ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪನ ಜೀವನಕ್ರಮವೇ ನನಗೆ ಮಾರ್ಗದರ್ಶನ’

ನಿನ್ನಂಥ ಅಪ್ಪ ಇಲ್ಲ
Last Updated 19 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆಂಧ್ರದ ಕಡಪ ಬಳಿಯ ಬಾಡಾಲದ ಮುಲಕನಾಡು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ನನ್ನಜ್ಜ ನರಸಾವಧಾನಿಗಳು. ಬಾಡಾಲ ಮನೆತನವೆಂದೇ ಪ್ರಸಿದ್ಧ.ನರಸಾವಧಾನಿಗಳು ಕರ್ನಾಟಕದ ಚಿಂತಾಮಣಿಗೆ ಬಂದು ನೆಲೆಸಿದರು. ಅವರಿಗೆ ನಾಲ್ವರು ಮಕ್ಕಳು. ನನ್ನ ತಂದೆ ಗುಂಡಾ ಶಾಸ್ತ್ರಿಗಳು (ಚಿಂತಾಮಣಿ ಗುಂಡಾ ಶಾಸ್ತ್ರಿ- ಸಿ.ಜಿ. ಶಾಸ್ತ್ರಿ) ಕೊನೆಯವರು.

ಅಜ್ಜ ನರಸಾವಧಾನಿಗಳು ನಿಧನರಾದಾಗ ತಂದೆಗೆ 10 ವರ್ಷ. (ಗುಂಡಾ ಶಾಸ್ತ್ರಿಗಳು ಹುಟ್ಟಿದ್ದು 1902ರ ನವೆಂಬರ್‌ನಲ್ಲಿ) ಅಜ್ಜಿ ತೀರಿಕೊಂಡಾಗ 12 ವರ್ಷ. ಬಳಿಕ ತಂದೆಯ ಅಣ್ಣಂದಿರಾದ ಸೀತಾರಾಮ ಶಾಸ್ತ್ರಿ, ವೆಂಕಟೇಶ ಶಾಸ್ತ್ರಿ ಬೆಂಗಳೂರಿಗೆ ಬಂದು ಉದ್ಯೋಗ ಕೈಗೊಂಡಿದ್ದರು. ಹಿರಿಯ ಅಣ್ಣ ಚಿಕ್ಕ ವಯಸ್ಸಿನಲ್ಲೇ ರೇಷ್ಮೆ ವ್ಯಾಪಾರ ಆರಂಭಿಸಿ, 16ನೇ ವಯಸ್ಸಿಗೇ ಶ್ರೀಲಂಕಾಗೂ ಹೋಗಿಬಂದಿದ್ದರಂತೆ. ನಂತರ ಕೆಲವು ವರ್ಷಗಳಲ್ಲಿ ಅವರು ತೀರಿಕೊಂಡರು.

ಬೆಂಗಳೂರಿಗೆ ಬಂದು, ಓದುವ ಹಂಬಲದಲ್ಲಿದ್ದ ನಮ್ಮ ತಂದೆಗೆ ವಾರಾನ್ನ ಅಥವಾ ಅಣ್ಣಂದಿರ ಆಶ್ರಯ ಇಷ್ಟವಿರಲಿಲ್ಲ. ತಮ್ಮನ ಈ ಸ್ವಭಾವ ಅರಿತಿದ್ದ ಅವರಿಬ್ಬರೂ ಆಭರಣದ ಅಂಗಡಿಯಲ್ಲಿ ಸಂಜೆ ಲೆಕ್ಕ ಬರೆಯಲು ಅನುವು ಮಾಡಿಕೊಟ್ಟರು. ಆಗ ವ್ಯಾಪಾರದ ಒಳಗುಟ್ಟು, ಹೊಸತನಕ್ಕೆ ಸ್ಪಂದನೆ, ಅವಕಾಶಗಳನ್ನು ಕಂಡುಕೊಳ್ಳುವಿಕೆ ಗುಂಡಾ ಶಾಸ್ತ್ರಿಗಳಿಗೆ ಅರಿವಾಯಿತು.

ವ್ಯಾಪಾರದಲ್ಲಿ ರಿಸ್ಕ್ ಸಹಜ; ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಯಶಸ್ಸು ಖಂಡಿತ ಎಂದು ತಿಳಿಯಿತಂತೆ. ಆದರೆ ಬಂಡವಾಳ ಇರಲಿಲ್ಲ. ಮೆಟ್ರಿಕ್ಯುಲೇಷನ್ ಓದಿನ ಬಳಿಕ, 20 ರೂ. ಮಾಸಿಕ ಸಂಬಳಕ್ಕೆ ಕೃಷಿ ಇಲಾಖೆಯಲ್ಲಿ ಗುಂಡಾ ಶಾಸ್ತ್ರಿಯವರಿಗೆ ಕೆಲಸ ಸಿಕ್ಕಿತು. ಎಫ್.ಎ. ಓದಲು ತವಕಿಸುತ್ತಿದ್ದ ವೇಳೆ ತುಮಕೂರಿನ ಶ್ರೀಮಂತ ವ್ಯಾಪಾರಿ ಹೇಮಾ ಹನುಮಂತರಾಯರ ಮಗಳು ವೆಂಕಟಲಕ್ಷ್ಮಮ್ಮರ ಜೊತೆ 1923ರಲ್ಲಿ ಮದುವೆಯಾಯಿತು.

ಅಮ್ಮನ ಅಪ್ಪ ಮದುವೆಗೆ ಮುನ್ನ ನಿಧನರಾಗಿದ್ದರು. ಅಮ್ಮನ ಅಣ್ಣಂದಿರು ಮದುವೆ ಮಾಡಿಕೊಟ್ಟರು. ಮದುವೆಗೆ ಪ್ರಸ್ತಾವ ಇಟ್ಟವರು ಅಮ್ಮನ ಅಣ್ಣಂದಿರಿಗೆ ಹೇಳಿದ್ದರಂತೆ - ‘ವರ ಇವತ್ತು ಬಡವನಿರಬಹುದು. ಅವನಿಗೆ ತಿಂಗಳಿಗೆ 500 ರೂ. ಸಂಪಾದನೆ ಸಾಮರ್ಥ್ಯವಿದೆ’ ಎಂದು.  ಮುಂದೆ ಅವರು ಎಫ್.ಎ. ಶಿಕ್ಷಣ ಪಡೆದರು.

ಮದುವೆಯಾದಾಗ ನಮ್ಮ ತಾಯಿಗೆ ಅಡುಗೆ ಮಾಡಲು ಬರುತ್ತಿರಲಿಲ್ಲವಂತೆ. ಚಿಕ್ಕ ವಯಸ್ಸು ಬೇರೆ. ತಂದೆಯೇ ಬೆಳಗ್ಗೆ ಅಡುಗೆ ಮಾಡಿಟ್ಟು, ಅಡುಗೆಮನೆಯನ್ನೂ ಸ್ವಚ್ಛಗೊಳಿಸಿ, ಊಟ ಮಾಡಿ 10 ಗಂಟೆಗೆ ಕಚೇರಿ ತಲುಪುತ್ತಿದ್ದರಂತೆ. ಅಮ್ಮ ಹೇಳುತ್ತಿದ್ದರು - ‘ಅವರಿಗೆ ಸುಮಾರಾಗಿ ಎಲ್ಲ ವಿದ್ಯೆಗಳೂ ಗೊತ್ತಿದ್ದವು. ಅಡುಗೆ, ತಿಂಡಿ,...ಇತರ ಎಲ್ಲ ಕೆಲಸಗಳನ್ನೂ ನಿಭಾಯಿಸುತ್ತಿದ್ದರು’.  ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತ, ವಿಮಾ ಏಜೆನ್ಸಿ ಕೈಗೊಂಡರು.

ಅಣ್ಣ ವೆಂಕಟೇಶ ಶಾಸ್ತ್ರಿ ಜೊತೆ ಕರ್ನಾಟಕ ಮೆಡಿಕಲ್ ಕಾಲೇಜ್ ಸೇರಿ ಆಯುರ್ವೇದ ಅಧ್ಯಯನದಲ್ಲಿ ತೊಡಗಿದರು.  ‘ವೈದ್ಯವಿಶಾರದಾ’ ಎಂಬ ಬಿರುದು ಸಹಿತ ಪ್ರಮಾಣಪತ್ರ ಪಡೆದರು. ನಂತರ ಆಯುರ್ವೇದ ಔಷಧಗಳ ಏಜೆನ್ಸಿ ಪಡೆದು, ಚಿಕ್ಕಪೇಟೆಯಲ್ಲಿ ಅಂಗಡಿ ತೆರೆದರು. ಈ ಉದ್ಯಮದಲ್ಲೇ ಮುಂದುವರಿಯಲು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಅವರು ಚೆನ್ನಾಗಿ ಮಾರುಕಟ್ಟೆ ತಂತ್ರಗಳನ್ನು ಅರಿತಿದ್ದರು.

ಶಾಸ್ತ್ರಿಗಳ ಬೇಡಿಕೆ ಪೂರೈಸಲು ಔಷಧ ಸಂಸ್ಥೆಗೆ ಸಾಧ್ಯವಾಗಲಿಲ್ಲ. ತಮಿಳುನಾಡಿನ ಕೇಸರಿ ಕುಠೀರಂನ ಏಜೆನ್ಸಿಯನ್ನೂ ಶಾಸ್ತ್ರಿಗಳು ಪಡೆದರು.  1940ರ ದಶಕದ ಆರಂಭ ಕಾಲವದು. ಏಜೆನ್ಸಿ ಕೊಟ್ಟ ಕೇಸರಿ ಕುಠೀರಂನವರು ಶಾಸ್ತ್ರಿಗಳಿಗೆ ಒಂದು ಗುರಿ ಕೊಟ್ಟು, ‘ದೊಡ್ಡ ಮೊತ್ತದಷ್ಟು ಔಷಧವನ್ನು ನಿಗದಿತ ಅವಧಿಯಲ್ಲಿ ಮಾರಾಟ ಮಾಡಿದರೆ, ಕಾರು ಉಡುಗೊರೆ’ ಎಂದರಂತೆ. ಆ ಮೊತ್ತ ಈಗಿನ ಐದು ಕೋಟಿ ರೂಪಾಯಿಗಳಿಗೂ ಮೀರಿದ್ದು ಎನ್ನಬಹುದು.

ನಮ್ಮ ತಂದೆ ಈ ಪಂಥಾಹ್ವಾನ ಸ್ವೀಕರಿಸಿ, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಓಡಾಡಿ ಔಷಧ ಮಾರಿ ಗುರಿ ತಲುಪಿದರಂತೆ. ಅಗಾಧ ಸಾಮರ್ಥ್ಯದ ಅವರಿಗೆ ಇನ್ನೂ ಏನು ಮಾಡಬಹುದು ಎಂದು ಯೋಚಿಸಿದಾಗ ಹೊಳೆದಿದ್ದು ಹೋಟೆಲ್.

ಸ್ನೇಹಿತ ಧೋಂಡುಸಾ ನೆರವಿನಿಂದ ಚಿಕ್ಕಪೇಟೆಯಲ್ಲಿ ಧೋಂಡುಸಾರ ಕಟ್ಟಡದಲ್ಲಿ (ಈಗಿನ ಧೋಂಡುಸಾ ಸಿಲ್ಕ್ ಎಂಪೋರಿಯಂ) ಹೋಟೆಲ್  ಉದ್ಯಮಕ್ಕೆ ಮುಂದಾದರು – 1940ರ ಆಸುಪಾಸಿನಲ್ಲಿ. ಆಗ ‘ಅನ್ನ ವಿಕ್ರಯ’ ಸಲ್ಲ ಎಂಬ ಆಕ್ಷೇಪ ಬಂತು. ಆದರೆ ತಂದೆ ಛಲದಿಂದ ನಿಂತು ‘ಶಾಸ್ತ್ರೀಸ್ ಹೊಟೇಲ್ ಆಂಡ್ ರೆಸ್ಟೋರೆಂಟ್’ ಆರಂಭಿಸಿದರು.

ಆಗಿನ ಪ್ರಸಿದ್ಧ ಸಂಗೀತವಿದುಷಿ ಬೆಂಗಳೂರು ನಾಗರತ್ಮಮ್ಮ ಉದ್ಘಾಟನಾ ಸಮಾರಂಭದಲ್ಲಿ ‘ನಿತ್ಯಕಲ್ಯಾಣಿ ರಾಗ’ ವನ್ನು ಹಾಡಿ ಶುಭಾಶಂಸನೆ ಮಾಡಿದರು. ಹೋಟೆಲ್‌ನ ಆರಂಭದ ದಿನಗಳಲ್ಲಿ ತುಂಬ ಕಷ್ಟಪಟ್ಟರು. ಬೆಳಿಗ್ಗೆ ನಾಲ್ಕು ಗಂಟೆಗೆ ಹೋಟೆಲ್‌ಗೆ ಹೋಗಿ ರಾತ್ರಿ 12 ಗಂಟೆ ತನಕ ಅಲ್ಲಿಯೇ ಇರುತ್ತಿದ್ದರಂತೆ.

ಕ್ರಮೇಣ ಒಂದಾದ ಮೇಲೊಂದು ಹೋಟೆಲ್ ಕಟ್ಟಿದರು. ಹೋಟೆಲ್ ತಾಜ್‌ಮಹಲ್ ಕೊಂಡುಕೊಳ್ಳುವ ವೇಳೆ ನಾನು ಹುಟ್ಟಿದ್ದೆ. ಅಲ್ಲಿ ಹೋಟೆಲ್ ನಡೆಸಲು ಆಕ್ಷೇಪ ಬಂದಿತ್ತು.

ಸುಪ್ರಿಂಕೋರ್ಟ್‌ ತನಕ ಹೋಗಿ ಗೆದ್ದು ಬಂದರು. ಹಿಡಿದ ಕೆಲಸದಲ್ಲಿ  ಏನೇ ಕಷ್ಟ ಬಂದರೂ ಎದುರಿಸಿ ನಿಂತು ಛಲದಿಂದ ಸಾಧಿಸುತ್ತಿದ್ದರು. ಶಾಸ್ತ್ರೀಸ್ ಹೋಟೆಲ್ ಆಂಡ್ ರೆಸ್ಟೋರೆಂಟ್ ಬಳಿಕ ಹೋಟೆಲ್ ಬೃಂದಾವನ್, ಹೋಟೆಲ್ ತಾಜಮಹಲ್, ಹೋಟೆಲ್ ರಾಜಮಹಲ್, ಹೋಟೆಲ್ ಅಂಬಾಸಿಡರ್, ಟಾಕ್ ಆಫ್ ದಿ ಟೌನ್  – ಹೀಗೆ ಹಲವು ಹೋಟೆಲ್‌ಗಳನ್ನು ತೆರೆದರು. ತಂದೆಯವರು ‘ಹೋಟೆಲ್ ಶಾಸ್ತ್ರಿಯವರು’ ಎಂದೇ ಪ್ರಸಿದ್ಧರಾದರು.

ಸಕ್ಕರೆಯ ಮಾರಾಟ ಕಷ್ಟವಾಗಿದ್ದ  ಕಾಲದಲ್ಲಿ ಅದನ್ನು ತಂದು ಮಾರಿದರು; ಮುಂಬೈನಿಂದ ಜವಳಿ ತರಿಸಿ ಮಾರಿದ್ದರು; ಗಿಡಗಳನ್ನು ಬೆಳೆಸುವ ಹವ್ಯಾಸವಿತ್ತು. ಟೈಪಿಂಗ್ ಬಂದ ಆರಂಭದ ಕಾಲ; ಅದನ್ನೂ ಕಲಿತರು.  ಒಮ್ಮೆ ರಾತ್ರಿ 10 ಗಂಟೆ ಬಳಿಕ ಅಂಗಡಿ ಮುಚ್ಚುತ್ತಿದ್ದಾಗ ಯಾರೋ ಒಬ್ಬರು ಬಂದು ಟೈಪ್ ಮಾಡಿಕೊಡಲು ಕೋರಿದರು. ಟೈಪ್ ಮಾಡಿಕೊಟ್ಟು, ಅವನಿಂದ 2 ರೂ. ಪಡೆದರಂತೆ. ಒಬ್ಬ ಉದ್ಯಮಿ ಯಾವುದೇ ಅವಕಾಶ ಬಿಡಬಾರದು ಎಂಬ ನಡೆ ಅವರದು.

ತಂದೆ-ತಾಯಿಗೆ ಇಬ್ಬರು ಗಂಡುಮಕ್ಕಳು ಜನಿಸಿದ 20 ವರ್ಷ ಬಳಿಕ ಹುಟ್ಟಿದವಳು ನಾನು. 3 ವರ್ಷದ ಬಳಿಕ ನನ್ನ ತಮ್ಮ ಶ್ರೀನಿವಾಸ ಜನಿಸಿದ. ನಾನು ಹುಟ್ಟಿದಾಗ ಅಪ್ಪನಿಗೆ 48 ವರ್ಷ. ಅಮ್ಮನಿಗೆ 38. ಅಪ್ಪನಿಗೆ ಹೆಣ್ಣುಮಗು ಬೇಕೆಂದು ಆಸೆ ಇತ್ತಂತೆ. 1950ರ ದಿನಗಳು. ನನ್ನ ನಾಮಕರಣ, ಅನ್ನಪ್ರಾಶನ ಕಾರ್ಯಕ್ರಮಕ್ಕೆ ಅಪ್ಪ ಕುಟುಂಬದ ಪುರೋಹಿತರ ಬಳಿ, ‘ಒಳ್ಳೆಯ ಮುಹೂರ್ತ ನೋಡಿ’ ಎಂದರಂತೆ.

ಪುರೋಹಿತರು ತಾತ್ಸಾರದಿಂದ ‘ಹೆಣ್ಣುಮಕ್ಕಳಿಗೇನು ಮುಹೂರ್ತ ನೋಡುವುದು? ಯಾವುದಾದರೂ ಒಂದು ದಿನ ಕಾರ್ಯಕ್ರಮ ಇಟ್ಟುಕೊಳ್ಳಿ’ ಎಂದರಂತೆ. ಆಗ ಅಪ್ಪನಿಗೆ ಕೋಪ ಬಂದು, ‘ಅವಳು ನನಗೆ ಗಂಡುಮಕ್ಕಳಿಗಿಂತಲೂ ಹೆಚ್ಚು’ ಎಂದರಂತೆ. ಇಬ್ಬರ ನಡುವೆ ಮಾತು ಬೆಳೆದಾಗ ಪುರೋಹಿತರು ‘ಓಹೋ,  ಮಹಾರಾಜರಂತೆ ನೀವೂ ಕಾರ್ಯಕ್ರಮ ಮಾಡಿ ಚಿನ್ನದ ತಟ್ಟೆಯಲ್ಲಿ ಅವಳಿಗೆ ಊಟ ಕೊಡಿ’ ಎಂದು ಅಪಹಾಸ್ಯ ಮಾಡಿದರಂತೆ. ಅಪ್ಪ ದೊಡ್ಡ ಕಾರ್ಯಕ್ರಮ ಏರ್ಪಡಿಸಿ, ಚಿನ್ನದ ತಟ್ಟೆ ಮಾಡಿಸಿ, ಊಟ ಬಡಿಸಿದರು.

ತಂದೆಯವರು ಬಾಲ್ಯದಿಂದಲೂ ಪ್ರತಿ ಹಂತದಲ್ಲೂ ನನ್ನ ನಿರ್ಧಾರಗಳನ್ನು ಬೆಂಬಲಿಸಿದರು. ಆಟ, ಪಾಠಗಳ ಜೊತೆಗೆ ನಾಟಕ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು.  ನಾನು ಮಹಾರಾಣಿ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ಓದಿ, ಅರ್ಥಶಾಸ್ತ್ರ ಪದವಿ ಪಡೆದೆ. ವಕೀಲೆಯಾಗಬೇಕೆಂಬ ಆಶಯವಿತ್ತು.

ಪದವಿ ಓದುತ್ತಿದ್ದಾಗ ಅಪ್ಪನಿಗೆ ಅನಾರೋಗ್ಯ ಕಾಡಿತು. ಹೀಗಾಗಿ ಅಪ್ಪ ಮದುವೆ ಮಾಡಿದರು. ಇಸ್ರೋ ವಿಜ್ಞಾನಿ ಬಿ.ವಿ. ಶೇಷಾದ್ರಿ ಜೊತೆ ವಿವಾಹವಾಯಿತು. ಮದುವೆಯಾದ ಮೂರು ತಿಂಗಳಿಗೆ ಅಪ್ಪ ನಿಧನರಾದರು. (21–1–1971) ಆಗ ನನಗೆ 20 ವರ್ಷ. ಅಲ್ಲಿಯವರೆಗೂ ಗಲ್ಲಾಪೆಟ್ಟಿಗೆಯ ಮೇಲೆ ಕೂರದಿದ್ದ ನನಗೆ ದಿಢೀರನೆ ಹೊಟೇಲ್ ತಾಜಮಹಲ್ ನಿರ್ವಹಣೆ ಸಿಕ್ಕಿತು.

ತಂದೆಯವರದ್ದು ತುಂಬಾ ಶಿಸ್ತಿನ ಜೀವನ.  ಇಸ್ತ್ರಿ ಮಾಡಿದ ಶುಭ್ರ ಧೋತಿ, ಜುಬ್ಬಾ, ಕರಿಕೋಟು, ಮೈಸೂರು ಪೇಟಾ ಧರಿಸುತ್ತಿದ್ದರು. ಒತ್ತಡ, ನಿರಂತರ ಕೆಲಸದ ನಡುವೆಯೂ ದುಂಡುಮೊಗದಲ್ಲಿ ಸದಾ ಮಂದಹಾಸದ ಕಳೆ.  ಮುಂಜಾನೆ 4 ಗಂಟೆಗೆ ಎದ್ದು, ವಾಕ್ ಮಾಡಿ ಮನೆಗೆ ಬಂದು, ಸ್ನಾನಾದಿಗಳ ಬಳಿಕ ದೇವರ ಪೂಜೆ ನಡೆಸಿ, ತಿಂಡಿ ತಿಂದು, 7 ಗಂಟೆಗೆ ಮುನ್ನ ಮನೆ ಬಿಟ್ಟರೆ ರಾತ್ರಿ 12ರವರೆಗೂ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಯಾವುದೇ ಜಾತಿ, ಸಮುದಾಯ ನೋಡದೇ ಹೋಟೆಲ್‌ನಲ್ಲಿ ಬಡ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ನೀಡುತ್ತಿದ್ದರು. ‘ನಾಲ್ಕಾಣೆಗೆ ಒಂದು ಊಟವಿದ್ದ ದಿನಗಳಲ್ಲಿ ಕರಗದ ವೇಳೆ ಎರಡು ಸಾವಿರ ಊಟ ಮಾರಾಟ ಮಾಡಿದ್ದೆವು’ ಎಂದು ಅಪ್ಪ ನನಗೆ ಒಮ್ಮೆ ಹೇಳಿದ್ದರು. ಅಪ್ಪನ ಜೊತೆ ಕೆಲಸ ಮಾಡುವ ಅವಕಾಶ ದೊರೆಯದಿದ್ದರೂ ಅವರ ನಡೆ, ಪರಿಶ್ರಮ ಕಣ್ಣಾರೆ ಕಂಡದ್ದು ನನ್ನ ಯಶಸ್ಸಿಗೆ ದಾರಿಯಾಯಿತು. ನಾನು ಉದ್ಯಮಕ್ಕೆ ಬಂದಾಗ ತುಂಬ ಕಷ್ಟಗಳು ಎದುರಾದವು. ಅವನ್ನು ಸವಾಲು ಎಂದೇ ಪರಿಗಣಿಸಿದೆ.

ತಂದೆ ಹೇಳುತ್ತಿದ್ದರು - ‘ತೊಂದರೆಗಳ ಅನುಭವವವನ್ನು ಸಿಬ್ಬಂದಿ ಎದುರು ತೋರಿಸಿಕೊಳ್ಳಬಾರದು’, ‘ಚಿಕ್ಕ ಹಾವಾದರೂ ದೊಡ್ಡ ಕೋಲಿನಲ್ಲಿಯೇ ಹೊಡೆಯಬೇಕು’ ಎಂದು.

ಮನೆಯಲ್ಲಿ ಶಿಸ್ತು ಇತ್ತು.  ಎಲ್ಲರೂ ಬೆಳಿಗ್ಗೆ 6 ಗಂಟೆಯ ಮುಂಚೆ ಎದ್ದಿರಬೇಕಿತ್ತು. ಹಾಗೆ ಏಳದಿದ್ದರೆ ‘ನಿದ್ರಾದೇವಿ ಸಾಯಿಸುತ್ತಾಳೆ, ನಿರ್ಭಾಗ್ಯದೇವತೆ ನಿನ್ನ ಕೈ ಹಿಡಿಯುತ್ತಾಳೆ’, ‘ಅದೃಷ್ಟ ಒಮ್ಮೆ ಮಾತ್ರ ಬಾಗಿಲು ತಟ್ಟುತ್ತದೆ’ ಎನ್ನುತ್ತಿದ್ದರು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ, ಆಹಾರವನ್ನು ಹಾಳು ಮಾಡದ ಕ್ರಮವಿತ್ತು.

ಅಪ್ಪ ಬೆಂಗಳೂರು ಪುರಸಭೆ ಸದಸ್ಯರಾಗಿದ್ದರು. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಕಸಾಪ ಅಧ್ಯಕ್ಷರಾಗಿದ್ದ ಶಿವಮೂರ್ತಿ ಶಾಸ್ತ್ರಿಗಳು ಸೇರಿದಂತೆ ಹಿರಿಯ ನಾಯಕರ ಸಂಪರ್ಕವಿತ್ತು.  ಕರ್ನಾಟಕ ಏಕೀಕರಣ ಹೋರಾಟ ಸಂದರ್ಭದಲ್ಲಿ  ನಿಜಲಿಂಗಪ್ಪನವರು ನಮ್ಮ ಮನೆಗೆ ಬಂದು ಚಳವಳಿಗೆ ಹಣ ಪಡೆದಿದ್ದರಂತೆ. ತಂದೆಯ ಇಷ್ಟದಂತೆ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಚಿಂತಾಮಣಿಯಲ್ಲಿ ಉಚಿತ ಹಾಸ್ಟೆಲ್ ತೆರೆದಿದ್ದೇವೆ. ಛಲದಿಂದ ಉದ್ಯಮ ಜಗತ್ತಿನಲ್ಲಿ ಮುಂದೆ ಬಂದ ನನ್ನ ತಂದೆ ಮುಟ್ಟಿದ್ದೆಲ್ಲ ಚಿನ್ನವಾಗಿತ್ತು.ಅಪ್ಪನ ಜೀವನಕ್ರಮವೇ ನನ್ನ ಬದುಕಿಗೆ ಮಾರ್ಗದರ್ಶನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT