ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪನ ಸಂಪಾದನೆ ‘ಅನ್ಯಾಯ’ದ ಗಂಟು!’

ಅತಿಯಾದ ಧಾರ್ಮಿಕ ವಿಶ್ವಾಸ; ಇದ್ದಕ್ಕಿದ್ದಂತೆ ಬದಲಾದ ವರ್ತನೆ: ಪೋಷಕರ ಅಳಲು
Last Updated 24 ಜುಲೈ 2016, 19:37 IST
ಅಕ್ಷರ ಗಾತ್ರ

ಪಡನ್ನ (ಕಾಸರಗೋಡು ಜಿಲ್ಲೆ/ಕೇರಳ): ‘ಧಾರ್ಮಿಕ ಅಧ್ಯಯನ ಹೆಸರಿನಲ್ಲಿ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಿ ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಸೇರಿದ್ದಾರೆ ಎಂದು ಶಂಕಿಸಲಾದ ಎಲ್ಲರೂ ಅತಿಯಾದ ಧಾರ್ಮಿಕ ವಿಶ್ವಾಸಿಗಳಾಗಿದ್ದರು. ಇತರರಿಗಿಂತ ವ್ಯತಿರಿಕ್ತವಾಗಿ ಮತೀಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಧರಿಸುತ್ತಿದ್ದ ಉಡುಗೆ ತೊಡುಗೆಗಳೂ ಭಿನ್ನವಾಗಿದ್ದವು. ಆದರೆ, ಎಲ್ಲರೊಂದಿಗೆ ಬೆರೆಯುವ ಮೂಲಕ ಈ ಎಲ್ಲ ‘ಭಿನ್ನತೆ’ಗಳನ್ನು ಮರೆಮಾಚುತ್ತಿದ್ದರು. ಅವರಲ್ಲಿ ನಮ್ಮ ಹಫೀಸುದ್ದೀನ್‌ ಕೂಡಾ ಒಬ್ಬ...’

ಕೇರಳದಿಂದ ನಾಪತ್ತೆಯಾದ 21 ಮಂದಿಯ ಪೈಕಿ ಒಬ್ಬನಾದ ಹಫೀಸುದ್ದೀನ್‌ನ ಮಾವ ಅಬ್ದುಲ್ ಸಲಾಂ ಹೇಳುವ ಮಾತಿದು.
ಪಡನ್ನ ನಗರದಲ್ಲಿರುವ ಹಫೀಸುದ್ದೀನ್‌ ಮನೆಯ ಮುಂಭಾಗದಲ್ಲಿ ಅಬ್ದುಲ್‌ ಸಲಾಂ ಅವರ ಮನೆ ಇದೆ. ಸದ್ಯ ಪಡನ್ನದಲ್ಲಿರುವ ಸಲಾಂ, ಕೊಲ್ಲಿ ರಾಷ್ಟ್ರವಾದ ಕತಾರ್‌ನಲ್ಲಿ ಉದ್ಯಮಿ. ಮನೆಯ ಜಗಲಿಯಲ್ಲಿ ಕುಳಿತು ಸಹೋದರಿಯ ಮಗ ನಾಪತ್ತೆಯಾಗಿರುವ ಹಿಂದಿನ ವೃತ್ತಾಂತವನ್ನು ‘ಪ್ರಜಾವಾಣಿ’ ಎದುರು ಬಿಚ್ಚಿಟ್ಟರು.

‘ಪಡನ್ನದಲ್ಲಿ ಸಿಪಿಎಂ– ಮುಸ್ಲಿಂ ಲೀಗ್‌ ಮಧ್ಯೆ ರಾಜಕೀಯ ಸಂಘರ್ಷ ನಡೆದಿದೆ. ಆದರೆ, ಕೋಮುಸಂಘರ್ಷಕ್ಕೆ ಎಂದೂ ಧಕ್ಕೆ ಆಗಿಲ್ಲ. ವಿವಾದಾತ್ಮಕ ಬಾಬಿರಿ ಮಸೀದಿ ಧ್ವಂಸಗೊಂಡ ಬಳಿಕದ ದಿನಗಳಲ್ಲಿ ವಿವಿಧೆಡೆ ಕೋಮು ಗಲಭೆ ಘಟಿಸಿದ್ದರೂ ಇಲ್ಲಿ ಹಿಂದೂ– ಮುಸ್ಲಿಂ ಮಧ್ಯೆ ಶಾಂತಿ ವಾತಾವರಣ ಇತ್ತು. ಈಗಲೂ ಅದೇ ಸೌಹಾರ್ದತೆ ಇದೆ. ಪಡನ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ– ಮುಸ್ಲಿಂ ಜನಸಂಖ್ಯೆ ಸಮಸಮ ಇದೆ. ಆದರೆ ಪಡನ್ನ ಪಟ್ಟಣದಲ್ಲಿ ಮುಸ್ಲಿಂ ಸಮುದಾಯ ಬಾಹುಳ್ಯ ಹೊಂದಿದೆ. ಹಾಗೆಂದು ಇಲ್ಲಿ ಈವರೆಗೂ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆದಿಲ್ಲ. ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ಯಾರೂ ಭಾಗಿಯಾಗಿಲ್ಲ. ಇದೇ ಮೊದಲ ಬಾರಿಗೆ ಐಎಸ್‌ ಜೊತೆ ಈ ಪುಟ್ಟ ಊರಿನ ನಂಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ’ ಎಂದು ನೋವು ತೋಡಿಕೊಂಡರು.

‘2–3 ವರ್ಷಗಳಿಂದ ಹಫೀಸುದ್ದೀನ್‌ ಜೀವನ ಶೈಲಿ ಬದಲಾಗಿತ್ತು. ಎಲ್ಲರಂತೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದವನಲ್ಲಿ ಇದ್ದಕ್ಕಿದ್ದಂತೆ ಯಾಕೆ ಈ ಪರಿವರ್ತನೆ ಕಾಣಿಸಿಕೊಂಡಿತು ಎನ್ನುವುದನ್ನು ಹತ್ತಿರದಿಂದ ಬಲ್ಲವರಿಗೆ ಹೇಳಲು ಸಾಧ್ಯವಾಗುತ್ತಿಲ್ಲ. ನೋಡು, ನೋಡುತ್ತಿದ್ದಂತೆ ಆತನಲ್ಲಿ ಧಾರ್ಮಿಕ ಚಿಂತನೆ ತೀವ್ರಗೊಂಡಿತ್ತು. ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದ. 4–5 ಮಂದಿ (ನಾಪತ್ತೆಯಾಗಿರುವ 21 ಮಂದಿಯಲ್ಲಿರುವ ಡಾ. ಇಜಾಸ್‌, ಶಿಹಾಸ್‌ ಮತ್ತಿತರರು) ಜೊತೆಯಾಗಿ  ಇರುತ್ತಿದ್ದರು. ಅವರ್‍್ಯಾರೂ ಇನ್ನೊಬ್ಬರಿಗೆ ತೊಂದರೆ ಕೊಟ್ಟವರಲ್ಲ. ಎಲ್ಲರಿಗೂ ಇಷ್ಟವಾಗುತ್ತಿದ್ದರು. ಅವರ ಮಾತು, ನಯ, ವಿನಯ  ಎಲ್ಲರಿಗೂ ಗೊತ್ತು...’

‘ಹಫೀಸುದ್ದೀನ್‌ನ ತಂದೆ ಅಬ್ದುಲ್‌ ಹಕೀಂ ಹಲವು ವರ್ಷಗಳಿಂದ ಅಬುದಾಬಿಯಲ್ಲಿ ಇದ್ದರು. ಅಲ್ಲಿ ಅವರು ದೊಡ್ಡ ಉದ್ಯಮಿ. ಈಗ ಊರಲ್ಲೇ ಮನೆ ಮಾಡಿಕೊಂಡಿದ್ದು, ಆಗಾಗ ಹೋಗಿ ಬರುತ್ತಾರೆ. ಹಫೀಸುದ್ದೀನ್ ಒಬ್ಬನೇ ಮಗ. ಮೂವರು ಸಹೋದರಿಯರು. ಬಾಲ್ಯವನ್ನು ಹಫೀಸುದ್ದೀನ್‌ ಕೊಲ್ಲಿ ರಾಷ್ಟ್ರದಲ್ಲೇ ಕಳೆದವನು. ಪದವಿ ಕಲಿಯಲು ಪಡನ್ನಕ್ಕೆ ಬಂದಿದ್ದ. ಡಿಗ್ರಿ ಓದನ್ನು ಅರ್ಧದಲ್ಲೆ ನಿಲ್ಲಿಸಿ ತಂದೆಯ ಜೊತೆ ವ್ಯವಹಾರದಲ್ಲಿ ಕೈ ಜೋಡಿಸಿದ್ದ. ಮೂರು ತಿಂಗಳ ಹಿಂದೆಯಷ್ಟೆ, ಮೂಲತಃ ಪಕ್ಕದ ತ್ರಿಕರಿಪುರ ಗ್ರಾಮ ನಿವಾಸಿ, ಸೌದಿ ಅರೇಬಿಯಾದಲ್ಲಿರುವ ಶರೀಫಾ ಎಂಬಾಕೆಯ ಜೊತೆ ವಿವಾಹ ಆಗಿದ್ದ...’

‘ಧಾರ್ಮಿಕತೆ ವಿಚಾರದಲ್ಲಿ ಮಗನಲ್ಲಿ ಇತ್ತೀಚೆಗೆ ಉಂಟಾಗಿದ್ದ ಬದಲಾವಣೆಗಳನ್ನು ಕಂಡು ಹಕೀಂ ರೋಸಿ ಹೋಗಿದ್ದರು. ಈ ಕಾರಣಕ್ಕೆ ಅಪ್ಪ– ಮಗನ ಮಧ್ಯೆ ಮಾತೇ ಇರಲಿಲ್ಲ. ಆದರೆ, ಮಗ ನಾಪತ್ತೆಯಾದ ಬಳಿಕ ಅವರು ಮಾನಸಿಕವಾಗಿ ಜರ್ಜರಿತಗೊಂಡಿದ್ದಾರೆ. ಅವನು ಉಗ್ರ ಸಂಘಟನೆ ಸೇರಿರುವುದು ನಿಜವೇ ಆಗಿದ್ದರೆ ಮರಳಿ ಬರುವುದೇ ಬೇಡ. ಅವನ ‘ಮಯ್ಯತ್‌’ (ಶವ) ಕೂಡಾ ನೋಡಲು ಇಷ್ಟಪಡಲ್ಲ ಎಂದು ಹೇಳುತ್ತಿದ್ದಾರೆ...’

‘ನಮ್ಮದು ಸುನ್ನಿ ಕುಟುಂಬ. ಕಾಲಘಟ್ಟದ ಪಲ್ಲಟಗಳಿಗೆ ತಕ್ಕಂತೆ ಜೀವನಕ್ರಮ ಬದಲಾಯಿಸಿಕೊಂಡಿದ್ದೇವೆ. ಆದರೆ, ಹಫೀಸುದ್ದೀನ್‌ನ ಸಲಫಿ ಚಿಂತನೆಗೆ ಮಾರು ಹೋಗಿದ್ದ. ಪರಿಣಾಮ ಆತನಲ್ಲಿ ಕಾಣಿಸಿಕೊಂಡಿದ್ದ ಅತಿಯಾದ ಧಾರ್ಮಿಕ ಆಲೋಚನೆ, ಅನುಷ್ಠಾನ ಕ್ರಮಗಳು ಹಕೀಂ ಅವರಿಗೆ ಆಶ್ಚರ್ಯ ಮೂಡಿಸಿತ್ತು. ಅಪ್ಪನ ಸಂಪಾದನೆ ನೆಚ್ಚಿಕೊಂಡಿದ್ದ ಮಗ, ಅದೊಂದು ದಿನ ಅನ್ಯಾಯದ ಮಾರ್ಗದಲ್ಲಿ ಅಪ್ಪ ಸಂಪಾದನೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ. ಮನೆಯಲ್ಲಿ ಟಿವಿ, ಫ್ರಿಡ್ಜ್ ಬಳಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅದನ್ನು ಕಿತ್ತು ಹಾಕಿಸಿದ್ದ. ಮನೆಮಂದಿಯ ಇಸ್ಲಾಂ ಧರ್ಮಾಚರಣೆಯ ಮೌಲ್ಯವನ್ನೇ ಪ್ರಶ್ನಿಸುತ್ತಿದ್ದ. ಮಸೀದಿಗಳೂ ಅನ್ಯಾಯವಾಗಿ ಗಳಿಸಿದ ಹಣದಿಂದ ನಿರ್ಮಾಣ ಆಗುತ್ತಿವೆ ಎನ್ನುತ್ತಿದ್ದ. ಇಲ್ಲಿನ ಮಸೀದಿಗಳ ಬಗ್ಗೆಯೂ ಅವನಿಗೆ ವಿಶ್ವಾಸ ಕಡಿಮೆಯಾಗಿತ್ತು. ಅಷ್ಟು ಮಾನಸಿಕವಾಗಿ ಬದಲಾಗಿದ್ದ...

‘ಏಳನೇ ಶತಮಾನದ ನಬಿ (ಪ್ರವಾದಿ) ಜೀವನ ಕ್ರಮ ನಿಜವಾದ ಇಸ್ಲಾಂ ಧರ್ಮ ಎಂದು ಹಫೀಸುದ್ದೀನ್‌ ಪ್ರತಿಪಾದಿಸುತ್ತಿದ್ದ. ನಬಿ ಜೀವಿಸಿದ್ದ ದಿನಗಳಲ್ಲಿ ಯಾವುದೇ ಮೂಲಸೌಲಭ್ಯಗಳು ಇರಲಿಲ್ಲ. ಅಂತಹ ಪರಿಸರದಲ್ಲಿ ಜೀವನ ಮಾಡಬೇಕು ಎಂದು ಬಲವಾಗಿ ಪ್ರತಿಪಾದಿಸಲು ತೊಡಗಿದ. ನಬಿ ಬದುಕಿದ್ದ ಕಾಲಘಟ್ಟಕ್ಕೆ ಹೋಗಬೇಕು ಎಂದು ಮಾತನಾಡುತ್ತಿದ್ದ. ಇತರರ ಅರಿವಿಗೆ ಬಾರದಂತೆ ಅವನಲ್ಲಿ ಈ ಪರಿವರ್ತನೆ ಉಂಟಾಗಿತ್ತು...

‘ವಿದ್ಯುತ್‌ ಇಲ್ಲದ, ಕೃಷಿಯನ್ನೇ ನೆಚ್ಚಿರುವ, ಆಡು ಸಾಕಿ ಅದರ ಹಾಲು ಕುಡಿದು ಸರಳ ಬದುಕು ಸಾಗಿಸುವ ಗ್ರಾಮವೊಂದು ಯೆಮನ್‌ ದೇಶದ ದಮ್ಮಾಜ್ ಎಂಬಲ್ಲಿದೆ. 7ನೇ ಶತಮಾನದಲ್ಲಿ ನಬಿ ಬದುಕಿದ್ದ ಮಾದರಿಯಲ್ಲಿ  ಜೀವನ ಸಾಗಿಸಲು ಈ ಗ್ರಾಮ ಸೂಕ್ತ ಎಂದು ಅವನು ಇತರರ ಬಳಿ ಹೇಳಿಕೊಂಡಿದ್ದ. ಪರ ಪುರುಷರು, ಮಹಿಳೆಯರನ್ನು ನೋಡಬಾರದು. ಹೆಣ್ಣು ಮಕ್ಕಳು ಮೈ ಪೂರ್ತಿ ಮುಚ್ಚಿಕೊಂಡಿರಬೇಕು. ಅಂತಹ ವಾತಾವರಣ ಅಲ್ಲಿದೆ. ನಿಜವಾದ ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಜೀವನಕ್ರಮ ಇಲ್ಲಿನದು. ನಿಜವಾದ ಇಸ್ಲಾಂ ಧರ್ಮ ಆಚರಣೆಯಲ್ಲಿದೆ. ಅಲ್ಲಿಗೆ ತೆರಳಿ ಜೀವನ ಸಾಗಿಸುವುದು ಗುರಿ ಎನ್ನುವಷ್ಟರಮಟ್ಟಿಗೆ ಅವನ ಜೀವನ ಶೈಲಿ ಬದಲಾವಣೆ ಕಂಡಿತ್ತು. ಜುಬ್ಬಾ, ಮೊಣಕಾಲುವರೆಗಿನ ಪೈಜಾಮ, ಉದ್ದನೆ ದಾಡಿ... ಹೀಗೆ ವೇಷಭೂಷಣದಲ್ಲೂ ಅರಬ್ಬಿಯನ್ನರನ್ನು ಅನುಸರಿಸಿದ್ದ....

‘ಮೇ 28ರಂದು ನಾಪತ್ತೆಯಾಗಿರುವ ಹಫೀಸುದ್ದೀನ್‌, ಜೂನ್‌ 28ರಂದು ಭಾರತ ಗಡಿ ದಾಟಿರುವ ಮಾಹಿತಿ ಪೊಲೀಸ್‌ ಮೂಲಗಳಿಂದ ನಮಗೆ ಸಿಕ್ಕಿದೆ. ಹೈದರಾಬಾದ್ ಏರ್‌ಪೋರ್ಟ್ ಮೂಲಕ ಟೆಹರಾನ್‌ ತಲುಪಿರಬೇಕು. ಜುಲೈ 6ರಂದು ಧ್ವನಿ ಸಂದೇಶ ಕಳುಹಿಸಿದ್ದ....’ ಎಂದು ಸಲಾಂ ವಿವರಿಸಿದರು.

‘ನೋಡಿ... (ಎಡಭಾಗಕ್ಕೆ ಕೈ ತೋರಿಸಿ) ಅದೇ ಮನೆ ಹಫೀಸುದ್ದೀನ್‌ ಜೊತೆಯೇ ನಾಪತ್ತೆಯಾದ ಡಾ. ಇಜಾಸ್‌ ಕುಟುಂಬದ್ದು. ಜೊತೆಗೇ ಇಜಾಸ್ ಸಹೋದರ ಶಿಹಾಸ್‌ ಕುಟುಂಬವೂ ತೆರಳಿದೆ. ಅವರೂ ನಾಪತ್ತೆಯಾಗಿರುವುದು  ಧ್ವನಿ ಸಂದೇಶ ಬಂದುದರಿಂದ ಗೊತ್ತಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿಯಾಗಲು ನಿರ್ಧರಿಸಿದೆವು. ಸ್ಥಳೀಯ ಶಾಸಕ ಎಂ. ರಾಜಗೋಪಾಲ್‌ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ವಿ.ಪಿ.ಪಿ. ಮುಸ್ತಫಾ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾಹಿತಿ ನೀಡಿದ್ದೇವೆ. ನಂತರವೇ 21 ಮಂದಿ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದ್ದು’.

‘ತನಿಖೆಯ ಹೆಸರಿನಲ್ಲಿ ಮನೆಗೆ ಯಾರ್‍್ಯಾರೋ ಅಧಿಕಾರಿಗಳು ಬಂದು ಮಾಹಿತಿ ಸಂಗ್ರಹಿಸಿಕೊಂಡು ಹೋಗಿದ್ದಾರೆ. ನಮ್ಮ ಮೊಬೈಲ್‌ ಸೇರಿದಂತೆ ಎಲ್ಲ ಸಂಪರ್ಕ ಮಾಧ್ಯಮಗಳನ್ನು ತನಿಖಾ ಅಧಿಕಾರಿಗಳು ಕೊಂಡೊಯ್ದಿದ್ದರು.  ಕೆಲವು ದಿನಗಳ ಬಳಿಕ ಮರಳಿ ನೀಡಿದ್ದಾರೆ. ಏನಾದರೂ ಸಂದೇಶ ಈ ಮೊಬೈಲ್‌ಗಳಿಗೆ ಬರಬಹುದು ಎಂದು ಪೊಲೀಸರು ನಿರೀಕ್ಷಿಸಿದ್ದರು. ಆದರೆ ಅಂತಹದ್ದೇನೂ ಆಗಿಲ್ಲ. ಇಡೀ ಪ್ರಕರಣ ಬಿಡಿಸಲಾರದ ಗುಟ್ಟಾಗಿದೆ’ ಎನ್ನುತ್ತಾರೆ ಸಲಾಂ.

ಈಜಿಪ್ಟ್‌ಗೆ ಹೋಗಲು ಬಯಸಿದ್ದ...
ಹಫೀಸುದ್ದೀನ್‌ಗೆ ಇನ್ನೂ 23ರ ಹರೆಯ. ಇಸ್ಲಾಂ ಧರ್ಮದ ಕುರಿತು ಬೋಧಿಸುವ ಹಲವು ವಿಶ್ವವಿದ್ಯಾಲಯಗಳು ಈಜಿಪ್ಟ್‌ನಲ್ಲಿವೆ. ಅಲ್ಲಿಗೆ ತೆರಳಿ ಆಳವಾಗಿ ಕುರಾನ್ ಅಧ್ಯಯನ ಮಾಡಬೇಕು ಎಂದು ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದ. ಆದರೆ ಅಲ್ಲಿ ಆಂತರಿಕ ಕಲಹ ಇದ್ದುದರಿಂದ ತಂದೆ ಹಕೀಂ ಅದಕ್ಕೆ ಒಪ್ಪಿರಲಿಲ್ಲ. ಜೊತೆಗೆ ಒಬ್ಬನೇ ಮಗ ಎಂಬುದೂ ಕಾರಣವಾಗಿತ್ತು. ಹೀಗಾಗಿ ಅವನ ಪಾಸ್‌ಪೋರ್ಟ್‌ ಅಡಗಿಸಿಟ್ಟಿದ್ದರು. ಪತ್ನಿ ಜೊತೆ ಸೌದಿ ಅರೇಬಿಯಾಕ್ಕೆ ಹೋಗಲು ವಿಸಾ ಮಾಡಿಸುವುದಾಗಿ ಪಾಸ್‌ಪೋರ್ಟ್‌ ಮರಳಿ ಪಡೆದಿದ್ದ

ಅನಂತರ ಪತ್ನಿಗೆ, ‘ನಾವಿಬ್ಬರೂ ಯಾತ್ರೆ  ಹೋಗೋಣ’ ಎಂದು ಒತ್ತಾಯಿಸುತ್ತಿದ್ದ. ಆದರೆ ಅದಕ್ಕೆ ಅವಳು, ‘ಇಸ್ಲಾಂ ಧರ್ಮದ ಬಗ್ಗೆ ಕಲಿಯಲು ಸೌದಿ ಅರೇಬಿಯಾಕ್ಕೆ ಹೋಗಬಹುದಲ್ಲ. ಅಲ್ಲಿ ತಂದೆಯ ಬಿಸಿನೆಸ್‌ ಕೂಡಾ ಇದೆ. ಯಾತ್ರೆ ಯಾಕೆ ಹೋಗಬೇಕು’ ಎಂದು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ್ದಳು. ದಮ್ಮಾಜ್‌ನಂತೆ ಪ್ರಾಚೀನ ಕಾಲಘಟ್ಟದ ಗ್ರಾಮವೊಂದು ಶ್ರೀಲಂಕಾದಲ್ಲೂ ಇದೆ ಎನ್ನುತ್ತಿದ್ದ. ಬಹುಶಃ ಅಲ್ಲಿಗೆ ಅವನು ಹೋಗಿ ಬಂದಿರಬೇಕು’ ಎಂದು ಸಲಾಂ ಸಂದೇಹ ವ್ಯಕ್ತಪಡಿಸಿದರು.

‘ಸುಖವಾಗಿದ್ದೇನೆ; ಗಾಬರಿಯಾಗಬೇಡಿ’
‘ನಾನು ಸುಖವಾಗಿದ್ದೇನೆ. ನೀವೇನೂ ಗಾಬರಿ ಆಗಬೇಡಿ’ ಎಂದು ಒಂದು ಸಾಲಿನ ವಾಟ್ಸ್‌ ಆ್ಯಪ್‌ ಸಂದೇಶವನ್ನು  ನಾಪತ್ತೆಯಾದವರಲ್ಲಿ ಒಬ್ಬನಾದ ಅಶ್ಫಾಕ್‌ ತನ್ನ ಸಹೋದರಿಗೆ ಶುಕ್ರವಾರ (ಜುಲೈ 22) ಕಳುಹಿಸಿದ್ದಾನೆ. ಮೊಬೈಲ್‌ ಟವರ್‌ ಲೊಕೇಷನ್‌ ಆಧಾರದಲ್ಲಿ ಶೋಧ ನಡೆಸಿದ ಪೊಲೀಸ್‌ ಅಧಿಕಾರಿಗಳಿಗೆ ಇರಾನ್‌ಗೆ ಹೊಂದಿಕೊಂಡಿರುವ ಆಫ್ಘಾನಿಸ್ತಾನದ ಗಡಿ ಭಾಗವಾದ ತೋರಾಬೋರಾದಿಂದ ಈ ಸಂದೇಶ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ’ ಎಂದು ಸಲಾಂ ತಿಳಿಸಿದರು. ನಾಪತ್ತೆಯಾದವರ ಕಡೆಯಿಂದ ಕೊನೆಯದಾಗಿ ಬಂದ ಸಂದೇಶ ಇದು.

* ಮಗ ಭಯೋತ್ಪಾದಕನಾಗಿದ್ದರೆ ಮರಳಿ ಬರುವುದು ಬೇಡ. ಅವನ ಮಯ್ಯತ್ (ಶವ) ಕೂಡಾ ನೋಡಲು ನನಗೆ ಇಷ್ಟವಿಲ್ಲ.
-ಅಬ್ದುಲ್‌ ಹಕೀಂ, ಹಫೀಸುದ್ದೀನ್‌ನ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT