ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮ್ಮಾ, ನಾನು ಸ್ಕೂಲಿಗೆ ಹೋಗಲ್ಲ’

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಕೆಲವು ಮಕ್ಕಳಲ್ಲಿ ವಿವಿಧ ಕಾರಣಗಳಿಂದ ಶಾಲೆಗೆ ಹೋಗಲು ಆತಂಕ ಕಾಡುತ್ತದೆ. ‘ಶಾಲಾ ನಿರಾಕರಣೆ’ಯನ್ನು ಮನೋವೈದ್ಯಕೀಯ ವಿಜ್ಞಾನ ಒಂದು ಪ್ರಮುಖ ಭಾವನಾತ್ಮಕ ಸಮಸ್ಯೆಯಾಗಿ ಗುರುತಿಸುತ್ತದೆ.

ಐದು ವರ್ಷದ ಪುಟ್ಟಿಯನ್ನು ಕರೆತಂದಿದ್ದರು. ‘ಏನು ತೊಂದರೆ?’  ‘ಮೇಡಂ ಇವಳು ಶಾಲೆಗೇ  ಹೋಗಲ್ಲ ಅಂತ ಹಠ ಮಾಡ್ತಾಳೆ. ನಮಗೂ ಏನು ಮಾಡ್ಬೇಕು ಅಂತಾನೇ ಗೊತ್ತಾಗಲ್ಲ. ಮೊನ್ನೆ ಮೊನ್ನೆವರೆಗೂ ಎಲ್‌.ಕೆ.ಜಿಗೆ ಆರಾಮವಾಗಿಯೇ ಹೋಗ್ತಿದ್ಳು. ಈ ಸಲ ಬೇಸಿಗೆ ರಜೆ ಮುಗಿದಿದ್ದೇ ಈ ಹೊಸ ಸಮಸ್ಯೆ. ಮೊದಲ ದಿನ ಶುಕ್ರವಾರ ಆಗಿತ್ತು. ಇವಳ ಅಜ್ಜಿ ಹೇಳಿದ್ರು, ‘ಇವತ್ತೇನು ಹೋಗೋದು, ಇನ್ನೆರಡು  ದಿನ ಕಳೀಲಿ, ಸೋಮವಾರ ಕಳಿಸಿದ್ರಾಯ್ತು ಅಂತ. ಸರಿ ಚೆನ್ನಾಗಿ ಆಡಿದ್ಲು. ಬಸ್ಸಿಗೆ ಸೋಮವಾರ ಬರ್ತಾಳೆ ಅಂದೆವು.

ಈಗ ಹೋಗ್ತಾನೇ ಇಲ್ಲ ಡಾಕ್ಟ್ರೇ! ಪ್ರತಿದಿನ ನಾಳೆ ಹೋಗ್ತೀನಿ ಅಂತ ಪ್ರಾಮಿಸ್ ಮಾಡ್ತಾಳೆ. ಬೆಳಿಗ್ಗೆ ಎದ್ರೆ ದಿನಾ ಒಂದೊಂದು ನೋವು, ಬಸ್ಸು ಬಂದ್ರೆ ಜೋರಾಗಿ ಅಳೋದು. ಇವರು ಹೇಳ್ತಾರೆ ‘‘ಏನೂ ಆಗಲ್ಲ, ಸುಮ್ಮನೇ ಬಿಟ್ಟು ಬರ್ಬೇಕು’’ ಅಂತ. ಆದರೆ ನಂಗೆ ಒಂಥರಾ ಪಾಪ ಅನ್ಸುತ್ತೆ. ಯು.ಕೆ.ಜಿಗೆ ನಾನು ಇಷ್ಟು ಕ್ರೂರಿಯಾಗಿ ಮಗೂಗೆ ಇಷ್ಟ ಇಲ್ಲದಿರೋ ಸ್ಕೂಲಿಗೆ ಬಲವಂತವಾಗಿ ತಳ್ಬೇಕಾ ಅಂತ ಬೇಜಾರಾಗುತ್ತೆ’.

ಇನ್ನೊಂದು ಸಂದರ್ಭ. ಎಂಟು ವರ್ಷದ ಮೂರನೇ ತರಗತಿಯ ಬಾಲಕಿಯನ್ನು ಕರೆತಂದಿದ್ದರು. ಅಮ್ಮನ ಕೈಯಲ್ಲಿ ಇನ್ನೊಂದು ಹಸುಗೂಸು. ಅಪ್ಪ-ಅಮ್ಮ ಇಬ್ಬರೂ ಗಮನಿಸಿದ್ದು ಹೊಸ ಮಗು ಮನೆಗೆ ಬಂದಾಗಿನಿಂದ ಈ ಅಕ್ಕನಿಗೆ ಸ್ಕೂಲಿಗೆ ಹೋಗಲು ಮನಸ್ಸೇ ಇಲ್ಲ. ಅದರಲ್ಲಿಯೂ ಭಾನುವಾರ ಕಳೆದು ಸೋಮವಾರ ಬಂತೆಂದರೆ ಸಾಕು, ಎಬ್ಬಿಸುವುದೇ ದೊಡ್ಡ ಸಾಹಸ.

ಅದರ ಮೇಲೆ ರೆಡಿಯಾಗಲು ಒಂದು ಗಂಟೆ, ಸ್ಕೂಲಿನಿಂದ ಅಳುತ್ತಾ ಬರುವುದು. ಮನೆಯಲ್ಲಿ ಸ್ಕೂಲಿನ ವಿಷಯ ಏನೇ ಕೇಳಿದರೂ ಸಣ್ಣ ಮುಖ ಮಾಡುವುದು, ‘‘ಈ ಪಾಪು ಎಷ್ಟು ಲಕ್ಕಿ ಅಲ್ಲ, ಸ್ಕೂಲಿಗೆ ಹೋಗದೆ ಮನೆಯಲ್ಲೇ ಇರುತ್ತಲ್ಲಾ’’ ಎಂದು ಹೇಳುವುದು. ಹೊಸದಾಗಿ ಹುಟ್ಟಿದ ಮಗು, ಶಾಲೆಗೆ ಹೋಗಲು ಹಠ ಮಾಡುವ ಅಕ್ಕ ಇಬ್ಬರನ್ನೂ ನಿಭಾಯಿಸುವಲ್ಲಿ ಅಪ್ಪ-ಅಮ್ಮಂದಿರಿಗೆ ಈಗ ಆಗಾಗ್ಗೆ ಜಗಳ, ಮನೆಯಲ್ಲಿ ಕಿರಿಕಿರಿ.

ಬೇಸಿಗೆ ರಜೆ ಮುಗಿದು ಶಾಲೆ ಮತ್ತೆ ಆರಂಭವಾಗಿರುವ ಈ ಹೊತ್ತಿನಲ್ಲಿ ‘ಶಾಲಾ ನಿರಾಕರಣೆ’ (school refusal) ಎಂಬ ಸಮಸ್ಯೆ ಮಕ್ಕಳಲ್ಲಿ ಒಂದು ಪಿಡುಗು ರೋಗದ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಮಕ್ಕಳನ್ನು, ಅವರ ಪೋಷಕರನ್ನು ಗೊಂದಲಕ್ಕೀಡುಮಾಡುತ್ತದೆ. ನಮಗೆಲ್ಲರಿಗೂ ರಜೆ ಮುಗಿದು ಶಾಲೆಗೆ ಹೋಗಲು ಬೇಸರವೇ ಆಗಿತ್ತು, ಅದರಲ್ಲೇನು ವಿಶೇಷ? ಅಥವಾ ‘ಅವರು ಸತ್ತರೆ ರಜೆ, ಇವತ್ತು ಸ್ಟ್ರೈಕು/ಇವತ್ತು ಬಂದ್ ರಜೆ, ಜೋರಾಗಿ ಮಳೆ ಬಂದರೆ ನಮ್ಮ ಶಾಲೆಗೆ ರಜೆ’ ಎಂದು ಮಕ್ಕಳು ರಜೆ ಸಿಗಲಿ ಎಂದು ಬಯಸುವುದೂ ಸಹಜವೇ. ಎಲ್ಲರೂ ಮಾಡುವಂಥದ್ದೇ ಅಲ್ಲವೆ?

ಹೌದು, ಶಾಲೆಗೆ ರಜೆ ಬಂದಾಕ್ಷಣ ಹರ್ಷಿಸುವುದು, ಶಾಲೆಗೆ ಹೋಗಬೇಕೆಂದಾಕ್ಷಣ ಬೇಸರಿಸುವುದು ಮಕ್ಕಳಲ್ಲಿ ಸಹಜವಾಗಿ ಕಂಡುಬರುವ ನಡವಳಿಕೆಯೇ. ಆದರೂ ಮಕ್ಕಳಲ್ಲಿ ಸಾಮಾನ್ಯವಾಗಿ ಶೇಕಡಾ 90ರಷ್ಟು ಜನ ರಜೆಯ ನಂತರವೂ ಶಾಲೆಗೆ ಬಹುಬೇಗ ಹೊಂದಿಕೊಳ್ಳುತ್ತಾರೆ. ಕೆಲವು ಮಕ್ಕಳಲ್ಲಿ ವಿವಿಧ ಕಾರಣಗಳಿಂದ ಶಾಲೆಗೆ ಹೋಗಲು ಆತಂಕ ಕಾಡುತ್ತದೆ. ‘ಶಾಲಾ ನಿರಾಕರಣೆ’ಯನ್ನು ಮನೋವೈದ್ಯಕೀಯ ವಿಜ್ಞಾನ ಒಂದು ಪ್ರಮುಖ ಭಾವನಾತ್ಮಕ ಸಮಸ್ಯೆಯಾಗಿ ಗುರುತಿಸುತ್ತದೆ. ಅದರ ಕಾರಣಗಳನ್ನು ಹೀಗೆ ಹೇಳುತ್ತದೆ:

* ಮನಸ್ಸಿಗೆ ಒತ್ತಡ ತರುವ ಸನ್ನಿವೇಶಗಳಿಂದ ಪಾರಾಗಲು - ಶಿಕ್ಷಕರೊಡನೆ ಹೊಂದಾಣಿಕೆಯ ಸಮಸ್ಯೆ, ಸಹಪಾಠಿಗಳ ಜೊತೆ ಜಗಳ.

* ಪಾಠದಲ್ಲಿ ಹಿಂದಿರುವುದು.

* ಆತ್ಮೀಯರ ಜೊತೆ ಸಮಯ ಕಳೆಯುವ ಆಸೆ - ಮನೆಯಲ್ಲಿ ಹೊಸ ತಂಗಿ/ತಮ್ಮ ಬಂದಾಗ, ಮನೆಯಲ್ಲಿ ನೆಂಟರು ಬಂದಾಗ, ದೀರ್ಘ ಕಾಲದ ರಜೆ, ಕಾಯಿಲೆಯಿಂದ ಸ್ಕೂಲು ತಪ್ಪಿಸಿ ಮತ್ತೆ ಶಾಲೆ ಪುನರಾರಂಭಿಸುವಾಗ.

* ಮನೆಯಲ್ಲಿ ಆಟ, ಟಿವಿ, ಕಂಪ್ಯೂಟರ್ ಇತ್ಯಾದಿಗಳ ಆಕರ್ಷಣೆ ಪ್ರಬಲವಾಗಿದ್ದಾಗ, 

ಬಾಲಕ–ಬಾಲಕಿಯರಲ್ಲಿ ಸಮವಾಗಿ ಕಂಡು ಬರುವ ಈ ಸಮಸ್ಯೆ ಬಹುವಾಗಿ ಶಿಶುವಿಹಾರದ ವಯಸ್ಸಿನವರಲ್ಲಿ - 3 ರಿಂದ 5 ವರ್ಷದವರಲ್ಲಿ, ನಂತರ 7-9ರ ವಯಸ್ಸಿನಲ್ಲಿ, ಆಮೇಲೆ ಹದಿಹರೆಯದ ಮಕ್ಕಳಲ್ಲಿ ಕಂಡು ಬರುತ್ತದೆ. ಹಾಗೆ ನೋಡಿದರೆ ಬಹುಪಾಲು ಮಕ್ಕಳಲ್ಲಿ ಯಾವಾಗಲಾದರೊಮ್ಮೆ ಈ ಸಮಸ್ಯೆ ಕಂಡುಬಂದರೂ ಅದು ದೊಡ್ಡದಾಗಿ ನಿಲ್ಲುವುದು ಕೆಲವರಲ್ಲಿ ಮಾತ್ರ. ಶಾಲಾ ನಿರಾಕರಣೆಯಿಂದ ಸಮಸ್ಯೆಯುಂಟಾ ಗುವುದಾದರೂ ಏನು?

ಥಟ್ಟನೆ ಬರುವ ಉತ್ತರ ಮಗು ಓದಿನಲ್ಲಿ ಹಿಂದೆ ಬೀಳುತ್ತದೆ ಎಂಬುದು. ಆದರೆ ಈ ಉತ್ತರ ಮನೋವಿಜ್ಞಾನದ್ದಲ್ಲ! ಮನೋವೈಜ್ಞಾನಿಕವಾಗಿ ಶಾಲಾ ಶಿಕ್ಷಣ ಒಂದು ಶಿಸ್ತು. ಆಟವಾಗಲೀ ಪಾಠವಾಗಲೀ ನಿರ್ದಿಷ್ಟ ಕ್ರಮದಲ್ಲಿ ಕಲಿಸಲ್ಪಡುವ ಸ್ಥಳ. ಶಾಲೆಗೆ ಹೋಗದ ಮಗು ಕೇವಲ ಓದಿನಿಂದಷ್ಟೇ ಅಲ್ಲ, ಸಮಾನ ವಯಸ್ಸಿನ ಮಕ್ಕಳ ಸಹಯೋಗ, ಪಠ್ಯೇತರ ಚಟುವಟಿಕೆಗಳು , ಆಟ, ಇತರ ಅನೌಪಚಾರಿಕ ಕಲಿಕೆಗಳಿಂದ ವಂಚಿತರಾಗುತ್ತಾರೆ.

ಮನೆಯ ಹೊರಗೆ ಅವರು ಆಟಕ್ಕೆ ಹೋದರೂ, ಈ ಮಕ್ಕಳ ಸಹವಾಸಕ್ಕೆ ಬರುವ ಇತರ ಮಕ್ಕಳೂ ಸಾಮಾನ್ಯವಾಗಿ ಶಾಲೆಗೆ ಹೋಗದ, ಅಲೆಯುವ, ಕೆಟ್ಟ ಚಟಗಳಿಗೆ ಬಿದ್ದಿರುವ ಮಕ್ಕಳೇ ಆಗಿರುತ್ತಾರೆ. ಶಾಲೆಗೆ ಹೋಗುವ ಸಮಯದಲ್ಲಿ ಹಠ ಮಾಡುವ ಮಕ್ಕಳ ಮನಸ್ಸಿನಲ್ಲಿ ಬರುವ  ಯೋಚನೆಗಳೇನು?

* ನನಗೆ ಹೇಗಿದ್ದರೂ ಪರೀಕ್ಷೆ ಬರೆಯಲು ಸಾಧ್ಯವಿಲ್ಲ.

* ಮನೆಯಲ್ಲಿದ್ದರೆ ಆರಾಮ್! ಮನೆಯೆಂದರೆ ಮಜಾ! ನನಗೆ ಇಷ್ಟ ಬಂದದ್ದು ಮಾಡಬಹುದು.

* ಬೇರೆ ಮಕ್ಕಳು ನನ್ನನ್ನು ನೋಡಿ ನಗಬಹುದು, ಗೇಲಿ ಮಾಡಬಹುದು, ಅಕಸ್ಮಾತ್ ಅಮ್ಮ ನನ್ನನ್ನು ಕರೆದೊಯ್ಯಲು ಬರದಿದ್ದರೆ? 

ಅಸಹನೀಯವೆನಿಸುವ ಯೋಚನೆಗಳು ಮಕ್ಕಳಲ್ಲಿ ದೈಹಿಕ ಲಕ್ಷಣಗಳನ್ನೂ ತರಲು ಸಾಧ್ಯವಿದೆ. ತಲೆನೋವು, ಭೇದಿ, ವಾಂತಿ, ತಲೆ ತಿರುಗುವಿಕೆ, ಹೊಟ್ಟೆನೋವು ಇತ್ಯಾದಿ ಮಕ್ಕಳನ್ನು ಇಂಥ ಸಂದರ್ಭದಲ್ಲಿ ಕಾಡಲು ಸಾಧ್ಯವಿದೆ.

ಮನೆಯಲ್ಲಿಯೇ ಇರುತ್ತೇನೆ ಎಂದು ಹಠ ಮಾಡುವ ಮಗುವನ್ನು ಸಮಾಧಾನಗೊಳಿಸಿ ಶಾಲೆಗೆ ಹೋಗುವಂತೆ ಮಾಡುವ ಕೆಲಸ ಸುಲಭವಲ್ಲ. ಹೇಗೋ ಮಾಡಿ ಎಳೆದುಕೊಂಡು ಹೋಗಿ ಶಾಲೆಗೆ ಬಿಟ್ಟುಬಂದರೂ ತಂದೆ-ತಾಯಂದಿರನ್ನು, ವಿಶೇಷವಾಗಿ ತಾಯಂದಿರನ್ನು ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದಷ್ಟೆ. ಹೆಚ್ಚಾಗಿ  ಇಂಥ ಸಂದರ್ಭಗಳಲ್ಲಿ ಮನೋವೈದ್ಯರ ನೆನಪು ಬರಲಾರದು.

ಮಗುವಿನಲ್ಲಿ ದೈಹಿಕ ಸಮಸ್ಯೆಗಳು ಬರಲಾರಂಭಿಸಿದಾಗ ತಂದೆ-ತಾಯಿ ಮೊದಲು  ಗಾಬರಿಯಾಗಿ ‘ಶಾಲೆಗೆ ಹೋಗದಿದ್ದರೂ ಪರವಾಗಿಲ್ಲ, ಆರೋಗ್ಯವೊಂದು ಸರಿಯಾಗಿದ್ದರೆ ಸಾಕು’ ಎಂದು ಮಕ್ಕಳ ವೈದ್ಯರ ಬಳಿ ಧಾವಿಸುತ್ತಾರೆ. ಅಲ್ಲಿಂದ ಮನೋವೈದ್ಯರ ಬಳಿ ಬರುವಾಗಾಗಲೇ ಮಗು ಶಾಲೆಗೆ ಹೋಗದೇ ಕೆಲವು ತಿಂಗಳುಗಳೇ ಆಗಿರುತ್ತದೆ.

ಇಂಥ ಮಕ್ಕಳಿಗೆ ಆಪ್ತ ಸಲಹೆ, ಶಾಲಾಶಿಕ್ಷಕರ ಬಳಿ ಚರ್ಚೆ, ಕೆಲವೊಮ್ಮೆ ಆತಂಕ ನಿವಾರಣೆಗೆ ಕಡಿಮೆ ಅವಧಿಯ ಔಷಧಿಗಳು, ಮಗುವಿಗೆ ಕಷ್ಟವಿರುವ ಅಧ್ಯಯನದ ವಿಷಯಗಳಲ್ಲಿ ಸಹಕಾರ ಇವು ಬೇಕಾಗಬಹುದು. ಮಗುವಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಕೆಲ ಪೋಷಕರು ಶಾಲೆಯೇ ಸರಿಯಿಲ್ಲ, ಶಿಕ್ಷಕರೇ ಸರಿಯಿಲ್ಲ ಎಂದು ದೂರಿ ಮಗುವನ್ನು ಶಾಲೆಯಿಂದ ಶಾಲೆಗೆ ಬದಲು ಮಾಡುವುದೂ ಸಾಮಾನ್ಯವೇ. ಇಂತಹ ಸನ್ನಿವೇಶಗಳಲ್ಲಿ ಪೋಷಕರಿಗೇ ಹೆಚ್ಚಿನ ಸಲಹೆ ಅಗತ್ಯ ಎನಿಸುತ್ತದೆ!

ವರ್ತನಾ ಚಿಕಿತ್ಸೆಯ ಕೆಲ ಅಂಶಗಳನ್ನು ಬಳಸಿ ಈ ಮಕ್ಕಳನ್ನು ಮತ್ತೆ ಶಾಲೆಗೆ  ಮರಳುವಂತೆ ಮಾಡಲು ಸಾಧ್ಯ. ಶಾಲೆಗೆ ಹೋಗುವ ಆತಂಕ ಕ್ರಮೇಣ ದೂರವಾಗು ವಂತಹ- ಮನೆಯಲ್ಲಿಯೇ ಶಾಲೆಯ ವಾತಾವರಣ ನಿರ್ಮಿಸಿ ಬೇರೆ ಆಕರ್ಷಣೆಗಳನ್ನು ಸಿಗದಂತೆ ಮಾಡುವುದು, ಸಮವಸ್ತ್ರ ಧರಿಸಿಯೇ ಕೋಣೆಯಲ್ಲಿ ವೇಳಾಪಟ್ಟಿ ಪ್ರಕಾರ ಓದುವಂತೆ ಹೇಳುವುದು, ಮಗುವಿಗೆ ಬೇರೆಯವರ ಬಳಿ ಹೊಂದಾಣಿಕೆಯ ಸಮಸ್ಯೆಯಿದ್ದಾಗ ಸಾಮಾಜಿಕ ಕೌಶಲಗಳನ್ನು ಕಲಿಸುವ ಆಟಗಳನ್ನು ಆಡಿಸು ವುದು – ಇವೆಲ್ಲ ಇದರ ಕೆಲವು ಅಂಶಗಳು.

ಶಾಲೆ ಮತ್ತೆ ಆರಂಭವಾಗಿರುವ ಈ ದಿನಗಳಲ್ಲಿ ಪೋಷಕರೆಲ್ಲರೂ ‘ಶಾಲಾ ನಿರಾಕರಣೆ’ಯ ಬಗ್ಗೆ ತಿಳಿದಿರಬೇಕು. ತಮ್ಮ ಮಕ್ಕಳು ಒಂದು ದಿನ ಶಾಲೆಗೆ ಹೋಗದಿದ್ದರೂ ಅದರ ಹಿಂದಿರುವ ಕಾರಣ ಪರಿಶೀಲಿಸಬೇಕು. ವರ್ತನಾ ಚಿಕಿತ್ಸೆಯ ಅಂಶಗಳನ್ನು ಪಾಲಿಸಲು, ಮಗುವಿನ ಭಾವನಾತ್ಮಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರವನ್ನು ಹುಡುಕಲು ಯತ್ನಿಸಬೇಕು. ಮಗು ಯಾವುದೇ ದೈಹಿಕ ಕಾಯಿಲೆ ಇಲ್ಲದೆಯೂ ಶಾಲೆಗೆ ಒಂದು ವಾರಕ್ಕೂ ಹೆಚ್ಚು ಹೋಗದಿದ್ದರೆ ತಕ್ಷಣ ಮನೋವೈದ್ಯರನ್ನು ಕಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT