ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಜ್ಜಿಕತೆ’ ಅಕ್ಷಯಪಾತ್ರೆಯ ಹಲವು ಅಗುಳುಗಳು

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮಕ್ಕಳ ಪಾಲಿಗೆ ಅಜ್ಜಿ ಪ್ರೀತಿಯ ಅಕ್ಷಯಪಾತ್ರೆ. ಆಕೆ, ಕಥಾ ಸರಿತ್ಸಾಗರ ಕೂಡ ಹೌದು. ಆದರೆ, ಅಜ್ಜಿಕತೆಗಳ ಬಗ್ಗೆ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಅಂಥ ಆದರವೇನೂ ಇಲ್ಲ. ‘ಅಜ್ಜಿಕತೆ’ಗಳ ಹಿಂದೆ ಇರುವ ಹೆಣ್ಣಿನ ಅಪೂರ್ವ ಶಕ್ತಿಯನ್ನು ಅನಾವರಣಗೊಳಿಸುವ ಈ ಬರಹ, ಬೇಸಗೆ ರಜೆಯ ದಿನಗಳಲ್ಲಿ ಅಜ್ಜಿಯ ಎದುರು ಕೂತಿರುವ ಮಕ್ಕಳಲ್ಲಿ ತಂತಮ್ಮ ಅಜ್ಜಿಯರ ಬಗ್ಗೆ ಪ್ರೀತಿ ಹುಟ್ಟಿಸುವಂತಿದೆ; ‘ಅಜ್ಜಿಕತೆ’ಗಳನ್ನು ಇನ್ನೊಂದು ಮಗ್ಗುಲಿಂದ ನೋಡಲು ಹಿರಿಯರನ್ನು ಒತ್ತಾಯಿಸುತ್ತದೆ.

ಭಾರತಕ್ಕೆ ಬಹುದೊಡ್ಡ ಕಥನ ಪರಂಪರೆ ಇದೆ. ಮೌಖಿಕ, ಲಿಖಿತ ಧಾರೆಗಳಲ್ಲಿ ಈ ಕಥನ ಪರಂಪರೆ ಹರಿದು ಬಂದಿದೆ. ಮೌಖಿಕ ಪರಂಪರೆಯಲ್ಲಿ ಅಜ್ಜಿಕತೆ ಬಹಳ ಜನಪ್ರಿಯ ಪ್ರಕಾರ. ಪ್ರಪಂಚದಲ್ಲೆಲ್ಲ ಹಬ್ಬಿರುವ ಅಜ್ಜಿ ಕತೆ ಅಂದರೆ ಮಕ್ಕಳಿಗೆ ಅಚ್ಚುಮೆಚ್ಚು, ವಯಸ್ಕರಿಗೆ ಪ್ರಿಯ, ಮುದುಕರಿಗೂ ಅಷ್ಟೇ ಇಷ್ಟ. ಹೀಗೆ ಜಾತಿ, ಧರ್ಮ, ಲಿಂಗ, ಪ್ರದೇಶದ ಅಂತರದ ಗಡಿಯಾಚೆ ಅಜ್ಜಿಕತೆಯು ಪ್ರಸರಣಗೊಳ್ಳುತ್ತದೆ. ಅಜ್ಜಿ ಕತೆಯ ಶಕ್ತಿಯೇ ಹಾಗೆ.

ಅಜ್ಜಿಕತೆ ಕಥನ ಪರಂಪರೆಗೆ ಎರಡು ನೆಲೆಗಳಿವೆ. ಒಂದು, ಕೇಳುಗರ ನೆಲೆ. ಇನ್ನೊಂದು ಹೇಳುಗರ ನೆಲೆ. ಇದುವರೆಗೆ ನಾವು ಅಜ್ಜಿಕತೆಯನ್ನು ಕೇಳುಗರ ನೆಲೆಯಿಂದ ನೋಡಿದ್ದೇವೆ. ಆದರೆ ಹೇಳುಗರ ನೆಲೆಯಿಂದ, ಕತೆಗಾರರ ನೆಲೆಯಿಂದ ಕಂಡಿಲ್ಲ ಆಡಿಲ್ಲ. ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಮತ್ತು ಆತ ಕಟ್ಟಿದ ಅಕ್ಷರವೇ ಪ್ರಮಾಣವೆಂಬ ಗ್ರಹಿಕೆ, ಹೇಳುವ– ಕೇಳುವ– ಕಟ್ಟುವ ಮೌಖಿಕ ಪರಂಪರೆಯನ್ನು ಕಡೆಗಣಿಸಿದ್ದು ನಿಜ. ಹೀಗೆ ಪುರುಷ ಮತ್ತು ಅವನ ಅಕ್ಷರದ ಮುಂದೆ ಅಜ್ಜಿಕತೆ ‘ಹೇಳುವುದು’ ಎಂಬ ಕಾರಣಕ್ಕೆ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿರುವುದೂ ಹೌದು.

ಅಜ್ಜಿಕತೆ ಕಟ್ಟುಕತೆ, ಸುಳ್ಳಂಬಳ್ಳಿಕತೆ ಎನ್ನುವ ತಾತ್ಸಾರದ ಮಾತುಗಳು ಗಂಡಸರವು. ಅವರೆಂದೂ ಮನೆಯೊಳಗಿನ ಅಜ್ಜಿಕತೆಗೆ ಕಿವಿಕೊಟ್ಟವರಲ್ಲ. ಅದೇನಿದ್ದರೂ ಹೆಂಗಸರು, ಮಕ್ಕಳಿಗೆ (ಬುದ್ಧಿ ಇಲ್ಲದ) ಎನ್ನುವ ಪುರುಷದೃಷ್ಟಿ ಗಟ್ಟಿಯಾಗಿದೆ. ಮಕ್ಕಳಿಗೆ, ಮಹಿಳೆಯರಿಗೆ ಬೇಸರ ಕಳೆಯಲು, ಕುತೂಹಲ ಕೆರಳಲು, ಜೀವನ ಮೌಲ್ಯ ಅರಿಯಲು ಕತೆ ಹೇಳಲಾಗುತ್ತದೆ ಎಂದು ಕೇಳುಗರ ನೆಲೆಯಿಂದ ಹೇಳಿಕೊಂಡೇ ಬರಲಾಗಿದೆ. ಹಾಗಾಗಿ ಅಜ್ಜಿಕತೆ ಹೇಳುವ ಅಜ್ಜಿಯ ಕಡೆಗೆ ನಾವು ನೋಡಲಿಲ್ಲ. ನಾವೀಗ ಅಜ್ಜಿಕತೆ ಹೇಳುವ ಅಜ್ಜಿಗೆ ಕಣ್ಣು ಕಿವಿ ತೆರೆದುಕೊಂಡು ಬದಲಿ ಓದಿಗೆ ಕೂರಬೇಕು.

ನಾನು ಅಜ್ಜಿಕತೆ ಕೇಳಿದ್ದು ನನ್ನ ಬಾಲ್ಯದ ಆಪ್ತ ನೆನಪು. ನಾನು ಹುಟ್ಟಿದ್ದು ಪಂಡಿತ, ಕೃಷಿ ಕುಟುಂಬ. ಕತೆ ಕೇಳುತ್ತ ಬೆಳೆದದ್ದು ವಿಸ್ತಾರವಾದ ಅಂಗಳದ ಆವರಣದಲ್ಲಿ. ಶಾಲೆಯಿಂದ ಬಂದೊಡನೆ ಹಾಗೂ ಶಾಲಾ ರಜಾದಿನಗಳಲ್ಲಿ ನಮ್ಮ ಬೆಟ್ಟಿನ ಮಕ್ಕಳಿಗೆಲ್ಲ ನಮ್ಮ ಅಂಗಳವೇ ಆಟದ ಮೈದಾನವಾಗಿತ್ತು. ನಾವು ಮಕ್ಕಳು ಅಂಗಳದಲ್ಲಿ ಕೂಡಿದಾಗ ಜಗಲಿಯಲ್ಲಿ ಕುಳಿತು ನಮ್ಮ ಅಜ್ಜಿ (ತಂದೆಯ ತಾಯಿ, ಸುಮಾರು 70 ವರ್ಷ ವಯಸ್ಸು), ‘ಕತಿ ಹೇಳ್ತೆ, ಬನ್ನಿ ಮಕ್ಳೆ, ಇಲ್ಲ್ ಬನ್ನಿ’ ಎಂದು ಕರೆಯುವುದು. ನಾವು ಆಟದ ಹುಮ್ಮಸ್ಸಿನಲ್ಲಿ ಅಜ್ಜಿಯ ಕರೆಗೆ ಓಗೂಡದಿದ್ದರೆ ‘ಇಗಣಿ ಮಕ್ಳೆ, ಇಲ್ಕಾಣಿ, ಚಕ್ಲಿ ಕೊಡ್ತೆ ಬನ್ನಿ’ ಎಂದು ಒಂದೊಂದು ಚಕ್ಕುಲಿಯನ್ನೊ, ಹಪ್ಪಳವನ್ನೊ ಕೈಗಿಟ್ಟು– ‘ಇಲ್ಲ್ ಕೂಕಂಡ್ ತಿನ್ನಿ ಕಾಂಬೊ, ನಾ ಕತಿ ಹೇಳ್ತೆ ಕೇಣಿ’ ಎಂದು ನಮ್ಮನ್ನು ಕುಳ್ಳಿರಿಸಿ ಕತೆ ಹೇಳುವುದಕ್ಕೆ ತೊಡಗುವುದು.

ತಿಂಡಿ ಆಸೆಯಿಂದ ಅಜ್ಜಿಯ ಆದೇಶ ಪಾಲಿಸಿದರೂ ತಿಂಡಿ ಮುಕ್ಕಿ ಅಜ್ಜಿಯನ್ನೂ ಅಜ್ಜಿಕತೆಯನ್ನೂ ಅಲ್ಲೇ ಬಿಟ್ಟು ಕೇಕೆ ಹಾಕುತ್ತ ಓಡಿ ಹೋಗುತ್ತಿದ್ದೆವು. ನಮ್ಮಜ್ಜಿ ಸ್ವಲ್ಪ ಸಿಟ್ಟಿನಿಂದಲೆ ‘ತಡಿನಿ ರಾತ್ರಿಗೆ ಕತಿ ಹೇಳಿ, ಕತಿ ಹೇಳಿ ಅದ್ಕಂಡ್ ಬತ್ರ್ಯಲೆ, ಹಾಂಗ್ ಬಪ್ಪಸಮಿಗೆ ನಿಮ್ಗೆ ಯಾರ್ ಕತಿ ಹೇಳ್ತ್ರ್ ಕಾತೆ’ ಎಂದು ಗದರಿಸುವುದು. ಆದರೆ, ರಾತ್ರಿ ಆದೊಡನೆ ಅಜ್ಜಿ ನಮಗಿಂತ ಮುಂಚೆ ಚಾವಡಿಯ ಕಂಬಕ್ಕೊರಗಿ ಕತೆ ಹೇಳಲು ತಯಾರಾಗುತ್ತಿದ್ದರು! ಕತೆ ಹೇಳುವುದಕ್ಕೆ ನನ್ನಜ್ಜಿಗೆ ಯಾಕೆ ಇಷ್ಟೊಂದು ಆಸಕ್ತಿ ಎನ್ನುವುದು ನನ್ನನ್ನು ಬಹುಕಾಲ ಕಾಡುತ್ತ ಬಂದ ಪ್ರಶ್ನೆ.

ನಾನು ಅಜ್ಜಿಕತೆಯ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕತೆಗಾರ್ತಿ ಕಮಲಾ ನಾರಿ– ‘ದಿನಾಲು ಮನಿಕಂಬತ್ತಿಗೆ ಕತಿ ಹೇಳ್ದಿರೆ ನನ್ನ ಮೊಮ್ಮಕ್ಕಾಳ್ ಬಿಡುದಿಲ್ಲೆ, ಹಟ ತೊಡ್ತೊ. ನಂಗೂ ಕತಿ ಹೇಳ್ದೆ ಮನಿಕಂಡ್ರೆ ನಿದ್ದಿ ಬತ್ತಿಲ್ಲೆ’ ಎಂದದ್ದು ನನ್ನಜ್ಜಿಯ ತಡುವಿನ ಮುಂದುವರಿಕೆಯಾಗಿಯೇ ಕಾಣಿಸಿದೆ ಮತ್ತು ಒಂದು ದೊಡ್ಡ ಸತ್ಯವನ್ನು ತೆರೆದಿಟ್ಟಿದೆ. ಅದು ಕತೆಗಾರರ ಪರ್ಯಾಯ ಲೋಕದ ಅನಾವರಣ ಮಾಡಿದೆ. ಈ ಮಾತನ್ನು ಇನ್ನಷ್ಟು ವಿವರಿಸಿಕೊಳ್ಳಲು ಕತೆ ಕುರಿತ ಕತೆಗಳನ್ನು, ಗೊತ್ತಿರುವ ಕತೆಗಳನ್ನು ಹೇಳದಿದ್ದರೆ ಆ ಕತೆಗಳು ಸೇಡು ತೀರಿಸಿಕೊಳ್ಳುತ್ತವೆ ಎನ್ನುವ ನಂಬಿಕೆಗಳನ್ನು ನೋಡಬಹುದು.

ಒಂದೂರಲ್ಲಿ ಬಡ ವಿಧವೆಯೊಬ್ಬಳು ಇಬ್ಬರು ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ವಾಸವಾಗಿದ್ದಳು. ಆಕೆ ಅವರೆಲ್ಲರ ದುರ್ವರ್ತನೆಯಿಂದ ರೋಸಿ ಹೋಗಿದ್ದಳು. ತನ್ನ ನೋವನ್ನು ಯಾರಲ್ಲಾದರೂ ಹೇಳಿಕೊಂಡು ಹಗುರವಾಗಿಸಬೇಕೆಂದು ಕಾತರಳಾಗಿದ್ದಳು. ಆಕೆಗೆ ಆಪ್ತರಾರೂ ಇರಲಿಲ್ಲ. ಹೊರಹಾಕಲಾಗದ ನೋವಿನ ಫಲವಾಗಿ ಆಕೆಯ ಮೈ ದಿನದಿಂದ ದಿನಕ್ಕೆ ಊದತೊಡಗಿತು. ಇದರಿಂದಾಗಿ ಅವಳು ಇನ್ನಷ್ಟು ಅಪಹಾಸ್ಯಕ್ಕೆ ಗುರಿಯಾದಳು. ಅವಳಿಗೆ ದುಃಖ ಸಹಿಸಲಾಗದೆ ಊರಾಚೆಯ ಹಾಳುಬಿದ್ದ ಮನೆಯೊಂದರ ನಾಲ್ಕು ಗೋಡೆಗಳಿಗೆ ನೋವಿನ ಕತೆಯನ್ನು ಹೇಳಿಕೊಳ್ಳುತ್ತಾಳೆ. ಆ ಕತೆಗಳ ಭಾರಕ್ಕೆ ಗೋಡೆಗಳು ಕುಸಿದು ಬೀಳುತ್ತದೆ. ಆಕೆಯ ಮೈಯ ಊತ ಇಳಿಯುತ್ತದೆ. ನಿರಾಳವಾಗಿ ಆಕೆ ಮನೆಗೆ ಹಿಂದಿರುಗುತ್ತಾಳೆ. (ಎ.ಕೆ. ರಾಮಾನುಜನ್ 1990).

ಈ ಎಲ್ಲ ಪ್ರಕರಣಗಳು– ಕತೆ ಹೇಳುವಲ್ಲಿ ನನ್ನಜ್ಜಿಗೆ ಇರುವ ಆಸಕ್ತಿ, ಕತೆ ಹೇಳದಿದ್ದರೆ ನಿದ್ದೆ ಬಾರದ ಕತೆಗಾರ್ತಿ ಕಮಲಾ ನಾರಿ ಹಾಗೂ ಮೇಲಿನ ಕತೆಯ ಮುದುಕಿ ಎಲ್ಲವೂ ಅಜ್ಜಿಕತೆಗಿರುವ ಉದ್ದೇಶದ ಇನ್ನೊಂದು ಆಯಾಮವನ್ನು ತೆರೆಯುತ್ತದೆ. ಅದು ಕತೆಗಾರರ ನೋವು, ವಿಷಾದ, ತಲ್ಲಣ, ಸಂಭ್ರಮಗಳ ಪರ್ಯಾಯ ಲೋಕದ ಅಭಿವ್ಯಕ್ತಿ. ಕತೆಯೊಳಗಿನ ಅಜ್ಜಿ ಕತೆ ಹೇಳುವ ಅಜ್ಜಿಯೂ ಹೌದು. ವ್ಯಕ್ತಿಯ ಮಾನಸಿಕ ನೋವು, ಒತ್ತಡಗಳು ದೈಹಿಕ ಅನಾರೋಗ್ಯದ ಸ್ವರೂಪದಲ್ಲಿ ವ್ಯಕ್ತವಾಗುವುದು ವೈದ್ಯಕೀಯ ಸತ್ಯ ಕೂಡಾ. ಕತೆಗಾರ್ತಿ ತನ್ನ ಬದುಕಿನ ನೋವನ್ನು ಕತೆಯಾಗಿಸಿ ಅದನ್ನು ಹೇಳುವ ಮೂಲಕ ಒತ್ತಡದಿಂದ ಬಿಡುಗಡೆ ಪಡೆಯುತ್ತಾಳೆ ಮತ್ತು ದೈಹಿಕ ಅನಾರೋಗ್ಯದಿಂದ ಹೊರಬರುತ್ತಾಳೆ.

ಕತೆ ಕಟ್ಟುವ ಪ್ರಕ್ರಿಯೆಯಲ್ಲಿ ಕತೆಗಾರ್ತಿ ಅವಳ ಲೋಕವನ್ನು ಸೃಷ್ಟಿಸುತ್ತಾಳೆ. ಅಂದರೆ ಕತೆಯೊಂದು ಕತೆಗಾರ್ತಿ ಎಂದೋ ತಾನು ಕೇಳಿದ ಹೇಳಿದ ಕಥಾಪಠ್ಯದ ಯಥಾ ನಕಲಲ್ಲ. ಅದು ಆಕೆಯ ಅಂದಂದಿನ ಬದುಕಿನ ದಂದುಗಕ್ಕೆ ಹೊಸೆದ ಪ್ರತಿಕ್ರಿಯೆ, ಪ್ರತಿರೋಧ. ನೋವನ್ನು ದಾಟುವ ಬಗೆ. ಕತೆ ಹೇಳಿ ನಿರಾಳವಾಗುವ ಗುಪ್ತಕಿಂಡಿ. ಇದು ಅಜ್ಜಿಕತೆಯ ಬಹುಪಠ್ಯದ ಸತ್ಯವೂ ಹೌದು. ಕತೆಯ ಆಯ್ಕೆ ಹಾಗೂ ಕತೆಯ ರಚನೆ ಕತೆಗಾರರನ್ನು ಆಯಾ ಹೊತ್ತಿನಲ್ಲಿ ತೀವ್ರವಾಗಿ ಕಾಡಿದ ಬದುಕಿನ ಘಟನೆಗಳೊಂದಿಗೆ ಒಳಸಂಬಂಧ ಹೊಂದಿರುತ್ತದೆ.

ಅದು ಹೇಗೆಂದರೆ ಕತೆಗಾರ್ತಿ ಅತ್ತೆಯಾಗಿದ್ದಲ್ಲಿ ಅಂದು ಕೌಟುಂಬಿಕವಾಗಿ ನಡೆದ ಅತ್ತೆ ಸೊಸೆ ಜಗಳ, ವೈಮನಸ್ಸು ಕತೆಯ ಆಯ್ಕೆ ಹಾಗೂ ರಚನೆಯಲ್ಲಿ ಪ್ರಭಾವ ಬೀರುತ್ತವೆ. ಕತೆಯಲ್ಲಿ ಸೊಸೆ ಕೆಟ್ಟಪಾತ್ರವಾಗಿ, ಕ್ರೂರ ಪ್ರಾಣಿ ರೂಪಕವಾಗಿ ರೂಪುಗೊಳ್ಳುತ್ತಾಳೆ ಮತ್ತು ಕೆಟ್ಟ ಸೊಸೆಯ ಆಶಯಗಳು ವಿವರವಾಗಿ ದಾಖಲಾಗುತ್ತವೆ. ಸೊಸೆಗೆ ಕೆಡುಕಾಗುತ್ತದೆ. ನೋವಿಗೆ ಒಳಗಾಗುತ್ತಾಳೆ.

ಇದಕ್ಕೆ ಪ್ರತಿಯಾಗಿ ಅತ್ತೆ ಮುಗ್ಧಳಾಗಿ ಆಕಾರ ಪಡೆಯುತ್ತಾಳೆ. ಆಕೆಯ ಒಳ್ಳೆಯತನ ಸಾಕಷ್ಟು ದಾಖಲಾಗುತ್ತದೆ. ಅತ್ತೆಯ ಒಳ್ಳೆಯತನದ ಮುಂದೆ ಸೊಸೆಯ ನೀಚತನ ಸೋಲುತ್ತದೆ. ಕತೆಗಾರ್ತಿ ಸೊಸೆಯಾಗಿದ್ದಲ್ಲಿ ಇದಕ್ಕೆ ತೀರಾ ವಿರುದ್ಧವಾದ ಇನ್ನೊಂದು ದಿಕ್ಕಿನಲ್ಲಿ ಕತೆ ರೂಪುಗೊಳ್ಳುತ್ತದೆ. ಇದು ಗಂಡ, ಹೆಂಡತಿ, ಅತ್ತಿಗೆ ನಾದಿನಿ, ಮಲತಾಯಿ ಮಲಮಗಳು– ಹೀಗೆ ಯಾವುದು ಇದ್ದರೂ ಹೀಗೇ ಇರುತ್ತದೆ. ಹಾಗೆಯೇ ತಾಯಿ ಮಗಳು, ಅಣ್ಣ ತಂಗಿ, ಅಕ್ಕ ತಂಗಿ, ಗಂಡ ಹೆಂಡತಿ, ಪ್ರೇಮಿಗಳ ನಡುವಿನ ಗಾಢ ಪ್ರೀತಿ, ಬಾಂಧವ್ಯದ ಸಂಗತಿಗಳು ಕತಾಲೋಕದೊಳಗೆ ಮತ್ತೆ ಮತ್ತೆ ಇಣುಕು ಹಾಕುತ್ತವೆ.

ಅಜ್ಜಿಕತೆಗಳ ಅಧ್ಯಯನಕ್ಕೆ ತೊಡಗಿಕೊಂಡಾಗ ನನ್ನನ್ನು ಕಾಡುತ್ತ ಬಂದ ಪ್ರಶ್ನೆಗಳು ಎರಡು. ಒಂದು, ನನ್ನಜ್ಜಿಯೂ ಸೇರಿಕೊಂಡು ಅಜ್ಜಿಕತೆಯ ಕತೆಗಾರ್ತಿಯರಿಗೆ ಕತೆ ಹೇಳಲು ಇಷ್ಟೊಂದು ಉತ್ಸಾಹ; ಆಸಕ್ತಿ ಏಕೆ? ಕತೆ ಹೇಳುವುದರಿಂದ ಆಕೆ ಏನು ಪಡೆಯುತ್ತಾಳೆ? ಮತ್ತು ಹೇಗೆ ಪಡೆಯುತ್ತಾಳೆ? ಇನ್ನೊಂದು, ಅಜ್ಜಿಕತೆಯ ಕಥನಲೋಕದೊಳಗೆ ಬಲಹೀನರು (ಹಾಗೆ ಗ್ರಹಿಸಲಾದ) ಬಲಶಾಲಿಗಳನ್ನು ಮುಖಾಮುಖಿಯಾಗುವುದು ಮತ್ತು ಬಲಶಾಲಿಗಳ ಎದುರು ಬಲಹೀನರು ಗೆಲ್ಲುವುದು ಹೇಗೆ?

ಮತ್ತು ಯಾಕೆ? ವಾಸ್ತವ ಜಗತ್ತಿನಲ್ಲಿ ಕಾಣುವ ಸತ್ಯಕ್ಕಿಂತ ಬೇರೊಂದು ಸತ್ಯವನ್ನು ಕಾಣುವ ಪಲ್ಲಟದ ಹಿಂದಿನ ಅರ್ಥವೇನು? ಮೆಸೇಜ್ ಏನು? ಹುಲಿ ಎದುರು ಇಲಿ, ಆನೆ ಎದುರು ಇರುವೆ, ಜಮೀನ್ದಾರನ ಎದುರು ಗುಬ್ಬಚ್ಚಿ, ರಾಜನ ಎದುರು ಪುರ್ಲೆ ಹಕ್ಕಿಯನ್ನು ಆಕೆ ಕಟ್ಟಿಕೊಳ್ಳುವುದು ಯಾಕೆ? ಮತ್ತು ಆ ಮೂಲಕ ಆಕೆ ಏನನ್ನು ಹೇಳಬಯಸುತ್ತಾಳೆ ಎನ್ನುವುದು ಒಂದು ದೊಡ್ಡ ಅರ್ಥವನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಹೀಗೆ ಬಚ್ಚಿಟ್ಟುಕೊಂಡ ಅರ್ಥವನ್ನು ಗುಬ್ಬಚ್ಚಿ ಕತೆಯ ಮೂಲಕ ವಿವರಿಸಬಯಸುತ್ತೇನೆ.

ಒಂದೂರಲ್ಲಿ ಒಬ್ಬ ಜಮೀನ್ದಾರ ಇದ್ದ. ಆ ವರ್ಷ ಮಗಿ ಮಳೆ ಮಗ್ದು ಮಗ್ದು ಸುರಿಯಿತು. ಭತ್ತದ ಗದ್ದೆಯಲ್ಲಿ ತೆನೆ ತುಂಬಿ ತೂಗಾಡುತ್ತಿದ್ದವು. ದಿನವೂ ಗುಬ್ಬಚ್ಚಿ ಹಿಂಡು ಬಂದು ತೂಗಾಡುವ ತೆನೆ ತಿಂದು ಚಿಂವ್ ಚಿಂವ್... ಚಿಂವ್... ಚಿಂವ್... ಎಂದು ಖುಷಿಯಲ್ಲಿ ಹಾಡುವುದು. ಜಮೀನ್ದಾರ ಬಂದು ನೋಡುತ್ತಾನೆ. ಎಲ್ಲ ಪೊಟ್ಟು ತೆನೆಗಳು. ಓಡಿಸಿದರೆ ಹಾಗೆ ಹಾರಿ ಹೀಗೆ ಬಂದು ಕುಳಿತುಕೊಳ್ಳುವುದು. ಗುಬ್ಬಚ್ಚಿ ಹಿಂಡನ್ನು ಓಡಿಸಿ ಓಡಿಸಿ ಅವನ ಆಳುಗಳು ಸೋತುಹೋದರು. ಬಲೆ ಬೀಸಿದಾಗ ಹಾಗೂ ಹೀಗೂ ಒಂದು ಹೆಣ್ಣುಗುಬ್ಬಿ ಜಮೀನ್ದಾರನ ಕೈಗೆ ಸಿಕ್ಕಿತು. ‘ನಿನ್ನನ್ನು ಕೊಂದು ಹಿಚುಕಿ ಹಾಕುತ್ತೇನೆ’ ಎಂದವನು ಕೂಗಾಡಿದ.

ಗುಬ್ಬಿಯನ್ನು ಮುಷ್ಟಿಯಲ್ಲಿ ಹಿಡಿದು ಕೆರೆ ನೀರಲ್ಲಿ ಮುಳುಗಿಸಿ ಮುಳುಗಿಸಿ ಎತ್ತಿದ. ‘ಈಗ ಸತ್ತ್ಯೇನೆ ಗುಬ್ಬಿ ಸತ್ತ್ಯೇನೆ’ ಎಂದ. ‘ಇಲ್ಲ ಇಲ್ಲ, ಸತ್ತಿಲ್ಲ ಸೊರಗಿಲ್ಲ, ತೊನೆದಾಡುವ ತೆನೆ ತಿಂದು, ಗುಮ್ಮಿಕೆರೆ ನೀರು ಕುಡಿತಿದ್ದೇನೆ’ ಎಂದಿತು ಗುಬ್ಬಿ. ಜಮೀನ್ದಾರ ಗುಬ್ಬಚ್ಚಿಯನ್ನು ಕುಲಾಲ ಚಕ್ರಕ್ಕೆ ಹಾಕಿದ. ಆಗಲೂ, ‘ಸತ್ತಿಲ್ಲ ಸೊರಗಿಲ್ಲ. ತೊನೆದಾಡುವ ತೆನೆ ತಿಂದು, ಗುಮ್ಮಿಕೆರೆ ನೀರು ಕುಡುದು ಕುಂಬಾರಣ್ಣನ ಚಕ್ರದಲ್ಲಿ ಅಟ್ಟಾಟ ಮುಟ್ಟಾಟ ಆಡ್ತಾ ಇದ್ದೇನೆ’ ಎಂದಿತು ಗುಬ್ಬಿ.

ಜಮೀನ್ದಾರ ಮತ್ತಷ್ಟು ಸಿಟ್ಟಾದ. ಗುಬ್ಬಚ್ಚಿಯನ್ನು ಗಾಣಿಗರ ಗಾಣಕ್ಕೆ ಹಾಕಿದ. ‘ಈಗ ಸತ್ತ್ಯೇನೆ ಗುಬ್ಬಿ ಸತ್ತ್ಯೇನೆ’ ಎಂದ. ‘ಇಲ್ಲ ಇಲ್ಲ, ಸತ್ತಿಲ್ಲ ಸೊರಗಿಲ್ಲ ತೊನೆದಾಡುವ ತೆನೆತಿಂದು, ಗುಮ್ಮಿಕೆರೆ ನೀರು ಕುಡುದು, ಕುಲಾಲ ಚಕ್ರದಲ್ಲಿ ಅಟ್ಟಾಟ ಮುಟ್ಟಾಟ ಆಡಿ, ಗಾಣದ ಮನೆಯಲ್ಲಿ ಎಣ್ಣೆ ಹಚ್ಚಿಕೊಳ್ಳುತ್ತಿದ್ದೇನೆ’ ಎನ್ನುವ ಉತ್ತರಕ್ಕೆ ಜಮೀನ್ದಾರ ಸಿಟ್ಟಿನಿಂದ ಕುದಿದ. ತನ್ನ ಮನೆಗೆ ತಂದು ಗುಬ್ಬಚ್ಚಿಯನ್ನು ಕುದಿವ ನೀರಿಗೆ ಹಾಕಿದ. ಆಗಲೂ ಗುಬ್ಬಿ ‘ಸತ್ತಿಲ್ಲ ಸೊರಗಿಲ್ಲ, ತೊನೆದಾಡುವ ತೆನೆ ತಿಂದು, ಗುಮ್ಮಿಕೆರೆ ನೀರು ಕುಡುದು, ಕುಂಬಾರಣ್ಣನ ಚಕ್ರದಲ್ಲಿ ಅಟ್ಟಾಟ ಮುಟ್ಟಾಟ ಆಡಿ, ಗಾಣದ ಮನೆಯಲ್ಲಿ ಎಣ್ಣೆ ಹಚ್ಕಂಡು ಈಗ ಗೌಡನ ಮನೆಯಲ್ಲಿ ಬಿಸಿ ನೀರು ಮೀಯುತ್ತಿದ್ದೇನೆ’ ಎಂದಿತು.

ಜಮೀನ್ದಾರ ಕೋಪದಲ್ಲಿ ಹಲ್ಲು ಕಡಿದ. ಗುಬ್ಬಚ್ಚಿಯನ್ನು ಕಮ್ಮಾರ ಸಾಲೆಯ ನಿಗಿನಿಗಿ ಬೆಂಕಿಗೆ ಹಾಕಿದ. ‘ಈಗ ಸತ್ತ್ಯೇನೆ ಗುಬ್ಬಿ ಸತ್ತ್ಯೇನೆ’ ಎಂದ. ‘ಇಲ್ಲ ಇಲ್ಲ, ಸತ್ತಿಲ್ಲ ಸೊರಗಿಲ್ಲ, ತೊನೆದಾಡುವ ತೆನೆತಿಂದು, ಗುಮ್ಮಿಕೆರೆ ನೀರು ಕುಡುದು, ಕುಂಬಾರಣ್ಣನ ಚಕ್ರದಲ್ಲಿ ಅಟ್ಟಾಟ ಮುಟ್ಟಾಟ ಆಡಿ, ಗಾಣದ ಮನೆಯಲ್ಲಿ ಎಣ್ಣೆ ಹಚ್ಕಂಡು ಗೌಡನ ಮನೆಯಲ್ಲಿ ಬಿಸಿನೀರು ಮಿಂದು ಈಗ ಕಮ್ಮಾರಣ್ಣನ ಸಾಲೀಲಿ ನಿಗಿ ನಿಗಿ ಬೆಂಕಿಗೆ ಚಳಿ ಕಾಯಿಸುತ್ತಿದ್ದೇನೆ’ ಎಂದಿತು.

ಈ ಗುಬ್ಬಿ ಏನು ಮಾಡಿದರೂ ಸಾಯುವುದಿಲ್ಲವಲ್ಲ ಎಂದು ಜಮೀನ್ದಾರ ಕಂಗಾಲಾದ. ಸಾಯುವವರೆಗೆ ನೀನು ಇಲ್ಲಿ ಬಿದ್ದಿರು ಎಂದು ಕತ್ತಲೆಕೋಣೆಗೆ ಹಾಕಿ ‘ಈಗ ಸತ್ತ್ಯೇನೆ ಗುಬ್ಬಿ ಸತ್ತ್ಯೇನೆ’ ಎಂದ. ‘ಇಲ್ಲ ಇಲ್ಲ, ಸತ್ತಿಲ್ಲ ಸೊರಗಿಲ್ಲ. ತೊನೆದಾಡುವ ತೆನೆ ತಿಂದು, ಗುಮ್ಮಿಕೆರೆ ನೀರು ಕುಡುದು, ಕುಂಬಾರಣ್ಣನ ಚಕ್ರದಲ್ಲಿ ಅಟ್ಟಾಟ ಮುಟ್ಟಾಟ ಆಡಿ, ಗಾಣದ ಮನೆಯಲ್ಲಿ ಎಣ್ಣೆ ಹಚ್ಕಂಡು ಗೌಡನ ಮನೆಯಲ್ಲಿ ಬಿಸಿನೀರು ಮಿಂದು, ಕಮ್ಮಾರಣ್ಣನ ಸಾಲೀಲಿ ಚಳಿ ಕಾಯಿಸಿ, ಕತ್ಲೆಕೋಣೆಯಲ್ಲಿ ಸೀರಿ ಉಡುತ್ತಿದ್ದೇನೆ’ ಎಂದಿತು. ಇನ್ನೇನು ಜಮೀನ್ದಾರ ಕೋಣೆ ಬಾಗಿಲು ಹಾಕಬೇಕು ಎನ್ನುವಷ್ಟರಲ್ಲಿ ಪುರ್ ಅಂತ ಕತ್ತಲಲ್ಲಿ ಗುಬ್ಬಚ್ಚಿ ಹಾರಿಯೋಯಿತು.

ಇಲ್ಲಿ ಗುಬ್ಬಚ್ಚಿ ಹೆಣ್ಣು ಅಥವಾ ಮಹಿಳೆ ಮತ್ತು ಜಮೀನ್ದಾರ ಪುರುಷ ವ್ಯವಸ್ಥೆಯ ರೂಪಕವಾಗಿ ದುಡಿಯುತ್ತದೆ. ಪುರುಷ ಪ್ರಧಾನ ಲಿಂಗವ್ಯವಸ್ಥೆಯಲ್ಲಿ ಗಂಡು ಹೆಣ್ಣಿನ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನವನ್ನು ಮತ್ತು ಅದು ಅಸಾಧ್ಯವಾದಾಗ ಹೆಣ್ಣನ್ನು ಕೊಲ್ಲುವ ಆತ್ಯಂತಿಕ ಹಿಂಸೆಯ ಬೇರೆ ಬೇರೆ ರೂಪದ ಕ್ರೌರ್ಯವನ್ನು ಕತೆ ಬಹಳ ಚೆನ್ನಾಗಿ ಪ್ರತಿನಿಧೀಕರಿಸುತ್ತದೆ. ಆದರೆ ಹೆಣ್ಣನ್ನು ಸಾಯಿಸುವ ಗಂಡಿನ ಈ ಎಲ್ಲ ಹಿಂಸೆಗೆ ಸೋಲದೆ ಸೊರಗದೆ ಜೀವಂತಿಕೆಯನ್ನು ಅದೇ ಮಟ್ಟದಲ್ಲಿ ಉಳಿಸಿಕೊಳ್ಳುವ ಹೆಣ್ಣಿನ ಅಗಾಧ ಶಕ್ತಿಯನ್ನು ಗುಬ್ಬಚ್ಚಿ ಲಿಂಗಾಧಿಕಾರದ ದರ್ಪದ ಮುಂದಿಡುತ್ತದೆ. ಗುಬ್ಬಿ ಪುರುಷಾ­ಧಿಕಾರದ ಸಾಯಿಸುವ ಪ್ರಯತ್ನವನ್ನು ಬದು­ಕುವ ಛಲವಾಗಿ ಪಲ್ಲಟಗೊಳಿಸಿ ತನ್ನ ಲೋಕವನ್ನು ಕಟ್ಟು­ವುದು. ಡಿ.ಆರ್. ನಾಗರಾಜರ ಪರಿಭಾಷೆಯಲ್ಲಿ ಹೇಳು­ವು­ದಾದರೆ– ಅದು ವಿಷ್ಣುಶಕ್ತಿಯ ದೂರದ ಜಗತ್ತು.

ಅಜ್ಜಿಕತೆ ಕುರಿತು ಅನೇಕ ಕತೆಗಳು ಇವೆ. ಗೊತ್ತಿರುವ ಕತೆಯನ್ನು ಇನ್ನೊಬ್ಬರಿಗೆ ಹೇಳಬೇಕು, ಹೇಳದಿದ್ದರೆ ಆ ಕತೆಗಳು ಸೇಡು ತೀರಿಸಿಕೊಳ್ಳುತ್ತವೆ ಎನ್ನುವುದು ಕತೆ ಕುರಿತ ನಂಬಿಕೆ. ನಂಬಿಕೆ ನಿಷೇಧಗಳನ್ನು ಮತ್ತೆ ಕತೆಯ ಮೂಲಕವೇ ಕಟ್ಟಿ ಪ್ರಸರಣಗೊಳಿಸಲಾಗುತ್ತದೆ.

ಒಂದೂರಲ್ಲಿ ಒಬ್ಬ ಹೆಂಗಸಿದ್ದಳು. ಅವಳಿಗೆ ಒಂದು ಕತೆ ಗೊತ್ತಿತ್ತು, ಒಂದು ಹಾಡು ಗೊತ್ತಿತ್ತು. ಕತೆಯನ್ನು ಯಾರಿಗೂ ಹೇಳದೆ, ಹಾಡನ್ನು ಯಾರಿಗೂ ಕೇಳಿಸದೆ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದಳು. ಕತೆ, ಹಾಡು ಎರಡಕ್ಕೂ ಬಿಡುಗಡೆ ಬೇಕಾಗಿತ್ತು. ಒಂದು ದಿನ ಅವಳು ಬಾಯಿ ತೆಗೆದುಕೊಂಡು ನಿದ್ದೆ ಹೋಗಿದ್ದಾಗ ಕತೆ ಹೊರಕ್ಕೆ ಹಾರಿತು. ಚಪ್ಪಲಿಯ ರೂಪ ತಳೆದು ಮನೆಯ ಹೊರಗೆ ಹೋಗಿ ಕೂತಿತು. ಹಾಡೂ ಹೊರಕ್ಕೆ ಹಾರಿತು. ಗಂಡಸಿನ ಅಂಗಿಯ ರೂಪ ತಾಳಿ ಗೂಟಕ್ಕೆ ನೇತಾಡಿಕೊಂಡಿತು.

ಅವಳ ಗಂಡ ಮನೆಗೆ ಬಂದ, ಚಪ್ಪಲಿ, ಅಂಗಿ ನೋಡಿದ. ಯಾರು ಬಂದಿದ್ದಾರೆ? ಅಂತ ಕೇಳಿದ. ಹೆಂಡತಿ ಯಾರೂ ಇಲ್ಲ ಅಂದಳು. ಈ ಅಂಗಿ ಚಪ್ಪಲಿ ಯಾರದು? ನನಗೆ ಗೊತ್ತಿಲ್ಲ ಅಂದಳು. ಅವನಿಗೆ ಸಮಾಧಾನವಾಗಲಿಲ್ಲ, ಸಂಶಯ ಹುಟ್ಟಿತು. ಜಗಳವಾಯಿತು. ಗಂಡನಿಗೆ ಕೋಪ ಬಂದು ಕಂಬಳಿ ಎತ್ತಿಕೊಂಡು ಹನುಮಂತ ದೇವರಗುಡಿಗೆ ಹೋಗಿ ಮಲಗಿಕೊಂಡ. ಹೆಂಡತಿ ಮನೆಯಲ್ಲಿ ಒಬ್ಬಳೇ ಮಲಗಿದಳು. ಯಾರದು ಈ ಚಪ್ಪಲಿ, ಈ ಅಂಗಿ? ಮತ್ತೆ ಮತ್ತೆ ಕೇಳಿಕೊಂಡಳು. ಯೋಚನೆ ಮಾಡಿದಳು, ಏನೂ ಹೊಳೆಯಲಿಲ್ಲ. ತಲೆ ಕೆಟ್ಟು ಹೋಯಿತು. ದೀಪ ಆರಿಸಿ ಮಲಗಿದಳು.

ರಾತ್ರಿಯ ಹೊತ್ತು ಎಲ್ಲರ ಮನೆಯ ಆರಿಸಿದ ದೀಪಗಳೂ ಹನುಮಂತ ದೇವರಗುಡಿಗೆ ಬಂದು ಮಾತುಕತೆ ಆಡುತ್ತ ರಾತ್ರಿ ಕಳೆಯುತ್ತಿದ್ದವು. ಆವತ್ತು ರಾತ್ರಿ ಎಲ್ಲರ ಮನೆಯ ದೀಪಗಳು ಬಂದಿದ್ದವು. ಒಂದು ಮನೆಯ ದೀಪ ಮಾತ್ರ ತೀರ ತಡವಾಗಿ ಬಂದಿತು. ಮಿಕ್ಕ ದೀಪಗಳೆಲ್ಲ ‘ಯಾಕೆ ಇಷ್ಟು ತಡವಾಯಿತು’ ಎಂದು ಅದನ್ನು ಕೇಳಿದವು.

‘ನಮ್ಮ ಮನೆಯಲ್ಲಿ ಗಂಡ ಹೆಂಡತಿ ರಾತ್ರಿ ಬಹಳ ಹೊತ್ತಿನವರೆಗೂ ಜಗಳವಾಡುತ್ತಿದ್ದರು’ ಎಂದಿತು ತಡವಾಗಿ ಬಂದ ದೀಪ. ‘ಯಾಕೆ ಜಗಳವಾಡಿದರು?’.

‘ಗಂಡ ಮನೆಯಲ್ಲಿಲ್ಲದಾಗ ಒಂದು ಜೊತೆ ಚಪ್ಪಲಿ ಅಂಗಳದಲ್ಲಿ ಬಂದು ಕೂತಿತು. ಒಂದು ಅಂಗಿ ಗೂಟಕ್ಕೆ ಬಂದು ನೇತಾಡಿತು. ಯಾರವು ಇವು, ಅಂತ ಗಂಡ ಕೇಳಿದ. ಅವಳಿಗೆ ಗೊತ್ತಿರಲಿಲ್ಲ, ಜಗಳವಾಡಿದರು’.

‘ಚಪ್ಪಲಿ, ಅಂಗಿ ಎಲ್ಲಿಂದ ಬಂದವು?’
‘ಮನೆಯ ಯಜಮಾನಿಗೆ ಒಂದು ಕತೆ ಗೊತ್ತು, ಒಂದು ಹಾಡು ಗೊತ್ತು. ಅವಳು ಯಾರಿಗೂ ಆ ಕತೆ ಹೇಳಿಲ್ಲ, ಯಾರಿಗೂ ಆ ಹಾಡು ಕೇಳಿಸಿಲ್ಲ. ಕತೆಗೂ ಹಾಡಿಗೂ ಅವಳ ಒಳಗೇ ಇದ್ದು ಉಸಿರು ಕಟ್ಟಿತ್ತು. ಅದು ಇವತ್ತು ಹೊರಕ್ಕೆ ಬಂದು ಚಪ್ಪಲಿ, ಅಂಗಿಯಾಗಿ ಕೂತುಕೊಂಡವು. ಅವಳ ಮೇಲೆ ಸೇಡು ತೀರಿಸಿಕೊಂಡವು. ಪಾಪ ಅವಳಿಗೆ ಗೊತ್ತೇ ಇಲ್ಲ’.

ಗುಡಿಯಲ್ಲಿ ಕಂಬಳಿ ಹೊದ್ದು ಮಲಗಿದ ಗಂಡ ಈ ಮಾತೆಲ್ಲ ಕೇಳಿಸಿಕೊಂಡ. ಅವನ ಅನುಮಾನ ಬಗೆಹರಿಯಿತು. ಮನೆಗೆ ವಾಪಸ್ಸು ಹೋದ. ಹೆಂಡತಿಯನ್ನು ಕತೆ ಮತ್ತು ಹಾಡಿನ ಬಗ್ಗೆ ಕೇಳಿದ. ಅವಳಿಗೆ ಎರಡೂ ಮರೆತು ಹೋಗಿತ್ತು. ‘ಯಾವ ಕತೆ? ಯಾವ ಹಾಡು?’ ಅಂತ ಕೇಳಿದಳು (ಎ.ಕೆ. ರಾಮಾನುಜನ್).

ಬದಲಾದ ಸಾಮಾಜಿಕ ಸಂದರ್ಭದಲಿ, ಗ್ಯಾಜೆಟ್ ಲೋಕದಲ್ಲಿ ನಮ್ಮ ಅಜ್ಜಿ ಕಳೆದುಹೋಗಿದ್ದಾಳೆ. ಒಡೆದ ಲೋಕದಲ್ಲಿ ಅಜ್ಜಿ–ಮೊಮ್ಮಕ್ಕಳು ಬದುಕುತ್ತಿದ್ದಾರೆ. ಅವಳ ಒಡಲ ತುಂಬ ತುಂಬಿದ ಕತೆ ಹೊರಬರಲಾಗದೆ ಅದರ ಉಸಿರು ಕಟ್ಟುತ್ತಿದೆ. ಕತೆ ಹೇಳದ ಒತ್ತಡದಲ್ಲಿ ಅಜ್ಜಿಗೆ ಊತ ಬಂದಿದೆ. ಅಜ್ಜಿಕತೆಗಳು ನಮ್ಮ ಅಜ್ಜಿಯ ಮೇಲೆ ಸೇಡು ತೀರಿಸಿಕೊಳ್ಳುವ ಮುನ್ನ– ಕತೆ ಕೇಳಿ... ಅಜ್ಜಿಕತೆ ಕೇಳಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT