ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನನ್ಯ ಕನಸು’ಗಳ ಕಲಾ ರೂಪ

ಕಲಾಪ
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಇಂದಿನ ಯುವಕರು ವೃತ್ತಿಪರ ಕೋರ್ಸಗಳನ್ನು ಓದಿಕೊಂಡು, ಸಂಬಳದ ನೌಕರಿ ಹಿಡಿದು ಹಣ ಗಳಿಸುವತ್ತಲೇ ಹೆಚ್ಚು ಗಮನಹರಿಸುತ್ತಾರೆ. ಅವರಿಗೆ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಸಂಸ್ಕೃತಿಯ  ಬಗ್ಗೆ ಆಸಕ್ತಿ ಇಲ್ಲವಾಗುತ್ತಿದೆ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಈ ಮಾತಿಗೆ ಅಪವಾದ ಎಂಬಂತೆ ‘ಯೂನಿಕ್ ಡ್ರೀಮ್’ (ಅನನ್ಯ ಕನಸು) ಗುಂಪು ಇದೆ.

ಇದೇ ವರ್ಷವೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ವಿ.ಎ. (ಮಾಸ್ಟರ್ ಆಫ್ ವಿಷುವಲ್ ಆಟ್ಸ್) ಪದವಿ ಮುಗಿಸಿರುವ ಈ ಗುಂಪಿನ ಸದಸ್ಯರಾದ ನಗರದ ಮಂಜುನಾಥ್ ಎನ್., ತುಮಕೂರಿನ ರಾಜೇಂದ್ರ ಆರ್., ಮಂಗಳೂರಿನ ರೋಹಿತ್ ಕುಮಾರ್, ಸಲೀಂ ಮಲಿಕ್ ಕೆ., ವಿಜಯಪುರದ ಶ್ರೀಕಾಂತ್ ರಜಪೂತ್‌ ಹಾಗೂ  ಧಾರವಾಡದ ಮಂಜುನಾಥ್ ಬಿ. ಬಡಿಗೇರ್‌ ಅವರಿಗೆ ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿ ಎಲ್ಲಿಲ್ಲದ ಆಸಕ್ತಿ.

ಇವರು ರಚಿಸಿರುವ ಕಲಾಕೃತಿಗಳ ಪ್ರದರ್ಶನವು ನಗರದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ. ‘ಆ್ಯನ್ ಗ್ರೂಪ್ ಆಫ್ ಆರ್ಟ್ ಎಕ್ಸಿಬಿಷನ್’ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಗುಂಪಿನ ಪ್ರಥಮ ಕಲಾ ಪ್ರದರ್ಶನಕ್ಕೆ ಭೇಟಿ ಇತ್ತಾಗಿನ ವಿವರಗಳಿವು.

ಸುತ್ತಲು ಹರಡಿರುವ ಪುಸ್ತಕದ ಹಾಳೆಗಳನ್ನು ನಿರ್ಲಕ್ಷಿಸಿ ಕೈಯಲ್ಲಿ ತಂತ್ರಜ್ಞಾನ ಬಿಂಬಿತ ವೈರ್‌ಗಳನ್ನೆ ಬಿಗಿಹಿಡಿದಿರುವ ಹುಡುಗ, ಕಾಗೆಗೆ ಗೂಡು ಕಟ್ಟಲು ಇಲ್ಲಿ ಹುಲ್ಲು ಕಡ್ಡಿಯ ಕೊರತೆ, ಅಲ್ಲದೇ ಇಂದಿನ ಡಿಜಿಟಲೈಜೇಷನ್‌ ಯುಗದಲ್ಲಿ  ಕಾಗೆಯ ಬಣ್ಣವು ಇಲ್ಲಿ ಬದಲಾಗಿದೆ. ಈ ಚಿತ್ರಗಳನ್ನು ರಚಿಸಿರುವ ಸಲೀಂ ಅವರಿಗೆ ಇಂದಿನ ಮನುಕುಲ ತಾಂತ್ರಿಕತೆಯ ಮೇಲಿನ ಅತಿಯಾದ ಅವಲಂಬನೆಯು ತೀವ್ರವಾಗಿ ಕಾಡಿದಂತಿದೆ.

ಇನ್ನೊಂದರಲ್ಲಿ ಗ್ರಾಮಾಫೋನ್‌ನಿಂದ ಹೊರಬರುತ್ತಿರುವ ಬಿಳಿಪಾರಿವಾಳಗಳು, ಒಕ್ಕಣ್ಣಿನ ಮನುಷ್ಯನ ಆಕೃತಿಗೆ ನಿಮ್ಮದೇ ಪರಿಕಲ್ಪನೆಯನ್ನು ಕಟ್ಟಿಕೊಳ್ಳಬಹುದು. ‘ಸೆಲ್ಸ್‌’ ಎಂಬ ಚಿತ್ರ ನೋಡುವಾಗ ನಿಮಗೆ ಸಾಲು ಮರದ ತಿಮ್ಮಕ್ಕ ನೆನಪಾಗಬಹುದು.

ಇನ್ನು ಇಂದಿನ ಶೋಷಿತರ ಅಳಲು, ಸ್ಥಿತಿ–ಗತಿ, ಅದಕ್ಕೆ ಮಾಧ್ಯಮ ಲೋಕದ ಪ್ರತಿಕ್ರಿಯೆಯನ್ನು ‘ಸ್ಟ್ರಗಲ್’ ಎಂಬ ಕಲಾಕೃತಿ ರೂಪಕವಾಗಿ ತಿಳಿಸುತ್ತದೆ. ಇದಲ್ಲದೆ ಹಣ್ಣಾದ ವೃದ್ಧರ   ಪಕ್ಕದಲ್ಲಿರುವ ಹಣ್ಣೆಲೆಯ ಚಿತ್ರಕ್ಕೆ ನೀಡಿರುವ ‘ಡಿಸಾಲ್ವ್‌’ ಎಂಬ ಅಡಿಬರಹ ಇವತ್ತಿನ ಹಿರಿಯ ನಾಗರಿಕರ ಅವಸ್ಥೆಯನ್ನು ವಿವರಿಸುವಂತಿದೆ.

ಶ್ರೀಕಾಂತ್ ರಜಪೂತ್‌ರ ‘ಪೊಲಿಟಿಕ್‌’ ಎಂಬ ಜಲವರ್ಣ ಚಿತ್ರದಲ್ಲಿನ ಎತ್ತರದ ಕಟ್ಟೆಯ ಮೇಲಿರುವ ಕುರ್ಚಿ ಹಾಗೂ ಅದರ ಸುತ್ತಲು ಮೂಸುತ್ತಿರುವ ಹಂದಿಗಳ ರಚನೆಯಂತೂ ಇಂದಿನ ಸಮಕಾಲೀನ ರಾಜಕೀಯ ಸನ್ನಿವೇಶವನ್ನು ಬಿಂಬಿಸುವಂತಿದೆ. ಇದರೊಂದಿಗೆ ಇರುವ ಶಿಲ್ಪಕಲೆಯ ರಚನೆಗಳು ಸಹ ವೀಕ್ಷಕರ ಗಮನ ಸೆಳೆಯಬಲ್ಲವು.

‘ಕೌಟುಂಬಿಕ ಹಿನ್ನಲೆಯಲ್ಲಿ ಕಲಾ ಕೃಷಿಕರು ಇರುವ ಕಾರಣ ಈ ರಂಗಕ್ಕೆ ಬರಲು ಆಸಕ್ತಿ ಬೆಳೆಯಿತು. ಮುಂದೆ ಇದನ್ನೆ ವೃತ್ತಿಯಾಗಿಸಿಕೊಳ್ಳುವ ಇರಾದೆ ಇದೆ’ ಎನ್ನುತ್ತಾರೆ ಯುವ ಕಲಾವಿದ ಮಂಜುನಾಥ್ ಬಿ. ಬಡಿಗೇರ್.

ಮತ್ತೊಬ್ಬ ಕಲಾವಿದರಾದ ಮಂಜುನಾಥ್ ಎನ್. ಅವರಿಗೆ ಸಂಗೀತದಲ್ಲೂ ಆಸಕ್ತಿಯಿದ್ದರೂ ಅಂತಿಮವಾಗಿ ಆರಿಸಿಕೊಂಡಿದ್ದು ದೃಶ್ಯಕಲೆಯಾದ ಚಿತ್ರರಚನೆಯನ್ನು. ಈ ಎಲ್ಲ ಕಲಾಕೃತಿಗಳು ಜುಲೈ 1ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ಗಂಟೆಯವರೆಗೆ ಸಾರ್ವಜನಿಕ ಪ್ರದರ್ಶನಕ್ಕೆ ತೆರೆದಿರುತ್ತದೆ.  

*
ಯುವ ಕಲಾವಿದರ ಶ್ರೀಕಾಂತರ ಮುಂಬೈ ನಗರದ ಪ್ರಮುಖ ಕಟ್ಟಡಗಳನ್ನು ಕುರಿತಾದ ಜಲವರ್ಣದ ಚಿತ್ರಕಲಾಕೃತಿಗಳು ನೋಡಲು ತುಂಬಾ ಚೆನ್ನಾಗಿವೆ. ಬಡಿಗೇರ್‌ ಶಿಲ್ಪಕಲಾಕೃತಿಗಳ ಗಾತ್ರ ದೊಡ್ಡದಾಗಿ ಇರಬೇಕಾಗಿತ್ತು.
–ಪ್ರವೀಣ್ ಕುಮಾರ್, ವೀಕ್ಷಕ

ವಿಳಾಸ: ವೆಂಕಟಪ್ಪ ಆರ್ಟ್‌ ಗ್ಯಾಲರಿ, ಕಸ್ತೂರ ಬಾ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT