ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಬೆನಾಮಿಕ್ಸ್‌’ಗೆ ಜಯ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಜಪಾನ್‌ನಲ್ಲಿ ನಡೆದ ಮಧ್ಯಾಂತರ ಚುನಾವಣೆಯಲ್ಲಿ ಪ್ರಧಾನಿ ಶಿಂಜೊ ಅಬೆ ಅಭೂತಪೂರ್ವ ಜಯ ಸಾಧಿಸಿದ್ದಾರೆ. ಮೊದಲಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆ. 475 ಸದಸ್ಯ ಬಲದ ಸಂಸತ್ತಿನಲ್ಲಿ ಮಿತ್ರ ಪಕ್ಷ ಕೊಮಿಟೊ ಪಾರ್ಟಿ ಜತೆಗೂಡಿ 325 ಸ್ಥಾನ ಗಳಿಸಿದ ಅವರಿಗೆ ಇನ್ನು ನಾಲ್ಕು ವರ್ಷ ಸರಾಗ­ವಾಗಿ ಅಧಿಕಾರ ನಡೆಸಲು ಯಾವುದೇ ಅಡೆತಡೆಯಿಲ್ಲ. ಇದು, ಅರ್ಧ ಹಾದಿಯನ್ನಷ್ಟೇ ಕ್ರಮಿಸಿರುವ ತಮ್ಮ ‘ಅಬೆನಾಮಿಕ್ಸ್’ ಆರ್ಥಿಕ ಸುಧಾರಣೆ ಮುಂದುವರಿಸಲು ಸಿಕ್ಕ ಜನಾದೇಶ ಎಂಬ ಅವರ ವ್ಯಾಖ್ಯಾನ­ದಲ್ಲಿ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಇನ್ನೂ ಎರಡು ವರ್ಷದ ಅಧಿಕಾರಾವಧಿ ಇರುವಾಗಲೇ ಅವರು ಮಧ್ಯಾಂತರ ಚುನಾವಣೆಗೆ ಹೋಗುವ ಮೂಲಕ ತಮ್ಮ ಆರ್ಥಿಕ ಸುಧಾರಣಾ ಮಂತ್ರವನ್ನೇ ಪಣಕ್ಕೆ ಇಟ್ಟಿದ್ದರು.

ಆರ್ಥಿಕ ಹಿಂಜರಿತದಿಂದ ಬಸವಳಿದಿರುವ ದೇಶದಲ್ಲಿ ತಮ್ಮ ಸುಧಾರಣಾ ಕಾರ್ಯ­ಕ್ರಮದ ಲಾಭ ಇನ್ನೂ ಬಹಳಷ್ಟು ಜನರನ್ನು ತಲುಪಿಲ್ಲ ಎಂಬ ಭಯ ಅವರಲ್ಲಿ ಇದ್ದೇ ಇತ್ತು. ಪ್ರತಿಪಕ್ಷಗಳಿಂದ ಮಾತ್ರವಲ್ಲದೆ ತಮ್ಮದೇ ಲಿಬರಲ್ ಡೆಮಾಕ್ರೆಟಿಕ್ ಪಕ್ಷ­ದೊ­ಳಗೂ ಅವರಿಗೆ ವಿರೋಧ ದಿನದಿಂದ ದಿನಕ್ಕೆ ಹೆಚ್ಚು­ತ್ತಿತ್ತು. ನೆರೆಯ ಚೀನಾ ಮತ್ತು ಕೊರಿಯ ಜತೆ ಗಡಿ ಮತ್ತಿತರ ವಿಷಯದಲ್ಲಿ ಅವರು ಅನುಸರಿಸಿದ ಸಂಘರ್ಷದ ನಿಲುವು ಅನೇಕ ಸಲ ವಾಕ್ಸಮರಕ್ಕೆ ಕಾರಣವಾಗಿತ್ತು. ಇಷ್ಟೆಲ್ಲ ಪ್ರತಿಕೂಲ ಸ್ಥಿತಿ ಇರುವಾಗಲೇ ಅವರು ದಿಢೀರ್ ಚುನಾವಣೆಗೆ ಮುಂದಾ­ಗಿದ್ದು ಅಚ್ಚರಿ ಮೂಡಿಸಿತ್ತು. ಈಗ ಸಿಕ್ಕ ಜಯ ಅವರಿಗೆ ಈ ವಿರೋಧಗಳನ್ನೆಲ್ಲ ಗುಡಿಸಿ ಹಾಕುವ ಬಲ ಕೊಟ್ಟಿದೆ.

2012ರಲ್ಲಿ ಅವರು ಮೊದಲ ಸಲ ಅಧಿ­ಕಾರಕ್ಕೆ ಏರುವ ಮುನ್ನ ಜಪಾನ್ ವರ್ಷಕ್ಕೊಂದು ಎಂಬಂತೆ ಹತ್ತಾರು ಪ್ರಧಾನಿ­ಗಳನ್ನು ಕಂಡಿತ್ತು. ಅಸ್ಥಿರತೆ, ಮಿತಿಮೀರಿದ ರಾಜಕೀಯ ಭ್ರಷ್ಟಾಚಾರ ಮತದಾರರಿಗೆ ವಾಕರಿಕೆ ತಂದಿತ್ತು. ಆದರೆ ಅಬೆ ಸ್ಥಿರ ಸರ್ಕಾರ ಕೊಡುವಲ್ಲಿ ಶಕ್ತರಾಗಿದ್ದರು. ಅದನ್ನು ಮತದಾರರೂ ಗುರುತಿಸಿ ಚುನಾವಣೆ ಮೂಲಕ ಬೆನ್ನುತಟ್ಟಿದಂತಿದೆ.

ಈ ಅವಕಾಶವನ್ನು ಅವರು ಹೇಗೆ ಬಳಸಬಹುದು ಎಂದು ನೋಡಬೇಕಿದೆ. 2013ರಲ್ಲಿ ಅವರು ಜಾರಿಗೆ ತಂದ ಅಬೆನಾಮಿಕ್‌್ಸನ ಮೂರು ಮುಖ್ಯ ಅಂಶ­ಗಳೆಂದರೆ ಸರ್ಕಾರಿ ಬಾಂಡ್‌ಗಳ ಖರೀದಿ ಪ್ರೋತ್ಸಾಹಿಸಲು ಯಥೇಚ್ಛವಾಗಿ ನೋಟು ಮುದ್ರಣ, ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರದ ವೆಚ್ಚ ಏರಿಕೆ, ಕೃಷಿ, ಇಂಧನ, ಆರೋಗ್ಯ ಮತ್ತಿತರ ಮೂಲ ಕ್ಷೇತ್ರಗಳಲ್ಲಿ ಸುಧಾರಣೆ. ಇದರಿಂದಾಗಿ ಆರ್ಥಿಕ ಬೆಳವಣಿಗೆ ಸ್ವಲ್ಪ ಕಾಲ ಏರುಗತಿಯಲ್ಲಿತ್ತು. ಆದರೆ 18 ತಿಂಗಳಲ್ಲೇ ಮತ್ತೆ ಹಿಂಜರಿತ ಶುರುವಾಯ್ತು. ಕಳೆದ ಏಪ್ರಿಲ್‌ನಲ್ಲಿ ಮಾರಾಟ ತೆರಿಗೆ ದರವನ್ನು ಶೇ 5ರಿಂದ 8ಕ್ಕೆ ಏರಿಸಿದ್ದು ಇದಕ್ಕೆ ಕಾರಣ ಎಂಬ ದೂರು ಕೇಳಿಬಂತು.

2015ರಲ್ಲಿ ಈ ತೆರಿಗೆಯನ್ನು ಅವರು ಶೇ 10ಕ್ಕೆ ಏರಿಸಬೇಕಾಗಿದೆ. ಇದು ಅವರಿಗಿಂತ ಮುಂಚೆ ಇದ್ದ ಸರ್ಕಾರದ ಕಾನೂನು. ಈ ಏರಿಕೆಯನ್ನು ಸದ್ಯಕ್ಕೆ ಮುಂದೂಡಲು ಮತ್ತು ಮಹಿಳೆಯರಿಗೆ ಹೆಚ್ಚು ಉದ್ಯೋಗ ಸಿಗುವಂತೆ ಮಾಡಲು ಕೇಳಿದ್ದ ಜನಾದೇಶ ಅವರಿಗೆ ಸಿಕ್ಕಿದೆ. ವಿಶ್ವದ ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಗೆ ಉತ್ಸಾಹ ತುಂಬುವ ಸವಾಲಂತೂ ಈಗ ಅವರ ಮುಂದಿದೆ. ನರೇಂದ್ರ ಮೋದಿಯವರು ಭಾರತದ ಪ್ರಧಾನಿ­ಯಾದ ಬಳಿಕ ಎರಡೂ ದೇಶಗಳ ಮಧ್ಯೆ ಸಹಕಾರ ಹೆಚ್ಚಿದೆ. ಹೀಗಾಗಿ ಭಾರತದ ಪಾಲಿಗಂತೂ ಅವರ ವಿಜಯ ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT