಗಲಿ ಎಂದು ಅಧ್ಯಯನಶೀಲರಾದರು. ‘ಜನರಿಗೆ ಮತ್ತು ಬಂದರೆ ಸೊಳ್ಳೆಗೆ ಬರುತ್ತದೆಯೇ ಎಂದು ಆರಂಭದಲ್ಲಿ ಗೇಲಿ ಮಾಡಿದವರೇ ಹೆಚ್ಚು. ಆದರೆ ಇಂಥದ್ದೊಂದು ಸಂಶೋಧನೆ ಸಾಧ್ಯ ಎಂದು ನನ್ನ ಮನಸ್ಸು ಹೇಳುತ್ತಿತ್ತು. ಆದ್ದರಿಂದ ಇದಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ವೆಬ್‌ಸೈಟ್ ತಡಕಾಡಿದೆ.

ಬೆಂಗಳೂರಿನ ಕಂಪೆನಿಯೊಂದರಲ್ಲಿ ಯಂತ್ರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರಿಂದ ಯಂತ್ರಗಳ ಬಗ್ಗೆ ಸಾಕಷ್ಟು ಜ್ಞಾನವೂ ಇತ್ತು. ಅದರ ಆಧಾರದ ಮೇಲೆ ಒಂದಿಷ್ಟು ಬತ್ತಿ ತಯಾರಿಸಿ ಪರಿಚಯಸ್ಥರಿಗೆ ನೀಡಿದೆ. ಸೊಳ್ಳೆಗಳ ಮೇಲೆ ಇದು ಪ್ರಭಾವ ಬೀರುತ್ತಿದೆಯೇ ಎಂಬ ಬಗ್ಗೆ ಅವರಲ್ಲಿ ಕೇಳಿ ತಿಳಿದುಕೊಂಡೆ. ಹೀಗೆ ಎಂಟು ವರ್ಷಗಳ ಸಂಶೋಧನೆಯಿಂದ ಕೊನೆಗೂ ಯಶಸ್ವಿಯಾಗಿದ್ದೇನೆ. ಇದರ ಫಲವಾಗಿ 2012ರಲ್ಲಿ ‘ಮೋಸ್ ಕ್ವಿಟ್’ ಹೆಸರಿನಲ್ಲಿ ಈ ಮುಂಡಾಜೆ ಬತ್ತಿ ಅಂತಿಮ ರೂಪು ಪಡೆದಿದೆ’ ಎನ್ನುತ್ತಾರೆ ದಯಾನಂದ.

ಹೀಗಿದೆ ಬತ್ತಿ
ಈ ಸೊಳ್ಳೆ ಬತ್ತಿ ಐದು ಇಂಚು ಉದ್ದವಿದ್ದು, ಸುಮಾರು 5 ಗ್ರಾಮಿನಷ್ಟು ತೂಕವನ್ನು ಹೊಂದಿದೆ. ಪ್ರತಿಯೊಂದು ಪ್ಯಾಕೆಟಿನಲ್ಲಿ ಕಾಯಿಲ್ ಸ್ಟ್ಯಾಂಡ್ ಕೂಡ ಇದೆ. ಒಂದು ಬತ್ತಿ ಸುಮಾರು ಎರಡು ಗಂಟೆ ಗಳಷ್ಟು ಕಾಲ ಉರಿಯುತ್ತದೆ. ಅಡಿಕೆ ಬತ್ತಿಯಲ್ಲಿ ಸಾಮಾನ್ಯ ಸೊಳ್ಳೆಗಳ ಬತ್ತಿಯಲ್ಲಿ ಇರುವ ರಾಸಾಯನಿಕ ಅಂಶ ಇಲ್ಲ. ಆದರೆ ಇದರಲ್ಲಿ ಅಮಲು ಬರಿಸುವ ಆಲ್ಕೊಲಾಯ್ಡ್ ಅಂಶವಿದೆ. ಆದ್ದರಿಂದ ಸೊಳ್ಳೆಗಳು ಸಾಯುವ ಬದಲು ಐದಾರು ಗಂಟೆ ತಲೆಸುತ್ತಿ ಬೀಳುತ್ತವೆ. ಹತ್ತು ಬತ್ತಿಗಳ ಪ್ಯಾಕೆಟಿನ ಬೆಲೆ ಮೂವತ್ತು ರೂಪಾಯಿ.
‘ಇದರ ಹೊಗೆಯಲ್ಲಿ ರಾಸಾಯನಿಕ ಅಂಶವಿಲ್ಲ. ಆದ್ದರಿಂದ ಸಾಮಾನ್ಯ ಸೊಳ್ಳೆ ಬತ್ತಿಗಳಂತೆ ಅಡ್ಡಪರಿಣಾಮ ಉಂಟು ಮಾಡುವ ಯಾವುದೇ ಅಂಶ ಇದರಲ್ಲಿ ಇಲ್ಲ. ಈ ಬಗ್ಗೆ ಸ್ವತಃ ವೈದ್ಯರೇ ಶಿಫಾರಸು ನೀಡಿದ್ದಾರೆ’ ಎನ್ನುತ್ತಾರೆ ದಯಾನಂದ.

ಮಾಡುವ ವಿಧಾನ ಹೀಗೆ
ಈ ಬತ್ತಿ ತಯಾರಿಕೆಗೆ ಅವರು ಬಳಸುವುದು ಚಾಲಿ ಅಡಿಕೆ. ಗುಣಮಟ್ಟ ಕೆಡದಂತೆ ದೀರ್ಘ ಅವಧಿಯವರೆಗೆ ಇಡಲು ಇದರ ಜೊತೆ ಪಟೋರ, ಕೋಕಾ ಮಿಶ್ರಣ ಮಾಡುತ್ತಾರೆ. ಅಷ್ಟೇ ಅಲ್ಲದೇ, ಬೆರಣಿ ಮತ್ತು ಗೋಮೂತ್ರ ಕೂಡ ಸೇರಿಸುತ್ತಾರೆ. ಇದಕ್ಕೆ ಮೆಂತ್ಯವನ್ನು ಮಿಶ್ರಣ ಮಾಡಿ ಪಾಕ ಬರಿಸುತ್ತಾರೆ. ಈ ಪಾಕವನ್ನು ಒತ್ತಲು ಹೈಡ್ರಾಲಿಕ್ ಯಂತ್ರದ ರಚನೆ ಮಾಡಿದ್ದಾರೆ. ಈ ಯಂತ್ರದಲ್ಲಿ ಹೋದ ಪಾಕ ಸೊಳ್ಳೆ ಬತ್ತಿಯ ರೂಪದಲ್ಲಿ ಹೊರಕ್ಕೆ ಬರುತ್ತದೆ. ಹೀಗೆ ಬರುವ ಬತ್ತಿ ಹಸಿಯಾಗಿರುವ ಕಾರಣ ಕೊನೆಯದಾಗಿ ಅದನ್ನು ಡ್ರೈಯರ್‌ನಲ್ಲಿ ಒಣಗಿಸುತ್ತಾರೆ.

‘ಯಂತ್ರವನ್ನು ತಯಾರಿಸುವಾಗ ಕೂಡ ಸಾಕಷ್ಟು ಕಷ್ಟಪಟ್ಟಿದ್ದೇನೆ. ಮೊದಲು ಯಂತ್ರಕ್ಕೆ ಸೆಗಣಿ ಬಳಕೆ ಮಾಡಿದೆ. ಆದರೆ ಕೊನೆಯಲ್ಲಿ ಒಣಗಿಸುವಾಗ ಕೆಟ್ಟ ವಾಸನೆ ಬಂತು. ಬತ್ತಿ ಕೂಡ ಚೆನ್ನಾಗಿರಲಿಲ್ಲ, ಅದರ ಬಣ್ಣದಲ್ಲಿಯೂ ವ್ಯತ್ಯಾಸವಾಗಿತ್ತು. ನಂತರ ಸಾಕಷ್ಟು ಅಧ್ಯಯನ ನಡೆಸಿ, ಬೆರಣಿ ಬಳಕೆ ಮಾಡಲು ಆರಂಭಿಸಿದೆ. ಇವೆಲ್ಲ ಮಾಡಲು ಸುಮಾರು 10 ವರ್ಷಗಳೇ ತಗುಲಿದೆ’ ಎನ್ನುವ ದಯಾನಂದ ಅವರು, ಸದ್ಯ ದಿನವೊಂದಕ್ಕೆ ಹತ್ತುಸಾವಿರ ಬತ್ತಿ ತಯಾರಿಸುತ್ತಿದ್ದಾರೆ.

ಸದ್ಯ ಮಧ್ಯವರ್ತಿಗಳ ಹಾವಳಿ ಇಲ್ಲದ ಕಾರಣ, ಕಡಿಮೆ ದರದಲ್ಲಿ ಬತ್ತಿ ಮಾರಾಟ ಮಾಡುತ್ತಿದ್ದೇವೆ ಎನ್ನುವ ತೃಪ್ತಿ ದಯಾನಂದ ಅವರಿಗೆ. ವಿದೇಶದಿಂದಲೂ ಹಲವು ಮಂದಿ ಈ ಬತ್ತಿಯನ್ನು ಕೊಂಡೊಯ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರವರು. ಹಾಗೆಯೇ ವಿದೇಶಕ್ಕೂ ರಫ್ತು ಮಾಡುವ ಪ್ರಯತ್ನದಲ್ಲಿ ದಯಾನಂದ್ ಇದ್ದಾರೆ. ಇಲ್ಲಿಯವರೆಗೆ ಯಂತ್ರ ತಯಾರಿ ಸೇರಿದಂತೆ ಸಂಶೋಧನೆ ಇತ್ಯಾದಿಗಳಿಗೆ ಸ್ವಂತ ಹಣವನ್ನು ಖರ್ಚು ಮಾಡಿರುವ ಅವರು, ಇಂಥದ್ದೊಂದು ರಾಸಾಯನಿಕ ರಹಿತ ಅಡಿಕೆ ಬತ್ತಿಯನ್ನು ಉತ್ತೇಜಿಸಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಅವರ ಸಂಪರ್ಕ ಸಂಖ್ಯೆ 9964352524

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT