ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿಗೆ ಎಂಜಿನಿಯರ್‌ಗಳ ಸಹಕಾರ ಅಗತ್ಯ’

Last Updated 15 ಸೆಪ್ಟೆಂಬರ್ 2014, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳ ಸಮರ್ಪಕ ಅನುಷ್ಠಾನಕ್ಕೆ ಎಂಜಿನಿಯರ್‌ಗಳ ಸಹಕಾರ ಅತ್ಯಗತ್ಯವಾಗಿದೆ’ ಎಂದು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್‌ ಹೇಳಿದರು.

ಕರ್ನಾಟಕ ಎಂಜಿನಿಯರ್‌ಗಳ ಒಕ್ಕೂಟ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರ 154ನೇ ಜನ್ಮ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನದಿಗಳ ಜೋಡಣೆ, ರೈಲು ಸಂಪರ್ಕ ಜಾಲ ವಿಸ್ತರಣೆ, ಸ್ಮಾರ್ಟ್‌ ಸಿಟಿಗಳ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಯೋಜನೆಗಳು ಮುಂಬರುವ ದಿನಗಳಲ್ಲಿ ಬರಲಿದ್ದು, ಎಂಜಿನಿಯರ್‌ಗಳ ಸಹಕಾರವಿಲ್ಲದೆ ಅವುಗಳ ಅನುಷ್ಠಾನ ಅಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕ ಎಂಜಿನಿಯರ್‌ಗಳ ಒಕ್ಕೂಟದಿಂದ ನಿರ್ಮಿಸಲು ಉದ್ದೇಶಿಸಿರುವ ತಾಂತ್ರಿಕ ತರಬೇತಿ ಸಂಸ್ಥೆಗೆ ನಿವೇಶನ ಕೊಡಿಸಲಾಗುವುದು’ ಎಂದು ಭರವಸೆ ನೀಡಿದ ಅವರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನದ ವ್ಯವಸ್ಥೆಯನ್ನೂ ಮಾಡಲಾಗುವುದು’ ಎಂದು ಹೇಳಿದರು.

‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಎಂಜಿನಿಯರ್‌ಗಳು ವೇತನ ತಾರತಮ್ಯವನ್ನು ಅನುಭವಿಸುತ್ತಿದ್ದು, ವೇತನ ನಿಗದಿ ಮತ್ತು ಬಡ್ತಿ ಸೌಲಭ್ಯ ನೀಡಲು ಏಕರೂಪದ ನೀತಿ ಜಾರಿಗೊಳಿಸಲು ಚಿಂತಿಸಲಾಗುತ್ತಿದೆ’ ಎಂದು ವಿವರಿಸಿದರು.

ಮೇಯರ್‌ ಎನ್‌.ಶಾಂತಕುಮಾರಿ, ‘ಸಂಚಾರ ದಟ್ಟಣೆಯೂ ಸೇರಿದಂತೆ ನಗರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಿಂದ ಹೊರಬರಲು ಬಿಬಿಎಂಪಿ ಜತೆ ಎಂಜಿನಿಯರ್‌ಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು. ‘ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟು ನಿರ್ಮಿಸದಿದ್ದರೆ ಬೆಂಗಳೂರಿಗೆ ಕುಡಿಯಲು ನೀರು ಇರುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜ್‌, ‘22,000 ಎಂಜಿನಿಯರ್‌ಗಳು ಸಂಸ್ಥೆಯ ಸದಸ್ಯರಾಗಿದ್ದಾರೆ’ ಎಂದು ಹೇಳಿದರು. ‘ಒಕ್ಕೂಟದಿಂದ ತಾಂತ್ರಿಕ ತರಬೇತಿ ಸಂಸ್ಥೆಯನ್ನು ತೆರೆಯಲಾಗುತ್ತದೆ’ ಎಂದು ಪ್ರಕಟಿಸಿದರು.

ಹಿರಿಯ ಎಂಜಿನಿಯರ್‌ಗಳಾದ ಪ್ರೊ. ಎಂ.ಎಸ್‌. ಶೆಟ್ಟಿ ಮತ್ತು ಡಾ.ಎಲ್‌.ಆರ್‌. ಕಡಿಯಾಲಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಉಪಮೇಯರ್‌ ಕೆ.ರಂಗಣ್ಣ ಹಾಜರಿದ್ದರು.

ಹಿಂದಿ ಭಾಷಣ: ಸರಿ ನಿರ್ಧಾರ
ಬೆಂಗಳೂರು:
‘ವಿಶ್ವಸಂಸ್ಥೆಯಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ಭಾಷಣ ಮಾಡಲು ನಿರ್ಧರಿಸಿದ ಕ್ರಮ ಸರಿಯಾಗಿದೆ’ ಎಂದು ಅನಂತಕುಮಾರ್‌ ಅಭಿಪ್ರಾಯ­ಪಟ್ಟರು.

‘ಆಯಾ ರಾಜ್ಯಗಳ ರಾಜ್ಯ ಭಾಷೆಗಳಿಗೆ ಮಹತ್ವ ಇದ್ದೇ ಇದೆ. ಕೇಂದ್ರದ ಈ ನಿಲುವಿ­ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ದೇಶದ ಪ್ರಧಾನಿಯಾಗಿ ಮೋದಿ ಅವರು ಕೈಗೊಂಡ ತೀರ್ಮಾನವೂ ಸರಿಯಾದುದೇ’ ಎಂದು ಹೇಳಿದರು.

‘ರಾಜ್ಯದ ಪ್ರತ್ಯೇಕತೆ ಕೂಗಿಗೆ ಆಸ್ಪದ ಇಲ್ಲ. ಅಂತಹ ಕೂಗನ್ನು ಮೂಲೆಗೆ ತಳ್ಳಬೇಕು’ ಎಂದು ತಿಳಿಸಿದರು. ಶ್ರೀರಾಮ ಸೇನೆ ನಿಷೇಧಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT