ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ಷಯಾಂಬರ’ದ ಸೆರಗಲ್ಲಿ ಅಸ್ತಿತ್ವದ ಪ್ರಶ್ನೆಗಳು

Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಅದು ‘ದ್ರೌಪದಿ ವಸ್ತ್ರಾಪಹರಣ’ ಯಕ್ಷಗಾನ ಪ್ರಸಂಗ. ಶಿಸ್ತುಬದ್ಧವಾಗಿ ಉಟ್ಟುಕೊಂಡ ಸೀರೆ, ಎಳೆಕೂದಲೂ ಅತ್ತಿತ್ತ ಅಲ್ಲಾಡದ ಮುಡಿ, ಅದರ ಮೇಲೆ ಬಿಗಿದಪ್ಪಿ ಕೂತ ಒತ್ತೊತ್ತು ಹೆಣೆದ ಮಲ್ಲಿಗೆ ದಂಡೆ, ಕಣ್ಣಿಗೆ ಢಾಳ ಕಾಡಿಗೆ, ದಟ್ಟ ತೀಡಿದ ಹುಬ್ಬು, ಕತ್ತಿನಲ್ಲಿ ದಪ್ಪ ಹಾರ, ತೋಳಬಂದಿ, ವಡ್ಯಾಣ, ತುಟಿಬಣ್ಣ, ತುಂಬಿದ ವಕ್ಷಸ್ಥಳ, ನಡಿಗೆಯಲ್ಲಿ ವಯ್ಯಾರ, ನೋಟದಲ್ಲಿ ಹೆಣ್ಣುತನ...

‘ವ್ಹಾ... ಖರೆ ಖರೆ ಹೆಂಗಸರೂ ಇವನನ್ನು ನೋಡಿ ಕಲಿತುಕೊಳ್ಳಬೇಕು’ ಎಂದು ಉದ್ಗರಿಸುವಂತೆ ಸಿದ್ಧವಾಗಿ ನೇಪಥ್ಯದಲ್ಲಿ ನಿಂತಿದ್ದಾನೆ  ಸ್ತ್ರೀವೇಷಧಾರಿ. ಆ ದ್ರೌಪದಿಯ ವೇಷಧಾರಿ ಪುರುಷ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಪರದೆ ಸರಿಸಿ ವೇದಿಕೆಯ ಮೇಲೆ ಹೆಜ್ಜೆಯಿಡಬೇಕು... ಅಷ್ಟರಲ್ಲಿ ಅವನಿಗೆದುರಾಗುತ್ತಾಳೆ ಅವಳು.

ಹೆಣ್ಣು! ಗಂಡುಕಲೆ ಯಕ್ಷಗಾನದ ನೇಪಥ್ಯದಲ್ಲಿ ಹುಡುಗಿ..? ಅಚ್ಚರಿಯಿಂದ ವಿಚಾರಿಸಿಕೊಳ್ಳಲಾಗಿ ಅವಳು ಇದೇ ಪ್ರಸಂಗದಲ್ಲಿ ಕೌರವನ ಪಾತ್ರ ನಿರ್ವಹಿಸಲು ಬಂದ ಹೊಸ ಕಲಾವಿದೆ ಎಂಬುದು ತಿಳಿಯುತ್ತದೆ. ನಕ್ಕುಬಿಡುತ್ತಾನೆ ಅವನು. ಯಕ್ಷಗಾನದಲ್ಲಿ, ಅದೂ ಗಂಡು ಪಾತ್ರಕ್ಕೆ, ಅದೂ ಕೌರವನ ರೌರವ ಪಾತ್ರಕ್ಕೆ ಒಬ್ಬಳು ಹೆಣ್ಣು.. ನಗುವುದಲ್ಲದೇ ಇನ್ನೇನು ಮಾಡಿಯಾನು?

ಆದರೆ ಅವಳು ತಂಡದ ಮಾಲೀಕನೊಡನೆ ಒಪ್ಪಂದ ಮಾಡಿಕೊಂಡು ಬಂದುಬಿಟ್ಟಿದ್ದಾಳೆ. ಅವಳ ಕೋಮಲ ತೋಳುಗಳಿಗೆ ಬಿರುಸು ಭುಜಕೀರ್ತಿ ಸುತ್ತಿಕೊಳ್ಳುತ್ತದೆ. ಮೃದು ಎದೆಯ ಮೇಲೆ ಚಿನ್ನದ ಬಣ್ಣದ ಕವಚ, ಅಸಹಜವಾಗಿ ಬಿರುಸುಗೊಂಡ ಹುಬ್ಬುಗಳು.. ನುಣುಪು ಕೂದಲ ಮುಚ್ಚಿನಿಂತ ದೊಡ್ಡ ಕಿರೀಟ... ದ್ರೌಪದಿಯ ವೇಷದಲ್ಲಿನವನ ನಗು ಈಗ ಕೋಪವಾಗಿ ಬದಲಾಗುತ್ತದೆ... ಅವಳನ್ನು ಜರಿಯುತ್ತಾನೆ.. ಹೆಣ್ಣೊಬ್ಬಳು ಯಕ್ಷಗಾನದ ಗಂಡುಪಾತ್ರಕ್ಕೆ ಎಂದೂ ಹೊಂದಲಾರಳು ಎಂದು ವಾದಿಸುತ್ತಾನೆ. ಅವಳು ಅಷ್ಟೇ ದಿಟ್ಟತನದಿಂದ ಗಂಡೊಬ್ಬ ಯಕ್ಷರಂಗದ ಮೇಲೆ ಹೆಣ್ಣಾಗಿ ಕಾಣಿಸಿಕೊಳ್ಳಬಲ್ಲನಾದರೆ ಹೆಣ್ಣೇಕೆ ಗಂಡು ಪಾತ್ರ ನಿರ್ವಹಿಸಬಾರದು..?

ಇಂಥದ್ದೊಂದು ಮೂಲಭೂತ ಪ್ರಶ್ನೆಯ ಸುತ್ತಲೇ ‘ಅಕ್ಷಯಾಂಬರ’ ಎಂಬ ನಾಟಕ ರೂಪುಗೊಂಡಿದೆ. ವೇದಿಕೆಯ ಮೇಲೆ ಹೀಗೆ ಲಿಂಗಾಧಾರಿತ ಅಸಮಾನತೆಯನ್ನು ಪ್ರಶ್ನಿಸುವ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಶರಣ್ಯಾ ರಾಮಪ್ರಕಾಶ್‌ ಅವರೇ ‘ಅಕ್ಷಯಾಂಬರ’ ನಾಟಕವನ್ನು ಬರೆದು ನಿರ್ದೇಶಿಸಿದ್ದಾರೆ.

ಯಕ್ಷಗಾನ ಎನ್ನುವುದು ಗಂಡು ಕಲೆ ಎಂಬುದು ಜನಜನಿತ ವ್ಯಾಖ್ಯಾನ. ಆದರೆ ಈ ಸಿದ್ಧವ್ಯಾಖ್ಯಾನವನ್ನು ಪ್ರಶ್ನಿಸುವ, ಒಡೆಯುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ. ನಡೆಯುತ್ತಲೇ ಇವೆ. ಹೆಣ್ಣುಮಕ್ಕಳದೇ ಹಲವಾರು ಯಕ್ಷಗಾನ ತಂಡಗಳೂ ರೂಪುಗೊಂಡಿವೆ. ಯಕ್ಷಗಾನಕ್ಕಿರುವ ‘ಗಂಡುಕಲೆ’ ಎಂಬ ಹಣೆಪಟ್ಟಿಯನ್ನು ತೊಡೆಯುವ ಪ್ರಯತ್ನದ ನಿದರ್ಶನಗಳು ಹಲವಿವೆ. ‘ಅಕ್ಷಯಾಂಬರ’ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೀಗೆ ಹಣೆಪಟ್ಟಿ ಅಂಟಿಸಿದವರ ಹಿಂದಿನ ಮನಸ್ಥಿತಿಯನ್ನು ಪ್ರಶ್ನಿಸುತ್ತದೆ.

ಈ ನಾಟಕ ಎತ್ತುವ ಪ್ರಶ್ನೆ ಕೇವಲ ಒಂದು ಪಾತ್ರಕ್ಕಾಗಲಿ, ಒಂದು ಕಲಾಪ್ರಕಾರಕ್ಕಾಗಲಿ ಸೀಮಿತವಾಗಿರುವುದಿಲ್ಲ. ಪುರುಷ ಪ್ರಾಬಲ್ಯದ ಸಮಾಜದಲ್ಲಿ ಗಂಡುಮುಷ್ಠಿಯ ಹಿಡಿತವನ್ನು ಒಡೆಯುವ ಹೆಣ್ಣಿನ ಅಸ್ತಿತ್ವದ ಮೂಲಭೂತ ಪ್ರಶ್ನೆಯಾಗಿಯೂ ಕಾಣುತ್ತದೆ. ನಿರ್ದೇಶಕಿ ಶರಣ್ಯಾ ಅವರ ಉದ್ದೇಶವೂ ಇದೇ ಆಗಿದೆ. ‘ನಾಟಕದಾಚೆಯ ಸಾಮಾಜಿಕ ಭಿತ್ತಿಯಲ್ಲಿಯೂ ಹಲವು ಎಡೆಗಳಲ್ಲಿ ಇರುವ ನಮ್ಮ ನಿರಾಕರಣೆಯನ್ನು ಪ್ರಶ್ನಿಸುವ ಪ್ರಯತ್ನ ಇದು’ ಎನ್ನುತ್ತಾರವರು.
‘ಯಕ್ಷಗಾನಕ್ಕೆ ಹೆಣ್ಣು ಹೊಂದುವುದಿಲ್ಲ. ಅಲ್ಲಿನ ಗಂಡು ಪಾತ್ರಗಳಿಗೆ ಅವಳು ಸೂಕ್ತವಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ಹೆಣ್ಣಿಗೆ ಆ ಗಡುಸುತನ ಇಲ್ಲ, ಅವಳ ಸ್ವರ ಆ ಪಾತ್ರಕ್ಕೆ ಸರಿಯಾಗುವುದಿಲ್ಲ– ಹೀಗೆ ಏನೇನೋ ಕಾರಣಗಳನ್ನು ಹುಡುಕುತ್ತಾ ಹೋಗುತ್ತೇವೆ. ಆದರೆ ಅದೇ ಕಾರಣಗಳು ಹೆಣ್ಣು ಪಾತ್ರವನ್ನು ನಿರ್ವಹಿಸುವ ಗಂಡಿಗೆ ಎದುರಾಗುವುದೇ ಇಲ್ಲ. ಅವನ ರೋಮಭರಿತ ಹೊಟ್ಟೆ, ಗಡಸು ಸ್ವರ ಹೆಣ್ಣಿನ ಪಾತ್ರಕ್ಕೆ ಹೊಂದುವುದಲ್ಲ ಎಂದು ಯಾರೂ ಪ್ರಶ್ನಿಸುವುದೇ ಇಲ್ಲ’ ಎನ್ನುತ್ತಾರೆ ಶರಣ್ಯಾ.

‘‘ಇದು ಬರೀ ಪಾತ್ರದ ಹೊಂದಾಣಿಕೆಯ ಪ್ರಶ್ನೆ ಅಲ್ಲವೇ ಅಲ್ಲ. ಅದು ಹೆಣ್ಣು ಯಕ್ಷಗಾನವೆಂಬ ಕಲೆಗೆ ಹೊರಗಿನವಳೇ ಆಗಿ ಉಳಿಯಬೇಕಾಗಿಬಿಡುವ ಪ್ರಶ್ನೆ. ಇನ್ನೊಂದು ರೀತಿಯಲ್ಲಿ ನೋಡಿದರೆ ಅದು ದಲಿತರ ಪ್ರಶ್ನೆಯೂ ಹೌದು. ‘ನಮ್ಮನ್ನು ಯಾಕೆ ದೇವಸ್ಥಾನದೊಳಗೆ ಬಿಡುವುದಿಲ್ಲ’ ಎಂದು ಕೇಳ್ತಾರಲ್ಲಾ, ಹೆಂಗಸರನ್ನೂ ಕೆಲವು ಸಂದರ್ಭಗಳಲ್ಲಿ ದೇವಸ್ಥಾನದೊಳಗೆ ಬಿಟ್ಟುಕೊಳ್ಳುವುದಿಲ್ಲವಲ್ಲ. ಇಲ್ಲಿ ನಾಯಕಿ ಕೇಳುವ ಪ್ರಶ್ನೆಯೂ ಅಂಥದ್ದೇ. ನಮ್ಮನ್ನು ಯಾಕೆ ನೀವು ಒಳಗೆ ಬಿಟ್ಟುಕೊಳ್ಳುವುದಿಲ್ಲ? ಹೆಣ್ಣನ್ನು ಯಾಕೆ ನೀವು ಸ್ವೀಕರಿಸುವುದಿಲ್ಲ. ನಮ್ಮ ದೃಷ್ಟಿಕೋನವನ್ನು ಯಾಕೆ ನೀವು ಒಳಗೊಳ್ಳುವುದಿಲ್ಲ? ಎಂದು ಪ್ರಶ್ನಿಸುತ್ತಲೇ ನಾವೂ ಈ ಕಲಾಪರಂಪರೆಯಲ್ಲಿ ಸೇರಿಕೊಂಡು ಅದನ್ನು ಶ್ರೀಮಂತಗೊಳಿಸಬಹುದಲ್ಲಾ. ಅಲ್ಲಿ ನಮ್ಮ ಧ್ವನಿಯೂ ಸೇರಿಕೊಳ್ಳಲಿ ಎಂದು  ವಾದಿಸುತ್ತಿರುತ್ತಾಳೆ. ಇದು ಒಂದು ರೀತಿಯ ಮಹಿಳಾ ಅಸ್ತಿತ್ವದ ಪಶ್ನೆಯೂ ಹೌದು’ ಎನ್ನುವ ಶರಣ್ಯಾ ಅವರ ವಿವರಣೆಯಲ್ಲಿ ಈ ರಂಗಪ್ರಯೋಗದ ಮುಖ್ಯ ಕಾಳಜಿಗಳು ವ್ಯಕ್ತವಾಗುತ್ತವೆ.

ಈ ಲಿಂಗತಾರತಮ್ಯವನ್ನು ‘ಅಕ್ಷಯಾಂಬರ’ ತುಂಬ ಗಟ್ಟಿಯಾಗಿ ಪ್ರಶ್ನಿಸುವುದಲ್ಲದೇ ಬೇರೆ ಬೇರೆ ನೆಲೆಗಳಲ್ಲಿ ಅದನ್ನು ಒಡೆಯುತ್ತಾ ಹೋಗುತ್ತದೆ.
ವೇದಿಕೆಯ ಮೇಲೆಯೇ ಯಕ್ಷಗಾನದ ಮತ್ತೊಂದು ವೇದಿಕೆ ಮತ್ತು ಚೌಕಿಗಳು ಇರುವಂತೇ ರಂಗವನ್ನು ವಿನ್ಯಾಸಗೊಳಿಸಲಾಗಿದೆ. ನಾಟಕ ಸಾಗಿದಂತೆ ನೇಪಥ್ಯದಿಂದ ವೇದಿಕೆಗೆ ಇರುವ ಅಂತರ, ವಾಸ್ತವ ಮತ್ತು ಪಾತ್ರದ ನಡುವಿನ ಅಂತರ ಇವೆಲ್ಲವೂ ಕರಗುತ್ತಾ ಹೋಗುತ್ತದೆ. ಗಂಡು–ಹೆಣ್ಣಿನ ನಡುವಿನ ದಟ್ಟ ಗೆರೆ ತೆಳುಗೊಳ್ಳುತ್ತಾ ಹೋಗುತ್ತದೆ.

ಇಲ್ಲಿ ಯಕ್ಷಗಾನ ಮೇಳವೊಂದರಲ್ಲಿ ಪುರುಷನೊಬ್ಬ ದ್ರೌಪದಿಯ ಪಾತ್ರ ಮಾಡುತ್ತಿದ್ದಾನೆ. ಹೊಸದಾಗಿ ಮೇಳಕ್ಕೆ ಸೇರಿಕೊಂಡಿರುವ ಹೆಂಗಸೊಬ್ಬಳು ಕೌರವನ ಪಾತ್ರ ಮಾಡುತ್ತಿದ್ದಾಳೆ. ಚೌಕಿನಲ್ಲಿ ಅವನು ಅವಳನ್ನು ಹಳಿದು ಹಂಗಿಸುತ್ತಿರುತ್ತಾನೆ. ಆದರೆ ವೇದಿಕೆಗೆ ಹೋದಾಗ ಅದಕ್ಕೆ ಸಂಪೂರ್ಣ ವಿರುದ್ಧ. ಅವನು ದ್ರೌಪದಿ. ಅವಳು ಕೌರವ. ಅವರ ಶಕ್ತಿ ಕೇಂದ್ರಗಳು ಪೂರ್ತಿ ಬೇರೆ. ಹೀಗೆ ವೇದಿಕೆ–ಚೌಕಿಗಳಲ್ಲಿ ಪಾತ್ರಗಳು ಬದಲಾಗುತ್ತಾ ಆಗುತ್ತಾ ನಿಜವಾಗಿ ಶಕ್ತಿ ಕೇಂದ್ರಗಳು ಇರುವುದೆಲ್ಲಿ? ವೇಷ ಅನ್ನುವುದು ನಿಜಕ್ಕೂ ಏನು? ಹಾಕಿಕೊಳ್ಳುವ ಗಂಡು ವೇಷದ ಜತೆಗೆ ಬರುವ ಶಕ್ತಿಮೂಲದ ಹಿನ್ನೆಲೆ ಏನು? ಒಳಗಿನಿಂದ ಗಂಡಾಗಿದ್ದರೂ ವೇಷದಲ್ಲಿ ಹೆಣ್ಣಾದವನ ಪರಿಸ್ಥಿತಿ.. ಇವೆಲ್ಲವನ್ನೂ ಪ್ರಶ್ನಿಸುತ್ತ ಸಂಕೀರ್ಣವಾಗಿ ಬೆಳೆಯುತ್ತಾ ಹೋಗುತ್ತದೆ ಈ ನಾಟಕ.
ಶರಣ್ಯಾ ರಾಮಪ್ರಕಾಶ್‌ ಅವರ ಜತೆ ಪ್ರಸಾದ ಚೆರ್ಕಾಡಿ ಈ ನಾಟಕದಲ್ಲಿ ರಂಗವನ್ನು ಹಂಚಿಕೊಂಡಿದ್ದಾರೆ. ಅವರು ಯಕ್ಷಗಾನ ಕಲಾವಿದರೂ ಆಗಿರುವುದು ಈ ನಾಟಕದ ಮೌಲ್ಯವನ್ನು ವರ್ಧಿಸಿದೆ.

ಬೆಂಗಳೂರಿನವರೇ ಆದ ಶರಣ್ಯಾ ಇದುವರೆಗೆ ಸಕ್ರಿಯವಾಗಿದ್ದದ್ದು ಇಂಗ್ಲಿಷ್‌ ರಂಗಭೂಮಿಯಲ್ಲಿ. ಕಳೆದ ಎಂಟು ವರ್ಷಗಳಿಂದ ಸಂಪೂರ್ಣ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಅವರು ‘ಡ್ರಾಮಾನೊನ್‌’ ಎಂಬ ನಾಟಕತಂಡವನ್ನೂ ಕಟ್ಟಿಕೊಂಡಿದ್ದಾರೆ.

‘ಅಕ್ಷಯಾಂಬರ’ ಅವರ ನಿರ್ದೇಶನದ ಮೊದಲ ಕನ್ನಡ ನಾಟಕ. ಈ ನಾಟಕವನ್ನು ಕಟ್ಟುತ್ತಾ ಕಟ್ಟುತ್ತಾ ಕನ್ನಡ ಮತ್ತು ಇಂಗ್ಲಿಷ್‌ ರಂಗಪ್ರಪಂಚಗಳ ಮಿಶ್ರಣದ ಹೊಸ ದಾರಿಯೂ ತೆರೆದುಕೊಂಡಿದೆ ಎನ್ನುತ್ತಾರೆ ಅವರು. ಈ ನಾಟಕ ತಂಡದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ರಂಗಭೂಮಿಯ ಕಲಾವಿದರಿಬ್ಬರ ಸಹಯೋಗವೂ ಇರುವುದೇ ಅದಕ್ಕೆ ಕಾರಣ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಶರಣ್ಯಾ ಅವರ ಮನಸ್ಸು ಕರಾವಳಿ ಕಲೆ ಯಕ್ಷಗಾನದತ್ತ ವಾಲಿದ್ದು ಹೇಗೆ ಎಂದು ಕೇಳಿದರೆ ಅವರ ಮಾತುಗಳು ತಮ್ಮ ಕಾಲೇಜು ದಿನಗಳಿಗೆ ಹೊರಳುತ್ತದೆ. ಶರಣ್ಯಾ ಯಕ್ಷಪ್ರೀತಿಯ ಬೇರುಗಳಿರುವುದು ಮಣಿಪಾಲದಲ್ಲಿ.

‘ನಾನು ಕಾಲೇಜಿಗೆಂದು ಮೂರು ವರ್ಷ ಮಣಿಪಾಲದಲ್ಲಿದ್ದೆ. ಆಗ ಅಲ್ಲಿ ತುಂಬ ಯಕ್ಷಗಾನಗಳು ನಡೆಯುತ್ತಿದ್ದವು. ಆಗೀಗ ನಾನೂ ಯಕ್ಷಗಾನಗಳನ್ನು ನೋಡುತ್ತಿದ್ದೆ. ಅದು ನನಗೆ ತುಂಬ ಆಕರ್ಷಕ ಕಲೆ ಅನ್ನಿಸಿತ್ತು. ಅದರಲ್ಲಿನ ನಾಟಕೀಯ ತಂತ್ರಗಳು ಬೇರೆಯದೇ ಆದದ್ದು ಅನ್ನಿಸಿತ್ತು. ನಂತರ ಕಾಲೇಜು ಮುಗಿಸಿ ಬೆಂಗಳೂರಿಗೆ ಬಂದೆ. ಇಲ್ಲಿ ಒಂದಿಷ್ಟು ವರ್ಷ ರಂಗಭೂಮಿಯಲ್ಲಿ ಕಳೆದ ಮೇಲೆ ಮತ್ತೆ ತಿರುಗಿ ಅಲ್ಲಿಗೆ ಹೋಗಿ ಯಕ್ಷಗಾನವನ್ನು ಕಲಿತುಕೊಳ್ಳಬೇಕು ಅನಿಸಿತು. ಆ ಉದ್ದೇಶದಿಂದಲೇ ನಾನು ಮತ್ತೆ ಉಡುಪಿಗೆ ಹೋಗಿ, ಅಲ್ಲಿನ ಯಕ್ಷಗಾನ ಕೇಂದ್ರದಲ್ಲಿ ಸೇರಿಕೊಂಡು, ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಬಳಿ ಯಕ್ಷಗಾನ ಕಲೆ ಕಲಿತುಕೊಂಡೆ’ ಎಂದು ಯಕ್ಷಕಲೆಯ ಬೆನ್ನತ್ತಿ ಹೋದ ಅನುಭವವನ್ನು ಅವರು ನೆನಪಿಸಿಕೊಳ್ಳುತ್ತಾರೆ. ಯಕ್ಷಗಾನದ ಜಗತ್ತಿನಲ್ಲಿ ಶರಣ್ಯಾ ಅವರು ಕಂಡಿದ್ದು ಮತ್ತು ವೈಯಕ್ತಿಕ ಅನುಭವದ ಆಧಾರದಮೇಲೆ ರೂಪುಗೊಂಡಿದೆ ‘ಅಕ್ಷಯಾಂಬರ’.

ಈ ನಾಟಕದ ಹಿಂದೆ ಶರಣ್ಯಾ ಅವರ ಎರಡು ವರ್ಷಗಳ ಸಂಶೋಧನೆಯ ಸತ್ವವಿದೆ. ಅವರ ತಂಡದ ನಿರಂತರ ಶ್ರಮವೂ ಇದೆ. ಶರಣ್ಯಾ ಇಂಗ್ಲಿಷ್‌ನಲ್ಲಿ ಬರೆದ ಈ ನಾಟಕವನ್ನು ಹೆಗ್ಗೋಡಿನ ಕೃತಿ ಆರ್‌. ಕನ್ನಡಕ್ಕೆ ತಂದಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದ ಗುರು ಸಂಜೀವ ಸುವರ್ಣ ನೃತ್ಯಸಂಯೋಜಿಸಿದ್ದಾರೆ. ‘ಇವೆಲ್ಲದರ ಜತೆಗೆ ಇಂಡಿಯಾ ಫೌಂಡೇಷನ್‌ ಫಾರ್‌ ಆರ್ಟ್‌ನ ಅನುದಾನವಿಲ್ಲದಿದ್ದರೆ ಈ ಪ್ರಯತ್ನ ಸಾಧ್ಯವೇ ಆಗುತ್ತಿರಲಿಲ್ಲ’ ಎನ್ನುತ್ತಾರೆ ಶರಣ್ಯಾ.

‘ಅಕ್ಷಯಾಂಬರ’ವನ್ನು ಕಟ್ಟುವ ಪ್ರಕ್ರಿಯೆ ಶರಣ್ಯಾ ಅವರಲ್ಲಿ ಸಾರ್ಥಕತೆಯ ಭಾವವನ್ನು ಹುಟ್ಟಿಸಿದೆ. ಈ ಪ್ರಯೋಗಕ್ಕೆ ಜನರು ಮತ್ತು ರಂಗಭೂಮಿ ಗಣ್ಯರಿಂದ ದೊರೆತ ಸ್ಪಂದನೆ ಅವರಲ್ಲಿ ವಿನೀತಭಾವ ಮೂಡಿಸಿದೆ. ಇದರೊಟ್ಟಿಗೆ ನಾಟಕವೆಂಬುದು ಒಮ್ಮೆ ರೂಪಿಸಿ ಸ್ಥಾಪಿಸಿಬಿಡುವ ಪ್ರತಿಮೆ ಅಲ್ಲ ಎಂಬ ಎಚ್ಚರ ಅವರಿಗಿದೆ.

‘ಅಕ್ಷಯಾಂಬರ’ನಾಟಕಕ್ಕೆ ಬೇರೆ ಬೇರೆ ಕಡೆಯ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ. ಏನು ಸಲಹೆ ನೀಡುತ್ತಾರೆ ಎಂಬುದರ ಕಡೆಗೂ ಅವರಿಗೆ ಕುತೂಹಲವಿದೆ. ಜನರ ಸಲಹೆಗಳನ್ನೆಲ್ಲ ಯಥಾವತ್ ಅಳವಡಿಸಿಕೊಳ್ಳುವುದರ ಬಗೆಗೂ ಅವರಿಗ ನಂಬಿಕೆಯಿಲ್ಲ. ‘ಎಲ್ಲರ ಸಲಹೆಗಳನ್ನೂ ಕೇಳುತ್ತೇವೆ. ಅದರ ಕುರಿತು ನಾವು ಚರ್ಚಿಸಿ ಅದು ನಾಟಕಕ್ಕೆ ಹೊಸ ಗುಣಾತ್ಮಕ ಮೌಲ್ಯವನ್ನು ಸೇರಿಸುತ್ತದೆ ಎಂದು ನಮಗೆ ಅನಿಸಿದರೆ ಮಾತ್ರ ಅಳವಡಿಸಿಕೊಳ್ಳುತ್ತೇವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT