ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ನಭಾಗ್ಯ’ ಅಕ್ಕಿಗೆ ಹುಳು!

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹಾತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಗಾಗಿ ರಾಜ್ಯ ಸರ್ಕಾರ ಖರೀದಿಸಿರುವ ಅಕ್ಕಿಯಲ್ಲಿ 169 ಕೋಟಿ ಮೌಲ್ಯದ 68 ಸಾವಿರ ಟನ್‌ ಅಕ್ಕಿ ಹುಳು ಹಿಡಿದು ಹಾಳಾಗುತ್ತಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು 2013–14ರ ಹಂಗಾಮಿನಲ್ಲಿ (ನವೆಂಬರ್‌ನಿಂದ ಫೆಬ್ರುವರಿ­ವರೆಗೆ) ಲೆವಿ ಮೂಲಕ 1.61 ಲಕ್ಷ ಟನ್‌ ಅಕ್ಕಿ ಖರೀದಿಸಿತ್ತು.  ಈ ಪೈಕಿ 68 ಸಾವಿರ ಟನ್‌ ಅಕ್ಕಿ ಕಳಪೆ ಗುಣಮಟ್ಟದ್ದು ಎಂದು ತಿಳಿದು ಬಂದಿದ್ದು, 93 ಸಾವಿರ ಟನ್‌ ಅಕ್ಕಿಯನ್ನು ಮಾತ್ರ ಅನ್ನಭಾಗ್ಯ ಯೋಜನೆಗೆ ಬಳಸಲಾಗಿದೆ.

ಹಾಳಾಗುತ್ತಿರುವ  ಅಕ್ಕಿಯನ್ನು ವಿಲೇ­ವಾರಿ ಮಾಡುವ ಬಗ್ಗೆ ಇಲಾಖೆ ಇದುವರೆಗೆ ಯಾವ ನಿರ್ಧಾರ­ವನ್ನೂ ಕೈಗೊಂಡಿಲ್ಲ.
ಹುಳು, ಮುಗ್ಗಲು ಹಿಡಿದು ಕೊಳೆಯುತ್ತಿರುವ ಅಕ್ಕಿ­ಯನ್ನು ದಾವಣಗೆರೆ, ಕೊಪ್ಪಳ, ರಾಯ­ಚೂರು, ತುಮಕೂರು, ಶಿವಮೊಗ್ಗ, ಕೋಲಾರ, ಬಳ್ಳಾರಿ, ಮೈಸೂರು, ಮಂಡ್ಯ ಮತ್ತು  ಕೊಡಗು ಜಿಲ್ಲೆ­ಗಳಲ್ಲಿರುವ ರಾಜ್ಯ ಹಾಗೂ ಕೇಂದ್ರ   ಉಗ್ರಾಣ ನಿಗಮಗಳ ಗೋದಾಮುಗಳಲ್ಲಿ  ಇರಿಸಲಾಗಿದೆ.

ಈ ಜಿಲ್ಲೆಗಳ ಸ್ಥಳೀಯ ಗಿರಣಿ ಮಾಲೀಕ­­ರಿಂದ ಇಲಾಖೆಯು ಅಕ್ಕಿ­ ಖರೀದಿಸಿತ್ತು. ಸೂಕ್ತ ಸಂರಕ್ಷಣಾ ಕ್ರಮ­ಗಳನ್ನು ಅನುಸರಿಸದೇ ಇರುವು­ದರಿಂದ  ಗೋದಾಮುಗಳಲ್ಲಿರುವ ಅಕ್ಕಿಗೆ ಹುಳ ಹಿಡಿದಿದೆ. ತಡವಾಗಿ ಎಚ್ಚೆತ್ತು­­ಕೊಂಡಿ­ರುವ ಅಧಿಕಾರಿಗಳು, ಹುಳುಗಳ ಬಾಧೆ ಇನ್ನಷ್ಟು ಹರಡುವು­ದನ್ನು ತಡೆಯುವುದ­ಕ್ಕಾಗಿ ಈಗ ರಾಸಾಯನಿಕ ಧೂಮ ಹೊಡೆಯುವ  ಕಾರ್ಯ ಕೈಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಿಂಗಳ ಹಿಂದೆ ಪರೀಕ್ಷೆ: ಇಲಾಖೆಯು ಒಂದು ತಿಂಗಳ ಹಿಂದೆ ಹೈದರಾಬಾದ್‌ ಮೂಲದ ‘ನ್ಯಾಷ­ನಲ್‌ ಕೊಲ್ಯಾಟಿರಲ್‌ ಮ್ಯಾನೇಜ್‌ಮೆಂಟ್‌ ಸರ್ವೀ­ಸಸ್‌ ಲಿಮಿಟೆಡ್‌’ ಎಂಬ ಸಂಸ್ಥೆಯ ಮೂಲಕ ಗೋದಾ­ಮು­ಗಳಲ್ಲಿರುವ ಅಕ್ಕಿಯ ಗುಣಮಟ್ಟದ ಪರೀಕ್ಷೆ ನಡೆಸಿತ್ತು.

ದಾಸ್ತಾನಿನಲ್ಲಿರುವ ಅಕ್ಕಿಯು ಕಳಪೆ ಗುಣಮಟ್ಟದ್ದು ಎಂದು ವರದಿ ನೀಡಿದ್ದ ಸಂಸ್ಥೆ, 16 ಸಾವಿರ ಟನ್‌ ಅಕ್ಕಿ ಹಾಳಾಗಿದೆ ಎಂದು ಹೇಳಿತ್ತು. ಜತೆಗೆ, ದಾಸ್ತಾನಿನಲ್ಲಿರುವ ಅಕ್ಕಿಯಲ್ಲಿ ಶೇ 33 ರಿಂದ 40 ರಷ್ಟು ನುಚ್ಚು ಇದೆ ಎಂದು ಹೇಳಿತ್ತು (ನುಚ್ಚು ಮಿತಿಯನ್ನು ಶೇ 25­ಕ್ಕೆ ನಿಗದಿಪಡಿಸ­ಲಾಗಿದೆ).

ಹಠಾತ್‌ ಸ್ಥಗಿತ: ಅಗ್ಗದ ಹಾಗೂ ಬೇರೆ ರಾಜ್ಯಗಳಿಂದ ತಂದ ಕಳಪೆ ಗುಣ­ಮಟ್ಟದ ಅಕ್ಕಿಯನ್ನು ಗಿರಣಿ ಮಾಲೀಕರು ಲೆವಿ ರೂಪದಲ್ಲಿ ಪೂರೈಸು­ತ್ತಿದ್ದಾರೆ ಎಂಬ ದೂರುಗಳು ಬಂದ ಕಾರಣ­ದಿಂದಾಗಿ ಇಲಾಖೆಯು ಫೆಬ್ರುವರಿ ತಿಂಗಳಲ್ಲಿ ಏಕಾಏಕಿ ಅಕ್ಕಿ ಖರೀದಿ ಸ್ಥಗಿತ­-ಗೊಳಿಸಿತ್ತು. ಆದರೆ, ಬಹುಪಾಲು ಗಿರಣಿ ಮಾಲೀಕರಿಗೆ ಅದು ಹಣ ಪಾವತಿ ಮಾಡಿದೆ.

2013–14ನೇ ಸಾಲಿನಲ್ಲಿ ಪ್ರತಿ ಕೆ.ಜಿಗೆ ₨24 ರಂತೆ ₨388 ಕೋಟಿ ಮೌಲ್ಯದ ಅಕ್ಕಿಯನ್ನು ಖರೀದಿಸ­ಲಾಗಿದ್ದು, ₨343 ಕೋಟಿ ಮೊತ್ತವನ್ನು ಇಲಾಖೆ ಈಗಾಗಲೇ ಪಾವತಿಸಿದೆ. ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿದ ತಕ್ಷಣ ಇಲಾಖೆಯು ಕಳಪೆ ಅಕ್ಕಿಯ 700 ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆ­ಗಾಗಿ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋ­ಧನಾ ಸಂಸ್ಥೆಗೆ (ಸಿಎಫ್‌ಟಿ­ಆರ್‌ಐ) ಕಳು­ಹಿಸಿತ್ತು. ಹಾಳಾಗುತ್ತಿರುವ ಅಕ್ಕಿಯನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಕರ್ನಾಟಕ  ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ಪದೇ ಪದೇ ಮನವಿ ಮಾಡುತ್ತಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ನಿಗಮದ ಸಲಹೆ: ಕಳಪೆ ಅಕ್ಕಿಯನ್ನು ಮತ್ತೆ ಗಿರಣಿ ಮಾಲೀಕರಿಗೆ ಹಿಂದಿರುಗಿಸಿ, ಒಳ್ಳೆಯ ಅಕ್ಕಿಯನ್ನು ಪೂರೈಸುವಂತೆ ನಿರ್ದೇಶಿಸಬೇಕು  ಅಥವಾ ಈ ಅಕ್ಕಿಯನ್ನು ಹರಾಜು ಹಾಕಬೇಕು ಎಂದು  ನಿಗಮವು ಮೊದಲೇ ಸಲಹೆ ಮಾಡಿತ್ತು ಎಂದು ತಿಳಿದು ಬಂದಿದೆ. ಖರೀದಿಸಿದ ಸಂದರ್ಭದಲ್ಲೇ  ಶೀಘ್ರ ನಿರ್ಧಾರ ಕೈಗೊಂಡಿದ್ದರೆ ಅನ್ನ ಭಾಗ್ಯ ಯೋಜನೆಗೆ ಈ ಅಕ್ಕಿಯನ್ನು ಪೂರೈಸ­ಬಹುದಿತ್ತು ಎಂಬ ಅಭಿ­ಪ್ರಾಯವನ್ನೂ ಅದು ವ್ಯಕ್ತ­ಪಡಿಸಿತ್ತು ಎನ್ನಲಾಗಿದೆ.

ಅಕ್ಕಿ ಕಳಪೆ ಗುಣ­ಮಟ್ಟದ್ದು ಎಂದು ತಿಳಿದು ಬಂದ ಸಂದರ್ಭದಲ್ಲಾದರೂ ತಪ್ಪಿತಸ್ಥ ಗಿರಣಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ  ನಿಗಮ ಸಲಹೆ­ಯನ್ನೂ ನೀಡಿತ್ತು ಎಂದು ಗೊತ್ತಾಗಿದೆ.ವರದಿ ನಂತರ ಕ್ರಮ: ಸಿಎಫ್‌ಟಿಆರ್‌ಐ ವರದಿ ಬಂದ ನಂತರವೇ ಕ್ರಮ ಕೈಗೊಳ್ಳಲು ಇಲಾಖೆ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ. ಸಂಗ್ರ­ಹಿ­ಸಿರುವ ಎಲ್ಲ ಮಾದರಿಗಳನ್ನು ಪರೀಕ್ಷೆಗೆ ಒಳ­ಪಡಿಸಲು ಕನಿಷ್ಠ ಐದು ತಿಂಗಳ ಕಾಲಾವ­ಕಾಶವನ್ನು ಸಿಎಫ್‌ಟಿಆರ್‌ಐ ಕೇಳಿದೆ ಎಂದು ಗೊತ್ತಾಗಿದೆ.

ಇಲಾಖಾ ವಿಚಾರಣೆ: ಲೆವಿ ಅಕ್ಕಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿರುವ 20 ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತನಿಖೆ ಎದುರಿಸುತ್ತಿರುವ ಅಧಿಕಾರಿ­ಗಳೆಲ್ಲರೂ ಡಿಪೊ ವ್ಯವಸ್ಥಾಪಕರು ಮತ್ತು ಕಚೇರಿ ವ್ಯವಸ್ಥಾಪಕರಾಗಿದ್ದಾರೆ.
ಲೆವಿಗೆ ಅಕ್ಕಿಯಾಗಿ ರೂಪಾಂತರಿಸಿದ ಭತ್ತವನ್ನು ರೈತರಿಂದ ಖರೀದಿಸ­ಲಾಗಿದೆ ಎಂದು ಅಕ್ಕಿ ಗಿರಣಿ ಮಾಲೀಕರು ಸುಳ್ಳು ಪ್ರಮಾಣಪತ್ರ ನೀಡಿರುವುದು ದೃಢಪಟ್ಟಿದೆ ಎಂದೂ ಮೂಲಗಳು ತಿಳಿಸಿವೆ.

ಇಂದು ಅಧಿಕಾರಿಗಳ ಸಭೆ
‘ಅಕ್ಕಿಗೆ ಹುಳು ಹಿಡಿದಿರುವ ಬಗ್ಗೆ ನನಗೆ ಮಾಹಿತಿ  ಬಂದಿದೆ. ನಾವು ಈಗ ಧೂಮೀ­ಕರಣ ಕಾರ್ಯ ಆರಂಭಿಸಿ­ದ್ದೇವೆ. ಬಳಸ­ಬಹುದಾದ ಅಕ್ಕಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಅನ್ನಭಾಗ್ಯ ಯೋಜನೆಗೆ ಪೂರೈಸುತ್ತೇವೆ. ನುಚ್ಚು ಹಾಗೂ ಕಳಪೆ ಅಕ್ಕಿ­ಯನ್ನು ಗಿರಣಿ ಮಾಲೀಕರಿಗೆ ವಾಪಸ್‌ ಮಾಡ­ಲಾಗು­ವುದು. ದಾಸ್ತಾನು ಅಕ್ಕಿ ವಿಲೇ­ವಾರಿ ಸಂಬಂಧ ಗುರುವಾರ ಅಧಿಕಾರಿಗಳ ಸಭೆ ಕರೆದಿದ್ದೇನೆ’
–ದಿನೇಶ್‌ ಗುಂಡೂರಾವ್‌, 
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT