ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಿಕ್ರಮಣಗೊಂಡ ಉದ್ಯಾನಗಳ ತೆರವು ಶೀಘ್ರ’

Last Updated 6 ಮಾರ್ಚ್ 2015, 7:18 IST
ಅಕ್ಷರ ಗಾತ್ರ

ಹೊಸಪೇಟೆ: ‘ಅತಿಕ್ರಮಣ­ಕ್ಕೊಳಗಾಗಿ­ರುವ ನಗರದ ಉದ್ಯಾನಗಳನ್ನು ತೆರವುಗೊಳಿಸಿ ಅವುಗಳ ರಕ್ಷಣೆಗೆ ತಂತಿಬೇಲಿ ಅಳವಡಿಸಲಾಗುವುದು’ ಎಂದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಎಲ್‌.ಸಿದ್ದನಗೌಡ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ­ಯಲ್ಲಿ ಈ ವಿಷಯ ತಿಳಿಸಿದ ಅವರು, ‘ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಗೆ ಸೇರಿದ ಹಲವು ಉದ್ಯಾನಗಳು ನಿರ್ವಹಣೆ ಇಲ್ಲದೆ ಅತಿಕ್ರಮಣವಾಗಿವೆ. ಉದ್ಯಾನಗಳನ್ನು ಅನ್ಯ ಕಾರಣಕ್ಕೆ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಕಾರಣದಿಂದ ಶೀಘ್ರದಲ್ಲಿಯೇ ಇವುಗಳ ರಕ್ಷಣೆಗೆ ಮುಂದಾಗಲಾಗುವುದು’ ಎಂದರು.

‘ಪ್ರಾಧಿಕಾರಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ. ಈ ಕಾರಣದಿಂದ ಖಾಸ­ಗಿಯ­ವ­ರ ಜತೆಗೆ 40:60ರ ಅನುಪಾತದಲ್ಲಿ ಬಡಾವಣೆ ಅಭಿ­ವೃದ್ಧಿಗೆ ಮುಂದಾ­ಗುವ ಪ್ರಸ್ತಾವ ಇದೆ. ಆದರೆ, ನಷ್ಟವಾಗಲಿದೆ ಎಂಬ ಕಾರಣಕ್ಕೆ ಖಾಸಗಿ ಉದ್ಯಮಿಗಳು ಬಡಾವಣೆ ನಿರ್ಮಾಣಕ್ಕೆ ಮುಂದಾಗು­ತ್ತಿಲ್ಲ. ಆದ್ದರಿಂದ ಖಾಸಗಿ ಉದ್ಯಮಿ­ಗಳೊಂದಿಗೆ ಮಾತುಕತೆ ನಡೆಸಿ ಪ್ರಮಾಣವನ್ನು 50:50ಕ್ಕೆ ಇಳಿಕೆ ಮಾಡಲಾಗುವುದು’ ಎಂದು ಹೇಳಿದರು.

‘ನಗರದ ಬಸವೇಶ್ವರ ಬಡಾವಣೆ­ಯಲ್ಲಿ 66 ವಾಣಿಜ್ಯ ಮಳಿಗೆಗಳ ನಿರ್ಮಾಣ, ನಗರದ ನಾಲ್ಕು ಕಡೆಗಳಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣ, ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿ ವಿಸ್ತರಣೆ, ಹೈ ಮಾಸ್ಕ್‌ ದೀಪ ಅಳವಡಿಕೆ ಹಾಗೂ ಸರ್ಕಾರದ ನಿಯಮಾವಳಿಯಂತೆ ಅಕ್ರಮ–ಸಕ್ರಮ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಈ ಎಲ್ಲ ಯೋಜನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವಂತೆ ಕ್ರಮ ವಹಿಸಲಾಗುವುದು. ನಗರದ ಸೌಂದರ್‍ಯೀಕರಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಪ್ರಾಧಿಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆೆ’ ಎಂದು ಸಿದ್ದನಗೌಡ ಮಾಹಿತಿ ನೀಡಿದರು.
ಕಾಂಗ್ರೆಸ್‌ ಮುಖಂಡರಾದ ಜಿ.ಕೆ. ಹನುಮಂತಪ್ಪ, ಬಿ.ಕಾಂ.ಮಾಬುಸಾಬ್‌, ಅಯ್ಯಾಳಿ ತಿಮ್ಮಪ್ಪ, ಸಾಲಿ ಸಿದ್ದಯ್ಯ ಸ್ವಾಮಿ, ಕೆ.ಎಂ.ಹಾಲಪ್ಪ, ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಸುಲೋಚನಮ್ಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಡಿ.ವೆಂಕಟರಮಣ, ತಾರಿಹಳ್ಳಿ ಶಿವಮೂರ್ತಿ ಮತ್ತಿತರರು ಹಾಜರಿದ್ದರು.

‘ಅಭಿನಂದನೆ ಹೇಳಲು ಆನಂದಸಿಂಗ್‌ ಯಾರು’

‘ನಾನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ನೇಮಕಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಲು ಶಾಸಕ ಆನಂದಸಿಂಗ್‌ ಯಾರು’ ಎಂದು ಹುಡಾ ಅಧ್ಯಕ್ಷ ಎಲ್.ಸಿದ್ದನಗೌಡ ಪ್ರಶ್ನಿಸಿದರು.

‘ಬಿಜೆಪಿಯವರಾಗಿರುವ ಆನಂದ ಸಿಂಗ್ ಹಾಗೂ ಅವರ ಬೆಂಬಲಿಗರು ಸೇರಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೊಂದಲದಲ್ಲಿ ಸಿಲುಕಿಸಲು ನನಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಪತ್ರಿಕೆಗಳಲ್ಲಿ ಜಾಹೀರಾತು ಹಾಗೂ ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ. ಇದಕ್ಕೆ ನಾನು ಜವಾಬ್ದಾರನಲ್ಲ. ನಾನು ಆನಂದಸಿಂಗ್ ಅವರ ಬೆಂಬಲಿಗ ಎನ್ನುವುದು ನಿರಾಧಾರವಾಗಿದ್ದು, ಈ ಬಗ್ಗೆ ಪಕ್ಷದ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು’ ಎಂದು ಮನವಿ ಮಾಡಿದರು.

‘ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಪಕ್ಷದ ಮುಖಂಡರ ಸಲಹೆ, ಸಹಕಾರದ ಮೂಲಕ ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT