ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗವಿಕಲರನ್ನೂ ಮುಖ್ಯವಾಹಿನಿಗೆ ಸೇರಿಸಿ’

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಸಮಾಜದ ಮುಖ್ಯವಾಹಿನಿ­ಯಲ್ಲಿ ಅಂಗವಿಕಲರನ್ನೂ ಸೇರ್ಪಡೆಗೊಳಿಸಲು ಒತ್ತಾಯಿಸುವ ಮತ್ತು  ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ  ‘ಇಂಡಿಯಾ ಇನ್‌­ಕ್ಲುಷನ್‌ ಸಮಿಟ್‌ (ಭಾರತ ಒಳಗೊಳ್ಳುವಿಕೆ ಶೃಂಗಸಭೆ)–2014’ಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ಜರ್ಮನಿ ಮೂಲದ ಸಾಫ್ಟ್‌ವೇರ್‌ ಕಂಪೆನಿ ‘ಸ್ಯಾಪ್‌’ (ಎಸ್‌ಎಪಿ) ಪ್ರಾಯೋಜಿತ ಎರಡು ದಿನಗಳ ಈ ಶೃಂಗಸಭೆಯ ಉದ್ಘಾಟನಾ ಸುದ್ದಿ­ಗೋಷ್ಠಿ­­ಯಲ್ಲಿ ಮಾತನಾಡಿದ  ಹಿರಿಯ ಪತ್ರಕರ್ತ, ಲೇಖಕ ಅರುಣ್‌ ಶೌರಿ, ‘ಎದುರಿಗಿರುವ ದೈಹಿಕ ಸವಾಲು­ಗಳನ್ನು ಧೈರ್ಯದಿಂದ ಮೆಟ್ಟಿನಿಂತು ಇತರರಿಗೆ ಸ್ಫೂರ್ತಿಯಾಗುವ ಸಾಮರ್ಥ್ಯ ಅಂಗ­ವಿಕಲರಿಗಿದೆ. ಬುದ್ಧಿ ಮತ್ತೆ, ತೀಕ್ಷ್ಣತೆಯಲ್ಲಿ ಅವರು ಸಾಮಾನ್ಯ ಜನರಿಗಿಂತಲೂ ಮುಂದೆ ಇದ್ದಾರೆ. ಅವರನ್ನು ಮುಖ್ಯ­ವಾಹಿನಿಗೆ ಸೇರಿಸಲು ಆರಂಭಿಸ­ಲಾಗಿರುವ ಈ ಪುಟ್ಟ ಯತ್ನ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ’ ಎಂದರು.

‘ಅಂಗವಿಕಲರು ಹೊಂದಿರುವ ಸಾಮರ್ಥ್ಯ ವನ್ನು ಅರಿಯುವ ಪ್ರಯತ್ನ ಆಗಬೇಕು. ಅವರ ಸಾಮರ್ಥ್ಯಕ್ಕೆ ಅನು­ಗುಣವಾಗಿ ಕಂಪೆನಿಗಳು, ಉದ್ಯಮಿ­ಗಳು  ಉದ್ಯೋಗ ನೀಡಲು ಮುಂದೆ ಬರಬೇಕು’ ಎಂದು ಅವರು ಹೇಳಿದರು. ಮಿದುಳು ಪಾರ್ಶ್ವವಾಯುಗೆ ತುತ್ತಾಗಿರುವ, ಇಂಡಸ್‌ ಇಂಡ್‌  ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಸಿದ್ಧಾರ್ಥ ಜಯ­ಕುಮಾರ್‌ ಮಾತನಾಡಿ, ‘ನಮ್ಮನ್ನು ಅಂಗವಿಕಲರು ಎಂದು ಗುರುತಿಸಬೇಡಿ. ಎಲ್ಲರಂತೆ ಗುರುತಿಸುವುದನ್ನು ನಾವು ಬಯಸುತ್ತೇವೆ’ ಎಂದರು.

‘ಕಚೇರಿಗಳಲ್ಲಿ ಅಂಗವಿಕಲರು ಕೂಡ ಕೆಲಸ ಮಾಡುವಂತಹ ಪೂರಕ ವಾತಾವರಣ ನಿರ್ಮಾಣ­­ವಾಗಬೇಕು. ನಮ್ಮಲ್ಲಿರುವ ಶಕ್ತಿ­ಯನ್ನು ಗುರುತಿಸಿ ಉತ್ತಮ ಉದ್ಯೋಗ ಕೊಡುವ ಮಾಲೀಕರು ನಮಗೆ ಬೇಕು’ ಎಂದು ಅವರು ಅಭಿಪ್ರಾಯಪಟ್ಟರು. 

ಈ ಶೃಂಗಸಭೆಯ ಸಂಸ್ಥಾಪಕ, ಸ್ಯಾಪ್‌ನ ಹಿರಿಯ ಉಪಾಧ್ಯಕ್ಷ (ಜಾಗತಿಕ ಸೇವಾ ವಿಭಾಗ) ವಿ.ಆರ್‌. ಫೈರೋಝ್‌, ಅಂಗವಿಕಲರ ಕಲ್ಯಾಣ­ಕ್ಕಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಯಾದ ಎನೇಬಲ್‌ ಇಂಡಿಯಾ ಸಂಸ್ಥಾಪಕಿ ಶಾಂತಿ ರಾಘವನ್‌,  ವಿಂಧ್ಯಾ ಇ–ಇನ್ಫೊ­ಮೀಡಿಯಾ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರ ವೈ.ಎಸ್‌. ಮಾತನಾಡಿದರು.

ಈ ಸಮ್ಮೇಳನದಲ್ಲಿ ನಟ ನಾಸಿರುದ್ದೀನ್‌ ಶಾ, ಲೇಖಕ ಡಾ. ಟೆಂಪಲ್‌ ಗ್ರ್ಯಾಂಡಿನ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿ­ದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಭಾಗಿ: ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಈ ಸಮ್ಮೇಳನದಲ್ಲಿ ಭಾಗವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT